ಬೆಳಗಾವಿ: ತಾನೊಬ್ಬ ಖ್ಯಾತ ಜ್ಯೋತಿಷಿ ಚಾಮುಂಡಿ ದೇವಿ ಆರಾಧಕ.ಮೂರೇ ದಿನಗಳಲ್ಲಿ ನಿಮ್ಮ ಸಮಸ್ಯೆಗೆ ಪರಿಹಾರ ಕೊಡುತ್ತೇನೆ ಎಂದು ಅಮಾಯಕ ಮಹಿಳೆಯರಿಂದ ಆನ್ ಲೈನ್ ನಲ್ಲಿ ಹಣ ಪಡೆದು ವಂಚನೆ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ರಾಯಚೂರು ಜಿಲ್ಲೆಯ ಸಿಂಧನೂರು ಗ್ರಾಮದ ಬಸವರಾಜ್ ದುರ್ಗಪ್ಪ ಎಂಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಅಸಾಮಿ ತಾನೊಬ್ಬ ಖ್ಯಾತ ಜ್ಯೋತಿಷಿ ಚಾಮುಂಡಿ ದೇವಿ ಆರಾಧಕ ಮೂರೇ ದಿನದಲ್ಲಿ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ನಿಡ್ತೇನಿ ಅಂತಾ ಕರ ಪತ್ರ ಮಾಡಿ ಹಂಚಿದ್ದ. ಹೌದು, ಆನ್ ಲೈನ್ ನಲ್ಲಿ ಸಾಕಷ್ಟು ಮೋಸ ಆಗ್ತಿದ್ರೂ ಜನರು ಮಾತ್ರ ಎಚ್ಚೆತ್ತುಕೊಳ್ತಿಲ್ಲ. ಒಂದಲ್ಲಾ ಒಂದು ರೀತಿಯಲ್ಲಿ ಜನರಿಗೆ ನಂಬಿಸಿ ಅವರಿಂದ ಹಣ ಪಡೆದು ಮೋಸ ಮಾಡುವ ಪ್ರಕರಣಗಳು ಪತ್ತೆಯಾಗ್ತಾನೆ ಇದೆ. ಇಲ್ಲೊಬ್ಬ ಭೂಪ, ಜ್ಯೋತಿಷಿ ಹೆಸರು ಹೇಳಿಕೊಂಡು ಲಕ್ಷಾಂತರ ರೂಪಾಯಿ ಹಣವನ್ನ ಜನರಿಗೆ ಪಂಗನಾಮ ಹಾಕಿದ್ದು ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಹಣ ಮಾಡಬೇಕೆಂಬ ಉದ್ದೇಶದಿಂದ ರಾಯಚೂರು ಜಿಲ್ಲೆಯ ಸಿಂಧನೂರಿನ ಬಸವರಾಜ್ ದುರ್ಗಪ್ಪ ತಾನೊಬ್ಬ ಖ್ಯಾತ ಜ್ಯೋತಿಷಿ ಚಾಮುಂಡಿ ದೇವಿ ಆರಾಧಕ ಮೂರೇ ದಿನದಲ್ಲಿ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ನಿಡುತ್ತೇನೆ ಅಂತಾ ಪಾಂಪ್ಲೇಂಟ್ ಮಾಡಿಸಿದ್ದಾನೆ. ಐದು ಸಾವಿರ ಭಿತ್ತಿ ಪತ್ರಗಳನ್ನ ಬೆಳಗಾವಿಗೆ ಬಂದು ಬೆಳಂಬೆಳಗ್ಗೆ ಪತ್ರಿಕೆ ಹಂಚುವ ಹುಡುಗರ ಕೈಯಲ್ಲಿ ನೀಡಿ ಪತ್ರಿಕೆ ಜತೆಗೆ ಇದನ್ನೂ ಹಂಚಿ ಅಂತಾ ಕೊಟ್ಟು ಹೋಗಿದ್ದಾನೆ.
ಹೀಗೆ ಪತ್ರಿಕೆ ಜತೆಗೆ ನಕಲಿ ಜ್ಯೋತಿಷಿಯ ಭಿತ್ತಿ ಪತ್ರ ಕೂಡ ಓದುಗರ ಮನೆ ಸೇರಿಕೊಂಡಿದೆ. ಮೂರೇ ದಿನದಲ್ಲಿ ಆನ್ ಲೈನ್ ನಲ್ಲಿ ಪರಿಹಾರ ಸಿಗುತ್ತೆ ಅನ್ನೋದನ್ನ ಓದಿದ ಬೆಳಗಾವಿಯ ಇಬ್ಬರು ಮಹಿಳೆಯರು, ತಮ್ಮ ಸಮಸ್ಯೆ ಹೇಳಿಕೊಂಡು ಆತನಿಗೆ ಕರೆ ಮಾಡಿದ್ದಾರೆ. ಅದ್ರಲ್ಲಿ ಓರ್ವ ಮಹಿಳೆ ತನ್ನ ಮಗನಿಗೆ ಆರೋಗ್ಯ ಸಮಸ್ಯೆ ಹೇಳಿಕೊಂಡಿದ್ದಾಳೆ ಎಲ್ಲವನ್ನೂ ಕೇಳಿಕೊಂಡ ಬಸವರಾಜ ನಿಮ್ಮ ಮಗನಿಗೆ ಮಾಟ ಮಾಡಿಸಿದ್ದಾರೆ ಅದನ್ನ ಸರಿಪಡಿಸಲು ಖರ್ಚಾಗುತ್ತೆ ಅಂತಾ ನಂಬಿಸಿ ಹಣ ಹಾಕಿಸಿಕೊಂಡಿದ್ದಾನೆ.
ಹೀಗೆ ಆ ಮಹಿಳೆಯಿಂದ 70ಸಾವಿರ ರೂ ಹಣ ಹಾಕಿಸಿಕೊಂಡಿದ್ದಾನೆ. ಮೂರು ದಿನವಾದ್ರೂ ಸಮಸ್ಯೆ ಪರಿಹಾರ ಆಗದಿದ್ದಾಗ ಆತನಿಗೆ ಕರೆ ಮಾಡಿದ್ರೇ, ‘ಸರಿ ಆಗುತ್ತೆ’ ಅಂತಾ ಕಾಲ್ ಕಟ್ ಮಾಡಿ, ನಂತರ ಅವರ ನಂಬರ್ ಬ್ಲಾಕ್ ಲಿಸ್ಟ್ ಗೆ ಹಾಕಿದ್ದಾನೆ. ಇನ್ನೂ ಕೆಲ ಮಹಿಳೆಯರು ಮಕ್ಕಳಾಗಿಲ್ಲ ಅಂತಾ ಕರೆ ಮಾಡಿ ಪರಿಹಾರ ಕೇಳಿದ್ರೇ ಅವರಿಗೂ ಪೂಜೆ, ಪರಿಹಾರದ ಹೆಸರಲ್ಲಿ ಹಣ ಹಾಕಿಸಿಕೊಂಡು ಸಾಕಷ್ಟು ಮಹಿಳೆಯರಿಗೆ ಈತ ವಂಚನೆ ಮಾಡಿದ್ದಾನೆ.
ಈತನಿಂದ 18 ಸಾವಿರ ಮೋಸ ಹೋಗಿದ್ದ ಮಹಿಳೆ ಮತ್ತು 70ಸಾವಿರ ಮೋಸ ಹೋಗಿದ್ದ ಮಹಿಳೆ ಬೆಳಗಾವಿಯ ಸಿಇಎನ್ ಠಾಣೆಗೆ ಬಂದು ಈ ರೀತಿ ಮೋಸ ಆಗಿರುವ ಕುರಿತು ಕೇಸ್ ನೀಡಿದ್ದಾರೆ. ಪೋನ್ ಪೇ ಗೆ ಹಣ ಹಾಕಿದ್ದು ಮತ್ತು ಆರೋಪಿ ಬಸವರಾಜ ಮಾತನಾಡಿದ ಆಡಿಯೋಗಳನ್ನ ಪೊಲೀಸರಿಗೆ ನೀಡಿದ್ದಾರೆ.
ಎಲ್ಲವನ್ನೂ ತೆಗೆದುಕೊಂಡ ಪೊಲೀಸರು ಆತನ ನಂಬರ್ ಆಧಾರದ ಮೇಲೆ ಪತ್ತೆ ಹಚ್ಚಿದ್ದು ಆತನ ಅಕೌಂಟ್ ನಲ್ಲಿದ್ದ ನಾಲ್ಕು ಲಕ್ಷ ಜಪ್ತಿ ಮಾಡಿಕೊಂಡು ಮೋಸ ಹೋಗಿದ್ದ ಮಹಿಳೆಯರಿಗೆ ಮರಳಿಸಿದ್ದಾರೆ. ಜತೆಗೆ ಬಸವರಾಜ ದುರ್ಗಪ್ಪನನ್ನ ಅರೆಸ್ಟ್ ಮಾಡಿ ಬೆಳಗಾವಿ ಹಿಂಡಲಗಾ ಜೈಲಿಗೆ ಕಳುಹಿಸಿದ್ದಾರೆ.