ಬಿಜೆಪಿ ಸಚಿವರು ಹಾಗೂ ಸ್ಥಳೀಯ ಮುಖಂಡರು ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಮಾಡುತ್ತಿದ್ದಾರೆ: ಶಾಸಕಿ ಅಂಜಲಿ ನಿಂಬಾಳ್ಕರ್‌

ಉಮೇಶ ಗೌರಿ (ಯರಡಾಲ)

ಖಾನಾಪುರ: ಕೊನೇ ಗಳಿಗೆಯಲ್ಲಿ ಕಾರ್ಯಕ್ರಮ ರದ್ದಾದರೂ ಸರಕಾರಿ ಕಾಮಗಾರಿಯೊಂದಕ್ಕೆ ಶಂಕುಸ್ಥಾಪನೆ ನೆರವೇರಿಸುವ ಮೂಲಕ ಖಾನಾಪುರ ಕ್ಷೇತ್ರದ ಕಾಂಗ್ರೆಸ್‌ ಶಾಸಕಿ ಅಂಜಲಿ ನಿಂಬಾಳ್ಕರ್‌ ಬಿಜೆಪಿ ನಾಯಕರಿಗೆ ಸೆಡ್ಡು ಹೊಡೆದಿದ್ದಾರೆ.

ಖಾನಾಪುರ ಪಟ್ಟಣದಲ್ಲಿ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ ವತಿಯಿಂದ 7.54 ಕೋಟಿ ರೂ. ವೆಚ್ಚದಲ್ಲಿ ಹೈಟೆಕ್‌ ಬಸ್‌ ನಿಲ್ದಾಣ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡುವ ಕಾರ್ಯಕ್ರಮ ಭಾನುವಾರ ನಿಗದಿಯಾಗಿತ್ತು. ಸಾರಿಗೆ ಸಚಿವ ಶ್ರೀರಾಮುಲು, ಉಸ್ತುವಾರಿ ಸಚಿವ ಗೋವಿಂದ ಕಾರಜೋಳ, ಸಚಿವರಾದ ಉಮೇಶ್‌ ಕತ್ತಿ, ಶಶಿಕಲಾ ಜೊಲ್ಲೆ ಮೊದಲಾದ ಪ್ರಮುಖರು ಆಹ್ವಾನಿತರಿದ್ದರು. ಆದರೆ ಕೊನೇ ಗಳಿಗೆಯಲ್ಲಿ ಕಾರ್ಯಕ್ರಮ ರದ್ದಾಗಿದ್ದು, ವಿಚಲಿತರಾಗದ ಶಾಸಕಿ ಅಂಜಲಿ ನಿಂಬಾಳ್ಕರ್‌ ಪ್ರಮುಖರ ಅನುಪಸ್ಥಿತಿಯಲ್ಲಿ ಸ್ವತಃ ಕಾಮಗಾರಿಗೆ ಚಾಲನೆ ನೀಡಿದ್ದಾರೆ.

”ಶನಿವಾರ ಸಂಜೆ ಸಾರಿಗೆ ಸಂಸ್ಥೆ ಅಧಿಕಾರಿಗಳು ಕಾಮಗಾರಿ ಶಂಕುಸ್ಥಾಪನೆಗೆ ನನಗೆ ಆಹ್ವಾನ ನೀಡಿದ್ದರು. ಆದರೆ, ಭಾನುವಾರ ಬೆಳಗ್ಗೆ ಕರೆ ಮಾಡಿ ಕಾರ್ಯಕ್ರಮ ಮುಂದೂಡಿರುವುದಾಗಿ ಹೇಳಿದರು. ಪೂರ್ವ ನಿರ್ಧರಿತ ಕಾರ್ಯಕ್ರಮ ಮುಂದೂಡಲು ಕಾರಣವೇನೆಂದು ಕೇಳಿದರೆ ಸಮರ್ಪಕ ಉತ್ತರ ನೀಡಲಿಲ್ಲ. ಹೀಗಾಗಿ, ಅಧಿಕಾರಿಗಳ ಮಾತಿಗೆ ಕಿವಿಗೊಡದೆ ಈ ಕಾಮಗಾರಿಗೆ ಸ್ವತಃ ಚಾಲನೆ ನೀಡಿದ್ದೇನೆ” ಎಂದು ಶಾಸಕಿ ಡಾ. ಅಂಜಲಿ ತಿಳಿಸಿದರು.‌

ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕಿ ಡಾ ಅಂಜಲಿ, ತಾಲೂಕಿನ ನಾಗರಿಕರ ಬಹುದಿನಗಳ ಬೇಡಿಕೆಯ ಈ ಕಾಮಗಾರಿಗೆ 2020ರ ಜುಲೈನಲ್ಲಿ ಹಣಕಾಸು ಇಲಾಖೆಯಿಂದ ಅನುಮೋದನೆ ದೊರೆತಿತ್ತು. ಆದರೆ, ಆಗಿನ ಸಾರಿಗೆ ಸಚಿವರೂ ಆಗಿದ್ದ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅನುದಾನ ದೊರೆಯದಂತೆ ಅಡೆತಡೆ ಉಂಟು ಮಾಡಿದ್ದರು. ನಂತರ ಬಂದ ನೂತನ ಸಾರಿಗೆ ಸಚಿವ ಶ್ರೀರಾಮುಲು ಅವರಿಗೆ ವಿನಂತಿಸಿದಾಗ ಅವರಿಂದ ಸಕಾರಾತ್ಮಕ ಸ್ಪಂದನೆ ದೊರೆತು ಕಾಮಗಾರಿಯ ಟೆಂಡರ್‌ ಪ್ರಕ್ರಿಯೆ ಆರಂಭಗೊಂಡಿತ್ತು. ಆದರೆ, ಈ ಪ್ರಕ್ರಿಯೆಯನ್ನೂ ನಿಲ್ಲಿಸಲು ಲಕ್ಷ್ಮಣ ಸವದಿ ಬಹಳ ಪ್ರಯತ್ನಪಟ್ಟರು. ನಾನೂ ಛಲಬಿಡದೇ ನಿರಂತರ ಪ್ರಯತ್ನ ಪಟ್ಟ ಪರಿಣಾಮ ಈ ವರ್ಷ ಜನವರಿಯಲ್ಲಿ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡು ಕಾಮಗಾರಿಗೆ ಹಸಿರು ನಿಶಾನೆ ಸಿಕ್ಕಿದೆ ಎಂದು ಡಾ. ಅಂಜಲಿ ನಿಂಬಾಳ್ಕರ್‌ ಹೇಳಿದರು.

ಮುಂದಿನ 8 ತಿಂಗಳಲ್ಲಿ2 ಎಕರೆ ಪ್ರದೇಶದಲ್ಲಿ ಸುಸಜ್ಜಿತ ಬಸ್‌ ನಿಲ್ದಾಣ ತಲೆ ಎತ್ತಲಿದೆ. ಹೊಸ ನಿಲ್ದಾಣದಲ್ಲಿ 13 ಪ್ಲಾಟ್‌ ಫಾರ್ಮ, 8 ವಾಣಿಜ್ಯ ಮಳಿಗೆಗಳು, ಮಹಿಳೆ ಮತ್ತು ಪುರುಷರಿಗಾಗಿ ಪ್ರತ್ಯೇಕ ಶೌಚಾಲಯಗಳು, ವಾಹನ ಪಾರ್ಕಿಂಗ್‌, ಕುಡಿಯುವ ನೀರು, ವಿಶ್ರಾಂತಿ ಕೊಠಡಿ, ಉಪಹಾರ ಗೃಹ ಮತ್ತಿತರ ಸೌಲಭ್ಯಗಳು ಇರಲಿವೆ ಎಂದು ಶಾಸಕಿ ಅಂಜಲಿ ಮಾಹಿತಿ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವರು, ಸಾರಿಗೆ ಅಧಿಕಾರಿಗಳು ಸೇರಿದಂತೆ ಬಿಜೆಪಿಯ ಸಚಿವರು ಮತ್ತು ಸ್ಥಳೀಯ ಮುಖಂಡರು ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಅಧಿವೇಶನದಲ್ಲಿ ಈ ವಿಚಾರ ಮಂಡಿಸಿ ಸರಕಾರದಿಂದ ಉತ್ತರ ಪಡೆಯುತ್ತೇನೆ ಎಂದು ಶಾಸಕಿ ಡಾ ಅಂಜಲಿ ನಿಂಬಾಳ್ಕರ್‌ ಹೇಳಿದರು.

ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಮಜಹರ ಖಾನಾಪುರಿ, ಉಪಾಧ್ಯಕ್ಷೆ ಲಕ್ಷ್ಮಿ ಅಂಕಲಗಿ, ಸದಸ್ಯರಾದ ಲಕ್ಷ್ಮಣ ಮಾದಾರ, ವಿನಾಯಕ ಕಲಾಲ, ಮೇಘಾ ಕುಂದರಗಿ, ಕಾಂಗ್ರೆಸ್‌ ಮುಖಂಡರಾದ ಮಹಾಂತೇಶ ರಾಹುತ, ಮಹಾಂತೇಶ ಕಲ್ಯಾಣಿ, ಆರ್‌.ಡಿ ಹಂಜಿ, ರಿಯಾಜ್‌ ಅಹ್ಮದ್‌ ಪಟೇಲ್‌, ಕಾಸೀಂ ಹಟ್ಟಿಹೊಳಿ, ಸಂತೋಷ ಹಂಜಿ, ಸುರೇಶ ಜಾಧವ, ರಾಮಚಂದ್ರ ಪಾಟೀಲ, ಸೂರ್ಯಕಾಂತ ಕುಲಕರ್ಣಿ, ಅನಿತಾ ದಂಡಗಲ್‌, ಸಾಮಾಜಿಕ ಕಾರ್ಯಕರ್ತ ರವಿ ಕಾಡಗಿ, ಲಯನ್ಸ್‌ ಕ್ಲಬ್‌ ಅಧ್ಯಕ್ಷ ಎಂಜಿ ಬೆನಕಟ್ಟಿ ಮತ್ತಿತರರು ಇದ್ದರು. ಪ್ರಕಾಶ ಮಾದಾರ ಪ್ರಾಸ್ತಾವಿಕ ಮಾತನಾಡಿದರು. ಮಹಾದೇವ ಕೋಳಿ ಸ್ವಾಗತಿಸಿದರು. ಮಧು ಕವಳೇಕರ ವಂದಿಸಿದರು.

 

 

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";