ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ (ಎಸ್ಐಟಿ) ರಚನೆ ಮಾಡಿ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಹೊರಡಿಸಿದ ಆದೇಶ ರದ್ದು ಕೋರಿ ಸಲ್ಲಿಸಿದ್ದ ಪಿಐಎಲ್ ಅನ್ನು ಹೈಕೋರ್ಟ್ ವಿಲೇವಾರಿ ಮಾಡಿದೆ.
ಎಸ್ ಐ ಟಿ ರಚನೆ ಪ್ರಶ್ನಿಸಿ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಸಲ್ಲಿಸಿರುವ ಮತ್ತೊಂದು ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ಏಕಸದಸ್ಯ ಪೀಠಕ್ಕೆ ವರ್ಗಾಯಿಸಿದೆ. ಇದರಿಂದಾಗಿ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.
ವಕೀಲೆ ಗೀತಾ ಮಿಶ್ರಾ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಗೂ ಸಂತ್ರಸ್ತೆ ಸಲ್ಲಿಸಿದ್ದ ಅರ್ಜಿ ಎರಡೂ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯಪೀಠದ ಮುಂದೆ ವಿಚಾರಣೆಗೆ ಬಂದವು.
ಆಗ ವಿಚಾರಣೆ ನಡೆಸಿದ ನ್ಯಾಯಪೀಠ, ಎಸ್ ಐಟಿ ರಚನೆ ಪ್ರಶ್ನಿಸಿ ಪಿಐಎಲ್ ಹೂಡಲಾಗಿದೆ. ಆದರೆ ಸಂತ್ರಸ್ತೆಯೇ ಅದೇ ಎಸ್ಐಟಿ ಪ್ರಶ್ನಿಸಿ ಅರ್ಜಿ ಸಲ್ಲಿಸಿರುವ ಕಾರಣ ಪಿಐಎಲ್ ಅರ್ಜಿಯನ್ನು ಉಳಿಸಿಕೊಳ್ಳುವ ಅಗತ್ಯ ಏನೂ ಇಲ್ಲ ಎಂದು ಅಭಿಪ್ರಾಯಪಟ್ಟು ಇತ್ಯರ್ಥಪಡಿಸಿತು. ಜೊತೆಗೆ ಸಂತ್ರಸ್ತೆ ಅರ್ಜಿಯನ್ನು ಏಕಸದಸ್ಯಪೀಠಕ್ಕೆ ವರ್ಗಾಯಿಸಿದ ವಿಭಾಗೀಯ ನ್ಯಾಯಪೀಠ, ಅರ್ಜಿಯನ್ನು ರೋಸ್ಟರ್ ಪ್ರಕಾರ ಸಂಬಂಧಪಟ್ಟ ನ್ಯಾಯಪೀಠ ಮುಂದೆಗೆ ವಿಚಾರಣೆಗೆ ನಿಗದಿಪಡಿಸಲು ಆದೇಶಿಸಿತು.ಸಂತ್ರಸ್ತೆಯು ಸಲ್ಲಿಸಿರುವ ಮತ್ತೊಂದು ಅರ್ಜಿಯನ್ನು ನ್ಯಾಯಪೀಠವೇ ವಿಚಾರಣೆ ಮುಂದುವರಿಸಲಿದೆ. ಅಲ್ಲದೆ, ನ್ಯಾಯಪೀಠ ಪಿಐಎಲ್ ಅಲ್ಲಿ ಸಲ್ಲಿಸಲಾಗಿರುವ ಅಗತ್ಯ ದಾಖಲೆಗಳನ್ನು ರೋಸ್ಟರ್ ನ್ಯಾಯಪೀಠಕ್ಕೆ ಒದಗಿಸುವ ಉದ್ದೇಶದಿಂದ ಪಿಐಎಲ್ ಅನ್ನು ಸಂತ್ರಸ್ತೆಯ ಅರ್ಜಿಯೊಂದಿಗೆ ಸೇರಿಸಬಹುದು. ಪಿಐಎಲ್ ಅಲ್ಲಿನ ಅರ್ಜಿದಾರರ ಪರ ವಕೀಲರು ಏಕಸದಸ್ಯಪೀಠಕ್ಕೆ ತಮ್ಮ ಅಗತ್ಯ ಸಲಹೆ- ಸೂಚನಗಳೊಂದಿಗೆ ನೀಡಬಹುದು ಎಂದು ಆದೇಶದಲ್ಲಿ ಸ್ಪಷ್ಟಪಡಿಸಿದೆ.
ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಬಿರುಗಾಳಿ ಎಬ್ಬಿಸಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿ.ಡಿ. ಬಹಿರಂಗ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತಿಮ ತನಿಖಾವರದಿ ಸಲ್ಲಿಸಲು ಹೈಕೋರ್ಟ್ ವಿಶೇಷ ತನಿಖಾ ತಂಡ (ಎಸ್ಐಟಿ)ಕ್ಕೆ ಫೆ. 3ರಂದು ಅನುಮತಿ ನೀಡಿದೆ. ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ವಿಭಾಗೀಯಪೀಠ, ಎಸ್ ಐಟಿಗೆ ಅಂತಿಮ ವರದಿ ಸಲ್ಲಿಸಲು ಅನುಮತಿ ನೀಡಿತು. ಅಲ್ಲದೆ, ಅಂತಿಮ ವಿಚಾರಣೆಯನ್ನು ಮಾ.9ಕ್ಕೆ ಮುಂದೂಡಿ ಅಷ್ಟರಲ್ಲಿ ಸಂತ್ರಸ್ತ ಯುವತಿ ಪರ ವಕೀಲರು, ಏನಾದರೂ ಆಕ್ಷೇಪಣೆಗಳಿದ್ದರೆ ಸಲ್ಲಿಸಬಹುದು ಎಂದು ಆದೇಶ ನೀಡಿತು. “ಕಬ್ಬನ್ ಪಾರ್ಕ್ ನಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ತನಿಖೆ ಪೂರ್ಣಗೊಳಿಸಿರುವ ಎಸ್ ಐಟಿ, ಸಕ್ಷಮ ಮ್ಯಾಜಿಸ್ಟ್ರೇಟ್ ಮುಂದೆ ತನಿಖಾ ವರದಿ ಸಲ್ಲಿಸಬಹುದು. ಅರ್ಜಿದಾರರು ಎಸ್ ಐಟಿ ರಚನೆ ಸಿಂಧುತ್ವನ್ನು ಪ್ರಶ್ನಿಸಿದ್ದಾರೆ, ಆ ಕುರಿತು ಎತ್ತಿರುವ ಪ್ರಶ್ನೆಗಳನ್ನು ಮುಕ್ತವಾಗಿರಿಸಿದೆ.”ಎಂದು ನ್ಯಾಯಾಲಯ ಹೇಳಿದೆ.
ಈ ಮಧ್ಯೆ, ಹೈಕೋರ್ಟ್ ಅಂತಿಮ ವರದಿ ಸಲ್ಲಿಕೆಗೆ ಅನುಮತಿ ನೀಡಿದ ಮರುದಿನವೇ ಎಸ್ ಐಟಿ ವಿಚಾರಣಾ ನ್ಯಾಯಾಲಯಕ್ಕೆ ವರದಿಯನ್ನು ಸಲ್ಲಿಸಿತು. ಅದರಲ್ಲಿ ಮೇಲ್ನೋಟಕ್ಕೆ ಆರೋಪದಲ್ಲಿ ಯಾವುದೇ ಹುರುಳಿಲ್ಲ, ಆರೋಪ ಸಾಬೀತುಪಡಿಸುವತಂಹ ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ಜಾರಕಿಹೊಳಿಗೆ ಕ್ಲೀನ್ ಚಿಟ್ ನೀಡಿ ಬಿ ರಿಪೋರ್ಟ್ ಸಲ್ಲಿಸಿದೆ.
ಇದನ್ನು ಪ್ರಶ್ನಿಸಿ ಸಂತ್ರಸ್ತ ಯುವತಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದು, ಸುಪ್ರೀಂಕೋರ್ಟ್ ಎಸ್ ಐಟಿ ನೀಡಿರುವ ವರದಿಗೆ ತಡೆ ನೀಡಿದೆ. ಅಲ್ಲದೆ ಹೈಕೋರ್ಟ್ ಆ ವರದಿಯನ್ನು ಪರಿಶೀಲಿಸಬೇಕು ಎಂದು ಆದೇಶ ನೀಡಿದೆ.