ಹೆಣ್ಣು ಪ್ರೀತಿಗಾಗಿ ಏನೇನು ಸಹಿಸುಕೊಳ್ಳಬೇಕು? ಗಂಡಿನ ಜೋರು, ದರ್ಪ, ಗುಲಾಮಗಿರಿ, ಒಂದೇ? ಎರಡೇ? ಲೆಕ್ಕವಿಲ್ಲದಷ್ಟು! ಆಕೆ ಪ್ರೀತಿಸಿ ಮದುವೆ ಆದವನೊಂದಿಗಿನ ಸಂಬಂಧ ಕಾಪಿಟ್ಟುಕೊಳ್ಳಲು ಇಷ್ಟೆಲ್ಲಾ ಮಾಡುತ್ತಿದ್ದಳೆ? ಈ ಪ್ರಶ್ನೆಗೆ ಉತ್ತರ ಹುಡುಕಲಾರಂಭಿಸಿದೆ. ನಿಜಕ್ಕೂ ಇದು ಹರ್ಲಿನ್ ಆಂಟಿಯ ಲೌಸ್ಟೋರಿ ಇರಬಹುದು, ಗುಮಾನಿಯಿಂದ ನಿರ್ಧರಿಸಿದೆ. |
‘ಮುಝೆ ರೋಜ್ ತುಮ್ಹಾರಿ ಯಾದ್ ಆತಿ ಹೈ… ರಾಧೆ ಶ್ಯಾಮ್ ಬೇಟಾ…’ ಥೇಟ್ ಅವ್ವನಂತೆ ಮಾತನಾಡುವ ಹರ್ಲಿನ್ ಆಂಟಿ ಕಾಲ್ನಲ್ಲಿ ಮಾತು ಮುಗಿಸಿದಾಗ ಸಮಯ ನೋಡಿದೆ. ಒಂದೂವರೆ ಗಂಟೆಗಳ ಕಾಲ ಮಾತನಾಡಿದ್ದೆವು. ಆ ಮಾತುಗಳ ಮೆಲುಕ ಹಾಕುತ್ತ, ಕಳೆದು ಹೋದ ಭಾವದಲಿ, ದೈನಂದಿನ ಕ್ರಿಯೆ ಮುಗಿಸುವ ತವಕ. ಆಕೆಯ ಮಾತು ಮೇಲಿಂದ ಮೇಲೆ ಸಮುದ್ರದಲೆಗಳಂತೆ ಅಪ್ಪಳಿಸಿದಾಗ ಅದೆನೋ ತಾಕಲಾಟ.
ಹರ್ಲಿನ್ ಆಂಟಿ ಮಾಡುತ್ತಿದ್ದ ಪೂರಿ ಭಾಜಿಯ ಘಮಲು ಸುತ್ತಲೂ ಅಡರಿದ ಭಾವ. ಅದರಕ್ ಕಿ ಚಾಯ್ನ ಸ್ವಾದ ಗುಟುಕರಿಸಿದಂತಾಯಿತು. ಛೋಲೆ ಬಟೂರೆಯಲ್ಲಂತೂ ಹುಚ್ಚು ಹಿಡಿಸುವ ಸಾದ್ವ. ಲಸ್ಸಿಯಲಿ ಪ್ರೀತಿಯ ತಂಪು ಪಸರಿಸಿ ಗುಟುಕು ಗುಟುಕಿನಲ್ಲೂ ಆಪ್ತ ಅನುಭವ. ಬಾಲ್ಯದ ಆ ದಿನಗಳು ನೆನಪಾದವು…
ಗುಜರಾತಿ ಅಪ್ಪ, ಪಂಜಾಬಿ ಅಮ್ಮನ ಮಗಳು ಹರ್ಲಿನ್ ಆಂಟಿ. ಮುಕ್ತ ಮನಸಿನ ಸ್ವಚ್ಛಂದ ಹಕ್ಕಿ, ಹಿಂದು ಹುಡುಗನನ್ನು ಪ್ರೀತಿಸಿ ಮದುವೆಯಾಗಿ ಉತ್ತರ ಕರ್ನಾಟಕದವರೇ ಆಗಿದ್ದರು. ತವರಿಗೆ ಹೋಗುವ ಮಾತೇ ಇಲ್ಲ.
ಈಗ ಅಂಕಲ್ ಆಂಟಿಯ ಪ್ರೀತಿಯನ್ನು ನೆನಪಿಸಿಕೊಂಡರೆ ಮೈ ಜುಮ್ಮೆನ್ನುತ್ತದೆ. ಅಂಕಲ್ ಸ್ವಭಾವ ವಿಚಿತ್ರ. ಸಿಡುಕುತನ, ಮುಂಗೋಪಿ, ಬೈಯೋದು, ಇದ್ದೇ ಇರುತ್ತಿತ್ತು. ಇಂತಹ ವ್ಯಕ್ತಿಯನ್ನು ಹರ್ಲಿನ್ ಆಂಟಿ ಆರಾಧಿಸುತ್ತಿದ್ದರು. ಅದೇನು ಮೋಡಿ ಮಾಡಿದ್ದರೋ ಗೊತ್ತಿಲ್ಲ. ಉತ್ತರ ಕರ್ನಾಟಕದ ಅನೇಕ ಪುರುಷರಲ್ಲಿ ಗ್ರಹಣದಂತೆ ಹಿಡಿದಿರುವ ಈ ಗುಣಕ್ಕೆ ಹಿಂದಿನ ರಾಜಾಧಿರಾಜರು ನವಾಬರೇ ಕಾರಣ ಎಂದು ನಮ್ಮವ್ವ ಹಾಗೂ ಹರ್ಲಿನ್ ಆಂಟಿ ಮಾತನಾಡುತ್ತ ನಗುತ್ತಿದ್ದುದು ಇನ್ನೂ ನೆನಪಿದೆ.
ಹೆಣ್ಣು ಪ್ರೀತಿಗಾಗಿ ಏನೇನು ಸಹಿಸುಕೊಳ್ಳಬೇಕು? ಗಂಡಿನ ಜೋರು, ದರ್ಪ, ಗುಲಾಮಗಿರಿ, ಒಂದೇ? ಎರಡೇ? ಲೆಕ್ಕವಿಲ್ಲದಷ್ಟು! ಆಕೆ ಪ್ರೀತಿಸಿ ಮದುವೆ ಆದವನೊಂದಿಗಿನ ಸಂಬಂಧ ಕಾಪಿಟ್ಟುಕೊಳ್ಳಲು ಇಷ್ಟೆಲ್ಲಾ ಮಾಡುತ್ತಿದ್ದಳೆ? ಈ ಪ್ರಶ್ನೆಗೆ ಉತ್ತರ ಹುಡುಕಲಾರಂಭಿಸಿದೆ. ಅದು ಹಾಗಿರಲಿಲ್ಲ. ಹರ್ಲಿನ್ ಆಂಟಿಗೆ ಪತಿ ಏನೇ ಮಾಡಿದರೂ ಪ್ರೀತಿಯೇ ಕಾಣಿಸುತ್ತಿತ್ತು. ಆಕೆಗೆ ತನ್ನ ಅಸ್ತಿತ್ವದ ಗೊಡವೆಯೇ ಇರಲಿಲ್ಲ. ಗಂಡನ ಅಂತರಂಗದ ಒಂದು ಅಂಗವಾಗಿ ಬೆಚ್ಚಗೆ ಕುಳಿತಂತೆ ಗೋಚರಿಸಿತು.
ದುಂಡು ಮುಖದ ಸುಂದರಿಯ ಮುಖದಲ್ಲಿ ಬೆಳದಿಂಗಳ ಬೆಳಕು. ಆ ನಗುವಿನಲ್ಲಿ ಕೋಟಿ ಚಂದ್ರರು ಕೂಡಿಕೊಂಡು ತಂಪು ಆವಾಹಿಸಿದ ಹಿಗ್ಗು. ಸೌಂದರ್ಯ ಇರುವುದು ಮೊಗದ ರೂಪದಲ್ಲಲ್ಲ, ನಗುವಿನಲ್ಲಿ ಎನ್ನುವುದನ್ನು ಹರ್ಲಿನ್ ಆಂಟಿಯಲ್ಲಿ ಕಂಡಿತು. ಅದೇನು ಮಾತು? ಅದೇನು ನಗು? ಅದೇನು ಉತ್ಸಾಹ? ಅದೇನು ಉಲ್ಲಾಸ? ಈಗ ನೆನಪಾದರೆ ನಿಜಕ್ಕೂ ಆಕೆ ಅಷ್ಟೊಂದು ಸಂತೋಷವಾಗಿದ್ದಳಾ? ಮನದ ಮೂಲೆಯಲ್ಲಿ ಅನುಮಾನ ಮೂಡಿತು. ಆ ಮಾತು ನಗುವಿನ ಹಿಂದೆ ಅಡಗಿರುವುದು ನೋವೊ? ನಲಿವೊ? ನಿಗೂಢ!
ಇದು ನಲವತ್ತು ವರ್ಷಗಳ ಹಿಂದಿನ ಕತೆ. ನಾನಾಗ ಹತ್ತು ವರ್ಷದ ಹುಡುಗಿ. ಆಗಿನಿಂದಲೂ ಹರ್ಲಿನ್ ಆಂಟಿಯೊಂದಿಗೆ ಹಿಂದಿಯಲ್ಲೇ ಮಾತುಕತೆ. ಇತ್ತೀಚೆಗೆ ಹತ್ತು ವರ್ಷಗಳಿಂದ ಎಲ್ಲರೂ ಅವರವರ ಬದುಕಿನಲ್ಲಿ ಕಳೆದು ಹೋಗಿದ್ದೆವು. ‘ನನ್ನವರು’, ‘ನಮ್ಮವರು’ ಎನಿಸಿಕೊಂಡವರು ‘ನಾನು’ ಎನ್ನುವ ಮನದ ಮೂಲೆಯಲ್ಲಿ ಚಿರಕಾಲ ಉಳಿದಿರುತ್ತಾರೆ. ಈ ಮಾತು ನಿಜ ಎನಿಸಿತ್ತು. ಯಾವಾಗ ಗೊತ್ತೆ? ಹರ್ಲಿನ್ ಆಂಟಿಯಿಂದ ಕಾಲ್ ಬಂದಾಗ!
ಈಗ ಆಕೆಗೆ ಎಪ್ಪತ್ತೆಂಟು ವರ್ಷ. ಆದರೂ ಮಾತಿನಲ್ಲಿ ಇಪ್ಪತ್ತೆಂಟರ ಹರೆಯ! ಹಳೆಯ ಡೈರಿ ತೆಗೆದು ನಂಬರ್ ಹುಡುಕಿ ಕಾಲ್ ಮಾಡಿದ್ದಳು.‘ರಾಣಿ ನಿಮ್ಮ ಅಂಕಲ್ ನನ್ನನ್ನು ಬಿಟ್ಟು ಹೋದರು. ಕ್ರೂರ ಕೋವಿಡ್ ಇಬ್ಬರನ್ನೂ ಕರೆದುಕೊಂಡು ಹೋಗಲಿಲ್ಲ. ಅದಕ್ಕೆ ಕರುಣೆ ಇಲ್ಲ. ಗಂಡನನ್ನು ಬಿಟ್ಟು ಹರ್ಲಿನ್ ಹೇಗೆ ಇರುತ್ತಾಳೆ? ಸ್ವಲ್ಪನಾದ್ರು ಯೋಚಿಸಬೇಕೊ ಇಲ್ಲವೊ? ಈಗ ನೋಡು ನಿಮ್ಮ ಅಂಕಲ್ ಇಲ್ಲದ ಮನೆಯಲ್ಲಿ, ಅದೇ ಮಂಚದ ಮೇಲೆ ಮಲಗಿದಿನಿ. ಯಾವಾಗ ಬರ್ತಾರೊ ಅಂತ ಹುಚ್ಚು ಮನಸು ನಿದ್ದೆಗಣ್ಣಿನಲ್ಲಿಯೂ ಕಾಯುತ್ತೆ. ಅವರ ಸಿಟ್ಟು ಜೋರು ದರ್ಪ ನೆನಪಾದ್ರೆ ಕುಳಿತು ಅಳ್ತೀನಿ ಬೇಟಾ. ಇದು ನನ್ನ ಹುಚ್ಚುತನ ಅನಿಸಬಹುದು ನಿನಗೆ. ಆದರೆ ಅದೇ ಜೀವನವಾಗಿತ್ತು. ಅವರ ಮನದ ಆಳದಲ್ಲಿ ಇದ್ದದ್ದು ಪ್ರೀತಿನೇ.ಅದೇ ನನ್ನನ್ನು ಹುಚ್ಚಳನ್ನಾಗಿಸಿತ್ತು. ‘ನಿಜಕ್ಕೂ ಇದು ಹರ್ಲಿನ್ ಆಂಟಿಯ ಲೌಸ್ಟೋರಿ ಇರಬಹುದು, ಗುಮಾನಿಯಿಂದ ನಿರ್ಧರಿಸಿದೆ.
ಹರ್ಲಿನ್ ಆಂಟಿ ಹೊಟ್ಟೆ ತುಂಬುವಷ್ಟು ಮಾತನಾಡಿದ್ದಳು. ಮನೆ, ಮನೆಗೆಲಸ, ಊಟ, ತಿಂಡಿ, ಆರೋಗ್ಯ ಎಲ್ಲದರ ಹೋರಾಟ ಹೇಳಿದಾಗ, ಕರುಳು ಚುರುಕ್ ಎಂದಿತು. ಅಬ್ಬಾ! ಅನಾರೋಗ್ಯ!! ಮುಪ್ಪು!!! ಈ ಸಮಯದಲ್ಲಿ ಮಕ್ಕಳ ಪಾತ್ರ. ನಾ ಸುಸ್ತಾಗಿ ಹೋದೆ. ನನ್ನವ್ವ ನನ್ನ ಕೈ ಮೇಲೇ ಜೀವ ಬಿಟ್ಟ ಕ್ಷಣ ನೆನಪಾಗಿ ಕಣ್ಣಲ್ಲಿ ನೀರಾಡಿತು. ಆಂಟಿಯ ಮನಸಿಗೆ ನೋವಾಗದಂತೆ ಮಾತನಾಡಿದೆ. ಆದರೂ ವಾಸ್ತವ ವಾಸ್ತವವೇ!
ಆಕೆ ಐದು ಮಕ್ಕಳ ತಾಯಿ. ನಾಲ್ಕು ಗಂಡು. ಒಂದು ಹೆಣ್ಣು. ‘ಸತ್ತಾಗ ನಾಲ್ಕು ಗಂಡು ಮಕ್ಕಳು ಹೆಣ ಹೊರ್ತಾರೆ, ಹೆಣ್ಣುಮಗಳು ತಲೆ ಹಿಡಿತಾಳೆ’ ಎಂದು ಅಪ್ಪ ತಮಾಷೆ ಮಾಡಿ ಹೇಳುತ್ತಿದ್ದ ಕಾಲ ಒಂದಿತ್ತು. ಆದರೆ ಇಂದು ಅದೇ ಸತ್ಯವಾಗಿದೆ. ಮಕ್ಕಳು ಯಾರೂ ತಾಯಿಯೊಂದಿಗಿಲ್ಲ. ಮಗಳು ಅನಾರೋಗ್ಯದಲ್ಲಿ ಸಂಪೂರ್ಣ ಸೇವೆ ಮಾಡಿ, ಮತ್ತೆ ಬದುಕಿಸಿ, ತನ್ನೂರಿಗೆ ಹೋಗಿದ್ದಾಳೆ. ಈಗ ಒಂಟಿಯಾಗಿ ಅವರಿವರ ಸಹಾಯದಿಂದ ದಿನಗಳೆಯಬೇಕು.
ಹರ್ಲಿನ್ ಆಂಟಿ ಬಾಲ್ಯದಲ್ಲಿ ನಮಗೆ ಉಣಿಸಿದ್ದಕ್ಕೆ ಲೆಕ್ಕವೇ ಇಲ್ಲ. ಈಗ ನೆನದರೆ ಉಂಡ ಅನ್ನ ಕಹಿಯಾದಂತೆ ಭಾಸ. ಅನ್ನದ ರುಣ ತೀರಿಸಲು ಯಾಕೆ ಸಾಧ್ಯವಿಲ್ಲ ಎನ್ನುವ ಹತಾಶೆ ಕಂಗಾಲಾಗಿಸುತ್ತದೆ.
ಹರ್ಲಿನ್ ಆಂಟಿಯ ಕೊನೆ ಮಾತು ಮನಸಿಗೆ ನೇರವಾಗಿ ನಾಟಿತು. ‘ರಾಣಿ ಬೇಟಾ, ಈ ಜಗತ್ತಿನಲ್ಲಿ ಕೊನೆ ತನಕ ಪ್ರೀತಿಯೊಂದೇ ಉಳಿಯುತ್ತದೆ. ರಾಧೆ ಕೃಷ್ಣರ ಸ್ನೇಹದಂತೆ. ಅದಕ್ಕೆ ಕೃಷ್ಣ ಹೇಳೋದು, ಮೊದಲು ರಾಧೆಯ ಹೆಸರು ಹೇಳಿ. ರಾಧೇಯ ಎಂದು ನನ್ನನ್ನು ಕರೆಯಿರಿ. ‘ರಾಧೆಕೃಷ್ಣ’ನೇ ಶಾಶ್ವತ. ಈ ಜಗತ್ತಿನಲ್ಲಿ ಮುಪ್ಪಾದ ತಾಯಿ, ತಂದೆಯನ್ನು ಮಕ್ಕಳು ಮರೆತು ಬಿಡುತ್ತಾರೆ. ಅವರಿಗೇ ಮುಪ್ಪು ಬಂದಾಗ ನೆನಪಿಸಿಕೊಳ್ಳುತ್ತಾರೆ. ಆಗ ಅವರಿರುವುದಿಲ್ಲ.’
ಅವರ ಮಾತಿಗೆ ನಾ ನಿರುತ್ತಳಾಗಿದ್ದೆ. ಅಸಹಾಕತೆಯ ಭಾವ ಕಾಡಿತು. ವ್ಯಕ್ತಪಡಿಸಿದೆ. ಅದಕ್ಕೂ ಆಕೆಯ ಉತ್ತರ ಸಿದ್ಧವಾಗಿತ್ತು.‘ರಾಣಿ ಬೇಟಾ ನಿನ್ನ ಮುಂದೆ ಇಷ್ಟು ಹೇಳಿಕೊಂಡು ಮನಸು ಹಗುರ ಮಾಡಿಕೊಂಡೆ. ಅಷ್ಟೇ ಸಾಕು ಈ ಜನ್ಮಕ್ಕೆ. ನೀನೂ ನನ್ನ ಮಗಳೇ. ನೀನು ಸುಖವಾಗಿರು. ಹೀಗೆ ಯಾವಾಗಲಾದ್ರು ಕಾಲ್ ಮಾಡಿ ತೊಂದ್ರೆ ಕೊಡ್ತೀನಿ.’
ಕೊನೆಗೆ ಕೆಮ್ಮುತ್ತಿದ್ದರೂ ನಗುನಗುತ್ತ ಮಾತು ಮುಗಿಸಿ ಇಟ್ಟಿದ್ದರು.
ಆಗ ಪರ್ಶಿಯನ್ ಕವಿ ರೂಮಿ ಹೇಳಿದ ಸಾಲುಗಳು ನೆನಪಾದವು… ‘ಪ್ರೀತಿ ಒಂದನ್ನು ಬಿಟ್ಟು ಬಾಕಿ ಎಲ್ಲವೂ ನಿರರ್ಥಕ ಎನ್ನುವ ಕಾಲ ಬರಲಿದೆ…’ ರೂಮಿ ಈ ಜಗತ್ತು ಕಂಡ ಅಪ್ರತಿಮ ಕವಿ. ಆದರೆ ಅವನಿಗೂ ಹರ್ಲಿನ್ ಆಂಟಿಗೂ ಎನೂ ವ್ಯತ್ಯಾಸವಿಲ್ಲ ಎನಿಸಿತು. ಅವನು ಬರೆದಿಟ್ಟು ಹೋಗಿದ್ದಾನೆ. ಇವರು ಬರೆಯಲಿಲ್ಲ ಅಷ್ಟೆ.