Thursday, September 19, 2024

ವೀರರಾಣಿ ಬೆಳವಡಿ ಮಲ್ಲಮ್ಮಳ ಉತ್ಸವಕ್ಕೆ :ಚಾಲನೆ ನೀಡಿದ ಸಚಿವ ಶಶಿಕಲಾ ಜೊಲ್ಲೆ

ಬೈಲಹೊಂಗಲ : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಬಳಿ ನಿಯೋಗ ಕರೆದುಕೊಂಡು ಹೋಗಿ ರಾಷ್ಟ್ರೀಯ ಮಹಿಳಾ ಸೈನ್ಯಕ್ಕೆ ವೀರರಾಣಿ ಬೆಳವಡಿ ಮಲ್ಲಮ್ಮಳ ಹೆಸರಿಡುವಂತೆ ಪ್ರಸ್ತಾವಣೆ ಸಲ್ಲಿಸಲಾಗುವುದು ಎಂದು ಮುಜರಾಯಿ ಮತ್ತು ಹಜ್ ವಕ್ತ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.ತಾಲ್ಲೂಕಿನ ಮಲ್ಲಮ್ಮನ ಬೆಳವಡಿ ಗ್ರಾಮದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ  ಸಹಯೋಗದೊಂದಿಗೆ ಸೋಮವಾರ ನಡೆದ ವೀರರಾಣಿ ಬೆಳವಡಿ ಮಲ್ಲಮ್ಮಳ 2022ನೇ ಸಾಲಿನ ಉತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಈ ಭಾಗದಲ್ಲಿ ಕಿತ್ತೂರು ಚನ್ನಮ್ಮ, ಬೆಳವಡಿ ಮಲ್ಲಮ್ಮ ಬಹಳ ಅದ್ಭೂತ ಕೊಡುಗೆ ನೀಡಿದ್ದಾರೆ. ಅವರ ಜೀವನ ಸಾಧನೆ ಬಗ್ಗೆ ಎಷ್ಟು ಕೊಂಡಾಡಿದರು ಕಡಿಮೆ ಆಗುತ್ತದೆ. ಮಲ್ಲಮ್ಮನ ಕುರಿತು ಕುರುಹಗಳಿಲ್ಲ. ಅವರ ಜೀವನ ಸಾಧನೆ ಸಾಕಷ್ಟಿದೆ. ಅಂದಿನ ಕಾಲದಲ್ಲಿ ಛತ್ರಪತಿ ಶಿವಾಜಿ ಮಹಾರಾಜ ಮಲ್ಲಮ್ಮನೊಂದಿಗೆ ಹೋರಾಡಿ ಮಲ್ಲಮ್ಮ ತನ್ನ ಸಹೋದರಿ ಎಂದು ಸ್ವೀಕಾರ ಮಾಡಿ ಹೋಗಿದ್ದಾರೆ. ಪ್ರೀತಿ, ವಿಶ್ವಾಸ, ಭಾವೈಕ್ಯತೆ ಮೆರೆದಿದ್ದಾರೆ. ಈ ಭೂಮಿ ಪುಣ್ಯಭೂಮಿ ಆಗಿದೆ. ಆ ನಿಟ್ಟಿನಲ್ಲಿ ಮಲ್ಲಮ್ಮ ರಾಣಿ ಕುರುಹುಗಳ ಬಗ್ಗೆ ಸಮಗ್ರ ಅಧ್ಯಯನ ನಡೆಸಿ ಮಲ್ಲಮ್ಮನ ಇತಿಹಾಸ ಇಡೀ ಜಗತ್ತಿಗೆ ಪಸರಿಸುವಂತೆ ಮಾಡಬೇಕು. ಮಲ್ಲಮ್ಮ ಇತಿಹಾಸ ಬಿಂಬಿಸುವ ಸ್ಮಾರಕ ನಿರ್ಮಾಣ ಮಾಡಬೇಕು.ಮಲ್ಲಮ್ಮ ಅಭಿವೃದ್ಧಿ ಪ್ರಾಧಿಕಾರ ರಚನೆ ಕುರಿತು ಅನೇಕ ಸರ್ಕಾರಗಳು ಭರವಸೆ ನೀಡಿ ಹೋಗಿರಬಹುದು. ಇಂದು ಅದೇ ಕೂಗು ಕೇಳಿ ಬರುತ್ತಿದ್ದು, ಈ ಕುರಿತು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಲ್ಲಮ್ಮ ಪ್ರಾಧಿಕಾರ ರಚನೆ ಮಾಡುತ್ತಾರೆಂಬ ವಿಶ್ವಾಸ ನನಗಿದೆ’ ಎಂದರು.

ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಮಾತನಾಡಿ, ‘ಮಲ್ಲಮ್ಮ ಮಹಿಳಾ ಸೈನ್ಯ ಕಟ್ಟಿ ಸಮಾಜದ ಬದುಕಿಗೆ ತನ್ನನ್ನು ತಾನು ಅರ್ಪಿಸಿಕೊಂಡಿದ್ದಾಳೆ. ಪೂರ್ವಜರ ಹೆಸರು ನಮಗೆ ಗೊತ್ತಿರುವುದಿಲ್ಲ. ವೀರರು ತಮ್ಮ ಸಮಾಜದ ಬದುಕಿಗೆ ಸಾರ್ಥಕ ಬದುಕು ಸಾಗಿಸಿ ಪ್ರಾಣ ತ್ಯಾಗ ಮಾಡಿದ್ದಾರೆ. ಉತ್ಸವದಲ್ಲಿ ಅವರ ಸ್ಮರಣೆ ಅವಶ್ಯವಿದೆ. ಸರ್ಕಾರಿ ಉತ್ಸವ ಆಗದೆ ಜನೋತ್ಸವವಾಗಬೇಕು. ಸೈನ್ಯಕ್ಕೆ ಮಹಿಳಾ ಹೆಸರಿಡಲು ಸದನದಲ್ಲಿ ಪ್ರಸ್ತಾಪ ಮಾಡಿ ಸರ್ಕಾರದ ಗಮನ ಸೆಳೆಯುವುದಾಗಿ ಭರವಸೆ ನೀಡಿದರು.

ಹರಿಹರ ಕ್ಷೇತ್ರದ ವಚನಾನಂದ ಸ್ವಾಮೀಜಿ, ಹೂಲಿಹಿರೇಮಠದ ಬೆಳವಡಿ ಸಂಸ್ಥಾನದ ರಾಜಗುರು ಶಿವಮಹಾಂತ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು.

ಇದೇ ವೇಳೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಮಂಜಮ್ಮ ಜೋಗತಿ ಅವರಿಗೆ ರಾಣಿ ಮಲ್ಲಮ್ಮನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ರಾಣಿ ಮಲ್ಲಮ್ಮ ಇತಿಹಾಸ ಸಾರುವ ಭವ್ಯ ಫಲಕ, ವಿದ್ಯುತ್ ಬಲ್ಬ್ ಲೋಕಾರ್ಪಣೆ, ಮಲ್ಲಮ್ಮಳ ಭವ್ಯ ಮೂರ್ತಿ ನಿರ್ಮಾಣಕ್ಕೆ ವೇದಿಕೆ ಶಂಕು ಸ್ಥಾಪನೆಗೊಳಿಸಿದರು.

ಶಾಸಕ ಮಹಾಂತೇಶ ಕೌಜಲಗಿ ಅಧ್ಯಕ್ಷತೆವಹಿಸಿ ಮಾತನಾಡಿದರು.ಕಾಡಾ ಅಧ್ಯಕ್ಷ ಡಾ.ವಿಶ್ವನಾಥ ಪಾಟೀಲ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಬಾಲೇಶ ಹೆಚ್, ಉಪವಿಭಾಗಾಧಿಕಾರಿ ಶಶಿಧರ ಬಗಲಿ, ತಹಶೀಲ್ದಾರ ಬಸವರಾಜ ನಾಗರಾಳ, ಕಿತ್ತೂರು ತಹಶೀಲ್ದಾರ, ಗ್ರಾಪಂ ಅಧ್ಯಕ್ಷೆ ರೇಣುಕಾ ಕುರಿ, ಉಪಾಧ್ಯಕ್ಷ ಸಿದ್ದಪ್ಪ ನಂದಿಹಳ್ಳಿ, ಪಿಡಿಒ ಉಸ್ಮಾನ ನದಾಫ, ಗ್ರಾಮ ಪಂಚಾಯಿತಿ ಸದಸ್ಯರು ಇದ್ದರು. ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಎಂ.ಪಿ.ಉಪ್ಪಿನ ನಿರೂಪಿಸಿದರು. ಈ ಸಂದರ್ಬದಲ್ಲಿ ಸಾವಿರಾರು ಗ್ರಾಮಸ್ಥರು ಇದ್ದರು. ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

 

ಜಿಲ್ಲೆ

ರಾಜ್ಯ

error: Content is protected !!