ಭಾರತದ ಸ್ತ್ರೀಸೈನ್ಯ ಕಟ್ಟಿದ ಏಕೈಕ ಸೇನಾನಿ: ಬೆಳವಡಿಯ ವೀರರಾಣಿ ಮಲ್ಲಮ್ಮಾಜಿ.

ಉಮೇಶ ಗೌರಿ (ಯರಡಾಲ)

 ಲೇಖಕರು: ಉಮೇಶ ಗೌರಿ (ಯರಡಾಲ)

ಭಾರತೀಯ ಇತಿಹಾಸ ಮತ್ತು ಕನ್ನಡದ ಇತಿಹಾಸಕಾರರಿಂದ ಉಪೇಕ್ಷೆಗೆ ಒಳಪಟ್ಟ ವೀರ ಮಹಿಳೆ ಬೆಳವಡಿ ಮಲ್ಲಮ್ಮ ಅಪರೂಪದ ಮಹಿಳಾ ಯೋಧೆ. ಅವರ ಬದುಕೊಂದು ರೋಚಕ ಇತಿಹಾಸ. ಆಧುನಿಕ ಮಹಿಳೆಯರಿಗೆ ಪ್ರೇರಣೆ ನೀಡಲು ಮಲ್ಲಮ್ಮಾಜಿಯ ಇತಿಹಾಸವನ್ನು ಸ್ಮರಿಸಲೇಬೇಕು.

ಕನ್ನಡಿಗರಿಂದ ಜೀವದಾನ ಪಡೆದ ಮರಾಠ ಅರಸ – ಶಿವಾಜಿ

ಕೆಳದಿ ಚೆನ್ನಮ್ಮ, ರಾಣಿ ಅಬ್ಬಕ್ಕ, ಕಿತ್ತೂರು ಚೆನ್ನಮ್ಮ, ಝಾನ್ಸಿಯ ಲಕ್ಷ್ಮಿಬಾಯಿ ಅವರೆಲ್ಲರೂ ಕೇವಲ ಗಂಡುಮಕ್ಕಳೇ ತುಂಬಿದ್ದ ಸೈನಿಕ ತುಕಡಿಗಳನ್ನು ಮುನ್ನಡೆಸಿದ್ದರು. ಆದರೆ, ಬೆಳವಡಿ ಮಲ್ಲಮ್ಮ ಮೂರು ಸಾವಿರ ಹೆಣ್ಣುಮಕ್ಕಳಿಗೆ ತಾನೇ ಸೈನಿಕ ತರಬೇತಿ ನೀಡಿ, ಅವರ ಆ ಗುಂಪಿಗೆ ತಾನೇ ನಾಯಕಿಯಾಗಿ ಮುನ್ನಡೆಸಿ, ತನ್ನ ರಾಜ್ಯಕ್ಕಿಂತ ನೂರು ಪಟ್ಟು ದೊಡ್ಡದಾದ ಮಹಾಸಂಸ್ಥಾನದ ಅನಭಿಷಕ್ತ ಚಕ್ರವರ್ತಿ ಎನಿಸಿದ ಛತ್ರಪತಿ ಶಿವಾಜಿಯನ್ನು ಸೆರೆಹಿಡಿದು, ಅವನಿಗೆ ಜೀವದಾನ ನೀಡಿದ ಉದಾಹಾರಣೆ ಇತಿಹಾಸದಲ್ಲೇ ಅಜರಾಮರ.

“ಬೆಳವಡಿ ಮಲ್ಲಮ್ಮ” ಹೆಸರಿನಲ್ಲೇ ಕೆಚ್ಚಿದೆ,ವೀರಾವೇಶವಿದೆ, ಹೋರಾಟವಿದೆ, ನಾಡಪ್ರೇಮವಿದೆ,ಅಭಿಮಾನವಿದೆ, ಕನ್ನಡಿಗರ ಸ್ವಾಭಿಮಾನಕ್ಕೆ ಮತ್ತೊಂದು ಹೆಸರೇ ಮಲ್ಲಮ್ಮ! ಆದರೆ, ಇಂಥ ವೀರ ಮಹಿಳೆಯ ನೆನಪಿಗೆ ತಕ್ಕುದಾದ ಸ್ಮಾರಕ, ಕರ್ನಾಟಕದ ರಾಜಧಾನಿಯಲ್ಲಾಗಲಿ ಅಥವಾ ಆಕೆ ಹೋರಾಡಿದ ಬೆಳವಡಿಯಲ್ಲೂ ಇಲ್ಲ..! ನಾಡು ಮರೆತ ವೀರನಾರಿ ಇವಳು.

ಇತಿಹಾಸವನ್ನು ಒಮ್ಮೆ ಅವಲೋಕಿಸಿದಾಗ, ಭಾರತದಲ್ಲಿ ಅನೇಕ ಮಹಿಳಾ ವೀರ ಸೇನಾನಿಗಳಲ್ಲಿ ಪ್ರಮುಖವಾಗಿ ಕರ್ನಾಟಕದ ಕಲ್ಯಾಣ ಚಾಲುಕ್ಯರ ಅಕ್ಕಾದೇವಿ (11 ಶತಮಾನ) ಆಂಧ್ರದ ಕಾಕತೀಯ ವಂಶದ ರುದ್ರಮ್ಮ ದೇವಿಯ (13 ಶತಮಾನ) ಬಿರುದು ‘ರಾಯಗಜಕೇಸರಿ’ ದೇವಗಿರಿ ಯಾದವರನ್ನು ಸೋಲಿಸಿದ ಶಿಲ್ಪವಿರುವ ಶಿಲಾಶಾಸನದ ಮೇಲೆ ಅವಳನ್ನು ಕಠಾರಿ, ಗುರಾಣಿ ಹಿಡಿದು ಸಿಂಹದ ಮೇಲೆ ಕುಳಿತಂತೆ ಕೆತ್ತಲಾಗಿದೆ. ಅಹಲ್ಯಾಬಾಯಿ ಹೋಳ್ಕರ್ (1780) ಝಾನ್ಸಿ ಲಕ್ಷ್ಮೀಬಾಯಿ (1858) ಇವರೂ ಯುದ್ಧ ಧೀರೆಯರು. ಲಕ್ಷ್ಮೀಬಾಯಿಯಂತೂ ‘ಯುದ್ದವೇ ನನ್ನ ಧರ್ಮ’ ಎಂದು ಘೋಷಿಸಿ ಬ್ರಿಟಿಷರ ವಿರುದ್ಢ ಹೋರಾಡಿ ಮಡಿದವಳು. ಕರ್ನಾಟಕದ ಕಿತ್ತೂರಿನ ಚೆನ್ನಮ್ಮ (1820) ಕುದುರೆ ಸವಾರಿ, ಬಿಲ್ವಿದ್ಯೆ, ಭೇಟೆ ಇತ್ಯಾದಿ ಕ್ಷಾತ್ರ ವಿದ್ಯೆಯಲ್ಲಿ ಪರಿಣಿತಳಾಗಿ, ಅವಳ ಕೋಟೆ ವಶಪಡಿಸಿಕೊಳ್ಳಲು ಬಂದ ಬ್ರಿಟಿಷರ ವಿರುದ್ಧ ಯುದ್ಧದಲ್ಲಿ ಹೋರಾಡಿ, ಭಾರತದ ಸ್ವಾತಂತ್ರ್ಯ ಸಂಗ್ರಾಮದ ಮೊದಲು ಕಿಚ್ಚು ಹಚ್ಚಿದ ಶೂರ ಮಹಿಳೆ.

ಕರಾವಳಿ ಪ್ರದೇಶದ ಉಳ್ಳಾಲದ ಚೌಟರಾಣಿ ಅಬ್ಬಕ್ಕದೇವಿ (1595) ಮತಾಂತರ, ಕಪ್ಪಕಾಣಿಕೆ ವಸೂಲಿಗಳಲ್ಲಿ ನಿರತರಾಗಿದ್ದ ಪೋರ್ಚಗೀಸರ ನೌಕಾಪಡೆಯನ್ನು ಸೋಲಿಸಿ ಜಯಗಳಿಸಿ ಅಂದಿನ ಕಾಲಕ್ಕೆ ವಿಶ್ವವಿಖ್ಯಾತಳಾಗಿದ್ದಳು.

ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ(ಆಗಿನ ಸಂಪಗಾವಿ ತಾಲೂಕಿನ) ಬೈಲಹೊಂಗಲ ತಾಲೂಕಿನ  ಬೆಳವಡಿಯ ರಾಣಿ ಮಲ್ಲಮ್ಮಳ  ರೋಮಾಂಚಕಾರಿ ಜೀವನಗಾಥೆಯನ್ನು ನೋಡೋಣ.

ಮಲ್ಲಮ್ಮನ ವಂಶಸ್ಥರು ಉತ್ತರ ಕನ್ನಡ ಜಿಲ್ಲೆಯ ಸಿರ್ಸಿ ತಾಲೂಕಿನ ಸೋದೆಯ ರಾಜರು. ಅವರು ಲಿಂಗಾಯತ ಧರ್ಮದ ಮಲವಗೌಡರು. ಆ ವಂಶದ ಮಧುಲಿಂಗ ನಾಯಕನಿಗೆ 1660 ರಲ್ಲಿ ಮಗಳಾಗಿ ಜನಿಸಿದಳು ಮಲ್ಲಮ್ಮಾಜಿ. ಆಕೆಯ ಅಣ್ಣ ಸದಾಶಿವನಾಯಕ. ಇಬ್ಬರೂ ಒಳ್ಳೆಯ ಶಿಕ್ಷಣವನ್ನು ಪಡೆದರು.

ಮಧುಲಿಂಗನಾಯಕ ವ್ಯವಸ್ಥೆ ಮಾಡಿದ್ದ ಶಾಲೆಯಲ್ಲಿ ಇನ್ನೂರು ಹುಡುಗರು, ಇನ್ನೂರು ಹುಡುಗಿಯರಿದ್ದರು. ಶಿಕ್ಷಣ ನೀಡುವುದರಲ್ಲಿ ಗಂಡು-ಹೆಣ್ಣು ಎಂಬ ತಾರತಮ್ಯ ಇರಲಿಲ್ಲ. ಅವರಲ್ಲಿ ಹವ್ಯಕ-ಮಾಧ್ವ ಬ್ರಾಹ್ಮಣರಲ್ಲದೆ ಒಂದನೂರು ಒಕ್ಕಲಿಗರು, ಇಪ್ಪತ್ತು ಲಿಂಗಾಯತರೂ ಇದ್ದರಂತೆ. ಹದಿನಾಲ್ಕು ವರ್ಷದ ಹೊತ್ತಿಗೆ ಸದಾಶಿವನಾಯಕ ಮತ್ತು ಮಲ್ಲಮ್ಮ ಕನ್ನಡ, ಸಂಸ್ಕೃತಗಳಲ್ಲಿ ಕವಿತೆ ರಚನೆ ಮಾಡುವಷ್ಟು ಪರಿಣತಿ ಪಡೆದರು.ಆ ಶಾಲೆಯ ವಿದ್ಯಾರ್ಥಿಗಳಲ್ಲಿ ಮಲ್ಲಮ್ಮ ಅತ್ಯಂತ ಮೇಧಾವಿ ಎನಿಸಿಕೊಂಡಿದ್ದಳು. ಅವಳ ಕೃತಿಗಳು ದೊರಕದಿದ್ದರೂ ಅಣ್ಣ ಸದಾಶಿವ ನಾಯಕನ ಭಜನೆ ಪದಗಳು, ಶೃಂಗಾರದ ‘ಜಾವಡಿ’ ಪದ್ಯಗಳು ದೊರಕಿವೆ. ಶಾಲೆಯ ಮಕ್ಕಳಿಗೆ ಯುದ್ಧ ಶಿಕ್ಷಣವನ್ನು ನೀಡಲು ಉತ್ತರ ಭಾರತದಿಂದ ರಣವೀರ ಸಿಂಗ್ ಎಂಬ ಸಿಖ್ ಜನಾಂಗದ ವ್ಯಕ್ತಿಯನ್ನು ನೇಮಕ ಮಾಡಲಾಗಿತ್ತು. ಮಲ್ಲಮ್ಮನಂತೂ ತನ್ನ ಯೌವನದಲ್ಲಿ ಬಿಲ್ಲು ಬಾಣ, ಆಶ್ವಾರೋಹಣ, ಭಲ್ಲೆ, ಖಡ್ಗ ಪ್ರಯೋಗಗಳಂತಹ ಕ್ಷಾತ್ರವಿದ್ಯೆಯ ನಿಪುಣಳಾದಳು; ಅವಳೇ ಅರಮನೆಯಲ್ಲಿ ಅಡುಗೆ ಮಾಡಿ ತಂದೆಗೆ ಉಣಬಡಿಸಿ ತಾಯಿ ಜತೆ ಊಟ ಮಾಡುತ್ತಿದ್ದಳು. ಒಮ್ಮೆ ಹೂಲಿಯ ಪಂಚವಣ್ಣಿಗಿ ಮಠದ ಗುರುಗಳು ಗೋಕರ್ಣಕ್ಕೆ ಹೋಗಿ ವಾಪಸಾಗುವಾಗ ಸೋದೆಗೆ ಬಂದರು. ಮಲ್ಲಮ್ಮನ ವಿನಯ, ಗಾಂಭೀರ್ಯ ಮೆಚ್ಚಿಕೊಂಡ ಅವರು ಅವಳಿಗೆ ಹದಿನಾರನೇ ವಯಸ್ಸಿನಲ್ಲಿ ಹುಲಿಯ ಕಂಟಕವಿದೆಯೆಂದು ಭವಿಷ್ಯ ನುಡಿದಾಗ, ಮಧುಲಿಂಗ ನಾಯಕ ಬೆಚ್ಚಿಬಿದ್ದ. ನಾನೇ ಸ್ವತಃ ಹುಲಿಗಳನ್ನು ಎದುರಿಸಬಲ್ಲೆ, ಭಯಪಡಬೇಡಿ ಎಂದು ಧೈರ್ಯ ಹೇಳಿದರೂ ಸಹಜವಾಗಿಯೇ ತಂದೆಗೆ ಸಮಾಧಾನವಾಗಲಿಲ್ಲ. ಹುಲಿಯ ಬೇಟೆಯಲ್ಲಿ ನಿಷ್ಣಾತನಾದ ವರನೇ ತನ್ನ ಮಗಳಿಗೆ ಸರಿ ಎಂದು ನಿಶ್ಚಯಿಸಿ, ಒಂದು ತಿಂಗಳಲ್ಲಿ ತನ್ನ ವಯಸ್ಸಿಗಿಂತ ಹೆಚ್ಚಿನ ಸಂಖ್ಯೆಯ, ಕನಿಷ್ಠ ಒಂದು ಹುಲಿಯನ್ನಾದರೂ ಹೊಡೆದಿರುವ ವರನಿಗೆ ತನ್ನ ಮಗಳನ್ನು ಕೊಡುವುದಾಗಿ ಪತ್ರ ಕಳುಹಿಸಿದಾಗ ಭಾರತದ ಕಾಶ್ಮೀರ, ಜಯಪುರ, ಪಶ್ಚಿಮ ಬಂಗಾಳ ಇತ್ಯಾದಿ ಕಡೆಗಳಿಂದ ರಾಜಕುಮಾರರು ತಾವು ಕೊಂದಿದ್ದ ಹುಲಿಗಳ ದೇಹಗಳನ್ನು ತರುತ್ತಾರೆ. ಕೆಲವರು ಅವರ ವಯಸ್ಸಿನ ಅರ್ಧದಷ್ಟು ಸಂಖ್ಯೆಯ, ಮುಕ್ಕಾಲು ಸಂಖ್ಯೆಯ ಹುಲಿಗಳನ್ನು ಹೊಡೆದಿದ್ದರು. ಆದರೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಬೆಳವಡಿಯ ಈಶಪ್ರಭು ಎಂಬ ಇಪ್ಪತ್ತು ವರ್ಷ ವಯಸ್ಸಿನ ರಾಜಕುಮಾರ ತಾನು ತಿಂಗಳಲ್ಲಿ ಹೊಡೆದ ಇಪ್ಪತ್ತೊಂದು ಹುಲಿಗಳ ದೇಹಗಳನ್ನು ಸ್ವಯಂವರದ ದಿನ ತೋರಿಸಿದಾಗ ಅವನಿಗೆ ಮಲ್ಲಮ್ಮಳನ್ನು ಕೊಟ್ಟು ಮದುವೆ ಮಾಡಲು ನಿಶ್ಚಯಿಸಲಾಯಿತು. ವಧುವಿನ ತಂದೆ ಇಂತಹ ಕರಾರು ಹಾಕಿದ್ದು ಇತಿಹಾಸದಲ್ಲಿ ಎಲ್ಲೂ ಕಂಡುಕೇಳರಿಯದ್ದು. ಮಧುಲಿಂಗನಾಯಕ ಈಶಪ್ರಭುವನ್ನು ಒಪ್ಪಿಕೊಂಡು ಅವನಿಗೆ ಸಂಭ್ರಮದಿಂದ ಮಗಳನ್ನು ಕೊಟ್ಟು ವೈಭವದಿಂದ ಮದುವೆ ಮಾಡಿದ್ದ ಆ ಮದುವೆಗೆ ತನ್ನ ಲಿಂಗಾಯತ ಧರ್ಮದ ಪದ್ಧತಿಗೆ ಅನುಗುಣವಾಗಿ ಮಠಾಧೀಶರನ್ನು ಹಾಗೆಯೇ ಮಾಧ್ವ ಗುರುಗಳನ್ನು ಆಹ್ವಾನಿಸಿ ಅವರಿಗೆ ಗೌರವಾದರದೊಂದಿಗೆ ಸೂಕ್ತ ಕಾಣಿಕೆ ನೀಡಿದ.

ಬೆಳವಡಿಯಲ್ಲಿ ಮಲ್ಲಮ್ಮ ಈಶಪ್ರಭು ಸುಖ ಜೀವನವನ್ನು ನಡೆಸುತ್ತಾರೆ. ಒಮ್ಮೆ ಅವರು ಗೋಕರ್ಣಕ್ಕೆ ಹೋಗಿ ವಾಪಸಾಗುತ್ತಿದ ದಾರಿಯ ಸರೋವರದ ಪಕ್ಕ ವಿಶ್ರಾಂತಿ ಪಡೆಯುತ್ತಾರೆ. ಮಲ್ಲಮ್ಮನ ತೊಡೆ ಮೇಲೆ ವಿಶ್ರಾಂತಿ ಪಡೆಯುತ್ತಿದ್ದ ಈಶಪ್ರಭು ನಿದ್ದೆಗೆ ಜಾರಿದಾಗ ಇದ್ದಕ್ಕಿದ್ದಂತೆ ಎರಡು ಹುಲಿಗಳು ಕಾಡಿನಿಂದ ಬಂದು ಅವರ ಮೇಲೆ ಬಿದ್ದಾಗ ರಾಣಿಯು ಧೈರ್ಯದಿಂದ ಒಂದು ಹುಲಿಯನ್ನು ಕೊಲ್ಲುತ್ತಿದಂತೆ ಇನ್ನೊಂದು ಹುಲಿ ಕುದುರೆ ಮೇಲೆ ಹಾರಿ ಹಾಗೇ ತಪ್ಪಿಸಿಕೊಂಡು ಹೋಯಿತು. ಈಶಪ್ರಭು ಎಚ್ಚೆತ್ತು ತನ್ನ ಪತ್ನಿಗೆ ‘ನಿನಗಲ್ಲ ನನಗೆ ಹುಲಿ ಕಂಟಕ ಇದ್ದದ್ದು, ಅದನ್ನು ತಪ್ಪಿಸಿದೆ’ ಎಂದು ಹಾಸ್ಯದಿಂದ ನುಡಿದ. ಮುಂದೆ ಅವರಿಗೆ ನಾಗಭೂಷಣ ಎಂಬ ಮಗ ಹುಟ್ಟಿದ. ಮಲ್ಲಮ್ಮಾಜಿ ಆ ಬಳಿಕ ಮಾಡಿದ ಅಪೂರ್ವ ಕೆಲಸವೆಂದರೆ ತನ್ನ ನಾಡಿನ ಯುವತಿಯರನ್ನು ಸೇರಿಸಿ ಸ್ತ್ರೀ ಪಡೆ ಕಟ್ಟಿ ಅದಕ್ಕೆ ತಾನೇ ಶಿಕ್ಷಣ ನೀಡಿ, ತನ್ನ ಗಂಡನ ಪುರುಷ ಸೈನ್ಯಕ್ಕೆ ಪೂರಕವಾಗಿ ಅದನ್ನು ಬೆಳೆಸುತ್ತಾಳೆ. ಅವರಿಬ್ಬರೂ ಸುಖವಾಗಿದ್ದರು; ಪ್ರಜೆಗಳೂ ತೃಪ್ತಿಯಿಂದಿದ್ದರು. 1676 ರಲ್ಲಿ ಶಿವಾಜಿ ದಕ್ಷಿಣ ಕರ್ನಾಟಕದ ಎಷ್ಟೋ ಭಾಗಗಳನ್ನು ಸ್ವಾಧೀನಪಡಿಸಿಕೊಂಡು ಮರಳಿ ಹೋಗುವಾಗ ಹಂಪಿಯ ವಿರೂಪಾಕ್ಷನ ದರ್ಶನ ಮಾಡಿ ಅಲ್ಲಿಯ ಭಗ್ನ ಅವಶೇಷಗಳನ್ನು ಕಂಡು ದುಃಖಿತನಾಗಿ ‘ಹಿಂದವೀ’ ಸಾಮ್ರಾಜ್ಯ ಸ್ಥಾಪಿಸಲು ಪ್ರತಿಜ್ಞೆ ತೊಟ್ಟು, ಆನೆಗೊಂದಿ ಅರಸರ ಗೌರವ ಸ್ವೀಕರಿಸಿ, ಕೊಪ್ಪಳದ ಕೋಟೆ ವಶಪಡಿಸಿಕೊಂಡು ಧಾರವಾಡ ಜಿಲ್ಲೆಯ ಯಾದವಾಡದಲ್ಲಿ ತಂಗುತ್ತಾನೆ. ಅವನ ಸೈನ್ಯದಲ್ಲಿ ಬಹುಸಂಖ್ಯೆಯಲ್ಲಿ ಕುದುರೆ, ಆನೆ, ಕಾಲಾಳುಗಳು ಮಾತ್ರವಲ್ಲದೆ ತೋಪು ಹಾರಿಸುವವರೂ ಇದ್ದರು. ಬೆಳವಡಿಯ ಈಶಪ್ರಭು ಅವನನ್ನು ಬರಮಾಡಿಕೊಂಡು ಗೌರವಿಸುವುದರಲ್ಲಿದ್ದ. ಅವನ ಸೈನ್ಯ ಚಿಕ್ಕದಾಗಿತ್ತು. ಆದರೆ ಅವನ ಪ್ರತಿನಿಧಿಯನ್ನು ಶಿವಾಜಿಯ ಸೈನಿಕರು ಅಪಮಾನ ಪಡಿಸಿದರು ಮತ್ತು ಶಿವಾಜಿಗೆ ತಿಳಿಸದೆ ಬೆಳವಡಿ ಕೋಟೆ ಮೇಲೆ ದಾಳಿ ಮಾಡಿದಾಗ, ತನ್ನ ಗಂಡನ ನೇತೃತ್ವದ ಪುರುಷ ಸೈನ್ಯವನ್ನು ಹಿಂದಿಕ್ಕಿ ಮಲ್ಲಮ್ಮ ತನ್ನ ಸ್ತ್ರೀ ಸೈನ್ಯದ ಜೊತೆಗೆ ಹೋಗಿ ಹಲವು ಮರಾಠಿಗರನ್ನು ಕೊಂದಳು. ಮರಾಠಿ ಸೈನ್ಯ ಸೋತು ಹಿಂದಿರುಗಿತ್ತು. ಮುಂದೆ ನಡೆದ ಯುದ್ಧದಲ್ಲಿ ಈಶಪ್ರಭು ಗಾಯಗೊಂಡು ಸಾಯುವ ಮುನ್ನ ‘ಶಿವಾಜಿಯನ್ನು ಸೋಲಿಸಲೇಬೇಕು’ ಎಂದು ಪತ್ನಿಗೆ ಹೇಳುತ್ತಾನೆ.

ವೀರಮಾತೆಯಾದ ಮಲ್ಲಮ್ಮ ಪಣತೊಟ್ಟು ಶಿವಾಜಿಯನ್ನು ಎದುರಿಸಿ, ಸೋಲಿಸಿ ಕ್ಷಮಾಪಣೆ ಕೇಳದಿದ್ದರೆ ಅವನನ್ನು ಕೊಲ್ಲುವುದಾಗಿ ಹೇಳಿದಾಗ, ಶಿವಾಜಿ ಅವಳಿಗೆ ಶರುಣು ಹೋದ ‘ನೀನು ನನ್ನ ತಾಯಿ, ಕರುಣೆ ಇರಲಿ ಜಗದಂಬೆ..’ ಎಂದು ಸ್ತೋತ್ರ ಮಾಡಿದ. ಮಲ್ಲಮ್ಮಾಜಿ ಕ್ಷಮಿಸಿದ ಮೇಲೆ ಇಬ್ಬರಿಗೂ ಸ್ನೇಹದ ಒಪ್ಪಂದವಾಯಿತು.

ಈ ಸಂಗತಿಯು ಧಾರವಾಡ ಸಮೀಪದ ಯಾದವಾಡದ ವೀರಗಲ್ಲಿನ ಮೇಲೆ ಶಿಲ್ಪರೂಪದಲ್ಲಿ ಮೂಡಿದೆ. ಮೇಲಿನ ಸಂಗತಿಗಳು ಕರ್ನಾಟಕದ ಅತ್ಯಂತ ಸ್ಫೂರ್ತಿಯುತ ಸಾಂಸ್ಕೃತಿಕ ದಾಖಲೆ ಎನ್ನಬಹುದಾದ ‘ಶಿವಾಜಿ – ಮಲ್ಲಮ್ಮಾಜಿ ಸಮರೋತ್ಸವ’ ಎಂಬ ಮರಾಠಿ ಕೃತಿಯಲ್ಲಿ ದಾಖಲಾಗಿದೆ. ಶಿವಾಜಿಯ ಸೊಸೆಗೆ ತನ್ನ ಮಾವನೆಂದರೆ ಅತ್ಮಾಭಿಮಾನ. ಅವಳು ಮಲ್ಲಮ್ಮಾಜಿಯನ್ನೇ ಕೊಲ್ಲಾಪುರಕ್ಕೆ ಕರೆಯಿಸಿಕೊಂಡು, ಅವರಿಂದ ನೇರ ಮಾಹಿತಿ ಪಡೆದು, ಶೇಷೋ ಮುತಾಲಿಕ್ ನಿಂದ 1717ರಲ್ಲಿ ಬರೆಸಿದ ಈ ಕೃತಿಯನ್ನು ನೋಡಿ ಎಲ್ಲವೂ ಸತ್ಯವಾಗಿದೆಯೆಂದು ಬಹುಮಾನ ಕೊಡುತ್ತಾಳೆ. ಈ ದಾಖಲೆಯಲ್ಲಿರುವುದೆಲ್ಲಾ ಅಪ್ಪಟ ಇತಿಹಾಸ. 1678 ರ ಒಬ್ಬ ಇಂಗ್ಲಿಷ್ ಅಧಿಕಾರಿ ಬರೆದ ಪತ್ರದಲ್ಲಿ ಹಲವು ಶೂರ ರಾಜರನ್ನು ಶಿವಾಜಿ ಸೋಲಿಸಿದರೂ ಮಲ್ಲಮ್ಮಾಜಿಯನ್ನು ಮಾತ್ರ ಸೋಲಿಸುವಲ್ಲಿ ವಿಫಲನಾದ ಎಂದು ಆಕೆಯನ್ನು ಕೊಂಡಾಡಿದ್ದಾನೆ.

ಭಾರತದಲ್ಲಿ ಹಲವರು ಸ್ತ್ರೀಯರು ಯೋಧರಂತೆ ರಣರಂಗದಲ್ಲಿ ಕಾದಾಡಿದರೂ, ಮಲ್ಲಮ್ಮರಂತೆ ತಾವೇ ಸ್ವತಃ ಸ್ತ್ರೀ ಸೈನ್ಯವನ್ನು ಕಟ್ಟಿ, ಅದರ ಸೇನಾನಿಯಾಗಿ ಹೋರಾಡಿ ದೊಡ್ಡ ದೊಡ್ಡ ರಾಜರು, ಚಕ್ರವರ್ತಿಗಳನ್ನು ಸೋಲಿಸಿದ್ದು ಭಾರತ ಇತಿಹಾಸದಲ್ಲೇ  ಮೊದಲು.

”ಕೇಂದ್ರ ಸರಕಾರ ಇತ್ತೀಚೆಗೆ ಸೈನ್ಯದಲ್ಲಿ ಮಹಿಳೆಯರಿಗೆ ಅವಕಾಶ ಕಲ್ಪಿಸಿದೆ. ಮಹಿಳಾ ಬಟಾಲಿಯನ್ಗೆ ಬೆಳವಡಿ ಮಲ್ಲಮ್ಮ ರೆಜಿಮೆಂಟ್ ಎಂದು ಹೆಸರಿಡಬೇಕು” ಮತ್ತು “ಬೆಳಗಾವಿ ರೈಲಿಗೆ ರಾಣಿ ಮಲ್ಲಮ್ಮನ ಎಕ್ಸಪ್ರೆಸ್ ಹೆಸರಿಡಬೇಕೆಂದು” ಒಕ್ಕೂಟದ ಸರ್ಕಾರವನ್ನು ಈ ಭಾಗದ ಜನರು ಒತ್ತಾಯಿಸಿದ್ದಾರೆ.

ವಿಪರ್ಯಾಸವೆಂದರೆ, ಆ ಕೆಲಸಗಳಾವುವು ಇನ್ನೂ ಆಗಿಲ್ಲದಿರುವುದು. ಮುಖ್ಯವಾಗಿ “ಕನ್ನಡಿಗರಿಗೆ ಮಲ್ಲಮ್ಮನ ಧೈರ್ಯ, ಶೌರ್ಯ, ಕೆಚ್ಚು, ಸ್ವಾಭಿಮಾನ ಇವು ಸದಾ ಸ್ಪೂರ್ತಿಯ ಸೆಲೆಗಳು. ಅವರನ್ನು ಎಂದಿಗೂ ಮರೆಯಬಾರದು, ಸದಾ ಸ್ಮರಣೆಯಲ್ಲಿಡಬೇಕು” ಮಲ್ಲಮ್ಮನ ಇತಿಹಾಸ ಮರೆಯುವುದು ನಾಡಿನ ವೀರವನಿತರಯರಿಗೆ ಮಾಡುವ ಅಪಮಾನ. ಇತಿಹಾಸ ಉಳಿಸುವ ಕೆಲಸ ಮಾಡಲು ಸರಕಾರ ಬೇಗನೆ ಮುಂದಾಗಬೇಕು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";