ಸುದ್ದಿ ಸದ್ದು ನ್ಯೂಸ್
ವಿವೇಕ ಎಚ್.
ಹೆಚ್ಚು ಜನರ ಗಮನಕ್ಕೆ ಬಾರದೇ, ಹೆಚ್ಚು ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಒಳಪಡದೆ ಸಣ್ಣ ಸುದ್ದಿಯಾಗಿ ಮರೆಯಾದ ಒಂದು ಮುಖ್ಯ ವಿಷಯ ಕರ್ನಾಟಕ ವಿಧಾನ ಮಂಡಲದ ಉಭಯ ಸದನಗಳ ಸದಸ್ಯರುಗಳ ಸಂಬಳ ಮತ್ತು ಇತರೆ ಭತ್ಯಗಳು ಏರಿಕೆಯ ವಿಧೇಯಕ ಅನುಮೋದನೆಯಾಯಿತು……..
ತುಂಬಾ ಸಂತೋಷ. ಸರ್ಕಾರಿ ಅಧಿಕಾರಿಗಳು – ಜನ ಪ್ರತಿನಿಧಿಗಳು ಆಗಾಗ ಸಂಬಳ ಭತ್ಯೆ ಹೆಚ್ಚಿಸಿಕೊಂಡು ಹಣದುಬ್ಬರದ ಪ್ರಮಾಣಕ್ಕೆ ತಕ್ಕಂತೆ ತಮ್ಮ ಆದಾಯವನ್ನು ಸರಿದೂಗಿಸಿಕೊಂಡು ತಮ್ಮ ಕುಟುಂಬದವರೊಂದಿಗೆ ಸುಖವಾಗಿರಲಿ. ಆ ನಿಶ್ಚಿತ ಮತ್ತು ಕ್ರಮಬದ್ಧ ಆದಾಯ ನಮ್ಮಂತ ಅನೇಕ ಸಾಮಾನ್ಯರಿಗೆ ಇಲ್ಲ. ನಾವು ನತದೃಷ್ಟರು……..
ಇದು ಹೊಟ್ಟೆ ಉರಿಯ ಮಾತೇ ಅಥವಾ ಅಸಹಾಯಕತೆಯ ಮಾತೇ ಅಥವಾ ನೋವು ಆಕ್ರೋಶದ ಮಾತೇ ಅಥವಾ ಸಮಾಜದ ಜನರಲ್ಲಿ ಜಾಗೃತಿ ಮೂಡಿಸುವ ಮಾತೇ….ಅದನ್ನು ನಿಮ್ಮ ವಿವೇಚನೆಗೆ ಬಿಡುತ್ತಾ……..
ಒಬ್ಬ ಶಾಸಕರೆಂದರೆ ಅವರಿಗೆ ಒಂದು ಜವಾಬ್ದಾರಿ, ಒಂದಷ್ಟು ಅಧಿಕಾರ, ಕ್ಷೇತ್ರದ ಸಾವಿರಾರು ಜನರ ಸಂಪರ್ಕ – ಬೇಡಿಕೆ – ನಿರೀಕ್ಷೆ – ಒತ್ತಡ ಎಲ್ಲವೂ ಇರುತ್ತದೆ. ಇಂದಿನ ಕೆಟ್ಟ ರಾಜಕೀಯ ವ್ಯವಸ್ಥೆಯಲ್ಲಿ ಅದನ್ನು ನಿಭಾಯಿಸುವುದು ಅಷ್ಟು ಸುಲಭವಲ್ಲ. ಹಣದ ಅವಶ್ಯಕತೆ ಸಹ ತುಂಬಾ ಇರುತ್ತದೆ.
ಆದರೆ…..
ಜನ ಪ್ರತಿನಿಧಿಗಳೇ ಮತ್ತು ಸರ್ಕಾರಿ ಅಧಿಕಾರಿಗಳೇ ನೀವು ಪಡೆಯುವ ಸಂಬಳದ ಪ್ರತಿ ರೂಪಾಯಿಯೂ ಬಹುತೇಕ ಜನರು ಶ್ರಮ ಪಟ್ಟು ದುಡಿದ ಹಣದ ಒಂದು ಭಾಗ ಅದನ್ನು ತೆರಿಗೆ ರೂಪದಲ್ಲಿ ನೀಡುತ್ತಾರೆ. ಅದಕ್ಕೆ ಕಾರಣ ರಾಜಕಾರಣಿಗಳು ಅಧಿಕಾರಿಗಳು ಒಂದು ವ್ಯವಸ್ಥೆ ರೂಪಿಸಿಕೊಂಡು ನಮ್ಮನ್ನು ಚೆನ್ನಾಗಿ ನೋಡಿಕೊಂಡು ನಮ್ಮ ಜೀವನಮಟ್ಟ ಉತ್ತಮವಾಗಿರುವಂತೆ ಮಾಡಿ ನಮ್ಮ ಬದುಕು ಸಾರ್ಥಕತೆಯತ್ತ ಮುನ್ನಡೆಯುತ್ತದೆ ಎಂಬ ನಿರೀಕ್ಷೆ…….
ಆದರೆ ಆಗಿರುವುದೇನು ?…
ಗಾಳಿ ನೀರು ಆಹಾರಗಳು ಮಲಿನಾಗಿವೆ. ಜಾತಿ ಧರ್ಮ ಹಣ ಹೆಂಡ ಸುಳ್ಳು ಭರವಸೆಗಳು ಚುನಾವಣೆಯಲ್ಲಿ ಚಲಾವಣೆಯಾಗುತ್ತಿದೆ. ಡೆತ್ ಸರ್ಟಿಫಿಕೇಟ್ ಗೂ ಬರ್ತ್ ಸರ್ಟಿಫಿಕೇಟ್ ಗೂ ಲಂಚ ಕೊಡಬೇಕಾದ ವ್ಯವಸ್ಥೆಯಲ್ಲಿ ನಾವಿದ್ದೇವೆ. ಯಾವುದೇ ಸರ್ಕಾರಿ ಕಚೇರಿ ಲಂಚ ಮುಕ್ತವಾಗಿಲ್ಲ. ಶಿಕ್ಷಣ ಮತ್ತು ಉದ್ಯೋಗ ಉಳ್ಳುವರು ಮತ್ತು ಇಲ್ಲದವರ ನಡುವೆ ಅತಿದೊಡ್ಡ ಕಂದಕ ನಿರ್ಮಿಸಿದೆ. ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರಿವೆ. ಕಾನೂನು ಸುವ್ಯವಸ್ಥೆ ಕುಸಿದು ಬಿದ್ದಿದೆ. ಕಾನೂನುಗಳು ಹಣವಂತರ ಪಾಲಾಗುತ್ತಿದೆ……
ರೈತರ ಆತ್ಮಹತ್ಯೆಗಳು ಸಹಜ ಸುದ್ದಿಗಳಾಗುತ್ತಿವೆ. ಅಂಗನವಾಡಿ ಕಾರ್ಯಕರ್ತರ ಧರಣಿಗಳು ನಿರಂತರವಾಗಿ ನಡೆಯುತ್ತಿವೆ. ಮಾದಕ ದ್ರವ್ಯಗಳ ವ್ಯಸನ ಗ್ರಾಮ ಮಟ್ಟಕ್ಕೆ ವ್ಯಾಪಿಸುತ್ತಿದೆ. ಹೀಗೆ ಹೇಳುತ್ತಾ ಹೋದರೆ ಅದು ನಿಲ್ಲುವುದೇ ಇಲ್ಲ…..
ಅಭಿವೃದ್ಧಿ ಸಹ ಒಂದಷ್ಟು ಆಗುತ್ತಿದೆ, ನಿಜ. ಆದರೆ ಯಾವ ವಿಭಾಗದಲ್ಲಿ ಹೆಚ್ಚು ಲಂಚ ಮತ್ತು ಕಮೀಷನ್ ಸಿಗುತ್ತದೋ ಅಲ್ಲಿ ಮೇಲ್ನೋಟದ ಅಭಿವೃದ್ಧಿ ಕಾಣುತ್ತದೆ. ಉದಾಹರಣೆಗೆ ರಸ್ತೆಗಳು, ಸರ್ಕಾರಿ ಕಟ್ಟಡಗಳು, ತಾಂತ್ರಿಕ ಬೆಳವಣಿಗೆಗಳು ಇತ್ಯಾದಿ…..
ಕೋವಿಡ್ ಸಮಯದಲ್ಲಿ ಬಹುತೇಕ ಮಧ್ಯಮ ವರ್ಗದ ಜನ ಆರ್ಥಿಕ ಕುಸಿತದ ಸಂಕಷ್ಟದಿಂದ ಈಗಲೂ ಚೇತರಿಸಿಕೊಳ್ಳದೆ ನರಳುತ್ತಿದ್ದಾರೆ. ಸಾಮಾನ್ಯ ಜೀವನ ಸಹ ಕಷ್ಟವಾಗಿದೆ. ಎಷ್ಟೋ ಜನ ಶಾಲೆಯ ಫೀಜು ಮನೆ ಬಾಡಿಗೆ ಕಟ್ಟದೆ ಒದ್ದಾಡುತ್ತಿದ್ದಾರೆ. ಇಂತಹ ಸಮಯದಲ್ಲಿ ಶಾಸಕರ ಮನೆ ಬಾಡಿಗೆ ಭತ್ಯೆ 80000 ದಿಂದ 120000 ಕ್ಕೆ ಹೆಚ್ಚಿಸಿಕೊಳ್ಳುವ ದಾರ್ಷ್ಟ್ಯ ಪ್ರದರ್ಶಿಸಲು ನಿಮಗೆ ಮನಸ್ಸಾದರು ಹೇಗೆ ಬಂತು. ಶಾಸಕರೆಂದರೆ ಭವ್ಯ ಬಂಗಲೆಯಲ್ಲಿ ವಾಸಿಸುವವರು ಎಂದು ಅರ್ಥವೇ ?……
ಈ ಆಧುನಿಕ ಕಾಲದಲ್ಲಿ ಹಣದ ಅವಶ್ಯಕತೆ ಎಲ್ಲರಿಗೂ ಇರುತ್ತದೆ. ಆದರೆ ಅದಕ್ಕೆ ಒಂದು ಮಿತಿ ಬೇಡವೇ. ಅದರಲ್ಲೂ ಸಾರ್ವಜನಿ ಹಣ ಅತ್ಯಂತ ಅಮೂಲ್ಯವಾದುದು. ಅದನ್ನು ತುಂಬಾ ಜಾಗರೂಕತೆಯಿಂದ ಖರ್ಚು ಮಾಡಬೇಕು……
ನಿಮಗೆ ಆತ್ಮಸಾಕ್ಷಿ ಇದ್ದರೆ ಇಡೀ ಕರ್ನಾಟಕದ ಸಾಮಾನ್ಯ ಜನರ ಈ ಕ್ಷಣದ ಆರ್ಥಿಕ ಪರಿಸ್ಥಿತಿ ಮತ್ತು ಜನರ ಜೀವನಮಟ್ಟವನ್ನು ಒಮ್ಮೆ ಅವಲೋಕಿಸಿ. ಜನಜೀವನ ಆರ್ಥಿಕವಾಗಿ ಸಮಾಧಾನಕರವಾಗಿ ಇದ್ದರೆ ನಿಮ್ಮ ಸಂಬಳ ಮತ್ತು ಭತ್ಯೆಗಳ ಹೆಚ್ಚಳ ಸಮರ್ಥನೀಯ. ಇಲ್ಲದಿದ್ದರೆ ಖಂಡಿತ ಇದು ಅಕ್ಷಮ್ಯ ಅಪರಾಧ…….
ಹಣ್ಣು ತರಕಾರಿ ಎಳನೀರು ಮುಂತಾದ ಮಾರಾಟ ಮಾಡುವ ಬೀದಿ ಬದಿಯ ವ್ಯಾಪಾರಿಗಳು, ಸಣ್ಣ ಕೈಗಾರಿಕೆಗಳು, ಹೋಟೆಲ್ ಮತ್ತು ಪ್ರವಾಸೋದ್ಯಮದ ಮೇಲೆ ಅವಲಂಬಿತರಾದವರು, ಅನೇಕ ಅರೆಕಾಲಿಕ ಉದ್ಯೋಗಿಗಳು ಮುಂತಾದ ಲಕ್ಷಾಂತರ ಮಂದಿ ಬದುಕಿನ ಅನಿವಾರ್ಯ ಅಗತ್ಯಗಳನ್ನು ಪೂರೈಸಿಕೊಳ್ಳಲು ಸಹ ಸಾಧ್ಯವಾಗುತ್ತಿಲ್ಲ. ಅವರನ್ನು ಮೇಲೆತ್ತಲು ಕಾರ್ಯೋನ್ಮಖರಾಗಬೇಕಾದ ನೀವು ಮಾಡುತ್ತಿರುವುದಾದರೂ ಏನು ?….
ಮುಂದಿನ ಚುನಾವಣೆಗೆ ಸಿದ್ದತೆ. ನಿಮ್ಮನ್ನು ನಂಬಿದ ಜನರನ್ನು ನಡು ನೀರಿನಲ್ಲಿ ಕೈ ಬಿಡುತ್ತಿದ್ದೀರಿ. ಇದು ತುಂಬಾ ಅಮಾನವೀಯ. ದಯವಿಟ್ಟು ಇನ್ನು ಉಳಿದ ಸಮಯದಲ್ಲಾದರೂ ಜನರ ಸಮಗ್ರ ಅಭಿವೃದ್ಧಿಗಾಗಿ, ಅವರ ಜೀವನಮಟ್ಟ ಸುಧಾರಣೆಗಾಗಿ ಶ್ರಮಿಸಿ ನಿಮ್ಮ ಬದುಕಿನ ಸಿಕ್ಕ ಉತ್ತಮ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಲು ಪ್ರಯತ್ನಿಸಿ ಎಂದು ಕಳಕಳಿಯ ಮನವಿ ಮಾಡುತ್ತಾ……….ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನೆಗಳಲ್ಲಿ – ಮನಗಳಲ್ಲಿ – ಮತಗಳಲ್ಲಿ ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ,