ಉಕ್ರೇನ್ ಹಾಗೂ ರಷ್ಯಾ ಮಧ್ಯೆ ನಡೆದ ಸಮರದಲ್ಲಿ ಸಿಲುಕಿದ ಕುಂದಗೋಳ ಮೂಲದ ಚೈತ್ರ

ಉಮೇಶ ಗೌರಿ (ಯರಡಾಲ)

ಸುದ್ದಿ ಸದ್ದು ನ್ಯೂಸ್

ಕುಂದಗೋಳ : ಉಕ್ರೇನ್ ಹಾಗೂ ರಷ್ಯಾ ಮಧ್ಯೆ ಸಮರ ಏರ್ಪಟ್ಟಿದ್ದು, ಇದರ ಮಧ್ಯೆ ಉಕ್ರೇನ್ ದೇಶದಲ್ಲಿ ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದ ಚೈತ್ರಾ ಎಂಬ ವಿದ್ಯಾರ್ಥಿನಿ ಸಿಲುಕಿದ್ದಾಳೆ. 

ಕಳೆದ ಮೂರು ವರ್ಷಗಳಿದಿಂದ ಉಕ್ರೇನ್‌ನಲ್ಲಿ ವಾಸವಿದ್ದು ಸರ್ಕಾರಿ ಕೋಟಾದಡಿ ಎಂಬಿಬಿಎಸ್ ಓದುತ್ತಿದ್ದಾಳೆ.

ಪೋಷಕರಲ್ಲಿ ತೀವ್ರ ಆತಂಕ ಸೃಷ್ಟಿಯಾಗಿದ್ದು ಸದ್ಯ ಆಕೆ ತನ್ನ ಪೋಷಕರೊಂದಿಗೆ ಸಂಪರ್ಕದಲ್ಲಿ ಇದ್ದಾಳೆ ಎಂದು ತಿಳಿದುಬಂದಿದೆ.

ಭಾರತಕ್ಕೆ ಮರಳಲು ಸಿದ್ಧವಾಗಿದ್ದ ಚೈತ್ರಾ ಇದೀಗ ಉಕ್ರೇನ್ ಸರ್ಕಾರದ ಅಧೀನದಲ್ಲಿ ಕ್ಷೇಮವಾಗಿದ್ದು, ಮರಳಿ ಭಾರತಕ್ಕೆ ಬರುವ ವೇಳೆ ವಿಮಾನ ನಿಲ್ದಾಣದ ಮೇಲೆಯೇ ದಾಳಿ ನಡೆದ ಪರಿಣಾಮ ಭಾರತಕ್ಕೆ ಬರುವ ಪ್ರಯಾಣ ರದ್ದಾಗಿದೆ.

ಉಕ್ರೇನ್ ಸರ್ಕಾರ ಎಲ್ಲಾ ಪ್ರಯಾಣಿಕರಿಗೆ ಬಂಕರ್‌ನಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದ್ದು, ಕುಟುಂಬದ ಸದಸ್ಯರ ಜೊತೆ ಚೈತ್ರಾ ನಿರಂತರ ಸಂಪರ್ಕದಲ್ಲಿ ಇದ್ದಾಳೆ.

ಇಂದು ಸಾಯಂಕಾಲವಷ್ಟೇ ಕುಟುಂಬದವರಿಗೆ ಕರೆ ಮಾಡಿ ಮಾತನಾಡಿದ್ದಾಳೆ ಎಂದು ಚೈತ್ರಾ ತಂದೆ ಸಾರಿಗೆ ನೌಕರ ಗಂಗಾಧರ ಸಂಶಿ ಮಾಹಿತಿ ನೀಡಿದ್ದಾರೆ.

ಇದೀಗ ಜಿಲ್ಲಾಡಳಿತ ಆದೇಶದ ಮೇರೆಗೆ ಕುಂದಗೋಳ ತಹಶೀಲ್ದಾರ ಅಶೋಕ ಶಿಗ್ಗಾಂವಿ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಚೈತ್ರಾ ಕುಟುಂಬದವರನ್ನು ಜಿಲ್ಲಾಧಿಕಾರಿಗಳ ಜೊತೆ ಸಮಾಲೋಚನೆ ಮುಂದಾಗಿದ್ದಾರೆ. ತಮ್ಮ ಏಕಮಾತ್ರ ಪುತ್ರಿ ಚೈತ್ರಾ ಉಕ್ರೇನ್‌ನಲ್ಲಿ ಸಿಲುಕಿದ ಹಿನ್ನೆಲೆ ನಮಗೆ ದಿಕ್ಕೇ ತೋಚದಾಗಿದೆ ಎಂದು ಪೋಷಕರು ತಮ್ಮ ಅಳಲನ್ನು ತೋಡಿಕೊಂಡರು.

ವಿದ್ಯಾರ್ಥಿನಿ ಮನೆಗೆ ಭೇಟಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ ಅವರು, ಚೈತ್ರಾಳ ಪೋಷಕರಿಗೆ ಧೈರ್ಯ ತುಂಬಿ ಅತಿ ಬೇಗನೆ ಅವಳನ್ನು ತಾಯ್ನಾಡಿಗೆ ಕರೆತರಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

 

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";