Tuesday, October 1, 2024

ಸಿಎಂ ಚೊಚ್ಚಲ ಬಜೆಟ್‌ ಮೇಲೆ ರಾಜ್ಯ ಸರಕಾರಿ ನೌಕರರ ಕಣ್ಣು: ನೌಕರರ ಬೇಡಿಕೆ ಏನು?

ಬೆಂಗಳೂರು,ಫೆ 24; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾರ್ಚ್ 4ರಂದು 2022-23ನೇ ಸಾಲಿನ ಚೊಚ್ಚಲ ಬಜೆಟ್‌ನಲ್ಲಿ ಯಾವ ಘೋಷಣೆ ಮಾಡಲಿದ್ದಾರೆ? ಎಂಬುದು ಕುತೂಹಲ ಮೂಡಿಸಿದೆ.

ನೌಕರ-ವಿರೋಧಿ ಎನ್‌. ಪಿ. ಎಸ್.ಯೋಜನೆಯನ್ನು ರದ್ದುಗೊಳಿಸಿ ನಿಶ್ಚಿತ ಪಿಂಚಣಿ ಯೋಜನೆಯನ್ನು ಮರುಸ್ಥಾಪಿಸಬೇಕು. 7ನೇ ವೇತನ ಆಯೋಗ ರಚನೆ ಮತ್ತು ಖಾಲಿ ಹುದ್ದೆಗಳ ಭರ್ತಿಗಾಗಿ ಮಾಡುವ ಕುರಿತು ಮಹತ್ವದ ನಿರ್ಧಾರವನ್ನು ಘೋಷಿಸಬೇಕು ಎಂದು ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟ ಆಗ್ರಹಿಸಿದೆ.

1/4/2006 ರಿಂದ ರಾಜ್ಯದಲ್ಲಿ ಜಾರಿಗೆ ತರಲಾಗಿರುವ ಪಿ. ಎಫ್. ಆರ್. ಡಿ. ಎ ಕಾಯ್ದೆ ಪ್ರಾಯೋಜಿತ ಎನ್. ಪಿ. ಎಸ್‌ ಯೋಜನೆಯಿಂದಾಗಿ ರಾಜ್ಯ ಸರ್ಕಾರಿ ನೌಕರರಿಂದ ನಿಶ್ಚಿತ ಪಿಂಚಣಿಯನ್ನು ಕಸಿದುಕೊಳ್ಳಲಾಗಿರುತ್ತದೆ ಎಂದು ಒಕ್ಕೂಟ ಆರೋಪಿಸಿದೆ.

ಎನ್. ಪಿ. ಎಸ್‌ ಯೋಜನೆಯಡಿ ಸಂಗ್ರಹವಾಗುವ ಶೇ10ರಷ್ಟು ನೌಕರರ ವಂತಿಕೆ ಮತ್ತು ಶೇ12 ರಷ್ಟು ಸರ್ಕಾರದ ವಂತಿಕೆಯನ್ನು ಪಿ. ಎಫ್. ಆರ್. ಡಿ. ಎ ಸಂಸ್ಥೆಯು ಫಂಡ್‌ ಮ್ಯಾನೇಜರುಗಳ ಮೂಲಕ ಷೇರು ಮಾರುಕಟ್ಟೆಯಲ್ಲಿ ತೊಡಗಿಸುತ್ತಿದೆ ಎಂದು ಹೇಳಿದೆ.

ಕಳೆದ 18 ವರ್ಷಗಳ ಅನುಭವ ತೋರಿಸಿಕೊಟ್ಟಿರುವುದೇನೆಂದರೆ, ಸರ್ಕಾರಿ ನೌಕರರ ಹಣ ಖಾಸಗಿ ಕಂಪನಿಗಳ ಷೇರು ಖರೀದಿಗೆ ವಿನಿಯೋಗವಾಗುತ್ತಿದ್ದು, ಷೇರು ಮಾರುಕಟ್ಟೆಯು ಜೂಜುಕೋರ ವ್ಯವಸ್ಥೆಯಾಗಿರುವುದರಿಂದ, ನಿವೃತ್ತಿಯಾಗುತ್ತಿರುವ ನೌಕರರಿಗೆ/ ಮರಣ ಹೊಂದಿರುವ ನೌಕರರ ಕುಟುಂಬಕ್ಕೆ ಮಾಸಿಕ ಪಿಂಚಣಿ ಕೇವಲ 2,000 ರೂ. ದಿಂದ 3,000 ರೂ. ಮಾತ್ರವೇ ಬರುತ್ತಿದ್ದು, ಇದು ಮನೆಯ ಬಾಡಿಗೆಯಿರಲಿ, ವಿದ್ಯುತ್‌ ಮತ್ತು ನೀರಿನ ಶುಲ್ಕ ಕಟ್ಟಲು ಸಾಕಾಗುತ್ತಿಲ್ಲ ಎಂದು ಒಕ್ಕೂಟ ತಿಳಿಸಿದೆ.

ಹಲವು ವರ್ಷಗಳ ನಂತರ ರಾಜಸ್ಥಾನ ರಾಜ್ಯ ಸರ್ಕಾರವು ಮಹತ್ವದ ನಿರ್ಧಾರವೊಂದನ್ನು ತನ್ನ ರಾಜ್ಯದ ಬಜೆಟ್ ನಲ್ಲಿ ಘೋಷಿಸಿದ್ದು,ಸರ್ಕಾರಿ ಸೇವೆಗಳಿಗೆ ಸಂಬಂಧಿಸಿದ ಉದ್ಯೋಗಿಗಳು ಭವಿಷ್ಯದ ಬಗ್ಗೆ ಸುರಕ್ಷಿತವಾಗಿರಬೇಕು ಎಂದು ನಮಗೆಲ್ಲರಿಗೂ ತಿಳಿದಿದೆ, ಆಗ ಮಾತ್ರ ಅವರು ಸೇವಾ ಅವಧಿಯಲ್ಲಿ ಉತ್ತಮ ಆಡಳಿತಕ್ಕಾಗಿ ತಮ್ಮ ಅಮೂಲ್ಯ ಕೊಡುಗೆಯನ್ನು ನೀಡಬಹುದು ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದ್ದರು.

2022ನೇ ಆಯವ್ಯಯದಲ್ಲಿ 2004ರ ಜನವರಿ-1ರ ನಂತರದ ನೇಮಕಾತಿಗಳಿಗೂ ಅನ್ವಯವಾಗುವಂತೆ ಎನ್‌. ಪಿ. ಎಸ್. ಯೋಜನೆಯನ್ನು ರದ್ದುಗೊಳಿಸಿ ನಿಶ್ಚಿತ ಪಿಂಚಣಿ ಯೋಜನೆಯನ್ನು ಮರುಸ್ಥಾಪಿಸುವುದಾಗಿ ಘೋಷಿಸಿದ್ದು, ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದರ ಜೊತೆಗೆ ವೇತನ ಹೆಚ್ಚಳವನ್ನು ಸಹ ಮಾಡುವುದಾಗಿ ಘೋಷಿಸಿದ್ದಾರೆ.

ಈ ಹಿನ್ನೆಲೆಯಲ್ಲಿ, 2022ನೇ ಆಯವ್ಯಯದಲ್ಲಿ ಕೆಳಕಂಡ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಮಹತ್ವದ ಘೋಷಣೆಗಳನ್ನು ಮಾಡಬೇಕೆಂದು ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟ ಆಗ್ರಹಿಸಿದೆ.

ಬೇಡಿಕೆಗಳು

◆ದಿನಾಂಕ 1/4/2006ರಿಂದ ನೇಮಕಗೊಂಡ ಎಲ್ಲ ನೌಕರರಿಗೆ ಎನ್. ಪಿ. ಎಸ್‌ ಯೋಜನೆಯನ್ನು ರದ್ದುಗೊಳಿಸಿ ನಿಶ್ಚಿತ ಪಿಂಚಣಿ ಯೋಜನೆಯನ್ನು ಮರುಸ್ಥಾಪಿಸಬೇಕು.

◆ ರಾಜ್ಯ 7ನೇ ವೇತನ ಆಯೋಗವನ್ನು ಹೈಕೋರ್ಟ್‌ನ ಹಾಲಿ ಅಥವಾ ನಿವೃತ್ತ ನ್ಯಾಯಮೂರ್ತಿಗಳ ಅಧ್ಯಕ್ಷತೆಯಲ್ಲಿ ರಚನೆ ಮಾಡುವುದು.

◆ 2ನೇ ಆಡಳಿತ ಸುಧಾರಣೆ ಆಯೋಗವು ಹುದ್ದೆಗಳ ಕಡಿತವನ್ನು/ ಅನುಕಂಪ-ಆಧಾರಿತ ಉದ್ಯೋಗವನ್ನು ರದ್ದುಗೊಳಿಸಬೇಕೆಂಬ ಅವೈಜ್ಞಾನಿಕ ಶಿಫಾರಸ್ಸನ್ನು ತಿರಸ್ಕರಿಸಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದು.

 

ಜಿಲ್ಲೆ

ರಾಜ್ಯ

error: Content is protected !!