ಬೆಂಗಳೂರು: ಕಂದಾಯ ಸಚಿವ ಆರ್. ಅಶೋಕ್ ಅವರ ಹೆಸರು ಹೇಳಿಕೊಂಡು ಕಂದಾಯ ಇಲಾಖೆ, ನೋಂದಣಿ ಮತ್ತು ಮುದ್ರಾಂಕ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗಕ್ಕೆ ಕಿರುಕುಳ ನೀಡುತ್ತಿರುವ ಮಂಜುನಾಥ್ ಎಂಬುವವರ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಮತ್ತು ಲೋಕಾಯುಕ್ತರಿಗೆ ದೂರು ದಾಖಲಿಸಲಾಗಿದೆ.
ಎಸಿಬಿ ಮತ್ತು ಲೋಕಾಯುಕ್ತ ತನಿಖಾ ಸಂಸ್ಥೆಗಳ ಹೆಸರು ಬಳಿಸಿಕೊಂಡು ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಹೆದರಿಸಿ ಹಣ ವಸೂಲಿ ಮಾಡಿರುವ ಆರೋಪ ಮಂಜುನಾಥ್ ವಿರುದ್ಧ ಕೇಳಿ ಬಂದಿದೆ.
ಲೋಕೋಪಯೋಗಿ ಇಲಾಖೆಯಲ್ಲಿ ಎಂಜಿನಿಯರ್ ಆಗಿದ್ದ ಮಂಜುನಾಥ್ ಅವರನ್ನು ನಿಯೋಜನೆ ಮೇರೆಗೆ ನೋಂದಣಿ ಇಲಾಖೆಯಲ್ಲಿ ಕಾರ್ಯನಿರ್ವಹಿಸಿ ಈಗ ನಿವೃತ್ತಿ ಆಗಿದ್ದಾರೆ. ನಿವೃತ್ತಿ ಬಳಿಕ ನೋಂದಣಿ ಇಲಾಖೆಯ ಎಲ್ಲ ಅಧಿಕಾರಿ ವರ್ಗದವರನ್ನು ಹೆದರಿಸುತ್ತಿದ್ದಾರೆ. ಅಲ್ಲದೆ, ಶಾಸಕರ ಭವನದಲ್ಲಿ ಬಸವನಗುಡಿ ಶಾಸಕ ರವಿಸುಬ್ರಹ್ಮಣ್ಯ ಅವರಿಗೆ ನೀಡಲಾಗಿರುವ ಕೊಠಡಿ ಸಂಖ್ಯೆ 275ರಲ್ಲಿ ಠಿಕಾಣಿ ಹೂಡಿ ತನ್ನ ಅಕ್ರಮ ಕಾರ್ಯಗಳನ್ನು ಮಾಡುವ ಶಾಸಕರ ಕೊಠಡಿಯನ್ನೂ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ದೂರಲಾಗಿದೆ. ವಕೀಲ ನಾಗರಾಳ ಎಸ್.ಪಿ. ಗುಳೇದಗುಡ್ಡ ಎಂಬುವವರು ಈ ದೂರು ದಾಖಲು ಮಾಡಿದ್ದಾರೆ.
ಮಜುನಾಥ್ ತನ್ನ ಸ್ವಂತ ಮೊಬೈಲ್ ಹಾಗೂ ಮತ್ತೊಂದು ನಂಬರ್‌ನಿಂದ ನೋಂದಣಿ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಕರೆ ಮಾಡಿ ಹೆದರಿಸುತ್ತಾರೆ. ನಿಮ್ಮ ವಿರುದ್ಧ ಎಸಿಬಿ. ಲೋಕಾಯುಕ್ತ, ಸಿಸಿಬಿಯಲ್ಲಿ ದೂರು ದಾಖಲಿಸುತ್ತೇನೆ ಎಂದು ಕಿರುಕುಳ ನೀಡುತ್ತಾರೆ. ಹಣಕ್ಕಾಗಿ ಪೀಡಿಸುತ್ತಾರೆ. ಹಣ ಕೊಡದವರಿಗೆ ಇಲಾಖೆಯ ಮೂಲಕ ವಿವಿಧ ರೀತಿಯ ಒತ್ತಡಗಳನ್ನು ತಂದು ವರ್ಗಾವಣೆಗಳನ್ನೂ ಮಾಡಿಸುತ್ತಿದ್ದಾರೆ. ಇದರಿಂದ ಕಿರುಕುಳ ಅನುಭವಿಸುತ್ತಿರುವ ಕೆಲವು ಅಧಿಕಾರಿ, ಸಿಬ್ಬಂದಿ ಮಂಜುನಾಥ್ ಕೇಳಿದಷ್ಟು ಹಣವನ್ನೂ ಶಾಸಕರ ಭವನದಕ್ಕೆ ತಂದು ಕೊಡುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
‘ಈ ಹಿಂದೆ ನೋಂದಣಿ ಇಲಾಖೆಯ ದಾಖಲೆಗಳಲ್ಲಿ ಲೋಪ ಆಗಿದ್ದ ಬಗ್ಗೆ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ತನಿಖೆಯನ್ನು ಸಿಸಿಬಿಗೆ ವಹಿಸಲಾಗಿತ್ತು. ಈ ಸಂಬಂಧ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅವರು ಇಲಾಖೆಯ ಕೆಲವು ಅಧಿಕಾರಿ, ಸಿಬ್ಬಂದಿಯನ್ನು ಕರೆದು ವಿಚಾರಣೆ ಮಾಡಿದ್ದರು. ಈ ಸಂದರ್ಭದಲ್ಲಿ ಮಂಜುನಾಥ್, ಯಾರು ಯಾರು ವಿಚಾರಣೆ ಎದುರಿಸುತ್ತಿದ್ದೋ ಅವರೆಲ್ಲ ನನ್ನ ಬಳಿ ಬನ್ನಿ. ಸಂದೀಪ್ ಪಾಟೀಲ್ ನನ್ನ ಪರಮಾಪ್ತರು. ನೀವು ಬಂಧನ ಆಗದಂತೆ, ಆರೋಪ ಮುಕ್ತ ಆಗುವಂತೆ ವ್ಯವಸ್ಥೆ ಮಾಡುತ್ತೇನೆ ಎಂದು ಹಣ ವಸೂಲಿಯನ್ನೂ ಮಾಡಿ ಸಿಸಿಬಿ ಹೆಸರನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಇಂತಹ ವಿಷಯಗಳ ಬಗ್ಗೆ ಇಲಾಖೆಯ ಅಧಿಕಾರಿಗಳು ಬಹಿರಂಗವಾಗಿ ಹೇಳಿಕೊರ್ಳಳಲಾಗದೆ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಹೊಳೆ ಬಸಪ್ಪ ಹಾಳಕೇರಿ ಎಂಬುವವರು ದೂರಿನಲ್ಲಿ ವಿವರಿಸಿದ್ದಾರೆ.
ಬಸವನಗುಡಿ ಶಾಸಕ ರವಿ ಸುಬ್ರಮಣ್ಯ ಅವರಿಗೆ ಶಾಸಕರ ಭವನದಲ್ಲಿ ಮಂಜೂರಾಗಿರುವ ನಂ. 275 ಕೊಠಡಿಯಲ್ಲಿ ಮಂಜುನಾಥ್ ಠಿಕಾಣಿ ಹೂಡಿಕೊಂಡು ಅವ್ಯವಹಾರ ನಡೆಸಿದ್ದಾರೆ ಎನ್ನಲಾಗಿದೆ. ಹಾಲಿ ಶಾಸಕರ ಕೊಠಡಿಯನ್ನು ಮಂಜುನಾಥ್ ದುರುಪಯೋಗ ಪಡಿಸಿಕೊಂಡು ತನ್ನ ಕಾರ್ಯ ಸ್ಥಾನ ಮಾಡಿಕೊಂಡಿದ್ದು, ಪ್ರತಿ ನಿತ್ಯ ಅಲ್ಲಿಂದಲೇ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗೆ ಹೆದರಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಶಾಸಕರ ಭವನಕ್ಕೆ ಪ್ರತಿ ನಿತ್ಯ ಮಂಜುನಾಥ್ ಹೋಗಿರುವುದು ಶಾಸಕರ ಭವನದ ದ್ವಾರದಲ್ಲಿರವ ಸಿಸಿಟಿವಿಯಲ್ಲಿ ಸಹ ಸೆರೆಯಾಗಿದ್ದು, ಈ ಬಗ್ಗೆ ತನಿಖೆ ನಡೆಸು ಕೋರಲಾಗಿದೆ. ಶಾಸಕರ ಭವನದಲ್ಲಿ ಕೊಠಡಿ ನೋಡಿಕೊಳ್ಳುತ್ತಿದ್ದ ಶುಕ್ರ ಎಂಬ ಯುವಕನನ್ನು ಹಣ ವಹಿವಾಟಿಗೆ ಬಳಿಸಿಕೊಂಡಿದ್ದುಈ ಕುರಿತ ತನಿಖೆ ನಡೆಸುವಂತೆ ಕೋರಲಾಗಿದೆ.
ಶಾಸಕರ ಭವನಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ಕೆಲ ನಿರ್ಬಂಧಗಳು ಇವೆ. ಆದರೆ, ಮಂಜುನಾಥ್ ಹೆಸರು ಹೇಳಿದರೆ ಶಾಸಕರ ಭವನದ ಮುಖ್ಯದ್ವಾರದ ಪೊಲೀಸರು ಯಾವುದೇ ತಪಾಸಣೆಯನ್ನೂ ಮಾಡದೆ ಬಿಟ್ಟು ಕಳುಹಿಸುತ್ತಾರೆ. ಈ ಬಗ್ಗೆ ಸಮಗ್ರವಾಗಿ ತನಿಖೆ ನಡೆಸಿ ಕಂದಾಯ ಮತ್ತು ನೋಂದಣಿ, ಮುದ್ರಾಂಕ ಇಲಾಖೆಯ ಅಧಿಕಾರಿ, ಸಿಬ್ಬಂದಿಗೆ ಆಗುತ್ತಿರುವ ಕಿರುಕುಳವನ್ನು ತಪ್ಪಿಸಬೇಕು ಎಂದು ದೂರಿನಲ್ಲಿ ಮನವಿ ಮಾಡಲಾಗಿದೆ.