ಬೆಂಗಳೂರು: ಕೆಂಪು ಕೋಟೆಯ ಮೇಲೆ ಮುಂದೊಂದು ದಿನ ಭಗವಧ್ವಜ ಹಾರಾಡಬಹುದು ಎಂಬ ವಿವಾದಾತ್ಮಕ ಹೇಳಿಕೆಯನ್ನು ನೀಡಿದ ಸಚಿವ ಕೆ.ಎಸ್ ಈಶ್ವರಪ್ಪ ವಿರುದ್ಧ ಕಾಂಗ್ರೆಸ್ ಅಹೋರಾತ್ರಿ ಧರಣಿ ನಡೆಸುತ್ತಿದೆ. .
ಉಭಯ ಸದನದಲ್ಲಿ ಕಾಂಗ್ರೆಸ್ ನಡೆಸುತ್ತಿರುವ ಧರಣಿಯಿಂದಾಗಿ ಸರ್ಕಾರಕ್ಕೂ ತಲೆನೋವಾಗಿದ್ದು ಸಂಧಾನ ಪ್ರಯತ್ನಕ್ಕೆ ಬಗ್ಗದೇ ಇದ್ದಲ್ಲಿ ಪ್ರತ್ಯಸ್ತ್ರ ಪ್ರಯೋಗಕ್ಕೆ ಚಿಂತನೆ ನಡೆಸುತ್ತಿದೆ. ಈ ನಿಟ್ಟಿನಲ್ಲಿ ಚರ್ಚೆ ನಡೆಸಲು ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಬಿಜೆಪಿ ಕಚೇರಿಯಲ್ಲಿ ಸೋಮವಾರ ಹಿರಿಯ ಮುಖಂಡರ ಸಭೆ ನಡೆಯಲಿದೆ. ರಾಷ್ಟ್ರ ಧ್ವಜದ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿರುವ ಈಶ್ವರಪ್ಪ ರಾಜೀನಾಮೆ ನೀಡಬೇಕು ಅಥವಾ ಅವರನ್ನು ವಜಾಗೊಳಿಸಬೇಕು ಎಂಬುವುದು ಕಾಂಗ್ರೆಸ್ ಬೇಡಿಕೆಯಾಗಿದೆ. ಈ ಬೇಡಿಕೆ ಈಡೇರಿಕೆಗಾಗಿ ಪಟ್ಟು ಹಿಡಿದು ಕಾಂಗ್ರೆಸ್ ಧರಣಿ ನಡೆಸುತ್ತಿದೆ. ಮೂರು ಬಾರಿ ಸಂಧಾನ ಪ್ರಯತ್ನ ನಡೆಸಿದರೂ ಅದು ಯಶಸ್ವಿಯಾಗಿಲ್ಲ. ಇದೀಗ ಸೋಮವಾರವೂ ಕಲಾಪಕ್ಕೆ ಅಡ್ಡಿ ಉಂಟು ಮಾಡಲು ಕಾಂಗ್ರೆಸ್ ನಿರ್ಧಾರ ಮಾಡಿದೆ.
ಸೋಮವಾರ ವಿಧೇಯಕಗಳನ್ನು ಅಂಗೀಕರಿಸಿ ಮಂಗಳವಾರ ರಾಜ್ಯಪಾಲರ ಭಾಷಣದ ಮೇಲಿನ ವಂದಣಾ ನಿರ್ಣಯಕ್ಕೆ ಉತ್ತರ ನೀಡಿ ಸದನವನ್ನು ಅನಿರ್ದಿಷ್ಟಾವಧಿಗಳ ಕಾಲ ಮುಂದೂಡಿಕೆ ಮಾಡುವುದು ಸರ್ಕಾರ ಚಿಂತನೆಯಾಗಿದೆ.