ಬೆಂಗಳೂರು: ಇತ್ತೀಚೆಗೆ ಗಣರಾಜ್ಯೋತ್ಸವ ಆಚರಣೆಯ ಸಂದರ್ಭದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರ ತೆರವು ಮಾಡಿಸಿದ ಆರೋಪಕ್ಕೆ ಗುರಿಯಾಗಿರುವ ರಾಯಚೂರು ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರಾಗಿದ್ದ ಮಲ್ಲಿಕಾರ್ಜುನ ಗೌಡ ಪಾಟೀಲ್ ಅವರನ್ನು ವಜಾಗೊಳಿಸಬೇಕೆಂದು ದಲಿತ ಸಂಘಟನೆಯ ಮುಖಂಡರು, ಪ್ರಗತಿಪರರು, ಚಿಂತಕರು ಸಹಸ್ರಾರು ಸಂಖ್ಯೆಯಲ್ಲಿ ಜಮಾಯಿಸಿ ಒಕ್ಕೊರಲಿನಿಂದ ನ್ಯಾಯಾಧೀಶನ ವಿರುದ್ದ ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿ ಬೆಂಗಳೂರು ಬೀದಿ ತುಂಬ ಅಂಬೇಡ್ಕರ್ ಭಾವಚಿತ್ರ ಹಿಡಿದು ಪ್ರತಿಭಟನೆ ನಡೆಸಿದರು.
ಶನಿವಾರ ಸಂವಿಧಾನ ಸಂರಕ್ಷಣಾ ಮಹಾಒಕ್ಕೂಟ-ಕರ್ನಾಟಕ, ಹಾಗೂ ದಲಿತ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಬೆಂಗಳೂರು ಸಿಟಿ ರೈಲ್ವೆ ನಿಲ್ದಾಣ ಮುಂಭಾಗ ಜಮಾಯಿಸಿದ ಸಾವಿರಾರು ಹೋರಾಟಗಾರರು ವಿಧಾನಸೌಧ, ಹೈಕೋರ್ಟ್ ವರೆಗೂ ಜೈ ಭೀಮ್ ಘೋಷಣೆಯೊಂದಿಗೆ ಬೃಹತ್ ಕಾಲ್ನಡಿಗೆ ಜಾಥಾ ನಡೆಸಿದರು.
ಫ್ರೀಡಂ ಪಾರ್ಕ್ ಮೈದಾನದಲ್ಲಿ ಬೃಹತ್ ಸಮಾವೇಶದಲ್ಲಿ ಜಮಾವಣೆಗೊಂಡ ಹೋರಾಟಗಾರರು ಸಂವಿಧಾನ ವಿರೋಧಿ ಮಲ್ಲಿಕಾರ್ಜುನ ಗೌಡ ಪಾಟೀಲ್ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.