ಬೆಂಗಳೂರು: ಪಿಡಿಒಗಳನ್ನು ಜನನ, ಮರಣ ನೋಂದಣಾಧಿಕಾರಿಗಳನ್ನಾಗಿ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳನ್ನು ಉಪ ನೋಂದಣಾಧಿಕಾರಿಗಳನ್ನಾಗಿ ನೇಮಿಸಿ ಸರ್ಕಾರ ಆದೇಶಿಸಿದೆ.
ಗ್ರಾಮೀಣ ಪ್ರದೇಶದಲ್ಲಿ ನಾಗರಿಕ ನೋಂದಣಿ ಪದ್ಧತಿಯನ್ನು ಬಲಪಡಿಸಲು ಹಾಗೂ ಶೇ.100 ರಷ್ಟು ಜನನ, ಮರಣ ನೋಂದಣಿ ದಾಖಲಿಸಲು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳನ್ನು ಜನನ, ಮರಣ ನೋಂದಣಾಧಿಕಾರಿಗಳನ್ನಾಗಿ ಮಾಡಲು ಕೇಂದ್ರ ಸರ್ಕಾರದ ಅನುಮೋದನೆ ಕೋರಲಾಗಿತ್ತು. ಅದಕ್ಕೆ ಕೇಂದ್ರ ಸರ್ಕಾರ ತನ್ನ ಸಹಮತಿ ವ್ಯಕ್ತಪಡಿಸಿತ್ತು.
ಈ ಮೊದಲು ಜನನ-ಮರಣ ಪ್ರಮಾಣ ಪತ್ರ ವಿತರಣಾ ಹಕ್ಕು ಕಂದಾಯ ಇಲಾಖೆ ವ್ಯಾಪ್ತಿಯಲ್ಲಿತ್ತು.ಇದೀಗ ಗ್ರಾಮಪಂಚಾಯತ್‍ಗಳಿಗೆ ಹಕ್ಕು ನೀಡಿ ಸರ್ಕಾರ ಆದೇಶಿಸಿದೆ.ಯೋಜನಾ ಮತ್ತು ಸಾಂಖ್ಯಿಕ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳು ಜನನ-ಮರಣ ಪ್ರಮಾಣ ಪತ್ರ ವಿತರಣೆಯನ್ನು ಗ್ರಾಮಪಂಚಾಯಿತಿಗೆ ನೀಡಬಹುದು ಎಂದು ಸೂಚಿಸಿದ್ದರು.
ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಹಾಗೂ ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ನಡವಳಿಯಲ್ಲಿ ಗ್ರಾಮೀಣ ಪ್ರದೇಶದ ಜನನ ಮತ್ತು ಮರಣ ನೋಂದಣಿಯನ್ನು ಗ್ರಾಮ ಪಂಚಾಯಿತಿಗಳು ಹೆಚ್ಚುವರಿಯಾಗಿ ಮಾಡಬೇಕು. ಒಂದು ವೇಳೆ ಗ್ರಾಮ ಪಂಚಾಯಿತಿ ಹಾಗೂ ಗ್ರಾಮ ಲೆಕ್ಕಾಧಿಕಾರಿಯ ಕಾರ್ಯ ವ್ಯಾಪ್ತಿಯ ಬಗ್ಗೆ ತಕರಾರು ಬಂದಲ್ಲಿ, ಗ್ರಾಮ ಪಂಚಾಯಿತಿಗಳು ತೀರ್ಮಾನ ತೆಗೆದು ಕೊಳ್ಳಬೇಕೆಂದು ಸೂಚಿಸಲಾಗಿದೆ. ಕಂದಾಯ ಇಲಾಖೆಯೂ ಈ ನಿಟ್ಟಿನಲ್ಲಿ ತನ್ನ ಸಹಮತಿ ನೀಡಿತ್ತು.
ಪಂಚಾಯುತ್ ಅಭಿವೃದ್ಧಿ ಅಧಿಕಾರಿಗಳನ್ನು ಜನನ-ಮರಣ ಪ್ರಮಾಣ ಪತ್ರಗಳ ವಿತರಣಾಧಿಕಾರಿಗಳನ್ನಾಗಿ ನೇಮಿಸಲು ಅನುಮತಿ ನೀಡಿರುವುದರಿಂದ, ರಾಷ್ಟ್ರೀಯ ಜನನ-ಮರಣ ಕಾಯ್ದೆ 1969 ರ ಆಧ್ಯಾಯ 5 ರ ಪ್ರಕರಣ 27 ರಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನು ಇ – ತಂತ್ರಾಂಶದಲ್ಲಿ ತಮ್ಮ ಡಿಜಿಟಲ್ ಸಹಿಯ ಮುಖಾಂತರ ವ್ಯಕ್ತಿಗಳ ಜನನ ಮತ್ತು ಮರಣ ನೋಂದಣಿ ಹಾಗು ಪ್ರಮಾಣ ಪತ್ರ ವಿತರಣಾಧಿಕಾರಿಗಳನ್ನಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಸರ್ಕಾರ ನೇಮಿಸಿದೆ.
ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಬಾಪೂಜಿ ಸೇವಾ ಕೇಂದ್ರಗಳ ಮುಖಾಂತರ ಈ ಸೇವೆಯನ್ನು ನೀಡಬೇಕು. ಸರ್ಕಾರ ಆಗಿಂದಾಗ್ಗೆ ನಿಗದಿ ಪಡಿಸುವ ದರಗಳನ್ವಯ ಸೇವಾ ಶುಲ್ಕವನ್ನು ಸಂಗ್ರಹಿಸಿ ನೀಡುವಂತೆ ಆದೇಶದಲ್ಲಿ ಹೇಳಿದೆ.
ಇದೀಗ ಸರ್ಕಾರ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ಜನನ, ಮರಣ ನೋಂದಣಾಧಿಕಾರಿಗಳನ್ನಾಗಿ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳನ್ನು ಉಪ ನೋಂದಣಾಧಿಕಾರಿಗಳನ್ನಾಗಿ ನೇಮಿಸಲು ಆದೇಶಿಸಿದೆ.