ತಿರುಮಲ ತಿರುಪತಿ ದೇವಸ್ಥಾನದಲ್ಲಿ ಇಂದಿನಿಂದ ಒಂದು ಕೋಟಿಯ ಉದಯಾಸ್ತಮಾನ ಸೇವೆ ಮತ್ತು ಪ್ರತಿ ಶುಕ್ರವಾರದಂದು ಸೂಪರ್ ಸ್ಪೆಷಲ್ ದರ್ಶನಕ್ಕೆ 1.5 ಕೋಟಿ ಮೊತ್ತವನ್ನು ನಿಗದಿಪಡಿಸಲಾಗಿದೆ. ಇದರಲ್ಲಿ ಮತ್ತಷ್ಟು ಸೇವಾ ಅನುಕೂಲಗಳು ಸಹ ಇವೆ. ( ಮಕ್ಕಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಹಣ ಸಂಗ್ರಹಿಸುವ ಉದ್ದೇಶ ಎಂದು ಹೇಳಲಾಗಿದೆ )
” ನೀವು ಎಲ್ಲಕ್ಕಿಂತ ಹೆಚ್ಚಾಗಿ ಹಣವನ್ನು ಬಯಸುವಿರಾದರೆ ಖರೀದಿಗೆ ಒಳಗಾಗುತ್ತೀರಿ ಮತ್ತು ನಿಮ್ಮ ಇಡೀ ಜೀವನವನ್ನು ಮಾರಿಕೊಳ್ಳುತ್ತೀರಿ ” .ರೂಮಿ. |
ರೂಮಿ ಹೇಳುವ ಹಾಗೆ ದೇವರನ್ನು ಸಹ ಹಣಕ್ಕಾಗಿ ನಿರಂತರವಾಗಿ ಮಾರಾಟ ಮಾಡಲಾಗುತ್ತಿದೆ ಎಂದು ಭಾವಿಸಬಹುದೇ.ನಿಲ್ಲಿ, ದೇವರುಗಳ ವ್ಯಾಪಾರೀಕರಣ ಪ್ರತ್ಯೇಕವಾಗಿ ಮತ್ತು ಪರೋಕ್ಷವಾಗಿ ವಿವಿಧ ರೀತಿಗಳಲ್ಲಿ ಮಾರಾಟ ಮಾಡುವುದು ಅಥವಾ ಅದನ್ನು ದುರುಪಯೋಗ ಪಡಿಸಿಕೊಳ್ಳುವುದು ಎಲ್ಲಾ ಧರ್ಮಗಳಲ್ಲೂ ಇದೆ.
ಜಗತ್ತಿನ ಕೆಲವೇ ಅದ್ಬುತ ಚಿಂತಕರಲ್ಲಿ ಒಬ್ಬರಾದ ರೂಮಿ ಜೀವನ ಇನ್ನೂ ಹೆಚ್ಚು ಸಂಕೀರ್ಣವಾಗಿರದ ಕಾಲದಲ್ಲಿಯೇ ಹಣದ ಈ ವ್ಯಾಮೋಹದ ದುಷ್ಪರಿಣಾಮಗಳನ್ನು ತುಂಬಾ ಸೂಕ್ಷ್ಮವಾಗಿ ಗಮನಿಸಿದ್ದಾರೆಂದರೆ ಇಂದು ಅದೆಷ್ಟು ವಾಸ್ತವ ಎಂಬುದು ನಮಗೆಲ್ಲ ತಿಳಿದೇ ಇದೆ.
ಇಂದು ದುಡ್ಡಿನ ಸುತ್ತಲೇ ಇಡೀ ಸಮಾಜ ಸರ್ಕಾರ ಕೊನೆಗೆ ಜನ ಸಮೂಹ ಸುತ್ತುತ್ತಿದೆ. ಬಹುತೇಕ ಎಲ್ಲರೂ ಹಣಕ್ಕೆ ಮಾರಾಟವಾಗಿದ್ದಾರೆ.ದೇವರೇ ಹಣಕ್ಕೆ ಮಾರಾಟವಾದರೆ ಇನ್ನು ಸಾಮಾನ್ಯ ಜನರ ಪಾಡೇನು. ಹಣ, ವ್ಯವಹಾರ ಜಗತ್ತಿನ ಒಂದು ಮಾಧ್ಯಮ ಮಾತ್ರ ಆಗಬೇಕಿತ್ತು. ಅದರೆ ಇಂದು ಅದು ಮಾನವ ಬದುಕಿನ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಿ ಆತನ ಎಲ್ಲಾ ಉದ್ದೇಶ ಸಾಧನೆಗಳ ಮಾಧ್ಯಮವಾಗಿ ಪ್ರತಿಷ್ಠಾಪಿಸಲ್ಪಟ್ಟಿರುವುದು ಚಿಂತನೆಗೆ ದೂಡಿದೆ.
ಮನುಷ್ಯನ ದೇಹ ಮನಸ್ಸು ಮೌಲ್ಯಗಳು ಎಲ್ಲವನ್ನೂ ಅಳೆಯುವ ಮಾಪನವಾಗಿ ಹಣ ಇಂದು ಚಲಾವಣೆಯಾಗುತ್ತಿದೆ.ಹಣವೇ ನಿನ್ನಯ ಗುಣ ಎಂದಾಗಿದೆ.ಉದರ ನಿಮಿತ್ತಂ ಬಹುಕೃತ ವೇಷಂ ಕಾಲದ ಪಯಣದಲ್ಲಿ ಬದಲಾಗಿ ಹಣದ ನಿಮಿತಂ ಬಹುಕೃತ ಚಿಂತನಂ ಆಗಿದೆ.ಅದರ ಪರಿಣಾಮ ನಾವೆಲ್ಲರೂ ಚಿಂತಕರಾಗಿ ಪರಿವರ್ತನೆ ಹೊಂದಿದ್ದೇವೆ. ಅದು ಯಾವ ರೀತಿಯ ಚಿಂತಕರೆಂದರೆ.
ಚಿಂತಕರು ಸ್ವಾಮಿ ನಾವು ಚಿಂತಕರು:ಜ್ಞಾನದ ಚಿಂತಕರಲ್ಲ ಸಮಸ್ಯೆಗಳ ಚಿಂತಕರು. ವೃದ್ದೆ ಅಜ್ಜಿಗೆ ಕೊರೋನಾ ಚಿಂತೆ, ಮಕ್ಕಳಿಗೆ ಆನ್ ಲೈನ್ ಕ್ಲಾಸಿನ ಚಿಂತೆ,ತರಕಾರಿ ಮಾರುವರಿಗೆ ಮಕ್ಕಳ ಮದುವೆ ಚಿಂತೆ, ದೊಡ್ಡ ದೊಡ್ಡ ಕಂಪನಿ ಮಾಲೀಕರಿಗೆ ದುಡ್ಡಿನ ಸಾಮ್ರಾಜ್ಯ ವಿಸ್ತರಿಸುವ ಚಿಂತೆ,ಭಿಕ್ಷುಕರಿಗೆ ರಾತ್ರಿ ಊಟದ ಚಿಂತೆ,ಸ್ವಾಮೀಜಿಗಳಿಗೆ ಭಕ್ತರ ಚಿಂತೆ,ಡ್ರಗ್ಸ್ ಮಾಫಿಯಾದ ಸಿನಿಮಾ ನಟಿಯರಿಗೆ ಜಾಮೀನಿನ ಚಿಂತೆ,ಟೆಕ್ಕಿಗೆ ಮಲೆಯಾಳಿ ಕುಟ್ಟಿಯ ಪ್ರೀತಿಯದೇ ಚಿಂತೆ, ಮಟನ್ ಅಂಗಡಿಗಾರರಿಗೆ ಕಾರ್ತಿಕ ಮಾಸದ್ದೇ ಚಿಂತೆ,ಬ್ಯಾಂಕ್ ಮ್ಯಾನೇಜರ್ ಗೆ ಸಾಲದ ರಿಕವರಿಯ ಚಿಂತೆ, ಮಂತ್ರಿಗಳಿಗೆ ಕುರ್ಚಿಯದೇ ಚಿಂತೆ,ವಿಕೃತ ಕಾಮಿ ಉಮೇಶ್ ರೆಡ್ಡಿಗೆ ಗಲ್ಲಿಗೇರುವ ದಿನಗಳ ಚಿಂತೆ,ಪೂಜಾರಿಗಳಿಗೆ ತಟ್ಟೆ ಕಾಣಿಕೆಯದೇ ಚಿಂತೆ,ಕಳ್ಳನಿಗೆ ಹಗಲಿನದೇ ಚಿಂತೆ, ವೃದ್ಧರಿಗೆ ಸತ್ತ ಮೇಲೆ ಸುಡುವರೋ, ಮಣ್ಣು ಮಾಡುವರೋ ಎಂಬ ಚಿಂತೆ.ಮಧುಮೇಹಿಗಳಿಗೆ ವಾಕಿಂಗ್ ನದೇ ಚಿಂತೆ,ಪತ್ರಕರ್ತರಿಗೆ ಬ್ರೇಕಿಂಗ್ ನ್ಯೂಸ್ ನದೇ ಚಿಂತೆ,ಕುಡುಕನಿಗೆ ರಾತ್ರಿಯ ಎಣ್ಣೆ ಚಿಂತೆ,ಸೆಕ್ಯುರಿಟಿಗೆ ತನ್ನ ನಿದ್ದೆಯದೇ ಚಿಂತೆ, ನೌಕರರಿಗೆ ವರ್ಗಾವಣೆಯದೇ ಚಿಂತೆ,ನಿರುದ್ಯೋಗಿಗೆ ಉದ್ಯೋಗದ ಚಿಂತೆ ಹೀಗೆ ಒಟ್ಟಿನಲ್ಲಿ ಎಲ್ಲರೂ ಚಿಂತಕರೇ.
ಹಣ ಕೇಂದ್ರೀಕೃತ ಸಮಾಜದ ಹಣೆಬರಹ ಬಹುಶಃ ಇದೇ ಇರಬೇಕು. ರೂಮಿಗೆ ಇದು ಆಗಿನ ಕಾಲದಲ್ಲೇ ಅರಿವಾಗಿರಬೇಕು.ಒಟ್ಟಿನಲ್ಲಿ ಕಾಲಜ್ಞಾನಿಗಳ ಅನುಭವದ ಮಾತುಗಳು ವಾಸ್ತವವಾಗುವ ಕಾಲಘಟ್ಟದಲ್ಲಿ ನಾವು ನೀವು.
ಲೇಖಕರು:ವಿವೇಕಾನಂದ. ಹೆಚ್.ಕೆ.
9844013068…..