ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಸಿ.ಡಿ. ಬಹಿರಂಗ ಪ್ರಕರಣದಲ್ಲಿ ಕರ್ನಾಟಕ ಎಸ್ಐಟಿ ವರದಿ ಸಲ್ಲಿಕೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ. ಸಿಡಿ ಪ್ರಕರಣದ ಬಗ್ಗೆ ತನಿಖೆಗೆ ರಚಿಸಿದ್ದ ಎಸ್ಐಟಿ ತನಿಖೆ ಪ್ರಶ್ನಿಸಿ, ವಿಶೇಷ ತನಿಖಾ ತಂಡ ರಚನೆ ಸರಿಯಿಲ್ಲವೆಂದು ಬಾಧಿತ ಯುವತಿ ಆಕ್ಷೇಪ ವ್ಯಕ್ತಪಡಿಸಿದ್ದರು.
ದೆಹಲಿ: ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಸಿ.ಡಿ. ಬಹಿರಂಗ ಪ್ರಕರಣದಲ್ಲಿ ಕರ್ನಾಟಕ ಎಸ್ಐಟಿ ವರದಿ ಸಲ್ಲಿಕೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ. ಸಿಡಿ ಪ್ರಕರಣದ ಬಗ್ಗೆ ತನಿಖೆಗೆ ರಚಿಸಿದ್ದ ಎಸ್ಐಟಿ ತನಿಖೆ ಪ್ರಶ್ನಿಸಿ, ವಿಶೇಷ ತನಿಖಾ ತಂಡ ರಚನೆ ಸರಿಯಿಲ್ಲವೆಂದು ಬಾಧಿತ ಯುವತಿ ಆಕ್ಷೇಪ ವ್ಯಕ್ತಪಡಿಸಿದ್ದರು. ಪ್ರಕರಣದಲ್ಲಿ ಎಸ್ಐಟಿ ಬಿ ರಿಪೋರ್ಟ್ ಸಲ್ಲಿಸಲು ಮುಂದಾಗಿತ್ತು. ಇದೀಗ ಸುಪ್ರೀಂ ತಡೆಯಾಜ್ಞೆಯಿಂದ ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಸಂಕಷ್ಟ ತಪ್ಪಿದ್ದಲ್ಲ ಎನ್ನುವಂತಾಗಿದೆ.
ಮುಖ್ಯಸ್ಥರ ಅನುಪಸ್ಥಿತಿಯಲ್ಲಿ ಸಿ.ಡಿ. ಪ್ರಕರಣದ ತನಿಖೆಗೆ ಅರ್ಜಿದಾರರು ಆಕ್ಷೇಪ ವ್ಯಕ್ತಪಡಿಸಿದ್ದರು. ಸರ್ಕಾರ ಸ್ವಯಂಪ್ರೇರಿತವಾಗಿ ಎಸ್ಐಟಿ ರಚನೆ ಮಾಡಿಲ್ಲ. ಎಸ್ಐಟಿ ರಚನೆಗೆ ರಾಜಕೀಯ ಒತ್ತಡ ಹೇರಲಾಗಿದೆ. ಇಂತಹ ಎಸ್ಐಟಿ ವರದಿ ಆಧರಿಸಿ ವಿಚಾರಣೆ ನಡೆಸುವುದು ತಪ್ಪು.
ಎಸ್ಐಟಿ ತನಿಖಾ ವರದಿಯ ಮೇಲೆ ನಮಗೆ ನಂಬಿಕೆಯಿಲ್ಲ. ಸಿ.ಡಿ. ಪ್ರಕರಣದಲ್ಲಿ ರಮೇಶ್ ಜಾರಕಿಹೊಳಿ ಪಾತ್ರ ಇಲ್ಲವೆಂದು ಸೆಷನ್ಸ್ ಕೋರ್ಟ್ಗೆ ವರದಿ ಸಲ್ಲಿಸಲು ಎಸ್ಐಟಿ ಮುಂದಾಗಿದೆ. ವರದಿ ಸಲ್ಲಿಸಲು ಎಸ್ಐಟಿಗೆ ಹೈಕೋರ್ಟ್ ಸಹ ಸೂಚನೆ ನೀಡಿದೆ. ಇದಕ್ಕೆ ತಾವು ಅಸಮ್ಮತಿ ಸೂಚಿಸುವುದಾಗಿ ಬಾಧಿತ ಯುವತಿ ಸುಪ್ರೀಂ ಕೋರ್ಟ್ಗೆ ಅಲವತ್ತುಕೊಂಡಿದ್ದರು. ಸಂತ್ರಸ್ತ ಯುವತಿಯ ಮನವಿಯನ್ನು ಪುರಸ್ಕರಿಸಿ, ಎಸ್ಐಟಿ ವರದಿ ಸಲ್ಲಿಕೆಗೆ ಸುಪ್ರೀಂ ಕೋರ್ಟ್ ಇದೀಗ ತಡೆಯಾಜ್ಞೆ ನೀಡಿದೆ.
ಎಸ್ಐಟಿ ರಚನೆ ಸರಿಯಿದೆಯೇ ಎಂಬುದನ್ನ ಮೊದಲು ಖಾತರಿ ಪಡಿಸಿಕೊಳ್ಳಿ: ಸುಪ್ರೀಂ ಕೋರ್ಟ್
ಈ ಮಧ್ಯೆ ಎಸ್ಐಟಿ ರಚನೆ ಸರಿಯಿದೆಯೇ ಎಂದು ಖಾತರಿ ಪಡಿಸಿಕೊಳ್ಳುವಂತೆ ಕರ್ನಾಟಕ ಹೈಕೋರ್ಟ್ಗೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ಎಸ್ಐಟಿ ರಚನೆ ಬಗ್ಗೆ ಹೈಕೋರ್ಟ್ ತೀರ್ಮಾನಿಸಿದ ಬಳಿಕವಷ್ಟೇ ಸೆಷನ್ಸ್ ಕೋರ್ಟ್ನಲ್ಲಿ ಸಿಡಿ ಬಹಿರಂಗ ಪ್ರಕರಣದ ವಿಚಾರಣೆ ನಡೆಯಲಿದೆ. ಸಿ.ಡಿ. ಪ್ರಕರಣದ ವಿಚಾರಣೆ ಮಾರ್ಚ್ 9ರಂದು ಕರ್ನಾಟಕ ಹೈಕೋರ್ಟ್ನಲ್ಲಿ ನಡೆಯಲಿದೆ