ಬೈಲಹೊಂಗಲ: ತಾಲ್ಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಕಾರ್ಯಕಾರಿ ಸಮಿತಿ ರಚನೆ ಮಾಡಲಾಗಿದೆ. 2021 ರಿಂದ 2026 ರವರೆಗಿನ ಕಾರ್ಯಕಾರಿ ಸಮಿತಿಗೆ ಬೆಳಗಾವಿ ಜಿಲ್ಲಾ ಕಸಾಪ ಅಧ್ಯಕ್ಷೆ ಮಂಗಲಾ ಶ್ರೀಶೈಲ ಮೆಟಗುಡ್ಡ ಅನುಮೋದನೆ ನೀಡಿದರು.
ಬೈಲಹೊಂಗಲ ತಾಲ್ಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಬೂದಿಹಾಳ ಸರಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕರಾದ ಎನ್.ಆರ್ ಠಕ್ಕಾಯಿ, ಗೌರವ ಕಾರ್ಯದರ್ಶಿಗಳಾಗಿ ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾದ ಪ್ರಕಾಶ ಮೆಳವಂಕಿ ಹಾಗೂ ಮದನಬಾವಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿಯರಾದ ಮಂಜುಳಾ ಶೆಟ್ಟರ, ಗೌರವ ಕೋಶಾಧ್ಯಕ್ಷರಾಗಿ ಉದ್ಯಮಿ ಮಹೇಶ ಕೋಟಗಿ, ಪರಿಶಿಷ್ಟ ಜಾತಿ ಪ್ರತಿನಿಧಿಗಳಾಗಿ ಬೇವಿನಕೊಪ್ಪ ಸರಕಾರಿ ಪ್ರೌಢಶಾಲೆಯ ಶಿಕ್ಷಕರಾದ ರಾಮಕೃಷ್ಣ ಹೋಟಕರ ಹಾಗೂ ದೊಡವಾಡದ ನಿವೃತ್ತ ಶಿಕ್ಷಕ, ಸಮಾಜ ಸೇವಕರಾದ ಗಿರಿಮಲ್ಲಪ್ಪ ಬೆಳವಡಿ, ಪರಿಶಿಷ್ಟ ಪಂಗಡ ಪ್ರತಿನಿಧಿಗಳಾಗಿ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿಗಳಾದ ಭೀಮಪ್ಪ ಕಸಾಳೆ, ಮಹಿಳಾ ಪ್ರತಿನಿಧಿಗಳಾಗಿ ಖ್ಯಾತ ಪ್ರವಚನಕಾರ್ತಿ ಪ್ರೇಮಾ ಅಂಗಡಿ ಹಾಗೂ ಕವಯಿತ್ರಿ ಶಶಿಕಲಾ ಯಲಿಗಾರ, ಸಂಘ ಸಂಸ್ಥೆಗಳ ಪ್ರತಿನಿಧಿಗಳಾಗಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕಾ ಅಧ್ಯಕ್ಷರಾದ ಶಿವಾನಂದ ಕುಡಸೋಮಣ್ಣವರ, ತಾಲ್ಲೂಕು ಶಿಕ್ಷಣಾಧಿಕಾರಿಗಳಾದ ಅಪ್ಪಣ್ಣ.ಎನ್ ಪ್ಯಾಟಿ, ನಿಕಟಪೂರ್ವ ಅಧ್ಯಕ್ಷರಾದ ಗೌರಾದೇವಿ ತಾಳಿಕೋಟಿಮಠ ಮತ್ತು ಇತರೆ ಸದಸ್ಯರಾಗಿ ಅಮಟೂರಿನ ಶಿಕ್ಷಕರಾದ ಅನಿಲಕುಮಾರ ರಾಜಣ್ಣವರ, ಸಂಪಗಾವಿ ಆರ್.ಇ.ಎಸ್ ಪ್ರೌಢಶಾಲೆಯ ನಿಯೋಜಿತ ಮುಖ್ಯೋಪಾಧ್ಯಾಯರಾದ ಶ್ರೀಕಾಂತ ಉಳ್ಳೇಗಡ್ಡಿ, ಒಕ್ಕುಂದದ ದೂರದರ್ಶನ-ಆಕಾಶವಾಣಿ ಕಲಾವಿದರಾದ ಸಂತೋಷ ಹಡಪದ, ಜನಪದ ಕವಯಿತ್ರಿ ಲಕ್ಷ್ಮೀ ಮುಗಡ್ಲಿಮಠ, ಬೂದಿಹಾಳದ ನಾಟಕ ಕಲಾವಿದ, ನ್ಯಾಯವಾದಿಗಳಾದ ದುಂಡಪ್ಪ ಗರಗದ, ನೇಸರಗಿ ಕುವೆಂಪು ಮಾದರಿ ಶಾಲೆಯ ಶಿಕ್ಷಕರಾದ ಸಂತೋಷ ಪಾಟೀಲ ನೇಮಕಗೊಂಡಿದ್ದಾರೆ.
ಪಟ್ಟಣದಲ್ಲಿ ಇತ್ತೀಚೆಗೆ ನಡೆದ ಪರಿಷತ್ತಿನ ನೂತನ ಪದಾಧಿಕಾರಿಗಳ ಅಭಿನಂದನಾ ಕಾರ್ಯಕ್ರಮದಲ್ಲಿ ಬೆಳಗಾವಿ ಜಿಲ್ಲಾ ಕಸಾಪ ಅಧ್ಯಕ್ಷರಾದ ಮಂಗಳಾ ಮೆಟಗುಡ್ಡ ಮಾತನಾಡಿ ಎಲ್ಲರೂ ತನು ಮನ ಧನದಿಂದ ಕನ್ನಡದ ಸೇವೆಯನ್ನು ಮಾಡುವಂತೆ ಕರೆ ಕೊಟ್ಟರು. ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಕನ್ನಡ ಭವನಗಳನ್ನು ನಿರ್ಮಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು. ಖ್ಯಾತ ಚಲನಚಿತ್ರ ನಟ-ನಿರ್ಮಾಪಕರಾದ ಶಿವರಂಜನ ಬೋಳಣ್ಣವರ ನೂತನ ಕಾರ್ಯಕಾರಿ ಸಮಿತಿ ಸದಸ್ಯರಿಗೆ ಶುಭ ಕೋರಿ ಮಾತನಾಡಿ ತಾಲ್ಲೂಕಿನಲ್ಲಿ ಸುಸಜ್ಜಿತ ಕನ್ನಡ ಭವನ ನಿರ್ಮಾಣಕ್ಕಾಗಿ ಅವಶ್ಯವಿರುವ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಪ್ರತಿಷ್ಠಿತ ಜಿ.ನಾರಾಯಣಸ್ವಾಮಿ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತರಾದ ಈಶ್ವರ ಹೋಟಿ ಮಾತನಾಡಿ ಕಾರ್ಯಕಾರಿ ಸಮಿತಿಯಲ್ಲಿ ಎಲ್ಲರೂ ಅತ್ಯಂತ ಕ್ರಿಯಾಶೀಲರಾಗಿದ್ದು ಉತ್ತಮ ತಂಡವಾಗಿ ಕಾರ್ಯನಿರ್ವಹಿಸುವಂತೆ ಸಲಹೆ ನೀಡಿದರು. ಪರಿಷತ್ತಿನಿಂದ ತಾಲ್ಲೂಕಿನಲ್ಲಿ ವಿನೂತನ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿ, ಕನ್ನಡದ ಕಂಪು ಎಲ್ಲೆಡೆ ಪಸರಿಸಲಿ ಎಂದು ಅಭಿಪ್ರಾಯಪಟ್ಟರು.
ಖ್ಯಾತ ಆಕಾಶವಾಣಿ-ದೂರದರ್ಶನ ಕಲಾವಿದರಾದ ಸಿ.ಕೆ ಮೆಕ್ಕೇದ ಮಾತನಾಡಿ ಪರಿಷತ್ತಿನಿಂದ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕನ್ನಡ ಸಾಹಿತ್ಯ, ಸಂಸ್ಕೃತಿ, ಪರಂಪರೆಯನ್ನು ಇನ್ನಷ್ಟೂ ಶ್ರೀಮಂತಗೊಳಿಸುವ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸೋಣ ಎಂದು ಹೇಳಿದರು. ಕೇಂದ್ರ ಬಸವ ಸಮಿತಿ ಕಾರ್ಯಕಾರಿ ಸಮಿತಿ ಸದಸ್ಯ, ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಮೋಹನ ಬಸನಗೌಡ ಪಾಟೀಲ ಮಾತನಾಡಿ ಬೈಲಹೊಂಗಲ ತಾಲ್ಲೂಕಿನಲ್ಲಿ ಕಸಾಪ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸುವ ಕಾರ್ಯವನ್ನು ಮಾಡಬೇಕು ಎಂದರು. ಪತ್ರಕರ್ತ ಸಂಘದ ಅಧ್ಯಕ್ಷರಾದ ಮಹಾಂತೇಶ ತುರಮರಿ ಮಾತನಾಡಿ ಪರಿಷತ್ತಿನ ಎಲ್ಲ ಕಾರ್ಯಕ್ರಮಗಳಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದರು.
ಪರಿಷತ್ತಿನ ನೂತನ ಅಧ್ಯಕ್ಷ ಎನ್.ಆರ್ ಠಕ್ಕಾಯಿ ಮಾತನಾಡಿ ಕಾರ್ಯಕ್ರಮಗಳ ಕ್ರಿಯಾಯೋಜನೆಯನ್ನು ತಯಾರಿಸಿಕೊಂಡು ಕನ್ನಡವನ್ನು ಕಟ್ಟಿ ಬೆಳೆಸುವ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು. ತಾಲ್ಲೂಕಿನಲ್ಲಿ ಎಲೆ ಮರೆ ಕಾಯಿಯಂತೆ ಅಡಗಿದ ಸಾಹಿತ್ಯ ಪ್ರತಿಭೆಗಳನ್ನು ಗುರುತಿಸಿ ಸೂಕ್ತ ವೇದಿಕೆ ನೀಡಿ ಪ್ರೋತ್ಸಾಹಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ಕೋಶಾಧ್ಯಕ್ಷರಾದ ಎಸ್.ಡಿ ಗಂಗಣ್ಣವರ, ಬೈಲಹೊಂಗಲ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷರಾದ ಬಿ. ಕೆ. ತಲ್ಲೂರ, ದೇಶನೂರಿನ ಶ್ರೀ ಸಿದ್ದಲಿಂಗೇಶ್ವರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಎಂ.ಡಿ ನಂದೆನ್ನವರ ಉಪಸ್ಥಿತರಿದ್ದರು.
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕಾರ್ಯಕಾರಿ ಸಮಿತಿ ಸದಸ್ಯರಾದ ಮೀನಾಕ್ಷಿ ಕುಡಸೋಮಣ್ಣವರ ಅವರು ನೀಡಿದ ಪ್ರೊ. ಎಂ.ಎ ಸೇತುರಾವ್ ಸಂಪಾದಿಸಿರುವ ವೈಜ್ಞಾನಿಕ ಮನೋಭಾವ ಎಂಬ ಗ್ರಂಥವನ್ನು ಎಲ್ಲ ಪದಾಧಿಕಾರಿಗಳಿಗೆ ಸಮರ್ಪಿಸಿ ಗೌರವಿಸಲಾಯಿತು. ರಾಜು ಹಕ್ಕಿ ಕಾರ್ಯಕ್ರಮ ನಿರೂಪಿಸಿದರು. ಆರ್.ಎಂ ಹೋಟಕರ ಸ್ವಾಗತಿಸಿದರು. ಅಶೋಕ ಶೀಲವಂತರ ವಂದಿಸಿದರು.