ಚೌಡಕಿ ಪದಕ್ಕೆ ಆಧುನಿಕ ಸ್ಪರ್ಶ ನೀಡಿದ ಕಲಾವಿದೆ ; ಶಿಲ್ಪಾ ಮುಡಬಿ

ಉಮೇಶ ಗೌರಿ (ಯರಡಾಲ)

ಸುದ್ದಿ ಸದ್ದು ನ್ಯೂಸ್

ಬಸವರಾಜ ಶಂ ಚಿನಗುಡಿ. ಕಿತ್ತೂರು

ಹುಟ್ಟಿ ಬಂದೆ ಯಲ್ಲಮ್ಮನಾಗಿ ನಿನ್ನ ಮದವಿ ಮಾಡಿ ಕೊಟ್ಟಾರವ್ವ ಜಮದಗ್ನಿಗೆ…. ಈ ತರಹದ ಜನಪದ ಹಾಡುಗಳು ನಮ್ಮಲ್ಲಿ ಕ್ರಮೇಣ ಕಡಿಮೆಯಾಗುತ್ತಿವೆ. ಇಂತದ್ದರಲ್ಲಿ ‘ಅರ್ಬನ್ ಫೋಕ್ ಪ್ರಾಜೆಕ್ಟ್’ ಹುಟ್ಟು ಹಾಕಿ ಉತ್ತರ ಕರ್ನಾಟಕದ ಅಳಿವಿನಂಚಿಗೆ ಜಾರುತ್ತಿರುವ ಜಾನಪದ ಸಾಹಿತ್ಯ ಹಾಡುಗಳಿಗೆ ಅಧುನಿಕ ಸಂಗೀತದ ಟಚ್ ಕೊಟ್ಟು ಕನ್ನಡದಲ್ಲೇ ಹಾಡಿ ಇಂಗ್ಲಿಷ್ ತರ್ಜುಮೆಗೊಳಿಸುವ ಮೂಲಕ ಜನಪದ ಮvತ್ತು ಅದರ ಅರ್ಥವನ್ನು ವಿಶ್ವಮಟ್ಟದಲ್ಲಿ ಕನ್ನಡವನ್ನು ಗುರುತಿಸುವಂತೆ ಮಾಡಿದ್ದಾರೆ. ಜೊತೆಗೆ ಚೌಡಿಕೆಯಂತ ವಾದ್ಯಕ್ಕೂ ಅಧುನಿಕ ಟಚ್ ಕೊಟ್ಟು ಸಹಸ್ರಾರು ಕಲಾವಿದರ ಮತ್ತು ಸಂಗೀತಾಸಕ್ತರ ಗಮನ ಸೆಳೆದಿದ್ದು ಈ ಶಿಲ್ಪಾ ಮುಡಬಿ ಎಂಬ ಗಾಯಕಿ.

ಪ್ರಸ್ತುತ ಸಮಯದಲ್ಲಿ ಹಲವಾರು ಪ್ರತಿಭೆಗಳು ಸಾಮಾಜಿಕ ಜಾಲತಾಣದಲ್ಲಿ ಗುರುತಿಸಿಕೊಂಡಿದ್ದಾರೆ. ಈ ಟೈಮಲ್ಲಿ ನನ್ನನ್ನು ತೀವ್ರವಾಗಿ ಕಾಡಿದ್ದು ಇದೇ ಶಿಲ್ಪಾ ಮುಡಬಿ ಎಂಬ ಅತ್ಯದ್ಭುತ ಪ್ರಖ್ಯಾತ ಗಾಯಕಿ. ಎಣ್ಣಿ ಹಚ್ಚಲು ಬನ್ನಿರೇ, ಬಾಗಿಲ ಮುಂದ ರಂಗೋಲಿ, ಇಟ್ಟರಕ್ಕತಂಗ್ಯೆರ ಕೂಡೇ ಗುರು ಲಿಂಗ ಜಂಗಮಗ ಹಾಡಿ ಮುಂತಾದ ಸುಮಾರು ಹತ್ತು ಹದಿನೈದು ಹಾಡುಗಳು ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದ್ದವು. 
ಮೂಲತಃ ಬೀದರ್‌ನ ಮುಡಬಿ ಗ್ರಾಮದ ಶಿಲ್ಪಾ (ಮುಡಬಿ) ಕೊತ್ತಕೋಟ ಹುಟ್ಟಿ ಬೆಳೆದದ್ದು ಬೆಂಗಳೂರು ಎಂಬ ಮಾಯಾನಗರಿಯಲ್ಲಿ. ಓದಿದ್ದು ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ. ಕ್ಯಾಮೆರಾ, ವಿಡಿಯೋಗ್ರಾಫಿ ಸೆಳೆತ ಇವರನ್ನು ಆಸ್ಟ್ರೇಲಿಯಾದ ಸಿಡ್ನಿಯಲ್ಲಿನ ಯುನಿವರ್ಸಿಟಿ ಆಫ್ ಟೆಕ್ನಾಲಜಿಯಲ್ಲಿ ಮಾಸ್ಟರ್ ಇನ್ ಫಿಲ್ಮ್ ಮೇಕಿಂಗ್ ಪೂರ್ಣಗೊಳಿಸುವಂತೆ ಮಾಡಿತು.

ಬೆಂಗಳೂರಿಗೆ ವಾಪಸ್ಸಾದ ನಂತರ ಕಿರುಚಿತ್ರಗಳ ಒಡನಾಟ ಹೊಂದಿದ ಇವರು ಹಲವು ಡಾಕ್ಯುಮೆಂಟರಿ ಕಿರುಚಿತ್ರಗಳನ್ನು ನಿರ್ಮಿಸಿ ಹಣ, ಹೆಸರು ಮಾಡಿದರೂ ಇದಾವುದರಿಂದಲೂ ಸಮಾಧಾನ ಹೊಂದದ ಇವರು ಪಾಂಡಿಚೇರಿಯ ಇಂಡಿಯನ್ ನಾಸ್ಟ್ರಂ ಥಿಯೇಟರ್‌ನ ಕುಮಾರನ್ ವಲವನ್ ಹತ್ತಿರ ಕೆಲ ಕಾಲದವರೆಗೆ ಕೆಲಸ ಮಾಡಿದರು ಅಲ್ಲಿಂದ ಶುರುವಾದದ್ದು ಈ ರಂಗಭೂಮಿ ಹುಚ್ಚು.
ಸವದತ್ತಿ ಯಲ್ಲಮ್ಮನಾಟ ಡಾಕ್ಯುಮೆಂಟರಿ: ರಂಗನಾಟಕದ ಒಲವಿನಿಂದಾಗಿ ನಾಟಕದ ಕಥಾವಸ್ತುವಿಗೆ ಹುಡುಕಾಡಿದಾಗ ಥಟ್ಟನೇ ಇವರ ಗಮನ ಸೆಳೆದಿದ್ದು ಹುಟ್ಟೂರಿನಲ್ಲಿ ಮೂರು ವರ್ಷಕ್ಕೊಮ್ಮೆ ನಡೆಯುವ ಯಲ್ಲಮ್ಮನಾಟ ಜಾತ್ರೆ. ತಂದೆ ಉನ್ನತ ಅಧಿಕಾರಿಯಾದ್ದರಿಂದಾಗಿ ವರ್ಷಕ್ಕೆ ಒಂದು ಸಲವೋ ಅಥವಾ ಎರಡು ವರ್ಷಕ್ಕೆ ಒಮ್ಮೆಯೋ ತಂದೆಯ ಹುಟ್ಟೂರು ಬೀದರಗೆ ಬಾಲ್ಯದಲ್ಲಿ ಬಂದಾಗ ಅಲ್ಲಿ ನಡೆಯವ ಸವದತ್ತಿ ಯಲ್ಲಮ್ಮನ ಜಾತ್ರೆ ಇವರಿಗೆ ಅಚ್ಚರಿ ಮೂಡಿಸಿತು. ಅಜ್ಜಿ ಗುಂಡಮ್ಮ ಮುಡಬಿ ಕೈ ಹಿಡಿದು ಸವದತ್ತಿ ಯಲ್ಲಮ್ಮನಾಟ ನೋಡಿದ ಬಾಲ್ಯದ ಚಿತ್ರ ನೆನಪಾಯಿತು. ಹೀಗಾಗಿ ಸವದತ್ತಿ ಯಲ್ಲಮ್ಮನಾಟದ ಪ್ರಯೋಗಕ್ಕೆ ತಂಡ ಸಿದ್ದಗೊಳಿಸಿ ಎರಡು ತಿಂಗಳ ಕಾಲ ಸಂಶೋಧನೆ ನಡೆಸಿ ಯಲ್ಲಮ್ಮನ ಆಲೋಚನೆಯನ್ನು ರಂಗಕ್ಕಿಳಿಸಿದರು. ಪೌರಾಣಿಕ ಹಿನ್ನಲೆಯ ಈ ಕಥಾವಸ್ತು ಆಯ್ಕೆಗೆ ಈ ಕಥೆಯಲ್ಲಿ ಬರುವ ಮಾತಂಗಿ ಪಾತ್ರವೂ ಕಾರಣ ಎಂದು ಅವರೇ ಹೇಳುತ್ತಾರೆ.

               ಸಹ ಗಾಯಕರೊಂದಿಗೆ ಶಿಲ್ಪಾ ಮುಡಬಿ

ಅರ್ಬನ್ ಫೋಕ್ ಪ್ರಾಜೆಕ್ಟ್ ಹುಟ್ಟಿನ ಹಿನ್ನೆಲೆ: ಯಲ್ಲಮ್ಮನಾಟ ಕಥೆಯ ಹೆಣ್ಣಿನ ತುಮುಲಗಳು, ಆ ದೇವಿ ಆರಾಧಕರ ಆಚಾರ–ವಿಚಾರ, ಅವರ ಕಲೆಗಳು, ಜೀವನಶೈಲಿ… ಇವೆಲ್ಲವೂ ನಗರವೆಂಬ ಕಾಂಕ್ರೀಟು ಕಾಡಲ್ಲಿ ಬೆಳೆದ ಶಿಲ್ಪಾ ಅವರನ್ನು ತುಂಬ ಕಾಡಿದವು. ಈ ಕಾಣದ ಕಥೆಗಳನ್ನು, ಜನಪದ ಕಲೆಯನ್ನು, ಅದರಲ್ಲಿನ ಜೀವನ ಸಾರವನ್ನು ನಗರದ ಮಂದಿಗೆ ಮುಟ್ಟಿಸಬೇಕು ಎಂಬ ಹಂಬಲವೂ ಹುಟ್ಟಿಕೊಂಡಿತು. ಇದೇ ಈ ‘ಅರ್ಬನ್ ಫೋಕ್ ಪ್ರಾಜೆಕ್ಟ್’ ಹುಟ್ಟಿಗೆ ಕಾರಣ. ಹಳ್ಳಿ ಪರಿಸರ, ಆಚಾರ-ವಿಚಾರ, ಸಂಸ್ಕೃತಿ, ಹಾಡು-ಪಾಡು, ಆಹಾರ ಆ ಸಂತಸ ಬಾಂಧವ್ಯ ಇವುಗಳು ನಗರ ವಾಸಿಗಳಲ್ಲಿ ಯಾಕಿಲ್ಲ ಅನ್ನೋದು ಶಿಲ್ಪಾ ಅವರನ್ನು ಕಾಡಿತು.
ಆದಿತ್ಯ ಕೊತ್ತಕೋಟ ಎಂಬ ಆಸಕ್ತ ಜಾನಪದ ಸಂಗಾತಿ ಶಿಲ್ಪಾ ಅವರ ಈ ಪಯಣದಲ್ಲಿ ಜೊತೆಯಾದರು. ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟು ಇಬ್ಬರೂ ಈ ಪಯಣದಲ್ಲಿ ನಡೆಯುತ್ತ ನಡೆಯುತ್ತ ಹೊಸ ಕನಸುಗಳ ರೆಕ್ಕೆ ಕಟ್ಟಿಕೊಂಡು ಬಂದಿದ್ದು ಇದೀಗ ಕಲ್ಬುರ್ಗಿಯಲ್ಲಿ ನೆಲೆಯೂರಿದ್ದಾರೆ.
ಚೌಡಿಕಿಗೆ ಪದಗಳಿಗೆ ಅಧುನಿಕ ಟಚ್: ತವರೂರ ನೆನಪಾಗಿ ಬಂದೇ ತಾಯಿ ನೆನಪಾಗಿ ಕಣ್ಣೀರು ತಂದೆ….. ಈ ಹಾಡು ಬಹುತೇಕ ಬಸ್ ನಿಲ್ದಾಣದಲ್ಲಿ ರೈಲ್ವೆ ನಿಲ್ದಾಣಗಳಲ್ಲಿ ಭಿಕ್ಷುಕರ ಬಾಯಲ್ಲಿ ಕೇಳಿದ್ದು ನೆನಪಾಯ್ತು. ಇದೇ ಹಾಡನ್ನೇ ಬಹುತೇಕ ಕಲಾವಿದರು ಟ್ಯೂನ್ ಬದಲಾಯಿಸಿ ಹಾಡಿದ್ದೂ ಉಂಟು. ಸವದತ್ತಿ ಶ್ರೀ ಕ್ಷೇತ್ರ ಯಲ್ಲಮ್ಮನ ಗುಡ್ಡದಲ್ಲಿ ಈ ಚೌಡಿಕೆ ಧಾರಾಳವಾಗಿ ಕಾಣಸಿಗುತ್ತದೆ. ದೇವಿಯ ಹೆಸರಲ್ಲಿ ತೃತೀಯ ಲಿಂಗಿಗಳು ಜೋಗಪ್ಪ ಜೋಗತೆವ್ವ ಹೆಸರಿನಿಂದ ಚೌಡಿಕಿ ನುಡಿಸುತ್ತ ಹಾಡುವುದು ನಮಗೆ ತೀರ ಸಾಮಾನ್ಯವಾದರೂ ಶಿಲ್ಪಾ ಎಂಬ ಉನ್ನತ ವಿದ್ಯಾವಂತ ಯುವತಿ,ಸುಂದರಿ ಅರಳು ಹುರಿದಂತೆ ಸ್ಪುಟವಾಗಿ ಇಂಗ್ಲೀಷ ಮಾತನಾಡುತ್ತ ಈ ಚೌಡಿಕೆ ಹಿಡಿದು ಅದೇ ಹಾಡುಗಳನ್ನು ಹಾಡುತ್ತ ಅದನ್ನು ಇಂಗ್ಲಿಷ್ ಗೆ ಭಾಷಾಂತರ ಮಾಡುವುದನ್ನು ಕಂಡಾಗ ವಾಹ್ ಅಂತನ್ನಸಿದ್ದಂತೂ ಸುಳ್ಳಲ್ಲ.
ಬೆಳಗಾವಿಯ ಕೊತನೂರಿನ ರಾಧಾಬಾಯಿ ಚೌಡಿಕೆ ನುಡಿಸುವುದರಲ್ಲಿ ನಿಸ್ಸೀಮರು. ಜಾನಪದ ಅಕಾಡೆಮಿ ಸದಸ್ಯರಾದ ಮಂಜಮ್ಮ ಜೋಗತಿ, ಆಕೆಯ ಸಹೋದರಿ ರಾಮಕ್ಕ ಈ ವಾದ್ಯ ನುಡಿಸುವುದನ್ನು ಬಲ್ಲವರಾದ್ದರಿಂದ ಇವರುಗಳಿಂದ ವಾದ್ಯ ನುಡಿಸುವ ಪರಿಯನ್ನು ಈಗೀಗ ಕಲಿಯುತ್ತಿರುವ ಇವರು ಅರ್ಬನ್ ಫೋಕ್ ಪ್ರಾಜೆಕ್ಟ್ ಮೂಲಕ ಇತ್ತೀಚೆಗೆ ಹತ್ತು ಸೆಶನ್ ಗಳಲ್ಲಿ ಉತ್ತರ ಕರ್ನಾಟಕದ ಬಹುತೇಕ ಜನಪದ ಹಾಡುಗಳಿಗೆ ದನಿಯಾಗಿದ್ದಾರೆ. ಇವರ ಈ ವಿಡಿಯೋಗಳು ಎರಡು ಲಕ್ಷ ವ್ಯೂವ್ ಪಡೆದಿದ್ದು ಜನಪದದ ಹಾಡುಗಳಿಗೆ ಅಧುನಿಕ ಸ್ಪರ್ಶ ನೀಡಿ ವಿಶ್ವವ್ಯಾಪಿ ಜನಪದ ವಿಸ್ತಾರವಾಗಲು ಪ್ರಯತ್ನಿಸುತ್ತಿದ್ದಾರೆ.

ಇನ್ಸಟಿಟ್ಯೂಶನ್ ಕನಸು: ಈ ತರಹದ ಹತ್ತು ಹಲವು ಜನಪದ ಸಂಬAಧಿ ಸಂಸ್ಕೃತಿ ಹಾಡುಗಳು ಉತ್ತರ ಕರ್ನಾಟಕದಲ್ಲಿ ಈಗಲೂ ಇದ್ದು ಹಿರಿ ತಲೆಮಾರಿನ ಅವರಿಂದ ಕೇಳಿ ತಿಳಿದು ಆ ಹಾಡುಗಳನ್ನು ಮುಂದಿನ ತಲೆಮಾರಿಗೂ ತಲುಪಿಸುವ ಮಹತ್ತರ ಕನಸಿನೊಂದಿಗೆ ಪಟ್ಟಣ ಬಿಟ್ಟು ಕಲ್ಬುರ್ಗಿ ಯಲ್ಲಿ ಮನೆ ಮಾಡಿರುವ ಶಿಲ್ಪಾ ದಂಪತಿಗಳಿಗೆ ಈ ಭಾಗದ ಆಸಕ್ತ ಯುವಕರಿಗೆ ಈ ಸಂಸ್ಕೃತಿ ಮುಂದುವರೆಸಿಕೊAಡು ಹೋಗಲು ಪ್ರೇರಣೆ ನೀಡಿ ಈ ಭಾಗದ ಹಲವಾರು ಸಂಗೀತ ಉಪಕರಣಗಳನ್ನು ವಿಶ್ವಾದ್ಯಂತ ಪರಿಚಯಿಸುವ ಕನಸು ಹೊತ್ತು ಬಂದಿರುವ ಶಿಲ್ಪಾ ಮುಡಬಿ ಅವರ ಎಲ್ಲ ಕನಸುಗಳು ಯೋಜನೆಗಳು ಫಲಪ್ರದವಾಗಲಿ ಎಂದು ಆಶಿಸುವೆ.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";