ಬೆಂಗಳೂರು: ಭವಿಷ್ಯದಲ್ಲಿ ಭಗವಾಧ್ವಜವೇ ರಾಷ್ಟ್ರ ಧ್ವಜ ಆಗಬಹುದು ಎಂದು ಸಚಿವ ಕೆ. ಎಸ್. ಈಶ್ವರಪ್ಪ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಕೇಸರಿ ಶಾಲನ್ನು ಜಗತ್ತಿನಲ್ಲಿ ಎಲ್ಲಿ ಬೇಕಾದ್ರೂ ಹಾರಿಸ್ತೇವೆ. ಈ ಹಿಂದೆ ರಾಮಚಂದ್ರ, ಮಾರುತಿ ರಥದ ಮೇಲೆ ಕೇಸರಿ ಧ್ವಜ ಇತ್ತು. ಈಗ ರಾಷ್ಟ್ರ ಧ್ವಜ ಫಿಕ್ಸ್ ಆಗಿದೆ. ರಾಷ್ಟ್ರ ಧ್ವಜಕ್ಕೆ ಅನ್ನ ತಿನ್ನುವ ಪ್ರತಿಯೊಬ್ಬನೂ ಗೌರವ ಕೊಡಬೇಕು ಎಂದರು.
ಇವತ್ತಲ್ಲ, ಯಾವತ್ತೋ ಒಂದು ದಿನ ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟುತ್ತೇವೆ ಅಂದಾಗ ನಗುತ್ತಿದ್ದರು. ಈಗ ಕಟ್ಟುತ್ತಿದ್ದೇವಲ್ಲಾ?ಹಾಗೆಯೇ ಇನ್ನು ನೂರು ವರ್ಷನೋ ಐನೂರು ವರ್ಷದ ನಂತರವೋ ಭಾಗವಾಧ್ವಜವೇ ರಾಷ್ಟ್ರ ಧ್ವಜ ಆಗಬಹುದು. ಆಗ ಆ ಧ್ವಜ ಎಲ್ಲಿ ಬೇಕಾದರೂ ಹಾರಬಹುದು. ಈಗ ಮಾತ್ರ ನಾವೆಲ್ಲರೂ ತ್ರಿವರ್ಣ ಧ್ವಜವನ್ನು ರಾಷ್ಟ್ರ ಧ್ವಜ ಎಂದು ಒಪ್ಪಿಕೊಂಡಿದ್ದೇವೆ. ಯಾರು ಆ ಧ್ವಜಕ್ಕೆ ಗೌರವ ಕೊಡುವುದಿಲ್ಲವೋ ಅವನು ರಾಷ್ಟ್ರ ದ್ರೋಹಿ ಆಗ್ತಾನೆ ಎಂದಿದ್ದಾರೆ ಈಶ್ವರಪ್ಪ.
ಲೋಡ್‌ಗಟ್ಟಲೆ ಕೇಸರಿ ಶಾಲ್‌ಗಳನ್ನು ಬಿಜೆಪಿಯವರು ಕಳಿಸಿದ್ದಾರೆ ಎಂಬ ಡಿ. ಕೆ. ಶಿವಕುಮಾರ್ ಆರೋಪ ವಿಚಾರವಾಗಿಯೂ ಪ್ರತಿಕ್ರಿಯೆ ನೀಡಿದ ಸಚಿವ ಕೆ. ಎಸ್. ಈಶ್ವರಪ್ಪ, ಡಿಕೆಶಿ ಅವರಿಗೆ ಬಂಡೆ ಒಡೆದು ಅಭ್ಯಾಸವಾಗಿದೆ. ನನಗೆ ಬಂಡೆ ಒಡೆದು ಅಭ್ಯಾಸ ಇಲ್ಲ. ಕೇಸರಿ ಶಾಲು ಕೊಟ್ಟರೆ ಏನು ತಪ್ಪು ಎಂದು ಪ್ರಶ್ನಿಸಿದರು.
ಎಷ್ಟು ಲೋಡ್ ಕೇಸರಿ ಶಾಲು ಕಳಿಸಿದ್ದೇವೆ ಎಂಬ ಲೆಕ್ಕ ಡಿಕೆಶಿ ಬಳಿ ಇರಬಹುದು. ಆದರೆ ಕೇಸರಿ ಶಾಲು ಹಂಚಿರುವುದರಲ್ಲಿ ತಪ್ಪೇನಿಲ್ಲ. ಭಾರತದಲ್ಲಿ ಕೇಸರಿ ಧ್ವಜ ಸ್ವಾತಂತ್ರ್ಯ ಪೂರ್ವದಲ್ಲಿ ಸಾವಿರಾರು ಜನರಿಗೆ ಸ್ಪೂರ್ತಿ ಕೊಟ್ಟಿತ್ತು. ಅದು ಧರ್ಮದ ಸಂಕೇತ. ಕೇಸರಿ ಅಂದ ತಕ್ಷಣ ಸಿದ್ದರಾಮಯ್ಯ ಹಾಗೂ ಡಿಕೆಶಿಗೆ ತಳಮಳ ಆಗಿದೆ. ಸಿದ್ದರಾಮಯ್ಯ ಕೇಸರಿ ಪೇಟ ಹಾಕಲು ಹೋದಾಗ ಅದನ್ನು ಕಿತ್ತು ಬಿಸಾಕಿದ್ದರು. ಅವರಿಗೆ ಟಿಪ್ಪು ಸುಲ್ತಾನ್ ಪೇಟವೇ ಬೇಕು. ಡಿಕೆಶಿಗೂ ಟಿಪ್ಪು ಪೇಟವೇ ಬೇಕು ಎಂದು ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಕ್ರಿಶ್ಚಿಯನ್ನರ ಎಷ್ಟು ಶಾಲೆಗಳಲ್ಲಿ ಯೂನಿಫಾರ್ಮ್ ಬಿಟ್ಟು ಹಿಜಾಬ್ ಹಾಕಿಕೊಂಡು ಹೋಗಲು ಅವಕಾಶ ಇದೆ? ಕ್ರಿಶ್ಚಿಯನ್ ಶಾಲೆಯಲ್ಲಿ ಎಷ್ಟು ಜನರಿಗೆ ಈ ರೀತಿ ಹೋಗಲು ಅವಕಾಶ ಇದೆ ಹೇಳಿ? ಡಿ. ಕೆ. ಶಿವಕುಮಾರ್ ಈ ಬಗ್ಗೆ ಹೇಳಲಿ. ಹೀಗಾಗಿ ಕೇಸರಿ ಶಾಲು ಹಂಚಲು ನನಗೆ ಸ್ವಾತಂತ್ರ್ಯ ಇದೆ. ಇದಕ್ಕೆ ಡಿಕೆಶಿಯವರ ಅನುಮತಿ ಬೇಡ ಎಂದರು.
ಕರ್ನಾಟಕದಲ್ಲಿ ಎಲ್ಲಾ ಮುಸ್ಲಿಂ ಹುಡುಗಿಯರಿಗೆ ಹಿಜಾಬ್ ಧರಿಸುವ ಸ್ವಾತಂತ್ರ್ಯ ಇದೆ. ಶಾಲೆಯಲ್ಲಿ ಮಾತ್ರ ಶಿಸ್ತು ಪಾಲನೆ ಮಾಡಿ. ಮುಸ್ಲಿಂ ಶಾಸಕಿ ಖನಿಝಾ ಪಾತಿಮಾ ಹಿಜಾಬ್ ಧರಿಸಿ ವಿಧಾನಸೌಧಕ್ಕೆ ಬಂದರೆ ಬಂಧನ ಮಾಡುತ್ತೀವಾ? ನಿಮಗೆ ಹೇಗೆ ವಿಧಾನಸೌಧಕ್ಕೆ ಹಿಜಾಬ್ ಹಾಕಿಕೊಂಡು ಹೋಗಲು ಅವಕಾಶ ಇದೆಯೋ, ಹಾಗೆಯೇ ನಮಗೂ ಕೇಸರಿ ಶಾಲು ಹಾಕಲು ಸ್ವಾತಂತ್ರ್ಯ ಇದೆ ಎಂದರು.
ಹಿಂದೂ ಅಥವಾ ಮುಸ್ಲಿಂ ಯಾರೇ ಇರಲಿ, ಶಾಲೆಯೊಳಗೆ ಸಮವಸ್ತ್ರ ಹಾಕಿಯೇ ಹೋಗಬೇಕು. ಕೇಸರಿ ಶಾಲು ಹಂಚೋದು ಕೇವಲ ಬಿಜೆಪಿಯವರು ಮಾತ್ರಾನಾ? ನೇರವಾಗಿ ಕೇಳ್ತೀನಿ, ಇವರು ಯಾರು ಕೇಳೋರು? ಶಾಲೆಗೆ ಹೋಗುವ ಸಂದರ್ಭದಲ್ಲಿ ಯೂನಿಫಾರ್ಮ್ ಇರಬೇಕು. ಕೇಸರಿ ಶಾಲು ಹಾಗೂ ಹಿಜಾಬ್ ಯಾವುದೇ ಇರಬಹುದು, ಯೂನಿಫಾರ್ಮ್ ಇರೋ ಶಾಲೆಗೆ ಯಾವುದನ್ನೂ ಹಾಕಿಕೊಂಡು ಹೋಗಬಾರದು ಎಂದರು.