“ತನ್ನ ಮನೆಯೊಳಗಣ ಕಿಚ್ಚು ತನ್ನ ಮನೆಯ ಸುಡುವುದಲ್ಲದೇ ನೆರೆ ಮನೆಯ ಸುಡುವುದೇ”?
ಮಧ್ಯಕಾಲೀನ ಸಾಮಾಜಿಕ ವ್ಯವಸ್ಥೆಯತ್ತ ಸಾಗುತ್ತಿರುವ ಹಾಗೆ ಅನಿಸುತ್ತಿದೆ.ಜೀವನೋತ್ಸಾಹ ಕಡಿಮೆಯಾಗಿ ನಿರುತ್ಸಾಹ ಮೂಡಿ ಅದರ ಪರಿಣಾಮ ಅನವಶ್ಯಕ ಗಲಭೆಗಳಿಗೆ ಮನಸ್ಸು ಹಾತೊರೆಯುತ್ತಿದೆ ಎಂದೇನೋ ಅನುಭವವಾಗುತ್ತಿದೆ.ಯಾವುದೋ ಬಲವಾದ ಷಡ್ಯಂತ್ರ ನಮ್ಮನ್ನು ಹಿಡಿತದಲ್ಲಿ ಇಟ್ಟುಕೊಳ್ಳುವ ಪ್ರಯತ್ನದ ಭಾಗವಾಗಿ ಈ ವಾತಾವರಣವನ್ನು ಪರೋಕ್ಷವಾಗಿ ಸೃಷ್ಟಿ ಮಾಡುತ್ತಿರಬೇಕು ಎಂಬ ಅನುಮಾನವೂ ಕಾಡುತ್ತಿದೆ.ಅಥವಾ ಬದಲಾವಣೆಯ ಹೊಸ್ತಿಲಲ್ಲಿ ಭಾರತೀಯ ಸಮಾಜ ನಿಂತಿದೆಯೇ.?
ಧರ್ಮ ಎಂಬುದು ಒಂದು ಅಮಲು.ಕೇಸರೀಕರಣ ಇಸ್ಲಾಮೀಕರಣವಾಗುವತ್ತಾ.ಹಿಜಾಬ್ ವಿರುದ್ಧ ಕೇಸರಿ ಶಾಲು ವಿವಾದ.
ವಿಶ್ವ ಗುರು ಬಸವಣ್ಣ ,ಸಂತ ಶಿಶುನಾಳ ಶರೀಫ, ಭಕ್ತ ಕನಕದಾಸರು, ಪುರಂದರ ದಾಸರು, ರಾಷ್ಟ್ರಕವಿ ಕುವೆಂಪು ಇಂತಹ ಮಹಾನ್ ವ್ಯಕ್ತಿಗಳೆಲ್ಲ ಹುಟ್ಟಿದ್ದು ಎಲ್ಲಿ? ಇದೆ ನೆಲದಲ್ಲಿ ಅಲ್ಲವೇ.
ಮೈಮೇಲೆ ಸರಿಯಾಗಿ ಬಟ್ಟೆ ಹಾಕಿಕೊಳ್ಳಲು ಒತ್ತಾಯಿಸಬೇಕಾದ ಕಾಲಘಟ್ಟದಲ್ಲಿ ಹಿಜಾಬ್ ಅಂತೆ – ಕೇಸರಿ ಶಾಲು ಅಂತೆ.
ಧರ್ಮ ಎಂದರೆ ಏನು ಎಂದು ತಿಳಿಯದ ಅಸಾಮಾನ್ಯರು ಬಟ್ಟೆಗಾಗಿ – ಬಣ್ಣಕ್ಕಾಗಿ – ಪದಗಳ ಘೋಷಣೆಗಾಗಿ – ಬಾವುಟಗಳಿಗಾಗಿ ಹೊಡೆದಾಡಿ ಬಡಿದಾಡುತ್ತಿರುವರು.
ಬುರ್ಖಾ ಹಾಕ್ಕೊಂಡು ನೀವು ಹಿಂಸೆ ಅನುಭವಿಸಿ, ಹಾಗೆಯೇ ಕೇಸರಿ ಬುರ್ಖಾ ಹಾಕಿಕೊಂಡು ನೀವೂ ಹಿಂಸೆ ಅನುಭವಿಸಿ.
ಅಲ್ಲಿ ಮೊಬೈಲ್ ಇಂಟರ್ನೆಟ್ ಡಿಜಿಟಲೈಸೇಷನ್ ಐಟಿ- ಬಿಟಿ, ಇಲ್ಲಿ ನೋಡಿದರೆ ಮುಖ ಮುಚ್ಚುವ ಬಟ್ಟೆಗಾಗಿ ಹೊಡೆದಾಟ.
ವಿಶ್ವ ಗುರು ಬಸವಣ್ಣ, ಶಾಂತಿದಾತ ಗಾಂಧಿಜೀ, ಯುವಕರ ಆಶಾಕಿರಣ ವಿವೇಕಾನಂದರು, ಮುಕ್ತಿ ಮಾರ್ಗ ತೋರಿಸಿದ ಬುದ್ಧ, ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅಂತಹ ಮಹಾನ್ ವ್ಯಕ್ತಿಗಳ ಪ್ರತಿಮೆಗಳು ಇರುವುದಾದರು ಏಕೆ ಎಂದು ಪ್ರಶ್ನೆ ಕಾಡುವುದಿಲ್ಲವೇ.
ಈ ಅಸಮಾನತೆಯ, ಅಮಾನವೀಯ ಸಮಾಜದಲ್ಲಿ , ಈ ಅಸತ್ಯದ ಬದುಕಿನಲ್ಲಿ, ಈ ಮೌಡ್ಯದ ಸಮುದಾಯಗಳಲ್ಲಿ, ಆ ಆಡಂಬರದ ಜೀವನದಲ್ಲಿ,ಈ ಹಿಂಸಾತ್ಮಕ ನೆಲದಲ್ಲಿ ಇರುವುದು ಅವರಿಗೆ ಅವಮಾನ ಅಲ್ಲವೇ.
ಸುಭಾಷ್ ಭಗತ್ ಆಜಾದ್ ಶಿವಾಜಿ ತಿಲಕ್ ಪಟೇಲ್ ಟಿಪ್ಪು ಪೆರಿಯಾರ್ ನಾರಾಯಣ ಗುರು ಶಂಕರ ರಾಮನುಜ ಕಭೀರ ಕನಕ ಪುರಂದರ ಮುಂತಾದ ಎಲ್ಲರನ್ನೂ, ಅವರಿಗೆ ಶಿಲೆಯಾಗಿಯೂ ಇಲ್ಲಿ ನಿಲ್ಲುವುದು ಸಹನೀಯವಲ್ಲ ಎಂದು ಇಂದು ಅನಿಸುತ್ತಿದೆ.
ರಾಮ ಕೃಷ್ಣ ಗಣೇಶ ಶಿವ ಲಕ್ಷ್ಮೀ ಸರಸ್ವತಿ ಕಾಳಿ ಅಲ್ಲಾ ಜೀಸಸ್ ಆಂಜನೇಯನ ಇತ್ಯಾದಿಗಳ ಪ್ರತಿಮೆಗಳ ಜೊತೆಗೆ ಅಂಬಾನಿ ಅಧಾನಿ ಟಾಟಾ ಬಿರ್ಲಾ ಮಿತ್ತಲ್ ಹಿಂದೂಜಾ ಅಜೀಂ ಪ್ರೇಮ್ ಜಿ ನಾರಾಯಣ ಮೂರ್ತಿ ಮುಂತಾದರ ಪ್ರತಿಮೆಗಳನ್ನು ಸ್ಥಾಪಿಸಿ.
ಆಗ ಇದು ನಿಜವಾದ ಭಾರತವಾಗುತ್ತದೆ.ನಂಬಿಕೆಯ ದೇವರುಗಳು ನಮ್ಮನ್ನು ರಕ್ಷಿಸುತ್ತಾರೆ. ಶ್ರೀಮಂತ ಉದ್ಯಮಿಗಳು ನಮಗೆ ಜೀವನ ಕೊಡುತ್ತಾರೆ. ಬದುಕೆಂದರೆ ಅಷ್ಟೇ ತಾನೆ. ಯಾವನಿಗೆ ಬೇಕು ಈ ಸ್ವಾತಂತ್ರ್ಯ ಸಮಾನತೆ ಮಾನವೀಯತೆ ಸರಳತೆ ಜ್ಞಾನ ಅರಿವು ಸತ್ಯ ಅಹಿಂಸೆ.
ಹುಟ್ಟಿದ್ದೇವೆ ,ತಿನ್ನೋಣ ಕುಡಿಯೋಣ ಮಜಾ ಮಾಡೋಣ.ಯಾರಿಗೆ ಏನಾದರೆ ನಮಗೇನು.
ಯಾರದೋ ವಿಚಾರಗಳನ್ನು ನಾವು ಕಲಿತು ಮಾಡುವುದೇನು.ಅದನ್ನು ನೋಡಿಕೊಳ್ಳಲಿಕ್ಕೆ ದೇವರಿದ್ದಾನೆ. ಹಣ ಉದ್ಯೋಗ ನೀಡಲು ಶ್ರೀಮಂತರಿದ್ದಾರೆ ತಲೆ ಕೆಡಿಸಿಕೊಳ್ಳುವುದೇಕೆ ?.
ಎತ್ತ ಸಾಗುತ್ತಿದ್ದೇವೆ ನಾವು. ಮೂಲಭೂತವಾದಕ್ಕೆ ಬಲಿಯಾಗಿ ನರಳುತ್ತಿರುವ ಮಧ್ಯ ಪ್ರಾಚ್ಯ ದೇಶಗಳ ಸ್ಥಿತಿ ನೆನಪಾಗುತ್ತಿಲ್ಲವೇ ? ಹೋಗಲಿ,
ಹಸಿವು ಬಡತನ ಅಜ್ಞಾನಗಳನ್ನಾದರೂ ಮೀರಿದ್ದೇವೆಯೇ ? ಒಂದು ಸಲ ಯೋಚಿಸಿ.
ನಾರ್ವೆ ಎಂಬ ದೇಶ ಈ ಭೂಮಿಯ ಮೇಲೆಯೇ ಇದೆ.ಅಲ್ಲಿನ ಜನರ ನೆಮ್ಮದಿಯ ಮಟ್ಟ ವಿಶ್ವದಲ್ಲೇ ಅತ್ಯುತ್ತಮ.ಭ್ರಷ್ಟಾಚಾರ ಇಲ್ಲವೇ ಇಲ್ಲ ಎಂಬಷ್ಟು ಕಡಿಮೆ.ಪರಿಸರ ನಾಶ ಇಲ್ಲವೇ ಇಲ್ಲ. ಅಪರಾಧಗಳು ತೀರಾ ಅಪರೂಪ.ಬಹುತೇಕ ಭೂಲೋಕದ ಸ್ವರ್ಗ ಆ ದೇಶ. ದಯವಿಟ್ಟು ಅರ್ಥಮಾಡಿಕೊಳ್ಳೋಣ…
ಬದುಕಿನ ಸಾರ್ಥಕತೆ ಅಡಗಿರುವುದು ನೆಮ್ಮದಿಯ ಹುಡುಕಾಟದಲ್ಲಿಯೇ ಹೊರತು ಸಂಘರ್ಷದ ಹಾದಿಯಲ್ಲಿ ಅಲ್ಲ.ಸಂಘರ್ಷದ ಹೋರಾಟ ಶಾಂತಿಗಾಗಿಯೇ ಹೊರತು ವಿನಾಶಕ್ಕಲ್ಲ.
ಲೇಖಕರು: ಉಮೇಶ ಗೌರಿ (ಯರಡಾಲ)