ಬೆಳಗಾವಿ, ಫೆ.08 : ಕಿತ್ತೂರು ರಾಣಿ ಚೆನ್ನಮ್ಮ, ಬೆಳವಡಿ ಮಲ್ಲಮ್ಮ, ಒನಕೆ ಓಬವ್ವರಂತಹ ವೀರ ಮಹಿಳೆಯರ ಹಾಗೆ ಪ್ರತಿ ವಿದ್ಯಾರ್ಥಿನಿಯರು ಸ್ವಯಂ ರಕ್ಷಣೆ ಕಲೆಯ ಜೊತೆಗೆ ಮಾದರಿ ವ್ಯಕ್ತಿಗಳಾಗಿ ದೇಶ ಸೇವೆಯಲ್ಲಿ ತೊಡಗಿಕೊಳ್ಳಬೇಕು. ಸ್ವಾವಲಂಬಿಯಾಗಿ ಬದುಕಲು ವಿದ್ಯಾರ್ಥಿನಿಯರಿಗೆ ಆತ್ಮ ರಕ್ಷಣಾ ಕಲೆ ಅವಶ್ಯಕವಾಗಿದೆ ಎಂದು ಶಾಸಕ ಅನೀಲ ಬೆನಕೆ ತಿಳಿಸಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯಗಳ ವಿದ್ಯಾರ್ಥಿನಿಯರ ಓಬವ್ವ ಆತ್ಮ ರಕ್ಷಣಾ ಕರಾಟೆ ಕಲೆಯ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಒನಕೆ ಓಬವ್ವ ಅವರ ಹೆಸರಲ್ಲೇ ಶಕ್ತಿ ಅಡಗಿದೆ. ಧಾನ್ಯ ಕುಟ್ಟುವ ಒನಕೆಯಿಂದಲೇ ಶತ್ರುಗಳನ್ನು ದಮನ ಮಾಡಿ ಕೋಟೆ ರಕ್ಷಣೆ ಮಾಡಿರುವುದನ್ನು ಓದಿದ್ದೇವೆ. ಹಾಗೆಯೇ ಚಿತ್ರದುರ್ಗದ ಓಬವ್ವ ಹಾಗೂ ಕಿತ್ತೂರು ರಾಣಿ ಚೆನ್ನಮ್ಮನ ಹಾಗೆ ಪ್ರತಿ ವಿದ್ಯಾರ್ಥಿನಿಯರು ಸ್ವಾಲಂಬಿಗಳಾಗಬೇಕು. ಯಾವುದೇ ಕಷ್ಟದ ಪರಿಸ್ಥಿತಿಯಲ್ಲಿ ತಮ್ಮ ಆತ್ಮ ಸಂರಕ್ಷಣೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಬಾಲಕಿಯರ ಸ್ವಯಂ ರಕ್ಷಣೆಗಾಗಿ ಕರಾಟೆ ಕೌಶಲ್ಯಗಳ ತರಬೇತಿ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ತರಬೇತಿ ಶಾಲೆಗಳಲ್ಲಿಯೂ ನೀಡಲಾಗುವದು. ಬಲಿಷ್ಠ ಭಾರತದಲ್ಲಿ ಪ್ರತಿ ವಿದ್ಯಾರ್ಥಿನಿಯರು ಸ್ವಯಂ ರಕ್ಷಣೆ ಕಲೆಯನ್ನು ಕಲಿಯಬೇಕು ಎಂದು ಶಾಸಕ ಬೆನಕೆ ತಿಳಿಸಿದರು.
ಮಹಿಳೆಯರು, ಬಾಲಕಿಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯವನ್ನು ತಡೆಗಟ್ಟಲು, ದೌರ್ಜನ್ಯಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸರ್ಕಾರ ಬಾಲಕಿಯರಿಗಾಗಿ ಈ ಯೋಜನೆಯನ್ನು ಜಾರಿಗೆ ತಂದಿದೆ. ವಿದ್ಯಾರ್ಥಿನಿಯರು ಸ್ವಯಂ ರಕ್ಷಣೆ ಕಲೆಯನ್ನು ಕಲೆತು ದೇಶಕ್ಕೆ ಸೇವೆ ಸಲ್ಲಿಸಲು ಮುಂದಾಗಬೇಕು ಎಂದು ಜಿಲ್ಲಾಧಿಕಾರಿಗಳಾದ ಎಂ.ಜಿ ಹಿರೇಮಠ ಅವರು ತಿಳಿಸಿದರು.
ಫೈಟರ್ ಫೈಲೆಟ್ ಹುದ್ದೆಗಳಿಗೆ ಈಗ ಹೆಣ್ಣು ಮಕ್ಕಳು ಸೇರುತ್ತಿರುವುದು ನಮ್ಮ ಹೆಮ್ಮೆಯ ವಿಷಯ. ವಾಯುಪಡೆ, ಮಿಲಿಟರಿ ಸೇರಿದಂತೆ ಹಲವು ರಕ್ಷಣಾ ಪಡೆಗಳಲ್ಲಿ ಮಹಿಳೆಯರು ಉನ್ನತ ಹುದ್ದೆಯಲ್ಲಿದ್ದಾರೆ.
ಭವಿಷ್ಯದ ಗುರಿಯನ್ನು ಸಾಧಿಸಲು ವಿದ್ಯಾರ್ಥಿನಿಯರು ಪೂರ್ವ ತಯಾರಿ ಮಾಡಿಕೊಂಡು, ಆತ್ಮ ವಿಶ್ವಾಸದಿಂದ ಗುರಿ ಸಾಧಿಸಬೇಕು ಎಂದು ಜಿಲ್ಲಾಧಿಕಾರಿ ಹಿರೇಮಠ ಹೇಳಿದರು.
ಈ ಸಂದರ್ಭದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಹಾಗೂ ಮುರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿಯರಿಂದ ಕರಾಟೆ ಕೌಶಲ್ಯ ಪ್ರದರ್ಶಿಸಲಾಯಿತು.
ವಿಧಾನಪರಿಷತ್ ಸದಸ್ಯ ಸಾಬಣ್ಣ ತಳವಾರ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಉಮಾ ಸಾಲಿಗೌಡರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳಾದ ಗೌರಿಶಂಕರ ಕಡೇಚೂರು, ಯುವಜನಸೇವೆ ಹಾಗೂ ಕ್ರೀಡಾ ಇಲಾಖೆಯ ಉಪನಿರ್ದೇಶಕರಾದ ಮಿಲ್ಲಾನಟ್ಟಿ, ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಬಿ. ವಾಯ್. ಕುರಿಹುಲಿ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳಾದ ಎಸ್.ಎಸ್. ಬಡಿಗೇರ ಉಪಸ್ಥಿತರಿದ್ದರು.