ಮುಂಬೈ(ಫೆ.06): ಭಾರತದ ಗಾನ ಕೋಗಿಲೆ ಎಂದೇ ಖ್ಯಾತಿ ಗಳಿಸಿದ ಹಿರಿಯ ಹಿನ್ನೆಲೆ ಗಾಯಕಿ ಸಂಗೀತಾ ಸರಸ್ಮತಿ ಲತಾ ಮಂಗೇಶ್ಕರ್ ನಿಧನರಾಗಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು. ಕೋವಿಡ್ ಸೋಂಕು ತಗುಲಿದ ಹಿನ್ನೆಲೆಯಲ್ಲಿ ಜನವರಿ ಆರಂಭದಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ನಂತರ ನ್ಯುಮೊನಿಯಾ ಕೂಡ ವಕ್ಕರಿಸಿದ್ದು, ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಈ ಮಧ್ಯೆ ಅವರ ಆರೋಗ್ಯದಲ್ಲಿ ಸುಧಾರಣೆಯಾದ ಹಿನ್ನೆಲೆಯಲ್ಲಿ ಕೃತಕ ಉಸಿರಾಡ ಉಪಕರಣವನ್ನು ತೆಗೆಯಲಾಗಿತ್ತು. ಆದರೆ ಮತ್ತೆ ಪರಿಸ್ಥಿತಿ ಹದಗೆಟ್ಟ ಹಿನ್ನೆಲೆಯಲ್ಲಿ ಮತ್ತೆ ವೆಂಟಿಲೇಟರ್ ಅಳವಡಿಸಲಾಗಿತ್ತು.
ಲತಾ ಮಂಗೇಶ್ಕರ್ ನಿಧನದಿಂದ ಭಾರತೀಯ ಸಂಗೀತಾ ಲೋಕ ಬಡವಾಗಿದೆ. ಇಡೀ ದೇಶವೇ ಶೋಕ ಸಾಗರದಲ್ಲಿ ಮುಳುಗಿದೆ. 1929 ರಲ್ಲಿ ಮಧ್ಯಪ್ರದೇಶದ ಇಂದೋರ್‌ನಲ್ಲಿ ಜನಿಸಿದ ಲತಾ ಮಂಗೇಶ್ಕರ್ ಸಂಗೀತಾ ನಿರ್ದೇಶಕರಾಗಿ , ಸಂಗೀತಾ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ. ಸಾವಿರಕ್ಕೂ ಹೆಚ್ಚು ಹಿಂದಿ ಹಾಡುಗಳನ್ನು ಹಾಡಿರುವ ಲತಾ 36 ಭಾರತೀಯ ಭಾಷೆಗಳಲ್ಲದೇ ವಿದೇಶಿ ಭಾಷೆಗಳ ಹಾಡಿಗೂ ತಮ್ಮ ಧ್ವನಿ ನೀಡಿದ್ದಾರೆ. ಸಂಗೀತಾ ಕ್ಷೇತ್ರದಲ್ಲಿಇವರು ಮಾಡಿದ ಸಾಧನೆಗಾಗಿ 1989 ರಲ್ಲಿ ಭಾರತ ಸರ್ಕಾರ ಇವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಿತ್ತು. 1969ರಲ್ಲಿ ಇವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು. 1999ರಲ್ಲಿ ಪದ್ಮ ವಿಭೂಷಣ ಹಾಗೂ 2007 ರಲ್ಲಿ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ ಭಾರತ ರತ್ನ ನೀಡಿ ಗೌರವಿಸಲಾಗಿದೆ.
ಮೂವರು ಸಹೋದರಿ ಹಾಗೂ ಓರ್ವ ಸಹೋದರ ಹಾಗೂ ದೇಶಾದ್ಯಂತ ಇರುವ ಅಪಾರ ಅಭಿಮಾನಿಗಳನ್ನು ಲತಾ ಮಂಗೇಶ್ಕರ್ ಅಗಲಿದ್ದಾರೆ. ಮೀನಾ ಖದೀಕರ್, ಆಶಾ ಭೋಂಸ್ಲೆ, ಉಷಾ ಮಂಗೇಶ್ಕರ್, ಹಾಗೂ ಹೃದಯಂತ್ ಮಂಗೇಶ್ಕರ್ ಲತಾ ಅವರ ಒಡ ಹುಟ್ಟಿದವರಾಗಿದ್ದಾರೆ. ಇವರೆಲ್ಲರೂ ಸಂಗೀತಾ ಕ್ಷೇತ್ರದಲ್ಲಿ ಸಾಧನೆ ಮಾಡಿದವರೇ ಆಗಿದ್ದಾರೆ. ಇಡೀ ಕುಟುಂಬವೇ ಸಂಗೀತಾ ಹಿನ್ನೆಲೆಯಿಂದ ಬಂದಿದೆ.
ಮೂರು ರಾಷ್ಟ್ರೀಯ ಸಿನಿಮಾ ಪ್ರಶಸ್ತಿ, 15 ಬೆಂಗಾಲ್ ಫಿಲ್ಮ್ ಅಸೋಶಿಯೇಶನ್ ಪ್ರಶಸ್ತಿ, ನಾಲ್ಕು ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ, ಎರಡು ಫಿಲಂಫೇರ್ ಸ್ಪೆಷಲ್ ಅವಾರ್ಡ್, ಜೀವಮಾನದ ಸಾಧನೆ ಪ್ರಶಸ್ತಿ ಹೀಗೆ ಲತಾ ಮಂಗೇಶ್ಕರ್ ಅವರನ್ನು ಅರಸಿ ಬಂದ ಪ್ರಶಸ್ತಿಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಲಂಡನ್ನಿನ 1974 ರಾಯಲ್ ಆಲ್ಬರ್ಟ್ ಹಾಲ್‌ನಲ್ಲಿ ಹಾಡುವ ಮೂಲಕ ಅಲ್ಲಿ ಹಾಡಿದ ಮೊದಲ ಭಾರತೀಯ ಗಾಯಕಿ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದರು.