Monday, September 30, 2024

ಯಾಪಲಪರವಿ ಅವರ ಹ್ಯಾಟ್ರಿಕ್ ಮುದ್ರಣದ ಕೃತಿ: ಹಗಲಿನಲ್ಲಿಯೆ ಸಂಜೆಯಾಯಿತು

ಅಂತರಂಗ ಶುದ್ದಿ :ಬಹಿರಂಗ ಶುದ್ದಿ ಅನ್ನುತ್ತಲೇ ತತ್ ಕ್ಷಣ ನಮ್ಮ ಅರಿವಿನ ಪರದೆಯಲ್ಲಿ ಖಾವಿವಸ್ತ್ರ ಧರಿಸಿದ ಪುಣ್ಯತೇಜರು, ಯೋಗಪುರುಷರು, ತ್ಯಾಗಮೂಲ ಸಂಸ್ಕೃತಿಯನ್ನು ಪ್ರತಿನಿಧಿಸುವ ಜೀವಾತ್ಮರು ಪ್ರಕಟರಾಗುತ್ತಾರೆ.

ಆತ್ಮ ,ಪರಮಾತ್ಮ ,ಲೋಕೋದ್ಧಾರ ಕುರಿತಾಗಿ ಬೃಹತ್ ಚಿಂತನೆ ,ಮಾನವ ಸಮುದಾಯದ ಹಿತಕ್ಕಾಗಿ ಶ್ರಮಿಸುವ ಸಾಮಾಜಿಕ ಕಳಕಳಿ ಹೊತ್ತ ಸಿದ್ಧಿಪುರುಷರು ಕಾಣುವರು.

ಅದೇನೋ ಅವಿನಾಭಾವ ಸಂಬಂಧ;ಗದಗ ಹಾಗೂ ನನಗೂ. ಇಂದಿಗೂ ಬಯಲುಸೀಮೆ ಹವಾ ಕಂಡವಳಲ್ಲ. ಆದರೆ ಸದೈವ ಕೃಪೆಯಿಂದ ಗದಗ ಮಠದ  ಡಾ. ತೋಂಟದ ಸಿದ್ಧಲಿಂಗ ಸ್ವಾಮಿಗಳವರೊಂದಿಗೆ ಸ್ಮರಣೀಯ ಘಟನಾವಳಿಗಳು ಒಳಗೊಂಡ ಸಿದ್ದು ಯಾಪಲಪರವಿ ಅವರ ಕೃತಿ ಓದಿಗಾಗಿ ನನ್ನ ಕೈ ಸೇರಿತು.

ಗದಗ ಅಂದರೆ ನನಗೆ ಗೊತ್ತಿದ್ದದ್ದು ಅಂಧ ಅನಾಥರ ವೀರೇಶ್ವರ ಪುಣ್ಯಾಶ್ರಮ ಮಾತ್ರವಾಗಿತ್ತು. ಧಾರ್ಮಿಕ ಆಚರಣೆಗಳ ಕುಟುಂಬದವಳಾದ್ದರಿಂದ ಮತ್ತು ಚಿಕ್ಕಂದಿಂದಲೂ ಅಜ್ಜ-ಅಜ್ಜಿಯ ಸಹಪ್ರೇರೇಪಣೆ ಫಲವಾಗಿ ಗದಗ ಅಂದರೆ ನನಗೆ ತಿಳಿದುದು ಗದುಗಿನ ಪಂಡಿತ ಡಾ. ಪುಟ್ಟರಾಜ ಕವಿಗವಾಯಿಗಳವರ ಆದರ್ಶ ಮತ್ತು ಪವಾಡಗಳು. ಈ ಓದಿನ ಮೂಲಕ ಇದೀಗ ಮತ್ತೊಮ್ಮೆ ಗದುಗಿನ ನಂಟು ದ್ವಿಗುಣವಾಗಿ ಪುನಃ ಧ್ಯಾನ ಮಗ್ನಳನ್ನಾಗಿಸಿತು.

ಕೃತಿಯ ಮೇಲ್ಪುಟದಲ್ಲಿ ತೇಜೋಪೂರ್ಣವಾದ ವರ್ಚಸ್ಸು, ಭಕ್ತರನ್ನು ಕರುಣಿಸುವ ಮಂದಹಾಸ, ನೊಸಲ ವಿಭೂತಿಯ ಮಹಾಬೆಳಗು
ನಮಿಸುವಂತೆ ಮಾಡಿತು. ಕೃತಿಯ ಶಿರೋನಾಮೆ ‘ಹಗಲಿನಲ್ಲಿಯೇ ಸಂಜೆಯಾಯಿತು‘ ಇನ್ನಷ್ಟು ಅಪಾರ ಪ್ರಮಾಣದ ಸತ್ ಚಿಂತನೆಗೆ ಒಳಪಡಿಸಿತು.
ಓದಲು ಕೃತಿಯನ್ನು ಕೈಗೆತ್ತಿಕೊಳ್ಳುವ ವೇಳೆ ನನಗೆ ಪವಿತ್ರ ಗ್ರಂಥ ರಾಮಾಯಣ, ಮಹಾಭಾರತ ,ಧಾರ್ಮಿಕ ಪುಸ್ತಕ ದೇವೀ ಮಹಾತ್ಮೆ ಗ್ರಂಥವನ್ನು ಪಠಣ ಮಾಡುವ ಸಮಯದಲ್ಲಿ ತಲುಪುವ ಸ್ಯಾಚುರೇಟೆಡ್ ಪುಳಕ. ಅನಂತರ ಓದುತ್ತಾ ಸಾಗಿದಂತೆ ಉರುಫ್ ಕೃತಿಯೇ ಓದಿಸುತ್ತಾ ಎಳೆದೊಯ್ಯಿತು.

ಶಿವಾನುಭವ ಅಂದರೆ ಶಿವ ಚಿಂತನೆ, ಶಿವ ಧ್ಯಾನ ಮಾತ್ರ ಅಲ್ಲ ಜನ ಸಾಮಾನ್ಯರ ಬದುಕಿನ ಬವಣೆಗಳ ಕುರಿತಾದ ಸಾಮಾಜಿಕ ಚರ್ಚೆ ಎಂಬುವ ವಾಸ್ತವ ತೆರೆದು ಅರಿವು, ಅನ್ನ, ಅಕ್ಷರಗಳ ಸಮ್ಮಿಲನವೇ ಶಿವಾನುಭವ ಎನ್ನುವ ತತ್ವಪದಗಳ ಸತ್ಯ ದರ್ಶನವಾಯಿತು.

ಹೇಳಿ ಕೇಳಿ ಕೃತಿಯ ಲೇಖಕರಾದ ಪ್ರೊ.ಸಿದ್ದುಯಾಪಲಪರವಿರವರು ಸಾಹಿತಿಯೊತ್ತಮರು. ತಮ್ಮ ಬರಹಗಳಲ್ಲಿ ಯಾವಾಗಲೂ ಹೊಸತನವನ್ನು ಹುಡುಕುವ ಖಯಾಲಿಯ ಗುಣ ಸ್ವಭಾವ ಹೊಂದಿದವರು.
ಅವರ ಅನೇಕ ಕೃತಿಗಳನ್ನು ಓದಿರುವೆ.
ಎಲ್ಲವೂ ವಿಭಿನ್ನವೇ. ಪ್ರಸ್ತುತ ಕೃತಿಯ ಉದ್ದಗಲಕ್ಕೂ ಲೇಖಕರು ಹಾಗೂ ಮಠಾಧಿಪತಿಗಳ ಜೀವನದರ್ಶನ ವಾಗುತ್ತದೆ. ಹಾಗಂತ ಆತ್ಮಕಥೆ ಖಂಡಿತ ಅಲ್ಲ. ಒಬ್ಭ ಸಾಮಾನ್ಯ ವ್ಯಕ್ತಿ (ಸ್ವತಃ ಲೇಖಕರು)ಜೀವನದಲ್ಲಿ ಪರಿವರ್ತನೆಗೈದ ನೈಜ ಅದ್ಬುತ ಕಥೆಯನ್ನು ಮನಗಾಣಿಸುತ್ತದೆ.
ಅಸಾಧ್ಯವೆಂದು ಪರಿಗಣಿಸಿದ್ದ ಓದು ಬರಹದ ದಿಗಿಲಿನ ಪಯಣವನ್ನು ಯಶಸ್ಸಿನ ಹೆದ್ದಾರಿಗೆ ಗುರುಗಳ ಮಾರ್ಗದರ್ಶನದ ಮುಖೇನ ತಲುಪಿದ ಯಶಸ್ಸಿನ ದಿವ್ಯತೆ ಬೆರಗುಗೊಳಿಸುತ್ತದೆ.

ಅದರೊಟ್ಟಿಗೆ ಪೂಜ್ಯ ಡಾ.ತೋಂಟದ ಸಿದ್ಧಲಿಂಗ ಸ್ವಾಮಿಗಳವರ ಜಾಗತಿಕ ಹೋರಾಟಗಳು, ಎದುರಿಸಿದ ಬವಣೆಗಳು,ಅನಾರೋಗ್ಯದ ತೊಳಲಾಟಗಳ ಚಿತ್ರಣವನ್ನು ಕಣ್ಣ ಮುಂದೆ ನಡೆದಂತೆ ಕೃತಿಕಾರರು ಕುಲಂಕೂಷವಾಗಿ ವಿವರಿಸಿರುತ್ತಾರೆ. ಇದಕ್ಕೆ ನಿದರ್ಶನ ವೆಂಬಂತೆ ಜನಪ್ರಿಯತೆ ಗಳಿಸಿ ನಿರಂತರ ಮೂರುಬಾರಿ ತಿಂಗಳಿಗೊಮ್ಮೆ ಮರು ಮುದ್ರಣಗೊಂಡ ಸಂಗತಿಯೇ ಸಾಕ್ಷಿ.

ಸದ್ಬಕ್ತರ ಬಗೆಗೆ ಕಾಳಜಿ, ಹಿತಾಸಕ್ತಿ, ಸಂಕೀರ್ಣ ಗ್ರಹಿಕೆ, ದೂರಾಲೋಚನೆ, ನಾಡಿನ ಏಳಿಗೆಗಾಗಿ ವ್ಯಕ್ತಿಯುಕ್ತ ಚಿಂತನೆ, ಆಡಳಿತ ಮುಖಂಡರೊಂದಿಗೆ ಆತ್ಮೀಯ ಸಮಾಲೋಚನೆ ,ಮಠದ ಸರ್ವತೋಮುಖ ಬೆಳವಣಿಗೆಗಾಗಿ ಸ್ವಾಮೀಜಿಯವರ ಪರಿಶ್ರಮ,ತ್ಯಾಗ, ಸರಳತೆ ಇತ್ತೀಚಿನ ಮಠಾಧೀಶರಲ್ಲಿ ಅತೀ ವಿರಳ ಎಂದು ಒಮ್ಮೆಗೆ ಹೇಳಬೇಕೆನಿಸಿತು.ಪ್ರತಿಫಲಾಪೇಕ್ಷೆ ಇಲ್ಲದೆ ಶ್ರೀಮಠಕ್ಕಾಗಿ ಸೇವೆಗೈದ ,ಶ್ರಮಿಸಿದ ,ದೇಣಿಗೆ ನೀಡಿದ ಅನೇಕಾನೇಕ ಭಕ್ತ ಮಹನೀಯರನ್ನು ,ಆಪ್ತ ಗೆಳೆಯರು, ಬಳಗದವರನ್ನು ಗುರುತಿಸಿದ ವೈಖರಿ, ಹೊಗಳಿ ವರ್ಣಿಸಿರುವ ಪರಿ ಅಪರೂಪ. ಅದೇ ಪ್ರಭಾವದಿಂದ ಕೃತಿಕಾರರು ಶ್ರೀಗುರುವಿನ ಅಭಯ ಆಶೀರ್ವಾದ ಗಳಿಸಿ ಬಹಳಷ್ಟು ಉದಯೋನ್ಮುಖ ಸಾಹಿತಿಗಳಿಗೆ ಗುರುವಾದಂತೆ ಬಿಂಬಿಸುತ್ತಿದೆ.

‘ಗುರುಕಾರುಣ್ಯ ಸಿಗುವುದು ಸುಲಭವಲ್ಲ
ಸಿಗಬಹುದು ಪೂರ್ವ ಜನುಮದ ಪುಣ್ಯಶೇಷದಲಿ’ ಜೀವಾಮೃತ ಪುಸ್ತಕದಲ್ಲಿ ಓದಿದ ನೆನಪು ನನಗೆ.
ಗುರುಹೇಳಿದ ಅರಿವಿನ ಮಾರ್ಗದಲ್ಲಿ ಸಾಗಿದರೆ ಯಶಸ್ಸು ಕಟ್ಟಿಟ್ಟ ಬುತ್ತಿಯಾಗುತ್ತದೆಂದು
ತಮ್ಮ ಬದುಕಿನ ನೈಜ ಸಂಗತಿಗಳ ಬಿಚ್ಚುಬರಹಗಳಲ್ಲಿ ಕೃತಿಕಾರರು ನಿರೂಪಿಸಿದ್ದಾರೆ. ಬಾಲ್ಯದಿಂದಲೇ ಬಹು ಸಾಮೀಪ್ಯದಿಂದ ಬಲ್ಲವರಾದ ಕಾರಣ ಸ್ವಾಮೀಜಿಯೊಂದಿಗಿನ ತಮ್ಮ ಸಲಿಗೆಯ ಸಂದರ್ಭಗಳನ್ನು ಹಾಗೂ ಒಡನಾಟದ ಅತೀ ತೀಕ್ಷ್ಣವಾದ ಸಂಗತಿಗಳನ್ನು
ಆತ್ಮನಿರ್ಭರವಾಗಿ ಬರೆದಿದ್ದಾರೆ. ಗುರುಗಳೊಂದಿಗಿನ ಸಹನೆ, ಸಾಂತ್ವನವನ್ನು ಬಹುಶಃ ಕೃತಿಕಾರರೂ
ಪಡೆದಂತಿದೆ.

ಕುಟುಂಬದ ಅಹಿತ ಘಟನಾವಳಿಗಳು, ಅಧೋಗತಿಯ ವಿಷಮ‌ ಗಳಿಗೆಯ ವಿವರವನ್ನು ಬಹಿರಂಗಗೊಳಿಸುವ ಮೂಲಕ ಮತ್ತು ಬಾಳಿ ಬದುಕಿದ ಅವನತಿಸಿದ ಇತರೆ
ಬಹಳಷ್ಟು ಮನೆತನಗಳಿಗೆ, ಬಂಧುಬಾಂಧವರಿಗೆ ಬುನಾದಿಯಾಗಿ, ಭವಿಷ್ಯ ಮುಂದಿನ ಬದುಕಿಗೆ ಸದಾಶಯ ತುಂಬಿ ಸ್ಪೂರ್ತಿ ನೀಡುವಲ್ಲಿ, ಹುಡುಕಾಟದ ಹೊಸ ದಾರಿ ದಕ್ಕಿಸಿಕೊಳ್ಳಲು ಸಾಹಿತಿ ಸಿದ್ದುರವರು ಸೆಣೆಸಿದ್ದಾರೆಂದು ಭಾಸವಾಗುತ್ತದೆ. ಉತ್ಪ್ರೇಕ್ಷೆಯಲ್ಲ ನಿಜ, ಇದಕ್ಕೂ ಭಂಡೆದೆ ಧೈರ್ಯಬೇಕು.

ಕಾರಟಗಿ ಮಂದಿಯ ತಾತರೆನಿಸಿದ ಶ್ರೀಗಳವರ ಕಪ್ಪತಗುಡ್ಡದ ರಕ್ಷಣೆಯ ಹೋರಾಟ, ಕನ್ನಡ ಶಿಕ್ಷಣ, ಗೋಕಾಕ ವರದಿ ಜಾರಿಗೆ ತಂದುದು, ಪೋಸ್ಕೋ ಕಂಪನಿ ಕಬಳಿಕೆಯಿಂದ ಪರಿಸರ ಸಂರಕ್ಷಣಾ ಚಳುವಳಿಗಳು,ಪ್ರಗತಿಪರ ಘೋಷಣೆಗಳನ್ನು, ಸಾಮೀಜಿಯವರ ಸಾಮಾಜಿಕ ಕಕ್ಕುಲತೆಯನ್ನು ಲೇಖಕರು ಕೃತಿಯಲ್ಲಿ ಸವಿಸ್ತಾರವಾಗಿ, ಅವಿಸ್ಮರಣೀಯವಾಗಿ ತೆರೆದಿದ್ದಾರೆ.

ನಮ್ಮ ಶಿವಮೊಗ್ಗ ನಗರದ ವಿರಕ್ತಮಠ ಬೆಕ್ಕಿನ ಕಲ್ಮಠಾಧೀಶರು ಶ್ರೀ ಶ್ರೀ ಮುರುಘರಾಜೇಂದ್ರ ಸ್ವಾಮಿಗಳ ಗುರುಗಳೊಡನೆ ವೈಶಾಲ್ಯ ಬಾಂಧವ್ಯ ಮತ್ತು ತಮ್ಮೊಡನೆ ಆತ್ಮೀಯತೆಯ ಕುರಿತಾಗಿ ಪ್ರಸ್ತಾಪಿಸಿರುವುದು ಮಲೆನಾಡ ಜನರಿಗೆ ಹೆಮ್ಮೆ ಹಾಗೂ ಸಂತಸದ ಸಂಗತಿಯಾಗುತ್ತದೆ. ಸಿದ್ಧಲಿಂಗ ಶ್ರೀಗಳರವರು ಪ್ರತಿಪಾದಿಸಿದ ನಡೆನುಡಿಗಳು, ಬಡವ ಶ್ರೀಮಂತ ನಡುವಿನ ಸಮಾನತೆ, ಉತ್ತಮ ಜಾತಿ ಪದ್ಧತಿಯ ಅಪಾಯ,ಮತ ,ಪಂಥಗಳ ಭೇದ ತೊಡೆಯುವ ದೃಷ್ಟಿಕೋನ, ನಿರ್ಣಾಯಕ ನಿಲುವು ಮತ್ತು ಬೆಂಬಲ ಅದ್ಬುತವಾಗಿ ಹೊಮ್ಮಿದೆ.

ವಿರಕ್ತ ಜಂಗಮರಾಗಿ ಹನ್ನೆರಡನೇ ಶತಮಾನದ ಕ್ರಾಂತಿಕಾರಿ ಅಣ್ಣ ಬಸವಣ್ಣರ ತತ್ವಗಳಿಗೆ ಮರುಜನ್ಮ ನೀಡಿ ಪ್ರೋತ್ಸಾಹಿಸಿ ಸಲಹಿದ ಗುರುಗಳ ಸಾತ್ವಿಕ ಬೆಂಬಲದ ಚಿತ್ರಣಗಳ ನಿರೂಪಣೆ,ರಜತ ಮಹೋತ್ಸವ ಆಚರಿಸಿದ ಶಿವಾನುಭವ ಗೋಷ್ಠಿಗಳ ವಿವರಣೆ ,ಶಾಲೆ ಕಾಲೇಜು, ವಿದ್ಯಾ ಸಂಸ್ಥೆಗಳ ಸ್ಥಾಪನೆ, ಐಷಾರಾಮಿ ಬದುಕಿಗೆ ಶ್ರೀಗಳವರ ನಿರ್ಮೋಹ ಭಾವ, ಮಠದ ಅಭ್ಯೋದಯದ ಸಲುವಾಗಿ ದಣಿವಿರದ ಜೀವನಯಾನವು ಭಕ್ತ ಸಮುದಾಯವನ್ನು ಆಕರ್ಷಿಸುವಲ್ಲಿ ಗೆದ್ದಿರುತ್ತದೆ. ಪ್ರಸ್ತುತ ಕೃತಿಹಗಲಿನಲ್ಲಿಯೇ ಸಂಜೆಯಾಯಿತು’ ಕೃತಿಕಾರರನ್ನು ಹ್ಯಾಟ್ರಿಕ್ ಹೀರೋ ಆಗಿ ಗೆಲ್ಲಿಸಿದೆ. ಪೂಜ್ಯ ಸಿದ್ಧಲಿಂಗ ಶ್ರೀಗಳರವರು ಪ್ರತಿಪಾದಿಸಿದ ನಡೆನುಡಿಗಳು ಇಂದಿಗೂ ಭಕ್ತರ ಹೃದಯದಲ್ಲಿ ಜೀವಂತವಾಗಿ ಉಳಿದಿವೆ ಎನ್ನುವಷ್ಟು ಸೊಗಸಾಗಿ
ತಾಜಾತನವನ್ನು ಕಾಪಾಡಿದೆ ಅನ್ನುವಲ್ಲಿ ಎರಡನೇ ಮಾತಿಲ್ಲ. ನನ್ನ ಸರಳ ವಿಮರ್ಶೆಗೆ ವಿರಾಮ ನೀಡುತ, ಅಚ್ಚುಕಟ್ಟಾಗಿ ಪ್ರಕಟಿಸಿದ ದಲಿತ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳನ್ನು, ಎಲ್.ವಿ.ಟಿ. ಸಮೂಹ ಸಂಸ್ಥೆಯ ಗ್ರಂಥದಾನಿಗಳನ್ನು ಅಭಿನಂದಿಸಿ, ಕೃತಿಕಾರರ ಮುಂದಿನ ಯೋಜನೆಯ ಬರಹಗಳಲ್ಲಿ
ಹೊಸ, ಹೊಸ ನಮೂನೆಗಳು ಓದುಗರಿಗೆ ಮಗದಷ್ಟು ದೊರಕಲಿ ಹಾಗೂ ತಲುಪಲಿ ಎಂದು ಆಶಿಸುವೆ.

 

ಲೇಖಕರು:ಸುಜಾತ ಬಸವರಾಜು.
ಶಿವಮೊಗ್ಗ.
M-8861234604

 

ಜಿಲ್ಲೆ

ರಾಜ್ಯ

error: Content is protected !!