Thursday, September 19, 2024

ಅರಿವನೆ ಮರೆದು ಕುರುಹ ಪೂಜಿಸುವ ಕುರಿಗಳ ನೋಡಾ

ಸುದ್ದಿ‌ ಸದ್ದು ನ್ಯೂಸ್
ವಿಶ್ವಾರಾಧ್ಯ ಸತ್ಯಂಪೇಟೆ
ನೀಚರು ಠಕ್ಕರು,ಮೂರ್ಖರು,ವಂಚಕರೂ ಆದ ಪುರೋಹಿತರಿಂದ ದೂರ ಇರಿ. ಹುಲಿಯ ಕ್ರೌರ್ಯಕ್ಕಿಂತ ನರಿಯ ಕ್ರೌರ್ಯ ಭಯಾನಕವಾದುದು. ಹುಲಿ ಒಂದು ಸಲ ಬೇಟೆ ಆಡಿ ಸುಮ್ಮನಿರುತ್ತದೆ. ನರಿ ಹಾಗಲ್ಲ, ಸದಾ ವಂಚನೆಯನ್ನು ಮಾಡುತ್ತಲೆ ಇರುತ್ತದೆ. ನರಿಯಂತಿರುವ ಪುರೋಹಿತರಿಂದ ದೂರ ಇರಿ ಎಂಬ ಸ್ವಾಮಿ ವಿವೇಕಾನಂದರ ಮಾತು ನಾವು ನಿತ್ಯ ಎಷ್ಟು ಸಲ ಜ್ಞಾಪಿಸಿದರೂ ಕಡಿಮೆಯೆ. ಆದರೂ ನಮಗೆ ಅರಿವಿಲ್ಲದೆ ನರಿಯ ವಂಚನೆಗೆ ಬಲಿ ಬಿದ್ದಿರುತ್ತೇವೆ.

ಬಸವಾದಿ ಶರಣರಂತೂ ಈ ಠಕ್ಕರ ಬಗೆಗೆ ನಮ್ಮನ್ನು ಎಚ್ಚರಿಸಿದಷ್ಟು ಇನ್ನಾರ ಬಗೆಗೂ ಎಚ್ಚರಿಸಿಲ್ಲ. ಅವರ ನಾನಾ ವಿರೂಪದ ಮುಖಗಳನ್ನು ಹೇಳಿ ,ತೋರಿಸಿ ಶರಣ ಲಿಂಗಾಯತ ಮಾರ್ಗವನ್ನು ತೋರಿಸಿದ್ದಾರೆ. ಆದರೆ ಬೇಕಂತಲೆ ಕೆಲವರು ಬಸವಣ್ಣನವರು ಕಟ್ಟಿದ ಕನಸುಗಳನ್ನು ನುಚ್ಚು ನೂರು ಮಾಡಲು ,ಭಕ್ತಿಯನ್ನು ಮಾತ್ರ ತೋರಲು ಬಸವಣ್ಣನವರನ್ನು ಬಳಸಿಕೊಂಡು ಬಿಸಾಡುವ ಯತ್ನ ಸದ್ದಿಲ್ಲದೆ ಸಾಗಿದೆ. ಏನಯ್ಯಾ ವಿಪ್ರರು ನುಡಿದಂತೆ ನಡೆಯರು , ತಮಗೊಂದು ಬಟ್ಟೆ ಶಾಸ್ತ್ರಕ್ಕೊಂದು ಬಟ್ಟೆ ಎಂಬ ಮಾತನ್ನು ಈಗ ಲಿಂಗಾಯತರಲ್ಲಿಯೆ ಇರುವ ವಿಪ್ರರ ಕುರಿತು ಹೇಳಬೇಕಾಗಿದೆ.

ಸಾವಿರಾರು ವರ್ಷಗಳಿಂದ ಬಸವಣ್ಣನವರನ್ನು ಕೇವಲ ಭಕ್ತಿ ಭಂಡಾರಿ ಎಂದು ಚಿತ್ರಿಸುತ್ತ ಬಂದ ಈ ವರ್ಗ ಬಸವಣ್ಣನವರ ಭೂಮ ವ್ಯಕ್ತಿತ್ವವನ್ನು ಜನತೆಗೆ ತೋರಿಸಲಿಲ್ಲ. ಜನ ಸಾಮಾನ್ಯರನ್ನು ಕತ್ತಲಲ್ಲಿ ಇಟ್ಟರೆ ತಾವು ಆರಾಮವಾಗಿ ಇರಬಹುದು ಎಂಬ ಕುತಂತ್ರದಿಂದಲೆ ಏನೆಲ್ಲ ಹುನ್ನಾರಗಳನ್ನು ಮಾಡಿದರು. ಆದರೂ ಶರಣ ವಚನಗಳಲ್ಲಿಯ ಸತ್ವ ಯಾರೆಷ್ಟೆ ಎಕರಲಾಡಿದರು ಸ್ವತಃ ಅವು ತಮ್ಮ ಬಲದಿಂದಲೆ ಮೇಲೆದ್ದು ಜನ ಸಾಮಾನ್ಯರನ್ನು ಪ್ರಜ್ಞಾವಂತರನ್ನಾಗಿ ಮಾಡತೊಡಗಿವೆ. ಇದು ವಚನ ಸಾಹಿತ್ವದ ಸತ್ವ. ಹನ್ನೆರಡನೆಯ ಶತಮಾನದಲ್ಲಿದ್ದ ವಚನ ಸಾಹಿತ್ಯ ಇಪ್ಪತ್ತೊಂದನೆಯ ಶತಮಾನದಲ್ಲಿ ಎದ್ದು ಕಾಣುವಂತಾದುದೆ ಅದರ ಶಕ್ತಿ ಎಂಬುದನ್ನು ನಾವು ಅರಿಯಬೇಕು. ಈಗ ಲಿಂಗಾಯತರಲ್ಲಿ ಕಂಡು ಬರುವ ಬಹುತೇಕ ಮಠ ಪೀಠಗಳು ವಚನಗಳ ಬೆಳವಣಿಗೆ ಅಷ್ಟೊಂದು ಕೊಡುಗೆ ನೀಡಿಲ್ಲ. ಅವು ಹೆಚ್ಚಾನೆಚ್ಚು ಒತ್ತು ಕೊಟ್ಟದ್ದು ಶರಣರ ದಾಸೋಹ ಕಲ್ಪನೆಗೆ ಮಾತ್ರ. ಶರಣರ ದಾಸೋಹ ಚಿಂತನೆಯನ್ನು ತಮ್ಮ ಮಠದಲ್ಲಿ ಜಾರಿಗೆ ತಂದು ಅದರಿಂದ ಸಾಕಷ್ಟು ಪಡಕೊಂಡಿದ್ದಾರೆ ಆ ಮಾತು ಬೇರೆ. ಅದನ್ನಿಲ್ಲಿ ಪ್ರಸ್ತಾಪಿಸುವ ಯಾವ ಉದ್ದೇಶವು ನನಗೆ ಈಗ ಇಲ್ಲ.

ಬಸವಣ್ಣನವರನ್ನು ಹಾಗೂ ಅಂದಿನ ಶರಣರ ಉದ್ದೇಶಗಳನ್ನು ಸ್ಪಷ್ಟವಾಗಿ ಅರಿಯಬೇಕಿದ್ದರೆ ನಾವು ಅಂದಿನ ಶತಮಾನಕ್ಕೆ ಹೋಗಬೇಕು. ಅಂದಿನ ರಾಜಕೀಯ , ಧಾರ್ಮಿಕ, ಸಾಮಾಜಿಕ ಸ್ಥಿತಿಗತಿಗಳ ಹಿನ್ನೆಲೆಯಲ್ಲಿಯೆ ಅವನ್ನು ಅರಿತುಕೊಳ್ಳಬೇಕು. ಇಂದಿನ ಸಮಾಜದಲ್ಲಿ ವಚನಗಳನ್ನು ನೋಡುತ್ತ ಹೋದರೆ ಅವು ಅಷ್ಟು ಸ್ಪಷ್ಟವಾಗಿ ನಮಗೆ ದಕ್ಕುವುದಿಲ್ಲವೆಂದೆ ನನ್ನ ಅನಿಸಿಕೆ. ಅಂದಿನ ಸಾಮಾಜಿಕ ಹಾಗೂ ಧಾರ್ಮಿಕ ಸ್ಥಿತಿ ನಿಜಕ್ಕೂ ಭಯಾನಕವಾಗಿತ್ತು. ಒಬ್ಬ ಮನುಷ್ಯ ಇನ್ನೊಬ್ಬನನ್ನು ಮನುಷ್ಯ ಎಂದು ಕರೆಯುವಂತಿರಲಿಲ್ಲ. ಆತನನ್ನು ಮುಟ್ಟುವಂತಿರಲಿಲ್ಲ. ಇದೆಲ್ಲ ಹೋಗಲಿ ಅಗ್ರಹಾರಗಳಲ್ಲಿ ತಳ ಸಮುದಾಯದ ಮನುಷ್ಯ ಎಂದೂ ತಿರುಗಾಡುವ ಹಾಗೆ ಇರಲಿಲ್ಲ. ಅಂಥ ಪ್ರಸಂಗ ಬಂದಾಗ ಸಂಬೋಳಿ ಸಂಬೋಳಿ ಎಂದು ಕೂಗುತ್ತ, ಮಟ ಮಟ ಮಧ್ಯಾಹ್ನದಲ್ಲಿ ತಿರುಗಾಡುವ ಸಂದರ್ಭ ಇತ್ತು. ಉಗುಳು ಬಂದರೆ ತಾನೇ ಕಟ್ಟಿಕೊಂಡು ಬಂದ ಗಡಿಗೆಯಲ್ಲಿ ಉಗುಳುವುದು, ಪಾದದ ಹೆಜ್ಜೆ ಗುರುತುಗಳು ಅಗ್ರಹಾರದಲ್ಲಿ ಮೂಡದಿರಲು ಬೆನ್ನಿಗೆ ಬಾರಿಗೆ ಕಟ್ಟಿಕೊಂಡು ಹೊರಡುವುದು ಸಾಮಾನ್ಯ ಸಂಗತಿಗಳಾಗಿದ್ದವು. ಇಂಥ ನಿಕೃಷ್ಟ ಜನಗಳನ್ನು ಬಸವಣ್ಣನವರು ಅಪ್ಪಿಕೊಂಡಾಗ ಇತಿಹಾಸ ಪುಟಕ್ಕೆ ಗರ ಬಡಿದಂತೆ ಆಗಿದ್ದರೆ ಯಾರೂ ಆಶ್ಚರ್ಯ ಪಡಬೇಕಾಗಿಲ್ಲ.

ಬಸವಣ್ಣನವರ ಮಾತು ಕೇವಲ ತೋರಿಕೆಯದ್ದಾಗಿರಲಿಲ್ಲ. ಅದು ನಡೆ ನುಡಿಗಳು ಒಂದಾದ ಬದುಕಾಗಿತ್ತು. ಭಕ್ತಿ ಶುಭಾಷಯ ನುಡಿಯ ನುಡಿವೆ. ನುಡಿದಂತೆ ನಡೆವೆ. ಮೇಲೆ ತೂಗುವ ತ್ರಾಸ ಕಟ್ಟಳೆ ನಿಮ್ಮ ಕೈಯಲ್ಲಿದೆ. ಒಂದು ಜವೆ ಕೊರತೆಯಾದಡೆ ಎನ್ನನದ್ದಿ ನೀನೆದ್ದು ಹೋಗು ಎಂಬ ಆತ್ಮ ವಿಶ್ವಾಸದ ಭಾಷೆ ಅವರದಾಗಿತ್ತು. ಬಸವಣ್ಣನವರಲ್ಲಿ ಹೊಮ್ಮುತ್ತಿದ್ದ ಕನಸುಗಳು ಕೇವಲ ಕನಸಾಗಿರಲಿಲ್ಲ. ಅವುಗಳು ನನಸಾಗುವ ಎಲ್ಲಾ ಸಿದ್ಧತೆಯನ್ನು ಅವರು ಮಾಡಿಕೊಂಡಿದ್ದರು. ಮುಂದಿನ ಜನ್ಮ- ಸ್ವರ್ಗ- ನರಕ ಮುಂತಾದವುಗಳ ಹೆದರಿಕೆ ಅವರಿಗೆ ಇರಲಿಲ್ಲ. ಇವೆಲ್ಲ ಬೂಟಾಟಿಕೆ ಎಂಬುದು ಬಸವಣ್ಣನವರಿಗೆ ಪಕ್ಕಾ ಖಾತ್ರಿ. ಆದ್ದರಿಂದ ಜನರನ್ನು ಮೊದಲು ಆ ವಿಷಯಗಳಿಂದ ವಿಚಾರಗಳನ್ನು ಕೊಟ್ಟು ಹಿಡಿದೆತ್ತಿದರು.

ಇಷ್ಟಲಿಂಗವನ್ನು ಕೇವಲ ಪೂಜಿಸಲಷ್ಟೆ ಬಸವಣ್ಣನವರು ಕೊಡಲಿಲ್ಲ. ಇಷ್ಟಲಿಂಗವನ್ನು ಪೂಜಿಸುತ್ತ ಪೂಜಿಸುತ್ತ ಜಂಗವಾಗಬೇಕು ನಾವೂ ಸ್ಥಾವರವಾಗಬಾರದು ಎಂಬುದು ಅವರ ಅಭಿಲಾಷೆಯಾಗಿತ್ತು. ಜಂಗಮಕ್ಕೆರೆದರೆ ಸ್ಥಾವರ ನೆನೆಯುತ್ತದೆ ಎಂಬುದು ಅವರ ಖಚಿತ ಮಾತು.

ಮರಕ್ಕೆ ಬೇರು ಬಾಯಿಯೆಂದು ತಳುಂಕೆ ನೀರನೆರೆದಡೆ
ಮೇಲೆ ಫಲವಿಸಿತ್ತು ನೋಡಾ,
ಲಿಂಗದ ಬಾಯಿ ಜಂಗಮವೆಂದು ಪಡಿಪದಾರ್ಥವ ನೀಡಿದಡೆ
ಮುಂದೆ ಸಕಳಾರ್ಥವನೀವನು
ಆ ಜಂಗಮವ ಹರನೆಂದು ಕಂಡು,
ನರನೆಂದು ಭಾವಿಸಿದಡೆ ನರಕ ತಪ್ಪದು ಕಾಣಾ
ಕೂಡಲಸಂಗಮದೇವಾ

ಜಂಗಮವೆಂದರೆ ಕೇವಲ ಒಬ್ಬ ವ್ಯಕ್ತಿ ಅಲ್ಲ, ಸಮಾಜವೆಂಬುದನ್ನು ನಾವು ಜ್ಞಾಪಕವಾಗಿ ಇಟ್ಟುಕೊಳ್ಳಬೇಕು. ಇಷ್ಟಲಿಂಗ ಮೂಲ ಚೈತನ್ಯವೆ ಜಂಗಮ. ಆ ಜಂಗಮಕ್ಕೆ ನೀರನೆದಡೆ ಖಂಡಿತವಾಗಿಯೂ ಮೇಲೆ ಪಲ್ಲವಿಸುತ್ತದೆ. ಇಷ್ಟಲಿಂಗವನ್ನು ಪೂಜಿಸಬಾರದು ಎಂದು ನಾನಿಲ್ಲಿ ಹೇಳಲು ಹೊರಟಿಲ್ಲ. ಕೇವಲ ಇಷ್ಟಲಿಂಗ ಪೂಜೆಯಲ್ಲಿಯೆ ಬಸವಣ್ಣನವರ ಕನಸುಗಳನ್ನು ಮಲಗಿಸಬಾರದು ಎಂಬುದು ನನ್ನ ವಿನಂತಿ. ಅಂದು ಇಷ್ಟಲಿಂಗವನ್ನು ಕೊಟ್ಟ ಮುಖ್ಯ ಉದ್ದೇಶವೆಂದರೆ ಜನರನ್ನು ಸ್ಥಾವರ ದೇವರ ಗುಡಿಗಳಿಂದ ಮುಕ್ತಿ ಮಾಡುವುದಾಗಿತ್ತು. ಆ ದೇವರಿಗಾಗಿ ಕಂಗಾಲಾಗಿದ್ದ ಜನಗಳಿಗೆ ಅವರವರ ಅಂಗೈಯಲ್ಲಿಯೆ ಇಷ್ಟಲಿಂಗವನ್ನು ನೀಡುವ ಮೂಲಕ ಆ ದೇವರ ಭ್ರಾಂತಿಯಿಂದ ದೂರ ಸರಿಸಿದ್ದರು. ಇಷ್ಟಲಿಂಗ ಬರೀ ಪೂಜೆಯ ವಸ್ತುವಲ್ಲಿ ಜಗದೊಳಗೆ ನನ್ನ ಇರವನ್ನು ಅರ್ಥೈಸಿಕೊಳ್ಳುವುದು. ತನ್ನತಾ ಅರಿವುದು. ಆ ಮೂಲಕ ಬದುಕನ್ನು ಜಂಗಮವಾಗಿಸಿಕೊಳ್ಳುವುದು.

ಬರೀ ಇಷ್ಟಲಿಂಗಕ್ಕೆ ಬಸವಣ್ಣನವರು ಒತ್ತುಕೊಟ್ಟು ಶಿವಯೋಗವನ್ನೆ ಮುಖ್ಯವೆಂದು ಭಾವಿಸಿದ್ದರೆ ಅನುಭವ ಮಂಟಪವನ್ನು ರಚಿಸಿ, ಅಲ್ಲಿ ಸಹಸ್ರಾರು ವಿಚಾರಗಳ ಹೊಳಹುಗಳನ್ನು ನಮಗೆ ಬಿಟ್ಟು ಕೊಡುತ್ತಿರಲಿಲ್ಲ. ಅಲ್ಲಮನಂತಹ ಅನುಭಾವಿಗಾಗಿ, ಅಕ್ಕಮಹಾದೇವಿಯಂತಹ ವೀರ ವಿರಾಗಿಣಿಗಾಗಿ, ಸೊನ್ನಲಿಗೆ ಸಿದ್ದರಾಮಯ್ಯನಂತಹ ಸಾಧಕನಿಗಾಗಿ ಕಾಯ್ದು ಕುಳಿತಿರುತ್ತಿರಲಿಲ್ಲ. ಅಲ್ಲಮಪ್ರಭು ಹೇಗೂ ಮಹಾಜ್ಞಾನಿಯಾಗಿದ್ದ. ಆತ ಆಗಲೆ ಅನಿಮಿಷನಿಂದ ಇಷ್ಟಲಿಂಗವನ್ನು ಪಡಕೊಂಡಿದ್ದ. ಆತ ಅಲ್ಲಿ ಎಲ್ಲೋ ಇದ್ದು ಇಷ್ಟಲಿಂಗ ಪೂಜಿಸುತ್ತಲೆ ಕರಗಿ ಹೋಗಬಹುದಾಗಿತ್ತು. ಸಿದ್ಧರಾಮ ಶರಣರಂತೂ ಸೊನ್ನಲಿಗೆಯಲ್ಲಿ ಹೇಗೋ ಕೆರೆ ಕಟ್ಟಿಸುವುದು, ದೇವಾಲಯಗಳ ನಿರ್ಮಾಣ ಮಾಡಿಕೊಂಡು ಜನರ ಮೆಚ್ಚುಗೆಗೆ ಪಾತ್ರವಾಗಿದ್ದರು. ಅಕ್ಕನಂತೂ ಚೆನ್ನಮಲ್ಲಿಕಾರ್ಜುನನ ಹುಡುಕುತ್ತ ಕದಳಿಯ ಬನದ ಶ್ರೀಶೈಲಕ್ಕೆ ಹೊರಟಿದ್ದಳು. ಆದರೆ ಇವರೆಲ್ಲ ಕಲ್ಯಾಣಕ್ಕೆ ಕೇವಲ ಇಷ್ಟಲಿಂಗ ಪೂಜೆಗಾಗಿ ಬಂದರೆ ? ದೇವಾಲಯ ಕಟ್ಟಿಸುತ್ತ ಕುಳಿತಿದ್ದ ಸಿದ್ಧರಾಮನನ್ನು ತಮ್ಮ ತೀವ್ರ ಮಾತುಗಳಿಂದ ತಿವಿದು ಕಲ್ಯಾಣಕ್ಕೆ ಕರೆತರುವ ಅವಶ್ಯಕತೆ ಅಲ್ಲಮಪ್ರಭುವಿಗೆ ಇತ್ತೆ ?

ನಡೆಯಲರಿಯದೆ, ನುಡಿಯಲರಿಯದೆ
ಲಿಂಗವ ಪೂಜಿಸಿ ಫಲವೇನು ! ಫಲವೇನು !
ಅವರ ದುಃಖವೆನ್ನ ದುಃಖ ಅವರ ಸುಖವೆನ್ನ ಸುಖ
ಕೂಡಲಸಂಗನ ಶರಣರ ಮನನೊಂದಡೆ
ಆನು ಬೆಂದೆನಯ್ಯಾ

ಎಂಬ ಬಸವಣ್ಣನವರ ವಚನ ಏನನ್ನು ಧ್ವನಿಸುತ್ತದೆ ? ನಡೆ ನುಡಿ ಒಂದಾದವರು ಮಾತ್ರವೆ ಇಷ್ಟಲಿಂಗವನ್ನು ಪೂಜಿಸುವ ಹಕ್ಕುಳವರಾಗುತ್ತಾರೆ ಎಂಬುದು ಬಸವಣ್ಣನವರ ಸ್ಪಷ್ಟವಾದ ಮಾತು. ಅವರ ದುಃಖವೆನ್ನ ದುಃಖ, ಅವರ ಸುಖವೆನ್ನ ಸುಖ ಎಂದಿದ್ದಾರಲ್ಲ ! ಅವರು ಅಂದರೆ ಯಾರು ? ಬಸವಣ್ಣನವರು ಆಪ್ತವಾಗಿ ಹಚ್ಚಿಕೊಂಡದ್ದು ತಮ್ಮ ಬಂಧು ಬಳಗವನ್ನಲ್ಲ. ನಂಟು ಭಕ್ತಿ ನಾಯಕ ನರಕ ಎಂದವರು ತಿರಸ್ಕರಿಸಿದ್ದರು. ಒಡೆಯರು ಬಂದರೆ ಗುಡಿತೋರಣವ ಕಟ್ಟಿ ಸಂಭ್ರಮಿಸಿದ್ದರು. ಹಾಗಾದರೆ ಬಸವಣ್ಣನವರ ಒಡೆಯರು ಯಾರು ? ಅವರ ಸಂಬಂಧಗಳು ಯಾರು ಯಾರು ? ಎಂದು ಹುಡುಕುತ್ತ ಹೋದರೆ ಅವರ ಮೂಲ ಆಶಯ ಏನಿತ್ತು ? ಎಂಬುದು ಸ್ಪಷ್ಟವಾಗುತ್ತ ಹೋಗುತ್ತದೆ.

ಅಪ್ಪನು ನಮ್ಮ ಮಾದಾರ ಚೆನ್ನಯ್ಯ
ಬೊಪ್ಪನು ನಮ್ಮ ಡೋಹರ ಕಕ್ಕಯ್ಯ
ಚಿಕ್ಕಯ್ಯ ನೆಮ್ಮಯ್ಯ ಕಾಣಯ್ಯ,
ಅಣ್ಣನು ನಮ್ಮ ಕಿನ್ನರಿ ಬೊಮ್ಮಯ್ಯ
ಎನ್ನನೇತಕ್ಕರಿಯಿರಿ,ಕೂಡಲಸಂಗಯ್ಯಾ

ಯಾರು ನಾನು ಲಿಂಗವಂತನೆಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾನೋ ಆತ ಅಪ್ಪ ಬಸವಣ್ಣನವರಂತೆಯೆ ತಳ ಸಮೂಹವನ್ನು ಪ್ರೀತಿಸಬೇಕಾಗುತ್ತದೆ. ಗೌರವಿಸಬೇಕಾಗುತ್ತದೆ. ಅಪ್ಪಿಕೊಳ್ಳಬೇಕಾಗುತ್ತದೆ. ಆಗಲೆ ಇಷ್ಟಲಿಂಗ ಪೂಜೆ ಮಾಡಿದುದಕ್ಕೂ ಸಾರ್ಥಕವಾಗುತ್ತದೆ. ಏಕೆಂದರೆ ಬಸವಣ್ಣನವರು ಕರುಣಿಸಿದ ಇಷ್ಟಲಿಂಗ ಅರಿವಿನ ಕುರುಹು, ಆಚಾರದ ಪ್ರತೀಕ ಮಾತ್ರ. ಜಂಗಮಕ್ಕೆರೆದರೆ ಖಂಡಿತ ಇಷ್ಟಲಿಂಗ ಪೂಜೆಗೊಳ್ಳುತ್ತದೆ.

ಲಿಂಗವ ಪೂಜಿಸಿ ಫಲವೇನಯ್ಯಾ
ಸಮರತಿ, ಸಮಕಳೆ ಸಮ ಸುಖವನರಿಯದನ್ನಕ್ಕ
ಲಿಂಗವ ಪೂಜಿಸಿ ಫಲವೇನಯ್ಯಾ
ಕೂಡಲಸಂಗಮದೇವರ ಪೂಜಿಸಿ
ನದಿಯೊಳಗೆ ನದಿ ಬೆರಸಿದಂತಾಗದನ್ನಕ್ಕ

ಇಷ್ಟಲಿಂಗವನ್ನು ಪೂಜಿಸುವುದು ಕೇವಲ ಕಾಟಾಚಾರಕ್ಕೆ ಅಲ್ಲ. ನಾನು ಭಕ್ತಿಯುಳ್ಳವನು ಎಂದು ಯಾರಿಗೋ ತೋರಿಸುವುದಕ್ಕೂ ಅಲ್ಲ. ಆತ ಸಮರತಿ, ಸಮಸುಖ, ಸಮಕಳೆಯನ್ನು ಅರಿಯಬೇಕಾಗುತ್ತದೆ. ನದಿಯೊಳಗೆ ನದಿ ಬೆರೆತು ತನ್ನ ಅಸ್ತಿತ್ವವನ್ನು ಕಳಕೊಂಡು ನದಿಯೊಳಗೆ ಒಂದಾದಂತೆ ಸಮಾಜದೊಂದಿಗೆ ವಿಲೀನಗೊಳ್ಳಬೇಕಾಗುತ್ತದೆ. ಈ ಇಷ್ಟಲಿಂಗ ಪೂಜೆ ಮಾತ್ರ ಬಸವಣ್ಣನವರಿಗೆ ಇಷ್ಟವಾಗುತ್ತದೆ.

ತನಗೆ ದೈಹಿಕಿವಾಗಿ ಮಾನಸಿಕವಾಗಿ ಕಷ್ಟಬಂದಾದ, ಮನಸ್ಸು ಜರ್ಜರಿತಗೊಂಡಾಗ ಇಷ್ಟಲಿಂಗವನ್ನು ಕೈಯಲ್ಲಿ ಹಿಡಕೊಂಡು ಬೇಡುವುದಲ್ಲ. ಬೇಡಲಾಗದು ಜಂಗಮ. ಬೇಡಿಸಲಾಗದು ಭಕ್ತ. ಬೇಡಿದವ ನೋಡರೆ, ಬೇಡ ಬೇಡ ಭಕ್ತಿ ಎಂಬ ಮಾತನ್ನು ಸೊನ್ನಲಿಗೆ ಸಿದ್ದರಾಮಣ್ಣನರು ಹೇಳುತ್ತಾರೆ. ಇಷ್ಟಲಿಂಗ ಅರಿವಿನ ಪೂಜೆಯಾದ್ದರಿಂದ ಕ್ಷಣ ಕ್ಷಣವೂ ಇಷ್ಟಲಿಂಗವನ್ನು ಪೂಜಿಸಬೇಕು. ಆ ಇಷ್ಟಲಿಂಗ ಕಷ್ಟದ ಲಿಂಗವಲ್ಲವಾದ್ದರಿಂದ ಅರ್ಚನೆ ಪೂಜನೆಯ ಬಡಿವಾರಗಳ ಅಗತ್ಯವಿಲ್ಲ. ಸಜ್ಜಳಾಗಿ ಮಜ್ಜನಕ್ಕೆರೆದೆ, ಶಾಂತಳಾಗಿ ಪೂಜಿಸಿದರೆ ಸಾಕು. ಆದರೆ ಕಷ್ಟವೆಂದಾಗ ವೆಂಕಟರಮಣ, ಸಾಯುವಾಗ ಇಷ್ಟಲಿಂಗ ಪೂಜೆ ಅಂದರೆ ಹೇಗೆ ?

ನೇಮಸ್ಥನೇನು ಬಲ್ಲನಯ್ಯ ಲಿಂಗದ ಕುರುಹ ?
ಸೂಳೆಯ ಮಗನೇನು ಬಲ್ಲನಯ್ಯ ತಂದೆಯ ಕುರುಹ ?
ಜಂಗಮದ ಅನುವ ತೊತ್ತಿನ ಮಗನೇನು ಬಲ್ಲನಯ್ಯಾ ?
ಇಂತಪ್ಪ ಅಂಗವೇ ಲಿಂಗ, ಲಿಂಗವೇ ಅಂಗ
ಲಿಂಗವೇ ಜಂಗಮವು,
ಜಂಗಮವೇ ಲಿಂಗವೆಂದರಿಯದವರ
ಭಕ್ತರೆಂದರೆ ಅಘೋರ ನರಕವೆಂದಾತ ನಮ್ಮ
ಅಂಬಿಗರ ಚೌಡಯ್ಯ ನಿಜ ಶರಣನು.

ದಿನದ ಮೂರು ಹೊತ್ತು ಮಠದಲ್ಲಿ ಕುಳಿತುಕೊಂಡು ಇಷ್ಟಲಿಂಗವನ್ನು ಕೈಯಲ್ಲಿ ಹಿಡಕೊಂಡು ಪೂಜಿಸಿದರೆ ಸಾಲದು. ಇಷ್ಟಲಿಂಗ ಪೂಜೆಯ ಮಹತ್ವವನ್ನು ಅರಿತು ಮುನ್ನಡೆಯಬೇಕು. ಲಿಂಗವೇ ಜಂಗಮವು, ಜಂಗಮವೇ ಲಿಂಗವು ಎಂದು ಅರಿಯಬೇಕು.

ಆಡಿಂಗೆ ದಾಯಾದ್ಯರಾದಿರಲ್ಲಾ
ಕಾಡ ಗಿಡುವಿಂಗೆ ಮೃತ್ಯುವಾದಿರಲ್ಲಾ
ಅರಿವನರಿಯ ಹೇಳಿ.
ಶ್ರೀಗುರು ಕುರುಹ ಕೈಯಲ್ಲಿ ಕೊಟ್ಟಡೆ
ಅರಿವನೆ ಮರೆದು ಕುರುಹ ಪೂಜಿಸುವ
ಕುರಿಗಳ ನೋಡಾ ಗುಹೇಶ್ವರಾ

ಎಂಬ ಮಹಾನುಭಾವಿ ಅಲ್ಲಮನ ನುಡಿಗಳನ್ನು ಅರ್ಥೈಸಿಕೊಂಡು ಇಷ್ಟಲಿಂಗ ಪೂಜಕರಾಗಬೇಕು. ಬಸವಣ್ಣನವರು ಕೇವಲ ಭಕ್ತಿ ಭಂಡಾರಿಯಲ್ಲ. ಅವರಿಗೆ ಹಲವು ಮುಖಗಳಿವೆ. ಅವುಗಳನ್ನು ಅರಿತು ಇಷ್ಟಲಿಂಗವನ್ನು ಪೂಜಿಸಬೇಕೆ ಹೊರತು.ಪಟ್ಟಭದ್ರರಂತೆ ನಾವೂ ಲಿಂಗಪೂಜೆಯೆ ಪ್ರಮುಖ ಎಂದು ಅಲ್ಲಿಯೆ ಕುಳಿತು ಕೊಳೆತು ಹೋಗಬಾರದು. ಶರಣರ ಅಂತರಾತ್ಮ ಏನು ಹೇಳುತ್ತದೆ ಎಂಬುದಕ್ಕೂ ನಾವು ಕಿವಿಕೊಡಬೇಕು.ಕಣ್ಣಾಗಬೇಕು. ನಾಲಿಗೆಯಿಂದ ಚಲಿಸಬೇಕು. ಮನಸ್ಸಿನಿಂದ ಓಡಬೇಕು. ದೈಹಿಕವಾಗಿ ಎಲ್ಲರಿಗೆ ಹತ್ತಿರವಾಗಿ ಸಮ ಸಮಾಜದ ನಿರ್ಮಾಣಕ್ಕೆ ನಾವು ಕಟಿಬದ್ಧರಾಗಬೇಕು.

 

 

ಜಿಲ್ಲೆ

ರಾಜ್ಯ

error: Content is protected !!