ಉಮೇಶ ಗೌರಿ (ಯರಡಾಲ)

ಸುದ್ದಿ ಸದ್ದು ನ್ಯೂಸ್

ಸಂಸ್ಕೃತ ಭಾಷೆಯ ಮೇಲಿನ ಮಮತೆಯನ್ನ ತುಳು ಮತ್ತು ಕೊಡವ ಭಾಷೆಗಳ ಮೇಲೂ ತೋರಿಸಿ: ಬಿ ಕೆ ಹರಿಪ್ರಸಾದ್‌

ಬೆಂಗಳೂರು ಜನವರಿ 18: ಬಿಜೆಪಿ ಸರಕಾರ ರಾಜ್ಯದ ಕೇವಲ 24,821 ಸಂಸ್ಕೃತ ಭಾಷಿಗರ ಮೇಲೆ ತೋರಿಸುತ್ತಿರುವ ಅಗಾಧ ಮಮತೆಯನ್ನ ನಮ್ಮ ರಾಜ್ಯದಲ್ಲಿ ಮೂಲೆಗುಂಪಾಗಿರುವ ತುಳು ಮತ್ತು ಕೊಡವ ಭಾಷೆಗಳ ಮೇಲೆ ತೋರಿಸಲಿ ಎಂದು ಕಾಂಗ್ರೆಸ್‌ ಹಿರಿಯ ಮುಖಂಡ ಹಾಗೂ ವಿಧಾನಪರಿಷತ್‌ ಸದಸ್ಯ ಬಿ ಕೆ ಹರಿಪ್ರಸಾದ್‌ ಆಗ್ರಹಿಸಿದ್ದಾರೆ

ಈ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಅವರು, 2011 ರ ಜನಗಣತಿಯ ಪ್ರಕಾರ ರಾಜ್ಯದಲ್ಲಿರುವ ಒಟ್ಟು ತುಳುವರ ಸಂಖ್ಯೆ 18,46,427 ಹಾಗೆಯೇ ಕೊಡವ ಭಾಷೆಯನ್ನಾಡುವವರ ಸಂಖ್ಯೆ 1,13,857. ಆದರೆ, ಸಂಸ್ಕೃತ ಭಾಷೆಯನ್ನು ತಮ್ಮ ಮಾತೃಭಾಷೆಯೆಂದು ದಾಖಲಿಸಿದವರ ಸಂಖ್ಯೆ 24,821 ಮಾತ್ರ. ಇಷ್ಟು ಕಡಿಮೆ ಜನಸಂಖ್ಯೆಯ ಮೇಲೆ ಬಿಜೆಪಿ ಸರಕಾರ ತನ್ನ ಅಗಾಧ ಪ್ರೀತಿಯನ್ನು ತೋರಿಸುತ್ತಾ ಬಂದಿದೆ. ಈಗಾಗಲೇ ರಾಜ್ಯದಲ್ಲಿ ಸಂಸ್ಕೃತ ವಿಶ್ವವಿದ್ಯಾಲಯವಿದೆ. ಅದಕ್ಕೆ ಬೇಕಾದಂತಹ ಎಲ್ಲಾ ಸೌಕರ್ಯಗಳನ್ನು ನೀಡಲಾಗಿದೆ. ಆದರೆ, ನಮ್ಮ ರಾಜ್ಯದಲ್ಲಿ ಚಾಲ್ತಿಯಲ್ಲಿರುವ ತುಳು ಮತ್ತು ಕೊಡವ ಭಾಷೆಗಳ ಅಭಿವೃದ್ದಿಯತ್ತ ಮಾತ್ರ ದಿವ್ಯ ನಿರ್ಲಕ್ಷವನ್ನು ತೋರಿಸುತ್ತಿದೆ ಎಂದು ಹೇಳಿದ್ದಾರೆ.

ಭಾಷಾವಾರು ಪ್ರಾಂತ್ಯಗಳ ರಚನೆಯಾದಾಗ ಪ್ರಭಾವೀ ಪ್ರಾದೇಶಿಕ ಭಾಷೆಗಳಿಗೆ ಮಹತ್ವ ಬಂದುವು, ಆದರೆ ಈ ಹಂತದಲ್ಲಿ ಪ್ರಾದೇಶಿಕ ಭಾಷೆಗಳ ಆಶ್ರಯದಲ್ಲಿರುವ, ಆದರೆ ಯಾವುದೇ ರಾಜ್ಯದ ಅಧಿಕೃತ ಭಾಷೆಗಳ್ಲಲದ ಸಣ್ಣ ಭಾಷೆಗಳು ತೀವ್ರ ಉಪೇಕ್ಷೆಗೆ ಒಳಗಾಗಿವೆ. ದೇಶದಲ್ಲಿ ಹಲವಾರು ರಾಜ್ಯಗಳು ತಮ್ಮ ಒಂದಕ್ಕೂ ಹೆಚ್ಚು ಭಾಷೆಗಳನ್ನು ಅಧಿಕೃತವಾಗಿ ಘೋಷಿಸಿಕೊಂಡಿವೆ. ಆದರೆ, ಕರ್ನಾಟಕ ರಾಜ್ಯ ಕನ್ನಡವನ್ನು ಹೊರತುಪಡಿಸಿ ಬೇರೆ ಭಾಷೆಗಳಿಗೆ ಅಧಿಕೃತ ಸ್ಥಾನ ನೀಡಿಲ್ಲ. ಬಹುಜನರು ದಿನನಿತ್ಯ ಉಪಯೋಗಿಸುವ ಕೊಡವ, ತುಳು ಭಾಷೆಗಳನ್ನು ಕರ್ನಾಟಕದ ಅಧಿಕೃತ ಭಾಷೆಗಳೆಂದು ಮಾನ್ಯ ಮಾಡಬಹುದಾಗಿದೆ. ಆದರೆ, ಮಾನ್ಯ ಮಾಡದೇ ಇರುವುದರಿಂದ ಕೇಂದ್ರ ಸರಕಾರ ಸುಲಭವಾಗಿ ನುಣುಚಿಕೊಳ್ಳುತ್ತಿದೆ. ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿರುವ ಭಾಷೆಗಳಾದ ತುಳು ಮತ್ತು ಕೊಡವ ಭಾಷೆಗಳನ್ನು ರಾಜ್ಯ ಸರಕಾರ ಮೊದಲು ತನ್ನ ಅಧಿಕೃತ ಭಾಷೆಗಳೆಂದು ಘೋಷಿಸಬೇಕು ಎಂದು ಆಗ್ರಹಿಸಿದರು. ಸಂಸ್ಕೃತಕ್ಕೆ ನೀಡುತ್ತಿರುವಷ್ಟೇ ಮಹತ್ವವನ್ನ ನಮ್ಮ ಕನ್ನಡ, ತುಳು ಹಾಗೂ ಕೊಡವ ಭಾಷೆಗೂ ನೀಡುವ ಮೂಲಕ ಒಂದು ಕಣ್ಣಿಗೆ ಸುಣ್ಣ ಒಂದು ಕಣ್ಣಿಗೆ ಬೆಣ್ಣೆ ಎನ್ನುವ ನೀತಿಯನ್ನು ಬಿಡಬೇಕು. ಹಾಗೆಯೇ ನಮ್ಮ ಭಾಷೆಗಳ ಅಭಿವೃದ್ದಿಗೆ ಪ್ರೋತ್ಸಾಹ ನೀಡಬೇಕು ಎಂದು ಒತ್ತಾಯಿಸಿದರು

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";