ಸುದ್ದಿ ಸದ್ದು ನ್ಯೂಸ್
“ದುಡದ ಜೀವ.. ಕುಂತ ಉಣ್ಣಾಕ ಒಪ್ಪೂದುಲ್ಲ.. ಯಪ್ಪಾ. ಕಡೀಕ ಉಳವಿ ಬಸಪ್ಪನ ಪಾವಳಿ ಕಸ ಉಡುಗಿ ಉಣ್ಣತೇನಿ.. ದುಡೀದ ಉಣ್ಣೋದು ಹೆಂಗ?”
ಅಂದವರು,
ಗದಗ ಜಿಲ್ಲೆ, ಶಿರಹಟ್ಟಿ ತಾಲೂಕಿನ ಕುಂದ್ರಳ್ಳಿ ಗ್ರಾಮದ ಈ ಅಮ್ಮನ ಹೆಸರು, ಶ್ರೀಮತಿ ಯಲ್ಲಮ್ಮ ಯಲ್ಲಪ್ಪ ಉಪ್ಪಾರ. ೭೮ ವರ್ಷ ವಯಸ್ಸು. ೫ ಜನ ಹೆಣ್ಣು ಮಕ್ಕಳು, ೨ ಗಂಡು ಮಕ್ಕಳ ಹಡೆದವ್ವ..!
ಗೋಜನೂರ ಈ ಅವ್ವನ ತವರು ಮನೆ. ೧೩ನೇ ವಯಸ್ಸಿಗೆ ಮದುವೆ. ಬಡವರ ಮನೆಗೆ ಮಗಳನ್ನ ಧಾರೆ ಎರೆದ ಹೆತ್ತಪ್ಪ, ಮೂರುವರೆ ಎಕರೆ ನೀರಾವರಿ ತೋಟ ಕೊಟ್ಟು, ಬಾಳುವೆಗೆ ಹಚ್ಚಿದ. ಕೃಷಿ ಬದುಕನ್ನ ಉಂಡುಡುವಂತಾಯಿತು.
ಗಂಡ-ಹೆಂಡತಿ ಆಳಾಗಿ ದುಡಿ ದುಡಿದು ಕೂರಗಿಯಷ್ಟು ಒಣ ಬೇಸಾಯದ ಹೊಲ ಗಳಿಸಿದರು. ಹಡೆದ ಮಕ್ಕಳನ್ನೆಲ್ಲ ಕಕ್ಕುಲಾತಿಯಿಂದ ಮೆಟ್ಟೆಗೆ ಹಚ್ಚಿದರು. ಹಣ್ಣಾದರು. ದುಡಿಮೆ ನಂಬಿ ಬದುಕಿದರು. ದೇವರ ಕಂಡರು! ಹತ್ತಾರು ಊರುಗಳ ವಾರದ ಸಂತಿ, ಪ್ಯಾಟಿಯೊಳಗ.. ಬದುಕುಕಟ್ಟಿಕೊಂಡ ಜೀವಗಳು.. ಸ್ವಾಭಿಮಾನ, ಪ್ರಾಮಾಣಿಕತೆಗೆ ಅನ್ವರ್ಥ..
ಮೊಮ್ಮಕ್ಕಳು, ಮರಿ ಮೊಮ್ಮಕ್ಕಳು, ಗಿರಿ ಮೊಮ್ಮಕ್ಕಳನ್ನು ಕಂಡ ಈ ಹಿರಿ ಜೀವ ೫೮ ವರ್ಷಗಳ ಏರಿಳಿತದ ದಾಂಪತ್ಯ ಬದುಕಿನ ಮಧ್ಯೆ, ೭ ವರ್ಷಗಳ ಕೆಳಗೆ ಯಜಮಾನ್ರನ್ನ ಕಳೆದುಕೊಂಡಿತು. ಈಗ ಒಬ್ಬಂಟಿ. ದೊಡ್ಡ ಮಗಳು ಮತ್ತು ಅಳಿಯ ಧಾರವಾಡದ ಶ್ರೀ ಉಳವಿ ಚನ್ನಬಸವೇಶ್ವರ ದೇವಸ್ಥಾನದಲ್ಲಿ ಕಾವಲುಗಾರರಾಗಿ ಕಳೆದ ೪-೫ ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ, ಅವ್ವ ದೊಡ್ಡ ಮಗಳ ಆಗ್ರಹದ ಮೇಲೆ, ಇಲ್ಲಿಗೆ ಬಂದು ೨ ತಿಂಗಳು ಕಳೆದಿವೆ. “ಎಲ್ಲಿಗೂ ಹೋಗಬ್ಯಾಡಾ.. ಯವ್ವಾ.. ನನ್ನಕೂಡ ಇರು” ಅಂತ ತಾಕೀತು ಮಾಡಿ, ಕರುಳ ಸಂಬಂಧ ಬಿಗಿದಿಟ್ಟಾಳ! ಅಂತ..ಬೆಳ್ಳಂಬೆಳಗ್ಗೆ ಚುಮುಚುಮು ಬೆಳಕು ಮೂಡುವ ಹೊತ್ತು, ಮೈಕೊರೆವ ಭರ್ಜರಿ ಚಳಿಯಲ್ಲಿ ಅವ್ವ, ಹೀಗೆ ಕಾಯಿಪಲ್ಯ ಒಟ್ಟಿಟ್ಟು ಸಮಯ ದೂಡಲು ಇಡೀ ದಿನ ನಿತ್ಯ ದೇವಸ್ಥಾನದ ಎದುರಿನ ಕಟ್ಟೆಯ ಮೇಲೆ ಗಿಡದಡಿ ಕುಳಿತು, ಮಾರಾಟ ಮಾಡುತ್ತಾರೆ.
“ವೇಳ್ಯಾ ಹೋಗುದಲ್ರೀ. ಖಾಲಿ ಕುಂತ ಬ್ಯಾಸರ ಆತು. ದಗದದಾಗ ಸವೆದ ಜೀವ. ಮಗಳಿಗೆ ಹೇಳಿ ಈ ಕಾಯಿಪಲ್ಲೆ ಅಂಗಡಿ ಹಚ್ಚಿಕೊಂಡೆ.. ಜನ ಬರ್ತಾರ. ಮಾತಾಡಸ್ತಾರ. ಖರೀದಿ ಮಾಡ್ತಾರ. ಚೌಕಾಸಿ ಮಾಡ್ತಾರ. ಗಿಟ್ಟತಿದ್ರ ಕೊಟ್ಟು ಖಾಲಿ ಮಾಡಿ ಬಿಡ್ತೇನಿ.. ಇಟ್ಟು ಒಣಗಿಸೋದು ಏನ್ ಚೆಂದ? ಮಳ ಮಳ ಅನ್ನೋವಾಗ ಮಾರಿದ್ರ ತಿಂದವರ ಹೊಟ್ಟಿ ಹರಸ್ತೈತಿ.. ಲಾಭ ಅದು”
ದುಡಿದೇ ಸವೆಯಬೇಕೆಂಬ ಹಟದಾಕಿ ಈ ‘ಎಲ್ಲ’ವ್ವ! ಕುಂತು ಸೊರಗೋದಕ್ಕಿಂತ, ದುಡದು ಸವೆಯಬೇಕು.. ಸವಿಯಬೇಕು ತುತ್ತನ್ನ.. ಬಸವಣ್ಣ ಜೀವಂತವಾಗಿದ್ದಾನೆ.. ಇಂಥವರಲ್ಲಿ.. ಮೌಲ್ಯವಾಗಿ..ಅಂದ್ಹಾಂಗ, ಅವ್ವನ ಊಟ, ದಿನಕ್ಕೆ ಅರ್ಧದಿಂದ ಒಂದು ಬಿಸಿ ರೊಟ್ಟಿ .. ಇಲ್ಲಾಂದ್ರ ಎರಡು ಚಮಚೆ ಉಪ್ಪಿಟ್ಟು.. ಎರಡೇ ತುತ್ತು ಅನ್ನ!
ಕಣ್ಣು ನಿಚ್ಚಳ, ಹಲ್ಲು ಗಟ್ಟಿ, ಚಳಿ ಮಳಿ ಮೈಗೇ ತಾಗದಷ್ಟು ಬಡತನ ಪಳಗಿಸಿದಾಕೆ..ಸುಕ್ಕು ಗಟ್ಟಿದ ಚರ್ಮ, ಕಬ್ಬಿಣದಂತಹ ಕೈ, ಬಿರುಸಾದ ಅಂಗೈ ಅವ್ವನ ದುಡಿಮೆಯ ಸಾವಿರ ಕತೆ ಹೇಳ್ತಾವ..
“ಯಾರಿಗೂ ಭಾರ ಆಗ ಬಾರ್ದು ನೋಡೋ ನನ್ನಪ್ಪ..” ಅಂದ ಭೂಮಿ ತೂಕದ ಅವ್ವ..
“ಇದು ನನ್ನ ಕೆಲಸ ಅಲ್ಲ; ನಾ ಯಾಕ್ ಮಾಡ್ಲಿ? ಮಾಡಿದ್ರ ನನಗೇನ್ ಲಾಭ? ನಿಮ್ಮ ಕೆಲಸ ಅದು..” ಅನ್ನುವ ಯುವ ಅಕ್ಷರಸ್ಥರ ಮಧ್ಯೆ, ಗೆರೆ ಕೊರೆದು ಬದುಕುವವರ ಕೂಡ, ಈ ಶಿಕ್ಷಣಸ್ಥೆ ನಡಾವಳಿ ..
ಇಂತಹ, ನಿಮ್ಮ ಶರಣರ ಪಾದದ ಕೆಳಗೆ ಎನ್ನ ಕೆರವಾಗಿರಿಸಯ್ಯ.. ಕೂಡಲಸಂಗಮದೇವ…