ಎಂ.ಕೆ.ಹುಬ್ಬಳ್ಳಿ: ಪಟ್ಟಣದ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಇತ್ತಿಚೆಗೆ ನಿರ್ಮಾಣ ಮಾಡಿದ ನೂತನ ರಸ್ತೆಗಳು ಮತ್ತು ಚರಂಡಿ ಕಾಮಗಾರಿ ಕಳಪೆಯಾಗಿದ್ದು ಕಾಮಗಾರಿ ಮುಗಿದ ಬೆನ್ನಲ್ಲೇ ಚರಂಡಿ ಮೂಲಕ ನೀರು ಹರೆಯದೆ ರಸ್ತೆಯ ಮೇಲೆ ನಿಂತು ರಸ್ತೆಯು ಸಹ ಹಾಳಾಗಿದೆ. ಈ ಹಿನ್ನಲೆಯಲ್ಲಿ ಸಂಬಂಧಿಸಿದ ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರ ಗಮನಕ್ಕೆ ತಂದರು ಸಹ ಸಂಬಂಧಪಟ್ಟ ಅಧಿಕಾರಿಗಳಾಗಲಿ ಗುತ್ತಿಗೆದಾರರಾಗಲಿ ಮತ್ತು ಜನಪ್ರತಿನಿದಿಗಳಾಗಲಿ ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಪಟ್ಟಣ ಪಂಚಾಯತ ವ್ಯಾಪ್ತಿಯ ವಾರ್ಡ ನಂಬರ್ 1 ಮತ್ತು 14 ರಲ್ಲಿ ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕಾಗಿ ಗುತ್ತಿಗೆ ಪಡೆಯದೆ ರಸ್ತೆ ಕಾಮಗಾರಿ ಪ್ರಾರಂಭಿಸಿ ಕಾಮಗಾರಿ ಪೂರ್ಣ ಮಾಡದೆ ಅರ್ಧಕ್ಕೆ ನಿಲ್ಲಿಸಿ ರಸ್ತೆಯನ್ನು ಹಾಳು ಮಾಡಿ ರಸ್ತೆಯಲ್ಲಿ ಸಂಚಾರ ಮಾಡದ ಪರಿಸ್ಥಿತಿ ನಿರ್ಮಾಣವಾಗಿದ್ದು ಹಾಳು ಮಾಡಿದ ವ್ಯಕ್ತಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಹಾಗೂ ಪಟ್ಟಣದಲ್ಲಿಯ ಕಳಪೆ ಕಾಮಗಾರಿಗಳನ್ನು ಸರಿಪಡಿಸುವಂತೆ ಸಾರ್ವಜನಿಕರು ಪಟ್ಟಣ ಪಂಚಾಯತ ಅಭಿಯಂತರ ರವೀಂದ್ರ ಗಡಾದ ಅವರಿಗೆ ಘೇರಾವ ಹಾಕಿದ್ದಾರೆ.
ಕಿತ್ತೂರು ತಾಲೂಕಿನ ಕಿತ್ತೂರು ಮತ್ತು ಎಂ.ಕೆ ಹುಬ್ಬಳ್ಳಿ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಬಹತೇಕ ಕಾಮಗಾರಿಗಳನ್ನು ಪಪಂ ಅಭಿಯಂತರ ರವೀಂದ್ರ ಗಡಾದ ಅವರ ಸೋದರ ಸಂಬಂಧಿಗೆ ಕಾಮಗಾರಿಗಳನ್ನು ಕೊಡುವುದರಿಂದ ಕಳಪೆ ಗುಣಮಟ್ಟದ ಕಾಮಗಾರಿಗಳಾಗುತ್ತಿವೆ. ಇದರಿಂದ ಸರ್ಕಾರದ ಹಣ ದುರ್ಬಳಕೆ ಆಗುತ್ತಿದೆ. ಕಿತ್ತೂರು ಮತ್ತು ಎಂ.ಕೆ ಹುಬ್ಬಳ್ಳಿ ಉಭಯ ಪಟ್ಟಣ ಪಂಚಾಯತಗಳಿಗೆ ಒಬ್ಬನೆ ಅಭಿಯಂತರ ಕಾರ್ಯ ನಿರ್ವಹಿಸುತ್ತಿರುವುದರಿಂದ ಎರಡು ಕಡೆ ಕೆಲಸ ಮಾಡದೆ ಅಲ್ಲಿ ಕೇಳಿದರೆ ಇಲ್ಲಿ ಇಲ್ಲಿ ಕೇಳಿದರೆ ಅಲ್ಲಿ ಇರುವೆ ಎಂದು ಸುಳ್ಳು ಹೇಳುತ್ತಾರೆ. ಪೋನ ಕರೆ ಮಾಡಿದರು ಸಹ ಕರೆ ಸ್ವೀಕರಿಸದೆ ಸಾರ್ವಜನಿಕರಿಗೆ ಮತ್ತು ಸರ್ಕಾರಕ್ಕೆ ಮಣ್ಣು ಎರಚುತ್ತಿದ್ದಾರೆ.
ಈ ಹಿಂದೆ ಕಿತ್ತೂರು ಪಪಂ ಸಭಾಭವನದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಶಾಸಕ ಮಹಾಂತೇಶ ದೊಡ್ಡಗೌಡರ ಅವರ ಸಮ್ಮುಖದಲ್ಲಿ ಇವರಿಗೆ ವಾರದಲ್ಲಿ ಎರಡು ದಿನ ಕಿತ್ತೂರು ಎರಡು ದಿನ ಎಂ.ಕೆ. ಹುಬ್ಬಳ್ಳಿಯಲ್ಲಿ ಕಾರ್ಯ ನಿರ್ವಹಿಸಿ ಎಂದು ತಾಕೀತು ಮಾಡಿದ್ದರು ಅದಕ್ಕೂ ಬಗ್ಗದ ಇವರು ತಮ್ಮ ಹಳೆಯ ಚಾಲಿಯನ್ನೆ ಮುಂದೆವರಿಸಿಕೊಂಡು ಹೋಗುತ್ತಿದ್ದಾರೆ. ಇವರಿಗೆ ಮತ್ತು ಇವರ ಕಾರ್ಯಕಲಾಪಗಳಿಗೆ ಮೇಲಾಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಕೃಪಾಕಟಾಕ್ಷ ಇದೆ ಆದ್ದರಿಂದ ಇವರು ಈ ರೀತಿ ವರ್ತಿಸುತಿದ್ದಾರೆ ಎಂದು ಸಾರ್ವಜನಿಕರು ತಮ್ಮ ತಮ್ಮಲ್ಲಿಯೇ ಮಾತನಾಡಿಕೊಳ್ಳುತ್ತಿದ್ದಾರೆ. ಇದನ್ನೆಲ್ಲ ಅರಿತ ಪಟ್ಟಣದ ನಾಗರಿಕರು ಅವರ ಕಾರ್ಯವೈಕರಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾರ್ಯ ಕಲಾಪಗಳ ಬಗ್ಗೆ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಆಯ್.ಸಿ. ಸಿದ್ನಾಳ ಅವರನ್ನು ಸಂಪರ್ಕ ಮಾಡಿದರೆ ಸಮಂಜಸವಾದ ಮಾಹಿತಿ ಹೇಳದೆ ಅಭಿಯಂತರ ರವೀಂದ್ರ ಗಡಾದ ಅವರನ್ನ ಕೇಳಿ ಎಂದು ಹಾರಿಕೆ ಉತ್ತರ ನೀಡುತ್ತಾರೆ. ಇದರಿಂದ ಉಭಯ ಪಟ್ಟಣ ಪಂಚಾಯತ ಅಭಿವೃದ್ಧಿ ಕೆಲಸಗಳು ಮಾಯವಾಗಿ ವ್ಯವಸ್ಥಿತವಾಗಿ ಹಣ ಲೂಟಿ ಹೊಡೆಯುವ ದಂಧೆ ನೆಡೆಯುತ್ತಿದೆ ಎಂದು ಗ್ರಾಮಸ್ಥರು ಆರೋಪ ಮಾಡುತ್ತಿದ್ದಾರೆ.
ಇನ್ನಾದರೂ ಅಧಿಕಾರಿಗಳಾಗಲಿ ಜನಪ್ರತಿನಿಧಿಗಳಾಗಲಿ ಎಚ್ಚತ್ತೂಗೊಂಡು ಕಳಪೆ ಕಾಮಗಾರಿಗಳನ್ನು ಸರಿಪಡಿಸಿ ನಾಗರಿಕರಿಗೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟು ಸಾರ್ವಜನಿಕರ ಹಾಕುವ ಶಾಪದಿಂದ ಮುಕ್ತರಾಗಬೇಕು.