ಭದ್ರತಾ ಲೋಪವಾಗಿಲ್ಲ, ಜನ ಇಲ್ಲದೆ ಖಾಲಿ ಕುರ್ಚಿ ಕಂಡು ಪಿಎಂ ರ‍್ಯಾಲಿ ರದ್ದು: ಸಿಎಂ ಚರಣ್‌ಜಿತ್‌ ಸಿಂಗ್‌ ಚನ್ನಿ

ಉಮೇಶ ಗೌರಿ (ಯರಡಾಲ)

ಸುದ್ದಿ ಸದ್ದು ನ್ಯೂಸ್

ದೆಹಲಿ: ಭದ್ರತಾ ಲೋಪದ ಕಾರಣದಿಂದಾಗಿ ಪಂಜಾಬ್‌ನಲ್ಲಿ ಪಿಎಂ ನರೇಂದ್ರ ಮೋದಿ ಅವರ ರ‍್ಯಾಲಿ ಮತ್ತು ಹುತಾತ್ಮರ ಸ್ಮಾರಕಕ್ಕೆ ಭೇಟಿ ಕಾರ್ಯಕ್ರಮ ರದ್ದುಗೊಳಿಸಿ ವಾಪಸ್ಸಾದರು ಎಂಬ ಬಿಜೆಪಿ ಆರೋಪವನ್ನು ಪಂಜಾಬ್ನ ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್‌ ಚನ್ನಿ ಅವರು ತಳ್ಳಿಹಾಕಿದ್ದಾರೆ.

ನಮ್ಮ ಸರ್ಕಾರದಿಂದ ಯಾವುದೇ ಭದ್ರತಾ ಲೋಪವಾಗಿಲ್ಲ, ಮೋದಿ ಅವರ ಕಾರ್ಯಕ್ರಮಕ್ಕೆ ಜನರು ಇಲ್ಲದ ಕಾರಣ ಬಿಜೆಪಿ ರ‍್ಯಾಲಿ ರದ್ದುಗೊಳಿಸಿದೆ ಎಂದು ಹೇಳಿದ್ದಾರೆ.

ಪಂಜಾಬ್‌ನ ಹುಸೇನಿವಾಲಾದಲ್ಲಿ ಇರುವ ರಾಷ್ಟ್ರೀಯ ಹುತಾತ್ಮರ ಸ್ಮಾರಕಕ್ಕೆ ಪ್ರಧಾನಿ ಮೋದಿ ಅವರು ಇಂದು ಚಾಲನೆ ನೀಡಬೇಕಿತ್ತು. ಆದರೆ ಕಾರ್ಯಕ್ರಮ ರದ್ದುಗೊಳಿಸಿ ಪ್ರಧಾನಿ ಮೋದಿ ಅವರು ವಾಪಸ್ಸಾಗಿದ್ದಾರೆ.

ಹವಾಮಾನ ವೈಪರೀತ್ಯದಿಂದಾಗಿ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಹೆಲಿಕಾಪ್ಟರ್‌ನಲ್ಲಿ ಪ್ರಧಾನಿ ಅವರನ್ನು ಕರೆತರಲು ಸಾಧ್ಯವಾಗಲಿಲ್ಲ. ಹೀಗಾಗಿ ಹೆಲಿಕಾಪ್ಟರ್‌ ಪ್ರಯಾಣ ರದ್ದುಗೊಳಿಸಿ, ರಸ್ತೆ ಮುಖಾಂತರ ಕಾರ್ಯಕ್ರಮ ಸ್ಥಳಕ್ಕೆ ತೆರಳಲು ಅನುವು ಮಾಡಿಕೊಡಲಾಗಿತ್ತು.

ಆದರೆ ಫ್ಲೈಓವರ್‌ ಹತ್ತಿರ ಬೃಹತ್‌ ಪ್ರತಿಭಟನೆ ನಡೆಯುತ್ತಿದ್ದುದ್ದರಿಂದ ಪ್ರಧಾನಿ ಮೋದಿ ಅವರು ಫ್ಲೈ ಓವರ್‌ನಲ್ಲೇ ಸಿಲುಕುವಂತಾಯಿತು. ಇದರಿಂದ ಅವರ ಕಾರ್ಯಕ್ರಮ ರದ್ದುಗೊಳಿಸಲಾಗಿದೆ. ಆದರೆ ಬಿಜೆಪಿ ಇದಕ್ಕೆ ಭದ್ರತಾ ಲೋಪ ಮತ್ತು ಪಂಜಾಬ್‌ ಸರ್ಕಾರವೇ ಕಾರಣ ಎಂದು ಗಂಭೀರ ಆರೋಪ ಮಾಡಿದೆ.

ಆದರೆ ಈ ಆರೋಪವನ್ನು ಕಾಂಗ್ರೆಸ್‌ ಸರ್ಕಾರ ತಳ್ಳಿ ಹಾಕಿದೆ.

ಪ್ರಧಾನಿ ಮೋದಿ ಅವರು ಪಾಲ್ಗೊಳ್ಳಬೇಕಿದ್ದ ಕಾರ್ಯಕ್ರಮದಲ್ಲಿ ಜನರು ಇರಲಿಲ್ಲ. ಬರೀ ಖಾಲಿ ಕುರ್ಚಿಗಳು ಇದ್ದವು. ಸುಮಾರು 75 ಸಾವಿರ ಜನರು ಸೇರಿ ನಡೆಯಬೇಕಿದ್ದ ರ‍್ಯಾಲಿಯಲ್ಲಿ ಕೇವಲ 7-8 ನೂರು ಜನರು ಇದ್ದ ಕಾರಣ ಕಾರ್ಯಕ್ರಮ ನಡೆಸದೇ ವಾಪಸ್ಸಾಗಿದ್ದಾರೆ ಎಂದು ಪಂಜಾಬ್‌ ಸಿಎಂ ಚರಣ್‌ಜಿತ್‌ ಸಿಂಗ್‌ ಚನ್ನಿ ತಿಳಿಸಿದ್ದಾರೆ.

ಸಿಎಂ ರ‍್ಯಾಲಿಗೆ ಯಾವುದೇ ಭದ್ರತಾ ಲೋಪವಾಗಿಲ್ಲ. ಪಿಎಂ ಭದ್ರತೆಗೆ ಸಂಬಂಧಿಸಿದಂತೆ ನಾನು ನಿನ್ನೆ ರಾತ್ರಿ ಇಡೀ ಮೇಲ್ವಿಚಾರಣೆ ನಡೆಸಿದ್ದೇನೆ. ಪ್ರಧಾನಿ ಅವರ ರಸ್ತೆ ಮಾರ್ಗ ಪ್ರಯಾಣ ವ್ಯವಸ್ಥೆ ಕೊನೆ ಕ್ಷಣದಲ್ಲಿ ಮಾಡಲಾಗಿದೆ. ಅದಕ್ಕೂ ಮೊದಲು ಅವರು ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸುವ ಯೋಜನೆ ಹಾಕಿಕೊಂಡಿದ್ದರು ಎಂದು ಸಿಎಂ ತಿಳಿಸಿದ್ದಾರೆ.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";