ಹುಬ್ಬಳ್ಳಿ: ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿಗೆ ಉಪಯೋಗ ಇಲ್ಲದ ನ್ಯಾಷನಲ್ ಎಜುಕೇಶನ್ ಪಾಲಿಸಿಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿರುವುದು ಖಂಡನೀಯವಾಗಿದೆ. ಕೂಡಲೇ ಇದರಲ್ಲಿರುವ ಲೋಪದೋಷಗಳನ್ನು ಗಮನಿಸಿ ಗುಣಮಟ್ಟದ ಶೈಕ್ಷಣಿಕ ನೀತಿಯನ್ನು ಜಾರಿಗೆ ತರಬೇಕು ಎಂದು ಎನ್.ಎಸ್.ಐ.ಯು ರಾಜ್ಯಾಧ್ಯಕ್ಷ ಕೀರ್ತಿ ಗಣೇಶ ಆಗ್ರಹಿಸಿದರು.
ನಗರದಲ್ಲಿಂದು ಸುದ್ಧಿಗೋಷ್ಟಿ ನಡೆಸಿ ಮಾತನಾಡಿದ ಅವರು, ಎನ್ಇಪಿ ಅಂದರೆ ಬಹುತೇಕ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಗೊತ್ತೇ ಇಲ್ಲ ಇಂತಹ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದೆ. ಅಲ್ಲದೇ ಇದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿಗೂ ಕೂಡ ಯಾವುದೇ ರೀತಿಯ ಪ್ರಯೋಜನ ಇಲ್ಲ ಎಂದರು.
ಕೇಂದ್ರ ಸರ್ಕಾರ ಯಾವುದೇ ಶಿಕ್ಷಣ ತಜ್ಞರ ಸಲಹೆಯನ್ನು ಪಡೆಯದೇ ಕೂಲಂಕಷವಾಗಿ ಚರ್ಚಿಸಿದೆ. ಸಾಧಕ ಭಾಧಕಗಳನ್ನು ಗಮನದಲ್ಲಿಟ್ಟುಕೊಳ್ಳದೇ ನಿರ್ಧಾರವನ್ನು ತೆಗೆದುಕೊಂಡಿದೆ. ಅಲ್ಲದೆ ದಿನಕ್ಕೊಂದು ನಿರ್ಧಾರ ಕೈಗೊಳ್ಳುವುದು ವಿದ್ಯಾರ್ಥಿಗಳ ಭವಿಷ್ಯಕ್ಕೆ ಹೊಡೆತ ಕೊಡುತ್ತದೆ. ಈ ನಿಟ್ಟಿನಲ್ಲಿ ಸೂಕ್ತವಾಗಿ ಪರಿಶೀಲನೆ ನಡೆಸಿ ನಿರ್ಧಾರವನ್ನು ಕೈಗೊಂಡು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶೈಕ್ಷಣಿಕ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.
ಈಗಾಗಲೇ ಹದಿನೇಳು ಜಿಲ್ಲೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳ ಅಭಿಪ್ರಾಯವನ್ನು ಸಂಗ್ರಹಿಸಲಾಗಿದೆ. ಸರ್ಕಾರ ಕೂಡಲೇ ಸೂಕ್ತ ನಿರ್ಧಾರವನ್ನು ಕೈಗೊಳ್ಳದೇ ಇದ್ದಲ್ಲಿ ಉಗ್ರ ಹೋರಾಟ ಮಾಡುವುದು ನಿಶ್ಚಿತ ಎಂದು ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.