ಕೊಟ್ಟೂರು(ಡಿ.12): ಅಕ್ರಮ ಮರಳು ಸಾಗಾಣಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೂಡ್ಲಿಗಿ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ವೆಂಕಟೇಶ ನಾಯ್ಕ ವಿರುದ್ಧ ನ. 28ರಂದು ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ವೆಂಕಟೇಶ್ ನಾಯ್ಕರನ್ನು ಕೈಬಿಡುವ ಸಂಬಂಧವಾಗಿ ಕೊಟ್ಟೂರು ಪೊಲೀಸ್ ಠಾಣೆಯ ಎಎಸ್‌ಐ ಸೈಪುಲ್ಲಾ ಅವರು ವೆಂಕಟೇಶನಾಯ್ಕರಿಗೆ ರೂ.10 ಲಕ್ಷ ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು.
ಶನಿವಾರ ವೆಂಕಟೇಶ ನಾಯ್ಕ ಕೊಟ್ಟೂರು ಸಿಪಿಐ ವೃತ್ತ ಕಚೇರಿಯಲ್ಲಿ ಹಣ ನೀಡುವ ವೇಳೆ ಬಳ್ಳಾರಿ ಎಸಿಬಿ ಅಧಿಕಾರಿಗಳು ದಿಢೀರನೆ ದಾಳಿ ನಡೆಸಿ, ಹಣ ಸಮೇತ ಎಎಸ್‌ಐ ಸೈಪುಲ್ಲಾ ಅವರನ್ನು ವಶಕ್ಕೆ ಪಡೆದರು. ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂಬುದು ಗೊತ್ತಾಗುತ್ತಿದ್ದಂತೆಯೇ ಅಲ್ಲಿಂದ ಓಡಿ ಹೋಗಲು ಯತ್ನಿಸಿದ ಸಬ್‌ಇನ್ಸ್‌ಸ್ಪೆಕ್ಟರ್ ಹೆಚ್.ನಾಗಪ್ಪ ಅವರನ್ನು ಎಸಿಬಿ ಅಧಿಕಾರಿಗಳು ವಾಹನದಲ್ಲಿ ತೆರಳಿ ಹಿಡಿದು ತಂದಿದ್ದಾರೆ.
ದಾಳಿ ನಡೆಸಲು ಬಳ್ಳಾರಿ ಎಸಿಬಿ ಅಧಿಕಾರಿಗಳು ರಾಯಚೂರು ಎಸಿಬಿ ತಂಡದ ಸಹಕಾರ ಪಡೆದಿದ್ದರು. ರಾಯಚೂರು ಎಸಿಬಿ ಡಿವೈಎಸ್‌ಪಿ ವಿಜಯಕುಮಾರ್ ಸಹ ದಾಳಿಯಲ್ಲಿದ್ದರು. ಕೊಟ್ಟೂರು ಸಿಪಿಐ ಕಚೇರಿ ಮೇಲೆ ಎ.ಸಿ.ಬಿ. ದಾಳಿ ನಡೆದ ವಿಷಯ ಗೊತ್ತಾಗುತ್ತಿದ್ದಂತೆ ಕೂಡ್ಲಿಗಿ ಪೊಲೀಸ್ ಉಪವಿಭಾಗದ ಡಿವೈಎಸ್‌ಪಿ ಹರೀಶ ಸ್ಥಳಕ್ಕೆ ಆಗಮಿಸಿ ಮಾಹಿತಿ ಪಡೆದಿದ್ದಾರೆ.