ಕೊಯಮತ್ತೂರು(ಡಿ. 13) ಕಾಲೇಜು ವಿದ್ಯಾರ್ಥಿನಿಯೊಬ್ಬಳು ದೂರು ಸಲ್ಲಿಸಿದ್ದಾಳೆ. 23 ವರ್ಷದ ಯುವಕ ಬೆತ್ತಲೆ ವಿಡಿಯೋ ಕಾಲ್ ಮಾಡು ಇಲ್ಲವಾದರೆ ಮಾರ್ಪ್ ಮಾಡಿರುವ ನಗ್ನ ಪೋಟೋ ಮತ್ತು ವಿಡಿಯೋಗಳನ್ನು ಸೋಶಿಯಲ್ ಮೀಡಿಯಾಕ್ಕೆ ಅಪ್ ಲೋಡ್ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಿದ್ದಾಳೆ.
ಯುವತಿಯ ದೂರಿನ ಆಧಾರದಲ್ಲಿ ಪೊಲೀಸರು ಎನ್ ನಿಯಾಜ್ ಎಂಬ ಆರೋಪಿಯನ್ನು ಬಂಧಿಸಿದ್ದಾರೆ.ಕೊಯಮತ್ತೂರು ನಗರದ ನಿವಾಸಿ ನಿಯಾಜ್ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದಾನೆ. ನಿಯಾಜ್ ಇನ್ಸ್ಟಾಗ್ರಾಮ್ನಲ್ಲಿ ಮಹಿಳೆಯರ ಹೆಸರಿನ ಖಾತೆ ಸೃಷ್ಟಿ ಮಾಡಿಕೊಂಡಿದ್ದಾನೆ. ಸೋಶಿಯಲ್ ಮೀಡಿಯಾದಲ್ಲಿ ವಿದ್ಯಾರ್ಥಿನಿಯನ್ನು ಪರಿಚಯ ಮಾಡಿಕೊಂಡು ಮಹಿಳೆಯಂತೆ ನಟಿಸಿ ಮಾತನಾಡುತ್ತಿದ್ದ. ಯುವತಿ ಸಹ ತಾನು ಒಬ್ಬ ಸ್ತ್ರೀ ಜತೆಗೆ ಮಾತನಾಡುತ್ತಿರುವುದು ಎಂದು ನಂಬಿದ್ದಳು.
ಯುವತಿಯ ಪೋಟೋಗಳನ್ನು ಡೌನ್ ಲೋಡ್ ಮಾಡಿಕೊಂಡು ತನಗೆ ಬೇಕಾದಂತೆ ಮಾರ್ಪ್ ಮಾಡಿಕೊಂಡಿದ್ದಾನೆ. ಇದನ್ನು ಯುವತಿಗೆ ಕಳುಹಿಸಿ ತನಗೆ ಬೆತ್ತಲೆ ಕರೆ ಮಾಡಬೇಕು ಎಂದು ಬೆದರಿಕೆ ಹಾಕಲು ಆರಂಭಿಸಿದ್ದಾನೆ. ಒಂದು ವೇಳೆ ಮಾಡಿಲ್ಲ ಎಂದಾದರೆ ಎಲ್ಲ ಪೋಟೋ ಸೋಶಿಯಲ್ ಮೀಡಿಯಾಕ್ಕೆ ಅಪ್ ಲೋಡ್ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ.
ಇದರಿಂದ ನೊಂದ ಯುವತಿ ಅನಿವಾರ್ಯವಾಗಿ ಪೊಲೀಸರ ಮೊರೆ ಹೋಗಿದ್ದಾಳೆ. ಎಲ್ಲ ಮಾಹಿತಿ ಪಡೆದುಕೊಂಡ ಪೊಲೀಸರು ಯುವಕನ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354A (ಲೈಂಗಿಕ ಕಿರುಕುಳ), 354B (ವಿವಸ್ತ್ರಗೊಳ್ಳಲು ಅಪರಾಧಿಯ ಆಕ್ರಮಣ ಅಥವಾ ಬಳಕೆ) ಮತ್ತು 354D (ಹಿಂಬಾಲಿಸುವಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ತಮಿಳುನಾಡು ಮಹಿಳೆಯರ ಮೇಲಿನ ಕಿರುಕುಳ ನಿಷೇಧ ಕಾಯ್ದೆಯಡಿ ಸಂಬಂಧಿತ ಆರೋಪಿಗಳನ್ನು ದಾಖಲಿಸಿ ಆರೋಪಿಯನ್ನು ಡಿ.10 ರಂದು ಬಂಧಿಸಲಾಗಿದೆ.