ನಾನು ಹಿಂದೂ, ಹಿಂದುತ್ವವಾದಿ ಅಲ್ಲ: ರಾಹುಲ ಗಾಂಧಿ

ನವದೆಹಲಿ, ಡಿ. 12: ಭಾರತವು ಹಿಂದೂಗಳ ದೇಶವೇ ಹೊರತು ಯಾವುದೇ ಪರಿಸ್ಥಿತಿಯಲ್ಲಿ ಅಧಿಕಾರದಲ್ಲಿರಲು ಬಯಸುವ ಹಿಂದುತ್ವವಾದಿಗಳದ್ದಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾನುವಾರ ಹೇಳಿದ್ದಾರೆ. ಅಲ್ಲದೆ ಹಿಂದುತ್ವದ ಹೆಸರಿನಲ್ಲಿ ಅಧಿಕಾರಕ್ಕೆ ಬಂದವರು ದೇಶದಲ್ಲಿ ಹಣದುಬ್ಬರ ಸೃಷ್ಠಿಸಿದ್ದಾರೆ. ಇದರಿಂದ ದೇಶವಾಸಿಗಳು ಸಂಕಷ್ಟ ಎದುರಿಸುವಂತಾಗಿದೆ ಎಂದು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ, ನಿತ್ಯ ಬಳಕೆಯ ವಸ್ತುಗಳ ಬೆಲೆ ಏರಿಕೆ, ಹಣದುಬ್ಬರ, ನಿರುದ್ಯೋಗ ಮತ್ತಿತರ ಸಮಸ್ಯೆಗಳನ್ನು ವಿರೋಧಿಸಿ ರಾಜಸ್ಥಾನದ ಜೈಪುರದಲ್ಲಿ‌ ಕಾಂಗ್ರೆಸ್ ಆಯೋಜಿಸಿದ್ದ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ ಅವರು, ‘ಇದು ಹಿಂದೂಗಳ ದೇಶ, ಹಿಂದುವಾದಿಗಳದ್ದಲ್ಲ. ದೇಶದಲ್ಲಿ ಹಣದುಬ್ಬರವಿದ್ದರೆ, ಸಂಕಟವಿದ್ದರೆ ಇದನ್ನು ಹಿಂದುವಾದಿಗಳು ಮಾಡಿದ್ದಾರೆ. ಹಿಂದುವಾದಿಗಳು ಯಾವುದೇ ಪರಿಸ್ಥಿತಿಯಲ್ಲಿ ಅಧಿಕಾರವನ್ನು ಬಯಸುತ್ತಾರೆ.  ಪ್ರಧಾನಿ ನರೇಂದ್ರ ಮೋದಿ ಮತ್ತವರ ಸ್ನೇಹಿತರು ದೇಶವನ್ನು ಹಾಳು ಮಾಡಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

ಹಿಂದೂ ಮತ್ತು ಹಿಂದುತ್ವ ಎರಡು ವಿಭಿನ್ನ ಪದಗಳು ಎಂದು ಬಣ್ಣಿಸಿದ ರಾಹುಲ್ ಗಾಂಧಿ ಅವರು, ಎರಡು ಜೀವಿಗಳು ಒಂದೇ ಆತ್ಮವನ್ನು ಹೊಂದಲು ಸಾಧ್ಯವಿಲ್ಲ. ಹಾಗೆಯೇ ಎರಡು ಪದಗಳು ಒಂದೇ ಅರ್ಥವನ್ನು ಹೊಂದಿರುವುದಿಲ್ಲ ಎಂದು ಹೇಳಿದರು.

ಹಿಂದೂ ಎಂದರೆ ಯಾರಿಗೂ ಹೆದರುವುದಿಲ್ಲ ಮತ್ತು ಎಲ್ಲರನ್ನೂ ಅಪ್ಪಿಕೊಳ್ಳುತ್ತಾನೆ ಎಂದು ಕಾಂಗ್ರೆಸ್ ನಾಯಕ ಹೇಳಿದರು. ಮಹಾತ್ಮ ಗಾಂಧಿ ಹಿಂದೂ ಮತ್ತು ನಾಥೂರಾಂ ಗೋಡ್ಸೆ ಹಿಂದುವಾದಿ. ಹಿಂದೂ ನಿರಂತರವಾಗಿ ಸತ್ಯವನ್ನು ಹುಡುಕುತ್ತಾನೆ ಮತ್ತು ಮಹಾತ್ಮ ಗಾಂಧಿಯಂತೆ ತನ್ನ ಇಡೀ ಜೀವನವನ್ನು ಹುಡುಕಾಟಕ್ಕಾಗಿ ಕಳೆಯುತ್ತಾನೆ.

ಆದರೆ ಅವರಿಗೆ ಒಬ್ಬ ಹಿಂದುವಾದಿ ಎದೆಗೆ ಮೂರು ಗುಂಡು ಹಾರಿಸಿದ್ದಾನೆ ಎಂದು ರಾಹುಲ್ ಗಾಂಧಿ ಕಿಡಿಕಾರಿದರು. ಅಲ್ಲದೆ ‘ನಾನು ಹಿಂದೂ ಮಾತ್ರ. ಹಿಂದುವಾದಿ ಅಲ್ಲ” ಎಂದು ಹೇಳಿದರು. ದೇಶದಲ್ಲಿ ಮತ್ತೊಮ್ಮೆ ಹಿಂದುವಾದಿಗಳನ್ನು ಕಿತ್ತೊಗೆದು ಹಿಂದೂಗಳ ಆಡಳಿತವನ್ನು ತರಬೇಕು ಎಂದು ಅಭಿಪ್ರಾಯಪಟ್ಟರು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";