Tuesday, September 17, 2024

ನೋಬೆಲ್ ಪ್ರಶಸ್ತಿ ಪಡೆದ ಭಾರತೀಯ ಸುಬ್ರಮಣ್ಯನ್ ಚಂದ್ರಶೇಖರ್.

“ದೇವರು ಮನುಷ್ಯನ ಶ್ರೇಷ್ಠ ಅನ್ವೇಷಣೆ” ಎಂದು ನಂಬಿದ್ದ, ಖಭೌತವಿಜ್ಞಾನಿ ಹಾಗೂ ನಕ್ಷತ್ರಲೋಕದ ಅನಭಿಷಕ್ತ ಚಕ್ರವರ್ತಿ ಎಂದು ಹೆಸರಾಗಿದ್ದ, ಗೆಳೆಯರೆಲ್ಲ ಪ್ರೀತಿಯಿಂದ “ಚಂದ್ರ” ಎಂದೇ ಕರೆಯಲ್ಪಡುತ್ತಿದ್ದ ಸುಬ್ರಮಣ್ಯನ್ ಚಂದ್ರಶೇಖರ ಅವರಿಗೆ 1930 ರ ಭೌತವಿಜ್ಞಾನದ ನೊಬೆಲ್ ಪ್ರಶಸ್ತಿ ವಿಜೇತ, ಸರ್. ಸಿ. ವಿ. ರಾಮನ್ ಚಿಕ್ಕಪ್ಪ. ‘ಚಂದ್ರ’ ಜನಿಸಿದ್ದು 1910 ಅಕ್ಟೋಬರ್ 19 , ರಲ್ಲಿ, ಲಾಹೋರ್‌ನಲ್ಲಿ (ಈಗ ಪಾಕಿಸ್ತಾನ). ಇವರ ತಂದೆ ಸುಬ್ರಮಣ್ಯಂ ಅಯ್ಯರ್. ಅಮೆರಿಕೆಯ ಪೌರತ್ವ ಪಡೆದ ‘ಚಂದ್ರ’ 1983 ರಲ್ಲಿ ವಿಲ್ಲಿ ಪಾಲರ್ ಜೊತೆ ನೊಬೆಲ್ ಪುರಸ್ಕಾರ ಹಂಚಿಕೊಂಡರು.

ಚಂದ್ರಶೇಖರ್ ನೋಬೆಲ್ ಪ್ರಶಸ್ತಿ ಪಡೆಯುತ್ತಿರುವುದು

ಅದ್ಭುತ ನೆನಪಿನ ಶಕ್ತಿಯಿದ್ದ, ‘ಚಂದ್ರ’ ಅವರಿಗೆ ಗಣಿತದಲ್ಲಿ ಅಪಾರ ಪ್ರತಿಭೆ ಇತ್ತು. 1930 ರಲ್ಲಿ ಭೌತವಿಜ್ಞಾನವನ್ನು ಐಚ್ಛಿಕ ವಿಷಯವಾಗಿ ತೆಗೆದುಕೊಂಡು ಪ್ರೆಸಿಡೆನ್ಸಿ ಕಾಲೇಜಿನಿಂದ ಪದವಿ ಪಡೆದರು. ವಿದ್ಯಾರ್ಥಿ ದೆಸೆಯಲ್ಲೇ ವೈಜ್ಞಾನಿಕ ಲೇಖನಗಳನ್ನು ಬರೆದರು. ವಿದ್ಯಾರ್ಥಿ ವೇತನ ಪಡೆದು ವಿದ್ಯಾಭ್ಯಾಸ ಮುಂದುವರಿಸಿ, 1931 ರಲ್ಲಿ ಜರ್ಮನಿಗೆ ತೆರಳಿ ವರ್ಗ ನಿಯಮ, ಕ್ವಾಂಟಂ ಮೆಕ್ಯಾನಿಕ್ಸ್ ಮತ್ತು ನಕ್ಷತ್ರಗಳ ಕುರಿತು ಅಧ್ಯಯನ ಮಾಡಿ ಹೆಸರು ಪಡೆದರು.

‘ಚಂದ್ರ’, ಬೆಲ್ಜಿಯಂನ ಲೀಡ್ ವಿಶ್ವವಿದ್ಯಾಲಯದಲ್ಲಿ ‘ಖಭೌತವಿಜ್ಞಾನ’ದ ಬಗ್ಗೆ ಮಾಡಿದ ಸರಣಿ ಉಪನ್ಯಾಸಗಳು ಪುಸ್ತಕ ರೂಪದಲ್ಲಿ ಪ್ರಕಟಗೊಂಡವು. 1933ರಲ್ಲಿ ಪಿಎಚ್‌ಡಿ ಪದವಿ ಪಡೆದ ‘ಚಂದ್ರ’ ಅತ್ಯಂತ ಕಠಿಣವಾದ ಟ್ರಿನಿಟಿ ಫೆಲೋಶಿಪ್ ಪರೀಕ್ಷೆಯನ್ನು ಪಾಸುಮಾಡಿದರು. ತಮಿಳು ನಾಡಿನ, ಶ್ರೀನಿವಾಸ್ ರಾಮಾನುಜನ್ ಅವರೂ ಈ ಫೆಲೋಶಿಪ್ ಪಡೆದಿದ್ದರು.

ರಾತ್ರಿ ಕಾಲದಲ್ಲಿ ಆಕಾಶದ ಕಡೆ ನೋಡಿದಾಗ ರಾಶಿ ರಾಶಿ ನಕ್ಷತ್ರಗಳು ಕಾಣುತ್ತವೆ. ಅವುಗಳ ಉಷ್ಣತೆ ಮತ್ತು ಕಾಂತಿಗಳಿಗೆ ಅನುಗುಣವಾಗಿ ವಿಜ್ಞಾನಿಗಳು ಅವುಗಳನ್ನು ವರ್ಗೀಕರಿಸಿದ್ದಾರೆ. ನಕ್ಷತ್ರಗಳ ಸರಾಸರಿ ಗಾತ್ರ ಮತ್ತು ಕಾಂತಿಗಳನ್ನು ಗಮನದಲ್ಲಿಟ್ಟುಕೊಂಡು, ಎಲ್ಲ ನಕ್ಷತ್ರಗಳನ್ನು ಪರಿಶೀಲಿಸಿದಾಗ ಅವುಗಳಲ್ಲಿ ಬಹುಪಾಲು, ಆ ಸರಾಸರಿಗಿಂತ ಹಚ್ಚು ಭಿನ್ನವಾಗಿರುವುದಿಲ್ಲ. ನಮ್ಮ ಸೂರ್ಯನೂ ಅಂಥ ಒಂದು ಸಾಮಾನ್ಯ ನಕ್ಷತ್ರವೇ. ಆದರೆ, ವಿರಳವಾಗಿ ಅಲ್ಲೊಂದು ಇಲ್ಲೊಂದು ಅಗಾಧ ಗಾತ್ರದವಿರುತ್ತವೆ. ಸೌರವ್ಯೂಹದ ಒಟ್ಟು ಗಾತ್ರವೆಷ್ಟೋ ಅಷ್ಟು ಗಾತ್ರವಿರುವ ನಕ್ಷತ್ರಗಳಿವೆ. ಅವುಗಳ ಬಣ್ಣ ಕೆಂಪು. ಅಂಥವನ್ನು ‘ಕೆಂಪುದೈತ್ಯ’ (Red Gent) ಎಂದು ಕರೆದಿದ್ದಾರೆ. ಅಂತೆಯೇ ಇನ್ನು ಕೆಲವು ಕೇವಲ ಗ್ರಹಗಳ ಗಾತ್ರವಿದ್ದು ಬಿಳಿಯ ಬಣ್ಣದವಾಗಿರುತ್ತವೆ. ಅವುಗಳು ‘ಶ್ವೇತಕುಬ್ಜ’ಗಳು. ‘ಚಂದ್ರ’, ನಕ್ಷತ್ರಗಳ ಜೀವನ ಚಕ್ರ ಕುರಿತು ಮಹತ್ವಪೂರ್ಣ ಸಂಶೋಧನೆ ಮಾಡಿದರು.

ಲಲಿತಾ-ಚಂದ್ರಶೇಖರ್

ಸೂರ್ಯನ ಗಾತ್ರದ ನಕ್ಷತ್ರಗಳು ತಮ್ಮಲ್ಲಿರುವ ಇಂಧನವೆಲ್ಲ ಉರಿದುಹೋದ ಬಳಿಕ ಚಿಕ್ಕ ಮತ್ತು ಅತ್ಯಂತ ಭಾರವಾದ ಕಾಯವಾಗಿ ಮಾರ್ಪಡುತ್ತವೆ. ಇದಕ್ಕೆ ‘ಶ್ವೇತಕುಬ್ಜ’ (White Drawf) ವೆಂದು ಹೆಸರು. ಸೂರ್ಯನ ರಾಶಿಯ 1.4 ಕ್ಕಿಂತ ಅಧಿಕ ರಾಶಿಯ ನಕ್ಷತ್ರಗಳು ಶ್ವೇತಕುಬ್ಜಗಳಾಗಿ ಪರಿವರ್ತನೆಯಾಗುವುದು ಸಾಧ್ಯವೇ ಇಲ್ಲವೆಂದು ‘ಚಂದ್ರ’ ಗಣಿತ ರೀತ್ಯಾ ಸಾಧಿಸಿ ತೋರಿಸಿದರು.

ಭೂಮಿಯಷ್ಟು ಗಾತ್ರದ ‘ಶ್ವೇತಕುಬ್ಜ’, ಭೂಮಿಯ ಹತ್ತಾರು ಸಾವಿರದಷ್ಟು ಭಾರವಿರುತ್ತದೆ. ಅಂದರೆ ಅವುಗಳ ಸಾಂದ್ರತೆ ವಿಪರೀತ ಹೆಚ್ಚು. ಹೀಗೆ ನಕ್ಷತ್ರಗಳ ರಾಶಿಗೆ ಒಂದು ಮಿತಿ ವಿಧಿಸಿದ್ದರಿಂದ ಅದು ಚಂದ್ರಶೇಖರ ಮಿತಿ (Chandrasekhar Limit) ಎಂದೇ ಹೆಸರಾಯಿತು. ಈ ಮಿತಿಗಿಂತ ಹೆಚ್ಚು ಹಿಗ್ಗುವ ನಕ್ಷತ್ರ ಸಾವಿರಾರು ಅಣುಬಾಂಬಗಳು ಏಕಕಾಲದಲ್ಲಿ ಸ್ಪೋಟಿಸುವಂತೆ ಸಿಡಿದು,. ‘ಸೂಪರ್‌ನೋವಾ’ (Super nova), ಎಂಬ ಹೊಳಪಿನ ನಕ್ಷತ್ರಗಳಾಗುತ್ತವೆ.

ಈ ವಿದ್ಯಮಾನ ಪ್ರಪಂಚದಲ್ಲಿಯೇ ಮೊದಲನೆಯದು. ಕೇಳಿ. 1935 ರ ಜನವರಿ 11ರಂದು ‘ಚಂದ್ರ’ ತಮ್ಮ ಪ್ರಬಂಧವನ್ನು ಮಂಡಿಸಿದರು. ಪ್ರಬಂಧ ಮಂಡನೆಯ ನಂತರ, ಅವರ ಮಾರ್ಗದರ್ಶಿ (ಗೈಡ್) ಎಡ್ಡಿಂಗಟನ್, ಚರ್ಚಯನ್ನಾರಂಭಿಸಲು ಎದ್ದುನಿಂತು ‘ಚಂದ್ರ’ರ ವಾದವನ್ನು ಗಟ್ಟಿ ದ್ವನಿಯಲ್ಲಿ ವಿರೋಧಿಸಿದರು.

ಮಾರ್ಗದರ್ಶಿಯೇ ವಿರೋಧಿಸಿದರೆ? ಇದು ಇತಿಹಾಸದ ವೈರುಧ್ಯವಲ್ಲದೇ ಮತ್ತೇನು? ‘ಚಂದ್ರ ಇಂಗ್ಲೆಂಡ್ ತೊರೆದು ಅಮೇರಿಕ ಸೇರಿ ಆರ್. ಎಚ್. ಪೌಲರ್ ಅವರ ಮಾರ್ಗದರ್ಶನದಲ್ಲಿ ತಮ್ಮ ಸಂಶೋಧನೆಯನ್ನು ಮುಂದುವರಿಸಿದರು. ಈ ಘಟನೆಯಾದ ಬರೋಬ್ಬರಿ 48 ವರ್ಷಗಳ ನಂತರ 1983 ರಲ್ಲಿ ‘ಚಂದ್ರ’ರಿಗೆ ಇದೇ ಕೆಲಸಕ್ಕೆ ನೊಬೆಲ್ ಪುರಸ್ಕಾರ ದೊರೆಯಿತೆಂದರೆ ನಂಬುವುದು ಅಸಾಧ್ಯ.

‘ಚಂದ್ರ’ ಯಾರ್ಕೆಸ್ ವೀಕ್ಷಣಾಲಯದಲ್ಲಿ ಕೆಲಸ ಮಾಡುವಾಗ, ಶಿಕಾಗೋ ವಿಶ್ವವಿದ್ಯಾಲಯದ ಇಬ್ಬರು ವಿದ್ಯಾರ್ಥಿಗಳಿಗೆ ವಾರಕ್ಕೆರಡು ದಿನ ಪಾಠ ಮಾಡುತ್ತಿದ್ದರು. ಪ್ರತಿಕೂಲ ವಾತಾವರಣದಲ್ಲಿ ಸುಮಾರು 240 ಕಿಲೋಮೀಟರ್ ತಾವೇ ಕಾರು ಚಲಾಯಿಸಿಕೊಂಡು ಹೋಗಿ ಪಾಠ ಮಾಡುತ್ತಿದ್ದರು. ಟಿ. ಡಿ. ಲೀ ಮತ್ತು ಸಿ. ಎನ್. ಯಾಂಗ್ ಆ ವಿದ್ಯಾರ್ಥಿಗಳು.

‘ಚಂದ್ರ’ರಿಗೆ ನೊಬೆಲ್ ಪುರಸ್ಕಾರ ದೊರೆಯುವುದಕ್ಕೆ ಮೊದಲೇ ಈ ಇಬ್ಬರೂ 1957 ರಲ್ಲಿ, ನೊಬೆಲ್ ಪ್ರಶಸ್ತಿ ಪಡೆದರು.2010 ರ ಅಕ್ಟೋಬರ್ 19 ರಂದು ಭಾರತವನ್ನೂ ಸೇರಿಸಿ ವಿಶ್ವದಾದ್ಯಂತ ಬಹಳ ಪ್ರೀತಿಯಿಂದ ‘ಚಂದ್ರ’ರ ‘ನೂರನೆಯ ಹುಟ್ಟು ಹಬ್ಬ’ವನ್ನು ಆಚರಿಸಲಾಯಿತು. 19 ಅಕ್ಟೋಬರ್ 1910 , ಅವರಿಗೆ ಬಲು ಖುಷಿಕೊಟ್ಟ ದಿನವಾಗಿತ್ತು. 1983 ರಲ್ಲಿ ಅದೇ ದಿನದಂದು ಅವರಿಗೆ ಹುಟ್ಟುಹಬ್ಬದ ಉಡುಗರೆಯಾಗಿ ‘ನೊಬೆಲ್ ಪ್ರಶಸ್ತಿ’ ದೊರೆತಿತ್ತು.

ನೊಬೆಲ್ ಪ್ರಶಸ್ತಿ, ಪದ್ಮವಿಭೂಷಣ, ಕೋಪ್ಲೆ ಮೆಡಲ್ ಸೇರಿದಂತೆ ಹತ್ತಾರು ಪ್ರಶಸ್ತಿಗಳು ‘ಚಂದ್ರ’ ಅವರಿಗೆ ದೊರೆತಿವೆ. 20 ಕ್ಕೂ ಮಿಕ್ಕ ಗ್ರಂಥಗಳು, ನೂರಾರು ಸಂಶೋಧನಾ ಲೇಖನಗಳನ್ನು ಚಂದ್ರ ಬರೆದಿದ್ದಾರೆ. 1999 ರಲ್ಲಿ ಅಮೆರಿಕದ ‘ನಾಸಾ ಸಂಸ್ಥೆ’ ಎಕ್ಸ-ಕಿರಣ ಸಮೀಕ್ಷಾ ನಿಲಯವನ್ನು ಅಂತರಿಕ್ಷದಲ್ಲಿ ಸ್ಥಾಪಿಸಿ ಅದಕ್ಕೆ ‘ಚಂದ್ರ’ರ ಹೆಸರನ್ನಿಟ್ಟಿದ್ದು ನಮಗೆ ಹೆಮ್ಮೆಯಲ್ಲವೇ? ಅತ್ಯಂತ ಸರಳ ವ್ಯಕ್ತಿಯಾಗಿದ್ದ ‘ಚಂದ್ರ’ ಅವರು ಅಸುನೀಗಿದ್ದು, 1995 ರ ಅಗಷ್ಟ್ 21 ರಂದು. “ನಿರಾಡಂಬರಕ್ಕಿಂತ ದೊಡ್ಡದಿಲ್ಲ. ದೊಡ್ಡದು ಯಾವಾಗಲೂ ನಿರಾಡಂಬರವಾಗಿಯೇ ಇರುತ್ತದೆ” ಎಂಬುದಕ್ಕೆ ‘ಚಂದ್ರ’ ಸೂಕ್ತ ಉದಾಹರಣೆ.

‘ಚಂದ್ರ’ ಅವರು ನಯ-ವಿನಯದ ಸಾಕಾರ ಮೂರ್ತಿ. ‘ಚಂದ್ರಶೇಖರ್ ಪರಿಮಿತಿ’ಯ ಆವಿಷ್ಕಾರಕ್ಕೆ ನಿಮಗೆ ಪ್ರೇರಣೆ ಹೇಗೆ ಬಂತು? ಎಂದು ಕೇಳಿದ್ದಕ್ಕೆ ಅದು ಅಲ್ಲಿಯೇ ಸಮೀಕರಣಗಳಲ್ಲಿತ್ತು. ಅದನ್ನು ಗುರುತಿಸಿದ ಮೊದಲಿಗ ನಾನಾದೆ ಅಷ್ಟೆ ಎಂದರಂತೆ. ವಿಶ್ವದಲ್ಲಿಯ ಪರಮ ಸುಂದರ ನಿರ್ಮಿತಿ ಯಾವುದು? ಎಂದು ಕೇಳಿದ್ದಕ್ಕೆ, ಸಂದೇಹಾತೀತವಾಗಿ ಕೃಷ್ಣವಿವರ ಎಂದು ಹೇಳಿದರಂತೆ. ದೇವರು ಮತ್ತು ಧರ್ಮ(God and religion) ಕುರಿತು ನಿಮ್ಮ ಅಭಿಪ್ರಾಯವೇನು? ಎಂದಾಗ, ಎರಡೂ ವೈಯಕ್ತಿಕ ನಂಬಿಕೆಗಳು. ಮಾನವ ಮತಿಯ ಅತ್ಯಂತ ಉತ್ಕೃಷ್ಟ ನಿರ್ಮಿತಿ ದೇವರು. ಈ ದೇವರ ಇಚ್ಛಾನುಸಾರ ವಿಶ್ವವಿದ್ಯಮಾನಗಳು ಸಂಭವಿಸುತ್ತವೆ ಎಂದು, ಪ್ರಾಮಾಣಿಕವಾಗಿ ನಂಬುವ ಮನಸ್ಥಿತಿಯು ಧರ್ಮದ ಮೂಲ. ವೈಯಕ್ತಿಕವಾಗಿ ನಾನೊಬ್ಬ ನಾಸ್ತಿಕ ಎಂದು ಉತ್ತರಿಸುತ್ತಾರೆ.

ಕೃಷ್ಣವಿವರ: ಪರಮ ಸುಂದರ ಭೌತನಿರ್ಮಿತಿ. ದೇವರು: ಪರಮೋತ್ಕೃಷ್ಟ ಬೌಧಿಕನಿರ್ಮಿತಿ ಎನ್ನುತ್ತಾರೆ ‘ಚಂದ್ರ’. ಈ ಎರಡೂ ಕವಲು ಹಾದಿಗಳ ಸಂಧಿಸ್ಥಾನ ಚಂದ್ರಶೇಖರ ಪರಿಮಿತಿ. ಅಮೇರಿಕೆಯ ‘ನಾಸಾ’ ಸಂಸ್ಥೆಯು 23 ಜುಲೈ 1999 ರಂದು “ಚಂದ್ರ” ಎಂಬ ಕೃತಕ ಉಪಗ್ರಹವನ್ನು ಕಕ್ಷೆಗೆ ಉಡಾಯಿಸಿ ನಮನ ಸಲ್ಲಿಸಿದೆ.

 

ಲೇಖಕರು:ಪ್ರೊ.ಸಿ.ಡಿ.ಪಾಟೀಲ
ಧಾರವಾಡ.(M)-9448427585

ಜಿಲ್ಲೆ

ರಾಜ್ಯ

error: Content is protected !!