ವಿಧಾನ ಪರಿಷತ್ ಚುನಾವಣೆ: ಮತ ಹಾಕುವ ವಿಶೇಷ ಕ್ರಮ

ಉಮೇಶ ಗೌರಿ (ಯರಡಾಲ)

ಬೆಳಗಾವಿ.(ಡಿ.10):ಇಂದು  ಸ್ಥಳೀಯ ಸಂಸ್ಥೆಗಳಿಂದ ಕರ್ನಾಟಕ ವಿಧಾನ ಪರಿಷತ್ತಿಗೆ ಚುನಾವಣೆಗೆ ನಡೆಯಲಿದೆ. ಬೆಳಿಗ್ಗೆ 8 ಗಂಟೆಯಿಂದ ಸಾಯಂಕಾಲ 4 ಗಂಟೆಯವರೆಗೆ ಮತದಾನದ ಸಮಯವಿದೆ. ಇಲ್ಲಿ ಮತ ಹಾಕುವ ಕ್ರಮ ಸಾಮಾನ್ಯ ಚುನಾವಣೆಗಿಂತಲೂ ಭಿನ್ನವಾಗಿರುತ್ತದೆ. ಈ ಚುನಾವಣೆಯಲ್ಲಿ ಮತಪೆಟ್ಟಿಗೆ ಮತ್ತು ಮತಪತ್ರ ಬಳಸಲಾಗುತ್ತದೆ. ಏರೋಕ್ರಾಸ್ ಮಾರ್ಕ ಸೀಲ್ ನಿಂದ ಮತ ಹಾಕಲಾಗುವುದಿಲ್ಲ.

ಈ ಚುನಾವಣೆಯ ಇನ್ನೊಂದು ವಿಶೇಷ ಏನೆಂದರೆ ಇಲ್ಲಿ ಸ್ಪರ್ಧಿಸುವ ಎಲ್ಲ ಉಮೇದುವಾರರಿಗೆ ಮತ ಚಲಾಯಿಸಬಹುದು. ಮತಗಟ್ಟೆಯಲ್ಲಿ ಚುನಾವಣಾ ಸಿಬ್ಬಂದಿ ನೀಡುವ ಪೆನ್ನಿನಿಂದ ಆದ್ಯತಾ ಕ್ರಮದಲ್ಲಿ ಅಂಕಿಗಳಿಂದ ಬರೆಯುವ ಮೂಲಕ ಮತ ಹಾಕಬೇಕಾಗುತ್ತದೆ. ಬೇರೆ ಯಾವುದೇ ರೀತಿಯ ಪೆನ್ನು ಬಳಸುವಂತಿಲ್ಲ.

ಅಭ್ಯರ್ಥಿಗಳ ಎದುರು ಮತಚಲಾವಣೆ ಸಮಯದಲ್ಲಿ ಮತಪತ್ರದಲ್ಲಿ 1,2,3…, ಅಥವಾ ೧,೨,೩…, ಅಥವಾ I,II,III… ಈ ತರಹದ ಅಂಕಿಗಳಿಂದ ಗುರುತು ಮಾಡಬೇಕಾಗುತ್ತದೆ. ಒಬ್ಬ ಮತದಾರ ತನ್ನ ಮತಚಲಾವಣೆ ಒಂದೇ ಭಾಷೆಯಲ್ಲಿ ಬರೆಯಬೇಕು. ನೆನಪಿಡಿ ಆದ್ಯತಾ ಕ್ರಮವನ್ನು ಒಂದು, ಎರಡು, ಮೂರು… ಎಂದು ಅಕ್ಷರದಲ್ಲಿ ಬರೆದು ಮತಚಲಾಯಿಸಿದರೆ ಮತ ರದ್ದಾಗುತ್ತದೆ.

ಮತದಾರರು ಈ ಎಲ್ಲ ವಿಷಯಗಳನ್ನು ತಿಳಿದುಕೊಂಡು ಯಾವುದೇ ಮತ ಕುಲಗೆಟ್ಟ ಅಥವಾ ರದ್ದಾದ ಮತವಾಗದಂತೆ ಎಚ್ಚರವಹಿಸುವುದು ಅಗತ್ಯ. ಇದರೊಂದಿಗೆ ಕೋವಿಡ್ ನಿಯಮಗಳನ್ನು ಅನುಸರಿಸುವುದು ಕಡ್ಡಾಯ.

Share This Article
";