ಭಾಲ್ಕಿ: ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ವಿದ್ಯಾರ್ಥಿಗಳನ್ನು ಕಂಡು ಸಮಸ್ಯೆ ಆಲಿಸಲು ವಿದ್ಯಾರ್ಥಿಗಳೊಂದಿಗೆ ಶಾಸಕ ಈಶ್ವರ ಖಂಡ್ರೆ ಅವರು ಬಸ್ ಡಿಪೋಗೆ ಭೇಟಿ ನೀಡಿ ಬಸ್ ಸಮಸ್ಯೆ ಬಗೆ ಹರಿಸುವಂತೆ ಸಾರಿಗೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗಡಿ ಭಾಗದ ಭಾಟಸಾಂಗವಿ ಗ್ರಾಮಕ್ಕೆ ಸಮರ್ಪಕವಾಗಿ ಬಸ್ ಸೇವೆ ಒದಗಿಸುವಂತೆ ವಿದ್ಯಾರ್ಥಿಗಳು ಸಾರಿಗೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರು. ಆದರೆ, ಸಮಸ್ಯೆ ಮಾತ್ರ ಬಗೆ ಹರಿದಿರಲಿಲ್ಲ.
ಸೋಮವಾರ ಕೂಡ ಹಲವು ವಿದ್ಯಾರ್ಥಿಗಳು ಬಸ್ ಡಿಪೋ ಅಧಿಕಾರಿಗೆ ಭೇಟಿಯಾಗಲು ಬಂದಿದ್ದರು. ಅದೇ ಬಸ್ ಡಿಪೋ ಮಾರ್ಗದಿಂದ ಬೆಳಗ್ಗೆ ಕಾಕನಾಳಗೆ ತೆರಳುತ್ತಿದ್ದ ಶಾಸಕರು ಅಲ್ಲಿಯೇ ರಸ್ತೆ ಬದಿಯಲ್ಲಿ ವಿದ್ಯಾರ್ಥಿಗಳನ್ನು ನಿಂತಿದ್ದನ್ನು ಕಂಡ ಅವರು ತಕ್ಷಣಕ್ಕೆ ತಮ್ಮ ವಾಹನ ನಿಲ್ಲಿಸಿ ವಿದ್ಯಾರ್ಥಿಗಳ ಗೋಳು ಆಲಿಸಿ ವಿದ್ಯಾರ್ಥಿಗಳೊಂದಿಗೆ ಖುದ್ದು ಶಾಸಕರು ಬಸ್ ಡಿಪೋಗೆ ಬಂದು ಅಲ್ಲಿನ ಅಧಿಕಾರಿ ಸೇರಿ ಬೀದರ್ ವಿಭಾಗೀಯ ನಿಯಂತ್ರಣಾಧಿಕಾರಿ ಜತೆಗೆ ದೂರವಾಣಿಯಲ್ಲಿ ಮಾತನಾಡಿ ತಾಲೂಕಿನಲ್ಲಿ ಬಸ್ ಸಮಸ್ಯೆ ಪದೇಪದೇ ಉಂಟಾಗುತ್ತಿದೆ.
ತಕ್ಷಣದಿಂದಲೇ ಗಡಿ ಭಾಗದ ಭಾಟಸಾಂಗವಿಗೆ ಬಸ್ ಸೇವೆ ಆರಂಭಿಸಬೇಕು ಜತೆಗೆ ಅಗತ್ಯ ಇರುವ ಕಡೆಗಳಲ್ಲಿ ಬಸ್ ಸೇವೆ ಒದಗಿಸಿ ಶಾಲಾ-ಕಾಲೇಜು ಹೋಗುವ ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ಎಚ್ಚರವಹಿಸಬೇಕು ಎಂದು ಸೂಚನೆ ನೀಡಿದರು. ಇದೇ ಬಸ್ ಸಮಸ್ಯೆ ಬಗೆ ಹರಿಸಿದ ಶಾಸಕರಿಗೆ ವಿದ್ಯಾರ್ಥಿಗಳು ಧನ್ಯವಾದ ಸಲ್ಲಿಸಿದರು.