ಸುದ್ದಿ ಸದ್ದು ನ್ಯೂಸ್
ಬೆಂಗಳೂರು: (ನ-25): ಹಂಸಲೇಖ ಅವರ ಹೇಳಿಕೆಯನ್ನು ಬೆಂಬಲಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾಧ್ಯಮ ಸಲಹೆಗಾರರು ಹಾಗೂ ಹಿರಿಯ ಪತ್ರಕರ್ತರು ಆಗಿರುವ ದಿನೇಶ ಅಮೀನಮಟ್ಟು ಅವರು ತಮ್ಮ ಫೇಸ್ಬುಕ್ ನಲ್ಲಿ ಹಂಸಲೇಖ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಅವರ ಬರಹ ಇಲ್ಲಿದೆ: ದಲಿತರ ಕೇರಿಗೆ ಹೋಗಿ ಬ್ರಾಹ್ಮಣರ ಜಾತಿ ಕೆಡಿಸಿದ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿಗಳ ವಿರುದ್ದ ರಾಜ್ಯದ ಬ್ರಾಹ್ಮಣರು ಮೊದಲು ಮರಣೋತ್ತರವಾಗಿಯಾದರೂ ಪ್ರತಿಭಟನೆ ನಡೆಸಬೇಕು.
ಮಠದೊಳಗೆ ರಾಜಕೀಯವನ್ನು ಎಳೆದು ತಂದು ಬ್ರಾಹ್ಮಣರ ಜಾತಿ ಮತ್ತು ಮಠ ಎರಡನ್ನೂ ಬೀದಿ ಪಾಲು ಮಾಡಿದವರು ಈ ಪೇಜಾವರ ಸ್ವಾಮೀಜಿಗಳು.
ಈ ಮಠದ ಸ್ವಾಮಿಗಳು ನಿಷ್ಠೆಯಿಂದ ಪಾಲಿಸುವ ವರ್ಣಾಶ್ರಮ ವ್ಯವಸ್ಥೆ ಪ್ರಕಾರ ಅವರು, ದಲಿತರ ಕೇರಿಗೆ ಕಾಲಿಡಬಾರದು, ದಲಿತರ ನೆರಳು ಕೂಡಾ ಅವರ ಮೇಲೆ ಬೀಳಬಾರದು. ಹೀಗಿರುವಾಗ ಪೇಜಾವರ ಸ್ವಾಮೀಜಿಗಳಿಗೆ ಯಾಕೆ ಈ ಉಸಾಬರಿ ಬೇಕಾಗಿತ್ತು?ಯಾಕೆ ಇವರಿಗೆ ಹಿಂದುತ್ವದ ರಾಜಕೀಯ ಬೇಕಿತ್ತು?
ಬೇರೆ ಮಠದ ಸ್ವಾಮಿಗಳು ತಮ್ಮ ಪಾಡಿಗೆ ಪೂಜೆ-ಪುನಸ್ಕಾರ ಮಾಡಿಕೊಂಡು ಅವರ ಪಾಡಿಗೆ ಇದ್ದಾರಲ್ಲಾ? ಯಾರಾದರೂ ಅವರ ಮಠಕ್ಕೆ ಹೋಗಿ ಸ್ವಾಮೀಜಿಗಳನ್ನು ಇಲ್ಲದೆ ಇದ್ದರೆ ಬ್ರಾಹ್ಮಣರ ಕೇರಿಗೆ ಹೋಗಿ ಬ್ರಾಹ್ಮಣರನ್ನು ಮಾಂಸ ತಿನ್ತೀರಾ,.ಕುರಿ ಬ್ಲಡ್ ಫ್ರೈ ತಿನ್ತೀರಾ ಎಂದು ಕೇಳುತ್ತಾರಾ? ಹಾಗೆ ಕೇಳಿದರೆ ತಪ್ಪು.
ಶೃಂಗೇರಿ ಮಠದಲ್ಲಿಯೂ ಸ್ವಾಮಿಗಳಿದ್ದಾರೆ. ಅವರು ಕಟ್ಟುನಿಟ್ಟಾಗಿ ವರ್ಣಾಶ್ರಮ ವ್ಯವಸ್ಥೆಯನ್ನು ಪಾಲಿಸುತ್ತಾರೆ, ಅದನ್ನು ಒಪ್ಪುವವರು ಅಲ್ಲಿಗೆ ಹೋಗಿ ಅಡ್ಡಬಿದ್ದು ಬರ್ತಾರೆ. ಅದು ಅವರವರ ಕರ್ಮ. ಆ ಸ್ವಾಮೀಜಿಗಳು ಯಾವತ್ತಾದರೂ ದಲಿತರ ಕೇರಿಗೆ ಹೋಗಿ ಬನ್ನಿಬನ್ನಿ ನಾವೆಲ್ಲ ಹಿಂದೂ,ನಾವೆಲ್ಲ ಒಂದು ಎಂದು ನಾಟಕ ಮಾಡುತ್ತಾರಾ? ಅವರನ್ನು ಯಾರಾದರೂ ಮಾಂಸ ತಿನ್ತೀರಾ ಎಂದು ಕೇಳಿದ್ದಾರಾ?
ದೇವಸ್ಥಾನಕ್ಕೆ ಹೋಗುವುದು, ಪೂಜೆ-ಅರ್ಚನೆ ಮಾಡಿಸುವುದು ಅವರವರ ಇಚ್ಚೆ.ಅಲ್ಲಿ ಹೋದವರು ‘ನಮಗೆ ಯಾಕೆ ಪೂಜೆ ಮಾಡಲಿಕ್ಕೆ ಬಿಡುವುದಿಲ್ಲ, ಗರ್ಭಗುಡಿಗೆ ನಮಗೆ ಯಾಕೆ ಪ್ರವೇಶ ಇಲ್ಲ’ ಎಂದು ಅಲ್ಲಿನ ಅರ್ಚಕರ ಜೊತೆ ಜಗಳಮಾಡುತ್ತಾರಾ?. ಅವರು ಯಾರೂ ದೇವಸ್ಥಾನಗಳ ರೀತಿ-ರಿವಾಜುಗಳನ್ನು ಪ್ರಶ್ನೆ ಮಾಡಲು ಹೋಗುವುದೂ ಇಲ್ಲ.
ಹೀಗಿರುವಾಗ ಈ ಪೇಜಾವರ ಸ್ವಾಮೀಜಿಗಳಿಗೆ ಯಾಕೆ ಅಧಿಕಪ್ರಸಂಗ ಬೇಕಿತ್ತು. ಅಲ್ಲಿಗೆ ಹೋಗಿದ್ದಕ್ಕಲ್ಲವೇ ಮಾಂಸ ತಿನ್ತೀರಾ ಎಂದು ಕೇಳಿದ್ದು.
ಕೇಳಿದ್ದರಲ್ಲಿ ತಪ್ಪೇನಿದೆ? ಮಾಂಸ ಬ್ರಾಹ್ಮಣರಿಗೆ ವರ್ಜ್ಯವೇನು ಅಲ್ಲವಲ್ಲಾ? ಬ್ರಾಹ್ಮಣರು ಗೋಮಾಂಸ ತಿನ್ನುತ್ತಿದ್ದ ಬಗ್ಗೆ ವೇದಗಳಲ್ಲಿಯೇ ಉಲ್ಲೇಖವಿದೆಯಲ್ಲಾ?
ಹಾಗಿದ್ದರೆ ವೇದಗಳನ್ನು ಏನು ಮಾಡ್ತೀರಾ? ಸುಟ್ಟು ಹಾಕ್ತೀರಾ? ಮೊದಲು ಆ ಕೆಲಸ ಮಾಡಿ.