”ಸುದ್ದಿ ಸದ್ದು ನ್ಯೂಸ್”ನ ವಿಶೇಷ ಲೇಖನ
ಒಬ್ಬ ಮುಖ್ಯಮಂತ್ರಿಯ ಆಡಳಿತ ಪರಿಧಿಯಲ್ಲಿ 10 ಮೆಡಿಕಲ್ ಸೀಟಿನ ಅಲಕೇಶನ್ ಹಕ್ಕಿತ್ತು. ಆಗ ಬಂದ ನೂರಾರು ಶಿಫಾರಸ್ಸುಗಳನ್ನು ಪರೀಕ್ಷಿಸಿದ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಕಾಮರಾಜ್ ಅವರು ಕೇವಲ 2 ನಿಮಿಷದಲ್ಲಿ 10 ಜನರನ್ನು ಆಯ್ಕೆ ಮಾಡಿ ಆಯ್ಕೆ ಪಟ್ಟಿಯನ್ನು ಅಧಿಕಾರಿಗಳ ಕೈಗೆ ಕೊಟ್ಟರು.
ಇದನ್ನು ಅರಿತ ತಮಿಳುನಾಡಿನ ಜನ ಮುಖ್ಯ ಮಂತ್ರಿ ಕುಮಾರ ಸ್ವಾಮಿ ಕಾಮರಾಜ್ ಅವರು ಸ್ವಜಾತಿಯವರಿಗೋ ಸ್ವಪಕ್ಷೀಯರಿಗೋ ಅನುಕೂಲ ಮಾಡಿಕೊಟ್ಟಿರುತ್ತಾರೆ ಎಂದು ತಮ್ಮ ತಮ್ಮಲ್ಲೇ ಗೊಣಗಿಕೊಂಡರು. ಸ್ವಲ್ಪ ಸಮಯದ ನಂತರ ಬಿಡುಗಡೆಯಾದ ಲಿಸ್ಟ್ ಕಂಡಾಗ ಅಲ್ಲಿದ್ದ ಎಲ್ಲರಿಗೂ ವಿಸ್ಮಯ ಕಾದಿತ್ತು ಎಲ್ಲರೂ ಅಂದುಕೊಂಡಿದ್ದು ಹುಸಿಯಾಗಿ ಅಚ್ಚರಿ ಕಾದಿತ್ತು. ಆಯ್ಕೆ ಪಟ್ಟಿಯಲ್ಲಿ ಇದ್ದವರೆಲ್ಲರೂ ತಿರಾ ಕಡು ಬಡವರು, ಇಡೀ ವಂಶವೇ ಅಕ್ಷರ ಕಾಣದಷ್ಟು ದೌರ್ಭಾಗ್ಯರು ಆಯ್ಕೆ ಪಟ್ಟಿ ಕುರಿತು ಅಧಿಕಾರಿಗಳು ಕುಮಾರ ಸ್ವಾಮಿ ಕಾಮರಾಜ್ ಸಾಹೇಬರನ್ನ ಕಂಡು ತಾವು ಹೇಗೆ ಇವರನ್ನ ಆಯ್ಕೆ ಮಾಡಿರುವಿರಿ ಎಂದು ಕೇಳಿದಾಗ ಕುಮಾರ ಸ್ವಾಮಿ ಕಾಮರಾಜ್ ಅವರು ಹೀಗೆ ಹೇಳಿದರು. ಎಲ್ಲ ಅರ್ಜಿಗಳನ್ನು ಒಳಗೊಂಡ ಪೇಪರಿನ ಕೊನೆಯಲ್ಲಿ ಇರುವ ಪೋಷಕರ ಸಹಿ ಜಾಗದಲ್ಲಿ ಹೆಬ್ಬೆಟ್ಟಿನ ಗುರುತು ಇರುವ ಎಲ್ಲರನ್ನು ಆಯ್ಕೆ ಮಾಡಿದ್ದೇನೆ. ಅವರ ಇಡೀ ಸಮೂಹವೇ ಶಿಕ್ಷಣದಿಂದ ವಂಚಿತರು. ಇವರಿಂದ ಹೊಸ ಪರಂಪರೆ ಪ್ರಾರಂಭವಾಗಿ ಹೊಸ ಬೆಳಕು ಮೂಡಲಿ ಎಂದರು.
ಇವರ ನೆರವಿನಿಂದ ಒಂದು ಪೈಸೆ ವೆಚ್ಚ ಇಲ್ಲದೆ ಅಧ್ಯಯನ ಮಾಡಿದ ಬಹುತೇಕ ವೈದ್ಯರು ಅತಿ ಕಡಿಮೆ ದರದಲ್ಲಿ ಉತ್ತಮ ಚಿಕಿತ್ಸೆ ಅಲ್ಲದೆ ಚೆನ್ನೈನ ಮಹಾನಗರದಲ್ಲಿ ತಿರುವೆಂಗಡಮ್ ವೀರರಾಘವನ್ ಎಂಬ ಖ್ಯಾತ ವೈದ್ಯರು ಯಾವುದೇ ತರಹದ ಶುಲ್ಕ ತೆಗೆದುಕೊಳ್ಳದೆ ಉಚಿತವಾಗಿ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡುವುದರ ಜೊತೆಗೆ ಕೊಳಗೇರಿಗಳಲ್ಲಿ ವಾಸಿಸುವ ಜನರಿಗಾಗಿ ಆಸ್ಪತ್ರೆಯೊಂದನ್ನು ತೆರೆದಿದ್ದಾರೆ.
ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿ ಭಾರತ ರಾಷ್ಟ್ರೀಯ ಕಾಂಗ್ರೆಸ್ಸಿನಲ್ಲಿ ಮುಂಚೂಣಿ ಸ್ಥಾನದಲ್ಲಿದ್ದು , ಲಾಲ್ ಬಹದ್ದೂರ್ ಶಾಸ್ತ್ರಿ ಮತ್ತು ಇಂದಿರಾ ಗಾಂಧಿಯವರನ್ನು ಪ್ರಧಾನಮಂತ್ರಿಗಳನ್ನಾಗಿಸುವಲ್ಲಿ ಪ್ರಧಾನ ಭೂಮಿಕೆಯನ್ನು ನಿರ್ವಹಿಸಿದ ಇವರನ್ನು ”ದಕ್ಷಿಣ ಭಾರತದ ಗಾಂಧಿ”ಎಂದು ಕರೆಯುತ್ತಿದ್ದರು
9 ವರ್ಷ ಭಾರತದ ಒಂದು ದೊಡ್ಡ ರಾಜ್ಯದ ಮುಖ್ಯಮಂತ್ರಿಯಾಗಿ, ಒಂದು ದೊಡ್ಡ ಪಕ್ಷದ ಅಧ್ಯಕ್ಷರಾಗಿ ಇವರು ಲಿಂಗೈಕ್ಯರಾದಾಗ ಅವರು ಹತ್ತಿರ ಉಳಿದಿದ್ದು ಕೇವಲ 42 ರೂ ಜೊತೆಗೆ 2 ಹರಿದ ಲುಂಗಿ ಮತ್ತು ಅಂಗಿ ಸ್ವಂತದ್ದು. ಮಿಕ್ಕ ಕೆಲವೇ ಸಾವಿರ ಹಣ ಎಂಪಿ ನಿಧಿಯಿಂದ ಬಂದದ್ದು ಬಿಟ್ಟರೆ ಬೇರೆ ಏನೂ ಇರಲಿಲ್ಲ.
ಕುಮಾರ ಸ್ವಾಮಿ ಕಾಮರಾಜ್ ಅವರು ಮಹಿಳೆಯರ ಶಿಕ್ಷಣ, ಕಡ್ಡಾಯ ಶಿಕ್ಷಣ, ಮಕ್ಕಳಿಗೆ ಮದ್ಯಾಹ್ನದ ಊಟವನ್ನು ನೀಡಿ ಗ್ರಾಮೀಣ ಭಾಗದ ಲಕ್ಷಾಂತರ ಮಕ್ಕಳು ವಿದ್ಯೆ ಕಲಿಯುವಂತೆ ಮಾಡಿದರು. ಪ್ರತಿ ಹಳ್ಳಿ ಹಳ್ಳಿಗೂ ಕರೆಂಟ್ ಕೊಡುವುದರ ಜೊತೆಗೆ ಹಳ್ಳಿಗಾಡಿನ ಜನರಿಗೆ ಮತ್ತು ಕೂಲಿಕಾರ್ಮಿಕ ಹಾಗೂ ರೈತಾಪಿ ವರ್ಗಕ್ಕೆ ಉದ್ಯೋಗ ಖಾತ್ರಿ ಕೊಟ್ಟು ಜನಾನುರಾಗಿ ನಾಯಕರಾಗಿದ್ದರು.
ಇವರ ಸಚಿವ ಸಂಪುಟದ ಅರ್ಧದಷ್ಟು ಜನರ ಅಂತ್ಯವೂ ಹೀಗೆಯೇ ಆಗಿದೆ ಎಂದು ಇವರ ಒಡನಾಡಿಗಳು ಹೇಳುತ್ತಾರೆ. ಇವರಿಗೆ 1976 ರಲ್ಲಿ ಮರಣೋತ್ತರವಾಗಿ ಭಾರತ ರತ್ನ ಪ್ರಶಸ್ತಿಯನ್ನು ನೀಡ ಗೌರವಿಸಲಾಗಿತ್ತು.