ರಾಮದುರ್ಗ: ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಕನ್ನಡ ಸಾಹಿತ್ಯದಲ್ಲಿಯೂ ಸಾಕಷ್ಟು ಕೃಷಿ ಮಾಡಿದ ಸಾಧಕರನ್ನು ನಾವು ಇಂದು ಜಾತಿಗಳಿಂದ ಗುರುತಿಸುವುದು ಜಾಸ್ತಿಯಾಗಿದೆ. ಇದು ಅಷ್ಟೊಂದು ಸೂಕ್ತ ಬೆಳವಣಿಗೆ ಅಲ್ಲ ಎಂದು ಖ್ಯಾತ ನ್ಯಾಯವಾದಿಗಳು, ಕನ್ನಡ ಗಡಿ ಹೋರಾಟಗಾರರು, ಗಡಿ ತಜ್ಞರು ಹಾಗೂ ಜನಪ್ರಿಯ ಸಾಹಿತಿ ರವೀಂದ್ರ ತೋಟಗೇರ ಹೇಳಿದರು. ಅವರು ಕನ್ನಡ ಸಾಹಿತ್ಯ ಪರಿಷತ್ತು ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನದ ಚುನಾವಣಾ ಕಣಕ್ಕಿಳಿದ ಕಾರಣ ಕನ್ನಡ ಮನಸ್ಸುಗಳಿಗೆ ಭೆಟ್ಟಿಯಾಗಿ ಮತ ಯಾಚಿಸುತ್ತ ರಾಮದುರ್ಗ ತಾಲೂಕು ಪಂಚಾಯಿತ ಸಭಾಭವನದಲ್ಲಿ ಸಭಿಕರನ್ನುದ್ಧೇಶಿಸಿ ಮಾತನಾಡಿದರು. ಬೆಳಗಾವಿ ಜಿಲ್ಲಾ ಕೇಂದ್ರ ಸ್ಥಾನ ನಗರ ಬೆಳಗಾವಿಯಲ್ಲಿ ಕರ್ಕಿ ಸ್ಮಾರಕ ಭವನ ನಿರ್ಮಿಸಬೇಕೆಂದರು. ಬಡ ಕನ್ನಡ ಸಾಹಿತಿಗಳು ರಚಿಸಿದ ಹಸ್ತಪ್ರತಿಗಳನ್ನು ಮುದ್ರಿಸುವ ಕಾರ್ಯ ಪರಿಷತ್ತಿನ ವತಿಯಿಂದ ನಡೆಯುವುದು ಇಂದಿನ ಅವಶ್ಯಕತೆಗಳಲ್ಲೊಂದು, ಕನ್ನಡದ ಹತ್ತು ಹಲವಾರು ಗುರುತರ ಕಾರ್ಯ ಹಾಗೂ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಆಶೋತ್ತರದ ಭರವಸೆಯ ನುಡಿಗಳನ್ನು ಚುಸಾಪ ಬೆಳಗಾವಿ ಜಿಲ್ಲಾಧ್ಯಕ್ಷ ಸ್ಥಾನದ ಅಭ್ಯರ್ಥಿ ತೋಟಗೇರ ಹೇಳಿದರು. ಹಿರಿಯ ವೈದ್ಯರು ಡಾ. ವಾಯ್. ಬಿ. ಕುಲಗೋಡ ಅಧ್ಯಕ್ಷತೆ ವಹಿಸಿದ್ದರು. ರಾಮದುರ್ಗ ಕಸಾಪ ನಿಕಟಪೂರ್ವ ಅಧ್ಯಕ್ಷರು ಎಸ್. ಎಂ. ಸಕ್ರಿ ಪ್ರಾಸ್ತವಿಕವಾಗಿ ಮಾತನಾಡಿದರು. ಪತ್ರಕರ್ತ ಸೋಮಶೇಖರ ವೀ. ಸೊಗಲದ ತೋಟಿಗೇರರವರ ಸಾಹಿತ್ಯ ಹಾಗೂ ಹಲವು ಸಾಧನೆಗಳ ಬಗ್ಗೆ ಪರಿಚಯಿಸಿದರು. ವೇದಿಕೆಯ ಮೇಲೆ ಸಾಹಿತಿ ಪತ್ರಕರ್ತ ಪ್ರಕಾಶ ಐಹೊಳೆ ಉಪಸ್ಥಿತರಿದ್ದರು. ಡಾ. ಪಿ. ಬಿ. ತೆಗ್ಗಿಹಳ್ಳಿ ಸ್ವಾಗತಿಸಿದರು. ಸುರೇಶ ಕಲ್ಲೂರ ನಿರೂಪಿಸಿದರು. ಎಮ್. ಎಸ್. ಜಂಗವಾಡ ವಂದಿಸಿದರು.