ಹುಬ್ಬಳ್ಳಿ: ಅನೈತಿಕ ಸಂಬಂಧ ಪ್ರಶ್ನೆ ಮಾಡಿದಕ್ಕೆ ತಾಯಿಯೇ ತನ್ನ ಪ್ರೇಮಿಯ ಜೊತೆ ಸೇರಿ ಮಗಳನ್ನು ಬೆತ್ತಲೆ ಮಾಡಿ ಅಶ್ಲೀಲ ವಿಡಿಯೋ ಚಿತ್ರಿಕರಿಸಿರುವ ಕುರಿತು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಲ್ಲಿನ ಅಜ್ಮೀರನಗರದ ನಿವಾಸಿಯಾದ ಫರೀದಾ ದೇಸಾಯಿ ಹಾಗೂ ಆಕೆಯ ಪ್ರಿಯಕರ ಮಹಮ್ಮದ್ ಗೌಸ್ ನಡುವೆ ಅಕ್ರಮ ಸಂಬಂಧ ಇತ್ತು ಎನ್ನಲಾಗಿದೆ. ಫರೀದಾ ಎಂಬುವಳ ಮಗಳು ಇದನ್ನು ಪ್ರಶ್ನೆ ಮಾಡಿದ್ದಾಳೆ. ಇದರಿಂದ ಕೋಪಗೊಂಡ ತಾಯಿ ಹಾಗೂ ಆಕೆಯ ಪ್ರಿಯಕರ 20 ವರ್ಷದ ನಿಧಾ ಅನ್ನುವ ಮಗಳನ್ನು ಬಲವಂತವಾಗಿ ಕೊಠಡಿಯಲ್ಲಿ ಕೂಡಿ ಹಾಕಿ, ಬಟ್ಟೆ ತೆಗೆದು ವಿಡಿಯೋ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಫರೀದಾ ದೇಸಾಯಿ ಎಂಬಾಕೆ ಮೂಲ ಬೆಳಗಾವಿಯಲ್ಲಿ ವಾಸಿಸುತ್ತಿದ್ದಳು.ಆಗ ಮಹಮ್ಮದ್ ಗೌಸ್ ಮಕ್ಕಳ ವಿದ್ಯಾಭ್ಯಾಸದ ನೆಪ ಹೇಳಿ ಅವರನ್ನು ಹುಬ್ಬಳ್ಳಿಗೆ ಕರೆತಂದಿದ್ದನು. ಅಲ್ಲದೇ ಈ ಮಹಿಳೆಯ ಗಂಡ ಸೌದಿಯಲ್ಲಿರುವುದನ್ನು ಮನಗಂಡು ಅವಳ ಜೊತೆ ಅನೈತಿಕ ಸಂಬಂಧ ಬೆಳೆಸಿದ್ದಾನೆ. ಹಾಗೂ ಅಶ್ಲೀಲ ವಿಡಿಯೋ ಮಾಡಿ ಬೆದರಿಸಿ ಹಣ ಪಡೆಯುತ್ತಿದ್ದನು. ಇತ್ತೀಚೆಗೆ ನೊಂದ ಯುವತಿಯ ನಿಶ್ಚಿತಾರ್ಥವಾಗಿತ್ತು. ಹುಡುಗನಿಂದ ಐದು ಲಕ್ಷ ಹಣ ತರುವಂತೆ ಬೇಡಿಕೆಯನ್ನು ಮಹಮ್ಮದ್ ಗೌಸ್ ಇಟ್ಟಿದ್ದನು. ಅಲ್ಲದೇ, ಹಣ ನೀಡದೇ ಹೋದರೆ ಅಶ್ಲೀಲ ವಿಡಿಯೋ ಮಾಡಿ ಹುಡುಗನಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದನು.
ಈ ಕುರಿತು ಯುವತಿಯು ತಮ್ಮ ಅಜ್ಜಿ ಹಾಗೂ ತಂದೆಗೆ ವಿಷಯ ತಿಳಿಸಿದ್ದಾಳೆ. ಕುಪಿತಗೊಂಡ ತಾಯಿ ಮತ್ತು ಮಹಮ್ಮದ್ ಗೌಸ್ ನಮ್ಮ ಸಂಬಂಧಕ್ಕೆ ಅಡ್ಡಿಯಾಗುತ್ತಿಯಾ ಎಂದು ಯುವತಿಯ ಮೇಲೆ ದೌರ್ಜನ್ಯ ನಡೆಸಿದ್ದಾರೆ ಎಂದು ದೂರಿನ ಪತ್ರದಲ್ಲಿ ಯುವತಿ ಆರೋಪಿಸಿದ್ದಾಳೆ.ಈ ಕುರಿತು ಹಳೆ ಹುಬ್ಬಳ್ಳಿಯ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.