ಬೆಂಗಳೂರು(ಅ.26): ಬೆಂಗಳೂರಿನಲ್ಲಿ ಮೂರು ಜನರಲ್ಲಿ ಹೊಸ ಮಾದರಿಯ ಡೆಲ್ಟಾಗಿಂತ ವೇಗವಾಗಿ ಹರಡಬಲ್ಲ ಕೊರೋನಾ ರೂಪಾಂತರಿ AY 4.2 ಸೋಂಕು ಕಾಣಿಸಿಕೊಂಡಿದೆ. ಈ ಹೊಸ ಮಾದರಿಯ ವೈರಸ್ ಸದ್ಯ ಇಡೀ ವಿಶ್ವದ ನಿದ್ದೆಗೆಡಿಸಿದೆ.ಬ್ರಿಟನ್, ಯೂರಪ್, ರಷ್ಯಾ ಅಮೇರಿಕಾದಲ್ಲಿ ಕೊರೋನಾ ಏರಿಕೆಗೆ ಕಾರಣವಾಗಿರುವ AY 4.2 ಸದ್ಯ ರಾಜ್ಯಕ್ಕೂ ದಾಪುಗಾಲು ಇಟ್ಟಿದೆ.
ಜುಲೈ ತಿಂಗಳಲ್ಲಿ ಕೋವಿಡ್ ಸೋಂಕಿಗೆ ಒಳಪಟ್ಟವರ ದ್ರವದ ಪರೀಕ್ಷೆಯನ್ನು ಬಿಬಿಎಂಪಿ ಮಾಡಿತ್ತು.
ಜಿನೋಮಿಕ್ ಸೀಕ್ವೆನ್ಸ್ ವೇಳೆ ಹೊಸ ತಳಿ ಪತ್ತೆಯಾಗಿದ್ದು, ನಿನ್ನೆ ಸೋಮವಾರ ಈ ವರದಿ ಲಭಿಸಿದೆ.
ಬ್ರಿಟನ್ ಮತ್ತು ರಷ್ಯಾದಲ್ಲಿ ಹೊಸ ಕೊರೋನಾ ಪ್ರಕರಣಗಳ ಸ್ಫೋಟಕ್ಕೆ ಕಾರಣವಾಗಿರುವ ‘ಎವೈ 4.2‘ ಎಂಬ ಕೊರೋನಾದ ಹೊಸ ರೂಪಾಂತರಿ ತಳಿ ಇದೀಗ ಕರ್ನಾಟಕಕ್ಕೂ ಕಾಲಿಟ್ಟಿರುವ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ. ಸಾಂಕ್ರಾಮಿಕ ವೈರಸ್‌ಗಳ ಕುರಿತು ಜಾಗತಿಕ ಮಟ್ಟದಲ್ಲಿ ಮಾಹಿತಿ ಹಂಚಿಕೊಳ್ಳುವ ಸಂಸ್ಥೆಯೊಂದು ಈ ಕುರಿತು ವರದಿ ಮಾಡಿದೆ. ಈಗಾಗಲೇ ಮಧ್ಯಪ್ರದೇಶದಲ್ಲಿ ಈ ರೂಪಾಂತರಿ ಪತ್ತೆಯಾಗಿತ್ತು. ಈಗ ಕರ್ನಾಟಕ ಸೇರಿದಂತೆ ಒಟ್ಟು 7 ರಾಜ್ಯಗಳಲ್ಲಿ ಹೊಸ ತಳಿ ಇರುವುದು ಪತ್ತೆಯಾಗಿದೆ.
ಭಾರತದಲ್ಲಿ ಮೊದಲಿಗೆ ಪತ್ತೆಯಾಗಿ, ನಂತರ ಅಮೆರಿಕ, ಬ್ರಿಟನ್ ಸೇರಿ ಹಲವು ದೇಶಗಳಲ್ಲಿ ಭಾರೀ ಪ್ರಮಾಣದ ಸೋಂಕು ಸಾವಿಗೆ ಕಾರಣವಾಗಿದ್ದ ಡೆಲ್ಟಾತಳಿಯ ಉಪ ತಳಿಗೆ ‘ಎವೈ 4.2‘ ಎಂದು ಹೆಸರಿಡಲಾಗಿದೆ. ಇದು ಡೆಲ್ಟಾಗಿಂತ ಹೆಚ್ಚು ಸೋಂಕು ಕಾರಕ ಎಂಬುದು ವಿಜ್ಞಾನಿಗಳ ಪ್ರಾಥಮಿಕ ವಿಶ್ಲೇಷಣೆಗಳಿಂದ ಕಂಡುಬಂದಿದೆ. ಹೀಗಾಗಿಯೇ ಈ ಹೊಸ ರೂಪಾಂತರಿ ಬಗ್ಗೆ ಇದೀಗ ವಿಶ್ವದಾದ್ಯಂತ ಆತಂಕ ಎದುರಾಗಿದೆ. ಇದು ಭಾರತ ಮತ್ತು ವಿಶ್ವದ ಹಲವು ದೇಶಗಳಲ್ಲಿ 3 ಮತ್ತು 4ನೇ ಅಲೆಗೂ ಕಾರಣವಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.
ಕರ್ನಾಟಕ 3, ಆಂದ್ರಪ್ರದೇಶ 7, ಮಧ್ಯಪ್ರದೇಶ 7,ಕೇರಳ 4, ತೆಲಂಗಾಣ 2, ಮಹಾರಾಷ್ಟ್ರ 1, ಜಮ್ಮು ಮತ್ತು ಕಾಶ್ಮೀರ 1 ಹೀಗೆ ದೇಶದಲ್ಲಿ ಒಟ್ಟು 25 ಕೇಸಗಳು ಪತ್ತೆಯಾಗಿದೆ.