ಹೌದೆನ್ನುವುದಾದರೆ, ನೀವು ನಿಜವಾಗಿಯೂ ಪ್ರಬಲರು. ನಿರಂತರ ಹಸಿವೊಂದು ನಿಮ್ಮೊಳಗಿದ್ದರೆ, ನೀವು ಏನನ್ನು ಬೇಕಾದರೂ ಸಾಧಿಸಬಲ್ಲಿರಿ.
ನಾನು ಅನ್ನದ ಹಸಿವಿನ ಬಗ್ಗೆ ಮಾತನಾಡುತ್ತಿಲ್ಲ. ಹಾಗೆ ನೋಡಿದರೆ, ಹಸಿವಿನ ಪೈಕಿ ಅನ್ನದ ಹಸಿವಿಗೆ ಕೊನೆಯ ಸ್ಥಾನ. ಇವತ್ತಿನ ದಿನಮಾನದಲ್ಲಿ ಅದು ಅತ್ಯಂತ ನಿಕೃಷ್ಟ ಕೂಡಾ.
ಏನನ್ನಾದರೂ ಸಾಧಿಸಬೇಕೆಂಬ ಹಸಿವು, ಕಲಿಕೆಯ ಹಸಿವು, ಪ್ರೀತಿಯ ಹಸಿವು, ಮನ್ನಣೆಯ ಹಸಿವು, ಸೇಡು ತೀರಿಸಿಕೊಳ್ಳಬೇಕೆಂಬ ಹಸಿವು ನಿಜಕ್ಕೂ ಅತ್ಯಂತ ತೀವ್ರವಾದವುಗಳು. ಅನ್ನದ ಹಸಿವಿಗಿಂತ ಹೆಚ್ಚು ಪ್ರಬಲವಾದವುಗಳು. ಇಂತಹ ಹಸಿವನ್ನು ಹೊಂದಿರುವ ವ್ಯಕ್ತಿ ನಿಜಕ್ಕೂ ಬೇರೆಯದೇ ಆದ ತಾಕತ್ತು ಹೊಂದಿರುತ್ತಾನೆ. ಅವನನ್ನು ಎದುರಿಸುವುದು ಅಷ್ಟು ಸುಲಭವಲ್ಲ.
ಹಸಿವೊಂದು ಮನಸ್ಸಿನೊಳಗಿದ್ದರೆ, ನಮಗರಿವಿಲ್ಲದಂತೆ ಚೈತನ್ಯವೊಂದು ಸದಾ ಹರಿದಾಡುತ್ತಿರುತ್ತದೆ. ಒಳಗಿನ ಆ ಹಸಿವನ್ನು ತಣಿಸುವ ನಾನಾ ದಾರಿಗಳನ್ನು ನಿರಂತರವಾಗಿ ಹುಡುಕುತ್ತಿರುತ್ತದೆ. ಆ ಹಸಿವನ್ನು ಶಮನ ಮಾಡುವವರೆಗೆ ನೆಮ್ಮದಿಯಿಲ್ಲ, ವಿಶ್ರಾಂತಿಯಿಲ್ಲ, ಶಾಂತಿಯಿಲ್ಲ. ಹೀಗೆ ಹಸಿವನ್ನು ಹೊತ್ತಿರುವ ವ್ಯಕ್ತಿ ಅತ್ಯಂತ ಚುರುಕಾಗಿರುತ್ತಾನೆ, ಜಾಗೃತನಾಗಿರುತ್ತಾನೆ, ತನ್ನ ಹಸಿವನ್ನು ತಣಿಸಿಕೊಳ್ಳುವ ದಾರಿಗಳನ್ನು ನಿರಂತರವಾಗಿ ಹುಡುಕುತ್ತಿರುತ್ತಾನೆ.
ನಮ್ಮೊಳಗೆ ಇಂತಹ ಹಸಿವನ್ನು ಬೇರೆ ಯಾರೂ ಉಂಟು ಮಾಡುವುದು ಸಾಧ್ಯವಿಲ್ಲ. ಅದು ಸ್ವಯಾರ್ಜಿತ. ಅಂದರೆ, ನಾವೇ ಗಳಿಸಿಕೊಳ್ಳಬೇಕು. ನಮ್ಮೊಳಗೇ ಅಂತಹದೊಂದು ಹಸಿವು ಹುಟ್ಟಬೇಕು. ಅನ್ನ(ಪರಿಹಾರ)ವನ್ನು ಯಾರು ಬೇಕಾದರೂ ನೀಡಬಲ್ಲರು. ನಮ್ಮೊಳಗಿನ ಹಸಿವನ್ನು ಶಮನ ಮಾಡಲು ಇತರರು ನೆರವಾಗಬಹುದು, ಕಾರಣರಾಗಬಹುದು. ಆದರೆ, ಅಂಥದೊಂದು ಹಸಿವನ್ನು ಮಾತ್ರ ನಾವೇ ಹುಟ್ಟಿಸಿಕೊಳ್ಳಬೇಕಾಗುತ್ತದೆ.
ಹೀಗಾಗಿ ಹಸಿವು ತಂದುಕೊಳ್ಳುವವ ಹೆಚ್ಚು ಪ್ರಬಲ. ಹೆಚ್ಚು ಸಮರ್ಥ. ಹೆಚ್ಚು ಸಕ್ರಿಯ ವ್ಯಕ್ತಿಯಾಗುತ್ತಾನೆ. ಅವನ ಮೈ-ಮನಸ್ಸುಗಳು ಹಸಿವನ್ನು ತಣಿಸುವ ಕ್ರಿಯೆಯಲ್ಲಿ ನಿರಂತರವಾಗಿ ತೊಡಗಿಕೊಳ್ಳುತ್ತವೆ. ಅದು ಈಡೇರುವವರೆಗೂ ಆತ ವಿಶ್ರಮಿಸಲಾರ.
ಸಾಧ್ಯವಾದರೆ, ಅಂತಹದೊಂದು ನಿರಂತರ ಹಸಿವನ್ನು ನಿಮ್ಮದಾಗಿಸಿಕೊಳ್ಳಿ. ಅದು ಸಾಧನೆಯ ಹಸಿವಾದರೆ ಇನ್ನೂ ಉತ್ತಮ. ಆಗ, ನಿಮಗರಿವಿಲ್ಲದೇ ನೀವು ಬದಲಾಗುತ್ತ ಹೋಗುತ್ತೀರಿ. ಬೆಳೆಯುತ್ತ ಹೋಗುತ್ತೀರಿ.
ಒಮ್ಮೆ ಪ್ರಯತ್ನಿಸಿ ನೋಡಿ!
ಲೇಖಕರು – ಚಾಮರಾಜ ಸವಡಿ