ಬೆಂಗಳೂರು: ಮೀಲಾದುನ್ನಬಿ ಆಚರಣೆ ಮಾಡುತ್ತಿರುವ ರ್‍ಯಾಲಿಯ ವೀಡಿಯೊ ಒಂದನ್ನು ಟ್ವಿಟರ್‌ನಲ್ಲಿ ಹಾಕಿ ಪ್ರಚೋದನಕಾರಿಯಾದ ಶೀರ್ಷಿಕೆ ನೀಡಿರುವ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಸಾಮಾಜಿ ಜಾಲತಾಣದಲ್ಲಿ ವ್ಯಾಪಕ ಅಸಮಾಧಾನ ವ್ಯಕ್ತವಾಗಿದೆ.
ಕೆಲವರು ಈ ಟ್ವೀಟ್ ಅನ್ನು ಬೆಂಬಲಿಸಿ ಪ್ರತಿಕ್ರಿಯಿಸಿದರೆ, ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಸೇರಿದಂತೆ ಅನೇಕರು ಚಕ್ರವರ್ತಿ ಸೂಲಿಬೆಲೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಕಟುವಾಗಿ ಪ್ರತಿಕ್ರಿಯಿಸಿದ್ದಾರೆ.
ಒಂದು ಕಡೆ ಸಣ್ಣ ಸಣ್ಣ ಮಕ್ಕಳು ಹಸಿರು ಧ್ವಜ ಹಿಡಿದು ಮೀಲಾದುನ್ನಬಿ ಮೆರವಣಗೆ ಸಾಗುವ ದೃಶ್ಯ ಇದ್ದರೆ ಅದರ ಪಕ್ಕದಲ್ಲೇ ಬಾಲಕನೊಬ್ಬ ಕೇಸರಿ ಧ್ವಜ ಹಿಡಿದು ಸಾಗುವ ದೃಶ್ಯ ಕಾಣಿಸುತ್ತಿದೆ.
ಈ ವೀಡಿಯೋಗೆ ”ಕುರಿಗಳು ಹಿಂಡಾಗಿ ನಡೆಯುವಾಗ ಯಾವುದೇ ಭಯ ಇಲ್ಲದೆ, ಸಿಂಹ ಏಕಾಂಗಿಯಾಗಿಯೇ ಹೆಜ್ಜೆ ಹಾಕುತ್ತಿದೆ” ಎಂಬ ಶೀರ್ಷಿಕೆಯೊಂದಿಗೆ ಚಕ್ರವರ್ತಿ ಸೂಲಿಬೆಲೆ ತಮ್ಮ ಟ್ವಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇದಕ್ಕೆ ಪ್ರತ್ಯುತ್ತರವಾಗಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ”ಮುಗ್ಧ ಮಕ್ಕಳನ್ನು ಪ್ರಚೋದನೆಗೆ ಬಳಸಬಾರದು. ನೀವು ಯಾವ ಸಂದೇಶವನ್ನು ನೀಡಲು ಬಯಸುತ್ತೀರಿ? ನೀವು ಒಬ್ಬ ಐಕಾನ್, ದಯವಿಟ್ಟು ಧನಾತ್ಮಕ ಪದಗಳನ್ನೇ ಹಾಕಿ” ಎಂದು ಟ್ವೀಟ್‌ನಲ್ಲಿ ಕಾಮೆಂಟ್ ಮೂಲಕ ಪ್ರತಿಕ್ರಿಯಿಸುವುದರ ಜತೆಗೆ ಅಸಮಾಧಾನ ಹೊರಹಾಕಿದ್ದಾರೆ.