ಖಾನಾಪೂರ: ತಾಲ್ಲೂಕಿನ ತೊಲಗಿಯಲ್ಲಿ ಮಂಗೇನಕೊಪ್ಪ, ಗುಂಡೇನಟ್ಟಿ, ಕಡತನ ಬಾಗೇವಾಡಿ, ಮುಗಳಿಹಾಳ, ಇಟಗಿ ಹಾಗೂ ಗಂಧಿಗವಾಡ ಗ್ರಾಮಗಳ ಸುಮಾರು 200 ಕ್ಕೂ ಹೆಚ್ಚು ರೈತರು ನೇಗಿಲಯೋಗಿ ರೈತ ಸುರಕ್ಷಾ ಸಂಘದ ಪ್ರಾಥಮಿಕ ಸದಸ್ಯತ್ವ ಹಾಗೂ ಶಾಲು ದೀಕ್ಷಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ರೈತ ವಿರೋಧಿ ನಿಯಮಗಳಿಂದ ಬೇಸತ್ತಿರುವ ರೈತರು ರೈತ ಸಂಘಟನೆಗಳ ಮೂಲಕ ತಮ್ಮ ಸಮಸ್ಯೆಗಳ ಬಗ್ಗೆ ಪದೇ ಪದೇ ಸರ್ಕಾರಕ್ಕೆ ಎಚ್ಚರಿಸುತ್ತಿದ್ದಾರೆ, ಇನ್ನೂ ಇಂತಹ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶಗಳ ರೈತರು ಸಹ ತಮಗೆ ಸೂಕ್ತವಾದ ರೈತ ಸಂಘಟನೆಗಳಿಗೆ ಸೇರುವುದು ಇತ್ತೀಚೆಗೆ ಹೆಚ್ಚಾಗಿದೆ.
ಇಂತಹ ಸಂದರ್ಭದಲ್ಲಿ ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನ ಕೆಲ ಗ್ರಾಮದ ರೈತರು ಮಂಚೂಣಿ ರೈತ ಸಂಘಟನೆಗಳಲ್ಲಿ ಒಂದಾದ ರಾಜ್ಯದ ನೇಗಿಲಯೋಗಿ ರೈತ ಸುರಕ್ಷಾ ಸಂಘಕ್ಕೆ, ರಾಜ್ಯಾಧ್ಯಕ್ಷರಾದ ಧರ್ಮರಾಜು ಗೌಡರ ನೇತೃತ್ವದಲ್ಲಿ ಸೋಮವಾರ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯಾಧ್ಯಕ್ಷ ಧರ್ಮರಾಜು ಗೌಡರ ಕೇಂದ್ರ ಹಾಗೂ ರಾಜ್ಯ ರಾಜ್ಯ ಸರ್ಕಾರಗಳ ರೈತ ವಿರೋಧಿ ಮಸೂದೆಗಳು, ಬೆಲೆ ಏರಿಕೆ ವಿರುದ್ಧ ನಮ್ಮ ಸಂಘಟನೆಯ ಹೋರಾಟ ನಿರಂತರವಾಗಿ ಇರಲಿದೆ ಎಂದರು.
ಕಾರ್ಯದರ್ಶಿ ಬಸನಗೌಡ ಪಾಟೀಲ್ ಮಾತನಾಡಿ ನಮ್ಮ ಸಂಘಟನೆಯ ಮೂಲಕ ಈ ಭಾಗದ ರೈತರಿಗೆ ಆಗುವ ಸಮಸ್ಯೆಗಳ ವಿರುದ್ಧ ಧ್ವನಿ ಎತ್ತಲು ಹಾಗೂ ಹೋರಾಟ ಮಾಡಲು ಮುಕ್ತ ಅವಕಾಶವಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಸಂಘಟನೆಗೆ ಸೇರಿದ ರೈತರು ಶಾಲು ಹಾರಿಸುವ ಮೂಲಕ ತಮ್ಮ ಸ್ವಾಭಿಮಾನವನ್ನು ಪ್ರದರ್ಶಿಸಿದರು.
ಈ ಸಮಯದಲ್ಲಿ ಜಿಲ್ಲಾ ಅಧ್ಯಕ್ಷ ಈರಣ್ಣ ತುರುಮುರಿ.ತಾಲ್ಲೂಕು ಅಧ್ಯಕ್ಷ ರುದ್ರಗೌಡ ಪಾಟೀಲ.ಬಸನಗೌಡ ಪಾಟೀಲ ಸೇರಿದಂತೆ ಜಿಲ್ಲೆಯ ಹಾಗೂ ತಾಲ್ಲೂಕು ಪದಾಧಿಕಾರಿಗಳು ಮತ್ತು ಸಂಘಕ್ಕೆ ಸೇರ್ಪಡೆಯಾದ ರೈತರು ಇದ್ದರು.