ಕೇಂದ್ರ ಸರ್ಕಾರ ಏರ್ ಇಂಡಿಯಾ ಖಾಸಗೀಕರಣ ಪ್ರಕ್ರಿಯೆಗೆ ಚಾಲನೆ ನೀಡಿದ ಬೆನ್ನಲ್ಲೆ ಏರ್ ಇಂಡಿಯಾ ಸಂಸ್ಥೆಯ ಉದ್ಯೋಗಿಗಳು ಪ್ರತಿಭಟನೆಯ ಎಚ್ಚರಿಕೆ ನೀಡಿದ್ದಾರೆ. ಈಗಾಗಲೇ ಮುಂಬಯಿ ಮತ್ತು ದಿಲ್ಲಿಯಲ್ಲಿ ಇರುವ ವಸತಿ ಮನೆಗಳನ್ನು ತೆರವುಗೊಳಿಸುವಂತೆ ಏರ್ ಇಂಡಿಯಾ ತನ್ನ ಸಿಬ್ಬಂದಿಗೆ ಸೂಚನೆ ನೀಡಿದೆ.
ನಷ್ಟದಲ್ಲಿದ್ದ ಏರ್ ಇಂಡಿಯಾ: ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯು ಟಾಟಾ ಸಮೂಹದ ತೆಕ್ಕೆಗೆ ಸೇರ್ಪಡೆಯಾದ ಬಳಿಕ, ಏರ್ ಇಂಡಿಯಾ ನಿರ್ವಹಣೆಯ ರಚನೆಯನ್ನು ಬದಲಿಸಲು ಟಾಟಾ ಸಂಸ್ಥೆ ಮುಂದಾಗಿದೆ.
ಹೂಡಿಕೆ ಹಿಂತೆಗೆತ ಒಪ್ಪಂದದ ವ್ಯವಹಾರದ ಅಂತಿಮ ದಿನಾಂಕದ ಆರು ತಿಂಗಳ ಒಳಗೆ ಮುಂಬಯಿನ ಕಾಲಿನಾದಲ್ಲಿ ಇರುವ ಸಂಸ್ಥೆಯ ವಸತಿ ಗೃಹಗಳಿಂದ ಸ್ಥಳಾಂತರ ಹೊಂದುವಂತೆ ಏರ್ ಇಂಡಿಯಾ ತನ್ನೆಲ್ಲಾ ಸಿಬ್ಬಂದಿಗೆ ಸೂಚನೆ ನೀಡಿದೆ. ಇದರಿಂದ ಕೆರಳಿರುವ ಏರ್ ಇಂಡಿಯಾ ಸಂಸ್ಥೆಯ ಒಕ್ಕೂಟ ಬೃಹತ್ ಮುಷ್ಕರದ ಎಚ್ಚರಿಕೆ ನೀಡಿದೆ.
ಏರ್ ಇಂಡಿಯಾ ಒಕ್ಕೂಟದ ಜಂಟಿ ಕ್ರಿಯಾ ಸಮಿತಿ ಸದಸ್ಯರು ಪ್ರಾದೇಶಿಕ ಕಾರ್ಮಿಕ ಆಯುಕ್ತ ಮುಂಬೈ ಇವರಿಗೆ ಬುಧವಾರ ನೋಟಿಸ್ ಜಾರಿ ಮಾಡಿದೆ. ಈ ವಿಚಾರವಾಗಿ ನವೆಂಬರ್ 2 ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಬೇಕಾಗಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.
ನಿಯಮಾವಳಿ ಪ್ರಕಾರ ಒಕ್ಕೂಟವೊಂದು ಪ್ರತಿಭಟನೆ ನಡೆಸಬೇಕೆಂದರೆ ಅದರ ಬಗ್ಗೆ ಎರಡು ವಾರಗಳ ಮುಂಚೆಯೇ ನೋಟಿಸ್ ನೀಡಬೇಕು.
ಅಕ್ಟೋಬರ್ 5 ರಂದು ವಿಮಾನಯಾನ ಸಂಸ್ಥೆ ನೀಡಿರುವ ಪತ್ರದಲ್ಲಿ ವಿಮಾನಯಾನವು ಖಾಸಗೀಕರಣಗೊಳ್ಳುವ ಆರು ತಿಂಗಳ ಒಳಗೆ ಮನೆಗಳನ್ನು ಖಾಲಿ ಮಾಡುವುದಾಗಿ ಅಕ್ಟೋಬರ್ 20 ರ ಒಳಗೆ ಒಪ್ಪಿಗೆ ನೀಡುವಂತೆ ಏರ್ ಇಂಡಿಯಾ ಮುಂಬೈನ ಕಾಲಿನಾ ಮತ್ತು ದಿಲ್ಲಿಯ ವಸಂತ್ ವಿಹಾರ್ ಪ್ರದೇಶಗಳಲ್ಲಿ ನೆಲೆಸಿರುವ ಉದ್ಯೋಗಿಗಳಿಗೆ ಸೂಚನೆ ನೀಡಲಾಗಿದೆ.
ದಿಲ್ಲಿ ಮತ್ತು ಮುಂಬಯಿಗಳಲ್ಲಿನ ಪರಿಸ್ಥಿತಿ ಬಗ್ಗೆ ಏರ್ ಇಂಡಿಯಾ ಒಕ್ಕೂಟಗಳು ನಿರಂತರ ಸಮಾಲೋಚನೆ ನಡೆಸುತ್ತಿದ್ದು, ಜತೆಯಾಗಿ ಮುಷ್ಕರಕ್ಕೆ ನಿರ್ಧಾರ ತೆಗೆದುಕೊಳ್ಳಲಿವೆ ಎಂದು ಒಕ್ಕೂಟದ ಪದಾಧಿಕಾರಿ ತಿಳಿಸಿದ್ದಾರೆ.