ಸುದ್ದಿ ಸದ್ದು ನ್ಯೂಸ್
ಬೆಂಗಳೂರು, ಡಿಸೆಂಬರ್-21: ಸವಿತಾ ಸಮಾಜದ ಮೇಲೆ ನಡೆಯುತ್ತಿರುವ ಜಾತಿ ನಿಂದನೆ ಅತ್ಯಂತ ನೋವಿನ ಸಂಗತಿಯಾಗಿದೆ. ಈ ಜಾತಿ ನಿಂದನೆ ತಡೆಯುವಂತೆ ಸರಕಾರ ಕಟ್ಟುನಿಟ್ಟಿನ ಕಾನೂನು ಜಾರಿಗೆ ತರಬೇಕು ಎಂದು ಕರ್ನಾಟಕ ರಾಜ್ಯ ಸವಿತಾ ಸಮಾಜದ ಸರ್ವ ಸದಸ್ಯರ ಸಭೆಯಲ್ಲಿ ಒಕ್ಕೊರಲಿನ ಅಭಿಪ್ರಾಯ ವ್ಯಕ್ತವಾಯಿತು. ಜತೆಗೆ ಸವಿತಾ ಸಮಾಜದ ಸಮುದಾಯಕ್ಕೆ ರಾಜಕೀಯ ಮತ್ತು ಶೈಕ್ಷಣಿಕವಾಗಿ ಅಗತ್ಯ ಮೀಸಲಾತಿಗಳನ್ನು ಕೊಟ್ಟು ಸಮುದಾಯದ ಅಭಿವೃದ್ಧಿಗೆ ಸರಕಾರ ಮುಂದಾಗಬೇಕು ಎಂಬ ಒತ್ತಾಯವೂ ಕೇಳಿ ಬಂತು.
ಕರ್ನಾಟಕ ರಾಜ್ಯ ಸವಿತಾ ಸಮಾಜ ಸಂಘವು ಯಲಹಂಕದ ಹೊಯ್ಸಳ ಆಟದ ಮೈದಾನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಸಮುದಾಯದ ಮುಖಂಡರಿಂದ ಈ ಅಭಿಪ್ರಾಯ ವ್ಯಕ್ತವಾಯಿತು.
ಈ ವೇಳೆ ಸಂಘದ ರಾಜ್ಯಾಧ್ಯಕ್ಷ ಎನ್. ಸಂಪತ್ ಕುಮಾರ್ ಮಾತನಾಡಿ ಕೋವಿಡ್ ಇದ್ದುದರಿಂದ ಒಂದೂವರೆ ವರ್ಷಗಳ ಕಾಲ ನಾವು ಸರ್ವ ಸದಸ್ಯರ ಸಭೆ ನಡೆಸಲಾಗಲಿಲ್ಲ. ಈಗ ಅನುಮತಿ ಪಡೆದು ಸಭೆ ನಡೆಸುತ್ತಿದ್ದೇವೆ. ರಾಜ್ಯದ ನಾನಾ ಭಾಗಗಳಿಂದ ಸವಿತಾ ಸಮುದಾಯದ ಜನ ಆಗಮಿಸಿದ್ದಾರೆ’ ಎಂದರು.
ನಮ್ಮ ಸಮಾಜವು ಪ್ರತಿಯೊಬ್ಬರಿಗೂ ಕ್ಷೌರ, ಹೇರ್ ಕಟ್, ಮಸಾಜ್ ಇತ್ಯಾದಿಗಳ ಮೂಲಕ ಎಲ್ಲರಿಗುಜ ಅಗತ್ಯವಾದ ಸೇವೆಯನ್ನು ಕಲ್ಪಿಸುತ್ತಿದ್ದೇವೆ. ಆದರೆ ನಮ್ಮ ಸಮುದಾಯವನ್ನು ಜಾತಿಯಿಂದ ನಿಂದನೆ ಮಾಡುತ್ತಾರೆ. ಇದು ತುಂಬಾ ನೋವಿನ ಸಂಗತಿಯಾಗಿದೆ. ಸರಕಾರ ಸೂಕ್ತ ಕಾನೂನು ಮೂಲಕ ಜಾತಿ ನಿಂದನೆಯನ್ನು ತಡೆಯಬೇಕು ಎಂದು ಒತ್ತಾಯಿಸಿದರು.
ಸಘದ ಬೈಲಾ ತಿದ್ದುಪಡಿ ಮಾಡಲಾಗುವುದು*
ಕರ್ನಾಟಕ ರಾಜ್ಯ ಸವಿತಾ ಸಮಾಜದ ಸಂಘಕ್ಕೆ 1947ರಲ್ಲಿ ಆಗಿನ ಸಂದರ್ಭಕ್ಕೆ ಅನುಗುಣವಾಗಿ ಬೈಲಾ ರೂಪಿಸಲಾಗಿತ್ತು. ಇದೀಗ ಜನರಿಗೆ ಇದರಿಂದ ಅನುಕೂಲವಾಗುತ್ತಿಲ್ಲ. ಜತೆಗೆ ಸಾಕಷ್ಟು ಗೊಂದಲಗಳಿವೆ. ಹೀಗಾಗಿ ಬೈಲಾಗೆ ತಿದ್ದುಪಡಿ ತಂದು ರಾಜ್ಯದ ಎಲ್ಲಾ ಸವಿತಾ ಸಮಾಜದ ಜನರಿಗೆ ಅದರ ಪ್ರಯೋಜನ ತಲುಪುವಂತೆ ಮಾಡಲಾಗುವುದು. ಪ್ರಸ್ತುತ ಸಂದರ್ಭಕ್ಕೆ ಅನುಗುಣವಾದ ಅಂಶಗಳನ್ನು ಸೇರ್ಪಡೆ ಮಾಡಿ ಸಮಾಜದ ಅಭಿವೃದ್ಧಿಗೆ ಪೂರಕಾಗಿರುವಂತೆ ಬೈಲಾವನ್ನು ತಿದ್ದುಪಡಿ ಮಾಡಲಾಗುವುದು ಎಂದರು. ಜತೆಗೆ ಸಂಘದ ಖರ್ಚು, ವೆಚ್ಚಗಳ ಲೆಕ್ಕಪತ್ರವನ್ನು ಸಲ್ಲಿಸಲಾಗುವುದು.
ಸಂಘದ ವತಿಯಿಂದ ಪದವಿ ಕಾಲೇಜು ನಡೆಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ನಾವೆಲ್ಲರೂ ಸಂಘಟಿತರಾಗಿ ಅದನ್ನು ಮತ್ತಷ್ಟು ಅಭಿವೃದ್ಧಿಗೊಳಿಸಲಾಗುವುದು. ಈ ಮೂಲಕ ಸಂಘವನ್ನು ಆರ್ಥಿಕವಾಗಿ ಬಲಗೊಳಿಸಲು ನಾವೆಲ್ಲರೂ ಬದ್ಧರಾಗಿರಲು ತೀರ್ಮಾನಿಸಲಾಗಿದೆ ಎಂದು ಸಂಪತ್ ಕುಮಾರ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸವಿತಾ ನಿಗಮದ ಅಧ್ಯಕ್ಷ ನರೇಶ್ ಕುಮಾರ್, ಸಂಘದ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಇಟಗಿ, ಸಂಘದ ಕಾರ್ಯಾಧ್ಯಕ್ಷ ಎಸ್. ಕಿರಣ್ ಕುಮಾರ್ ಮತ್ತಿತರ ಪದಾಧಿಕಾರಿಗಳು ಹಾಗೂ ರಾಜ್ಯದ ನಾನಾ ಭಾಗಗಳ ಸವಿತ ಸಮುದಾಯದ ಮುಖಂಡರು, ಸಂಘದ ಸದಸ್ಯರು ಪಲ್ಗೊಂಡಿದ್ದರು.
ಮಧ್ಯಾಹ್ನ ವಿಶೇಷ ವಾರ್ಷಿಕ ಸಭೆ ನಡೆಸಲಾಯಿತು. ಸಭೆಯಲ್ಲಿ ತೆಗೆದುಕೊಂಡ ಜಾತಿ ನಿಂದನೆಗೆ ಕಾನೂನು ರೂಪಿಸುವುದು, ಸಮುದಾಯದ ಜನರಿಗೆ ರಾಜಕೀಯ, ಶೈಕ್ಷಣಿಕವಾಗಿ ಅಗತ್ಯ ಮೀಸಲಾತಿಗಳನ್ನು ಒದಗಿಸುವುದು ಸೇರಿದಂತೆ ನಾನಾ ನಿರ್ಣಯಗಳನ್ನು ಸರಕಾರಕ್ಕೆ ಸಲ್ಲಿಸಲು ನಿರ್ಧರಿಸಲಾಯಿತು.