ಲೇಖಕರು: ಸಿದ್ಧಾರ್ಥ ವಾಡೆನ್ನವರ.
“ಮತಾಂತರ” ಇದು ಕೌಟುಂಬಿಕ, ಸಾಮಾಜಿಕ ವ್ಯವಸ್ಥೆಯನ್ನು ಕಲುಷಿತಗೊಳಿಸುತ್ತವೆ.
ಸ್ವಾಮೀ ವಿವೇಕಾನಂದರು ಹೀಗೆ ಹೇಳುತ್ತಾರೆ, “ಒಬ್ಬ ಹಿಂದೂ ಉತ್ತಮ ಹಿಂದೂ ಆಗಬೇಕು, ಒಬ್ಬ ಮುಸ್ಲಿಂ ಉತ್ತಮ ಮುಸ್ಲಿಂ ಆಗಬೇಕು, ಒಬ್ಬ ಕ್ರಿಶ್ಚಿಯನ್ ಉತ್ತಮ ಕ್ರಿಶ್ಚಿಯನ್ ಆಗಬೇಕು” ಒಟ್ಟಿನಲ್ಲಿ ಒಬ್ಬ ಮನುಷ್ಯ ಉತ್ತಮ ಮನುಷ್ಯ ಆಗಬೇಕು ಅಷ್ಟೇ.
ನಮ್ಮ ಎಲ್ಲ್ಲಾ ಗ್ರಂಥಗಳನ್ನು ನಾಶಪಡಿಸಿ, ಕುರಾನ್ ಅಥವಾ ಬೈಬಲ್ ಅನ್ನು ಓದಿಕೊಂಡು, ಇಂಗ್ಲಿಷ್ ಹಾಗು ಉರ್ದು ಭಾಷೆ ಮಾತಾಡಿಕೊಂಡು ಯುಗಾದಿ, ರಾಮನವಮಿ, ಗಣೇಶ ಚತುರ್ಥಿ, ದೀಪಾವಳಿ, ಸಂಕ್ರಾಂತಿಗಳನ್ನು ಬಿಟ್ಟು ವರ್ಷಕ್ಕೆ ಎರಡು ಹಬ್ಬಗಳನ್ನು ಆಚರಿಸಿಕೊಂಡು, ಬೇರೆ ಜನಾಂಗದವರಿಗೆ ಬದುಕಲು ಬಿಡದೆ ಮತಾಂತರ ಮುಂದುವರೆಸಿದರೆ ನಮ್ಮ ದೇಶ ಹೇಗಿರುತ್ತದೆ? ಅಂತಹ ಭಾರತ ಊಹಿಸಲು ಸಾಧ್ಯವೇ? ಎಲ್ಲರು ನನ್ನಂತಾಗಬೇಕು ಎಂಬ ಮನಸ್ಥಿತಿ ಬಹಳ ಕೆಟ್ಟದ್ದು, ಅದು ದೇಶ ದೇಶಗಳನ್ನೇ ಬದಲಾಯಿಸಿ ಬಿಟ್ಟಿದೆ, ಸಂಸ್ಕೃತಿ ಗಳನ್ನು ನಾಶ ಮಾಡಿದೆ, ಅಂತಹ ಮನಸ್ಥಿತಿ ಹೊಂದಿರುವ ಧರ್ಮಗಳು ಎಲ್ಲೆಲ್ಲಿ ಕಾಲಿಟ್ಟಿವೆಯೋ ಆ ದೇಶಗಳ ಸಂಸ್ಕೃತಿ ಉಳಿದಿಲ್ಲ!
ಭಾರತ ದೇಶ ಗಂಭೀರವಾಗಿ ಎದುರಿಸುತ್ತಿರುವ ಸಮಸ್ಯೆಗಳಲ್ಲಿ ಮತಾಂತರ ಸಮಸ್ಯೆ ಪ್ರಮುಖವಾಗಿದೆ. ವಿದೇಶಿ ಶಕ್ತಿಗಳ ಬೆಂಬಲದೊಂದಿಗೆ ಏಕದೇವತಾ ಆರಾಧಕರು ಬಡ ಜನರನ್ನು ಹಣದ ಆಮಿಷಕ್ಕೋ ಅಥವಾ ಇನ್ನಾವುದೋ ಆಮಿಷಕ್ಕೆ ಒಳಪಡಿಸಿ ಮತಾಂತರ ಮಾಡುತ್ತಿದ್ದಾರೆ. ಮತಾಂತರ ನಿಷೇಧ ಬಿಲ್ ಪಾಸಾದರೆ ಆಮಿಷ ಪ್ರೇರಿತ ಮತಾಂತರಕ್ಕೆ ಬ್ರೆಕ್ ಬೀಳಲಿದೆ. ಇಸ್ಲಾಂ ಮತ್ತು ಕೈಸ್ತ ಧರ್ಮಗಳು ಸಾಧ್ಯವಾದಷ್ಟು ಜನರನ್ನು ಮತಾಂತರಗೊಳಿಸುವ ಗುರಿಯನ್ನು ಹೊಂದಿವೆ! ಸಹಸ್ರಾರು ವರ್ಷಗಳಿಂದ ಪಾಲಿಸಿಕೊಂಡು ಬರುತ್ತಿರುವ ಭಾರತೀಯ ಸಂಸ್ಕೃತಿ ಮತ್ತು ಪರಂಪರೆಗೆ ಇದರಿಂದ ಧಕ್ಕೆ ಉಂಟಾಗಲಿದೆ. ಕ್ರೈಸ್ತ್ ಧರ್ಮಿಯರು ಪ್ರೀತಿಯ ಮಾರ್ಗ ಹಿಡಿದರೆ, ಇಸ್ಲಾಂ ಧರ್ಮದ ಕೆಲವರು ಹಿಂಸಾ ಮಾರ್ಗ ಹಿಡಿದಿದ್ದಾರೆ. ಬೌದ್ಧಿಕ ಸ್ವಾತಂತ್ರ‍್ಯ, ವಿಚಾರ ಮಂಡನೆ, ಚರ್ಚೆ ಮತ್ತು ಬದಲಾವಣೆಗೆ ಹಿಂದೂ ಧರ್ಮದಲ್ಲಿ ಅವಕಾಶವಿದೆ. ಆ ಅವಕಾಶಗಳು ಇತರ ಧರ್ಮಗಳಲ್ಲಿ ಇಲ್ಲ. ಭಾರತೀಯ ಸಂಪ್ರದಾಯದ ಪ್ರಕಾರ ಇಸ್ಲಾಂ, ಕ್ರಿಶ್ಚಿಯಾನಿಟಿ ಇತ್ಯಾದಿ ಧರ್ಮಗಳು ದೇವರೆಡೆಗೆ ಸಾಗುವ ಭಿನ್ನ ಮಾರ್ಗಗಳು ಅಷ್ಟೇ.
ನಮ್ಮ ದೇಶ ಸಾವಿರಾರು ವರ್ಷಗಳವರೆಗೆ ಜಾತ್ಯಾತೀತ ರಾಷ್ಟ್ರವಾಗಿ ಉಳಿಯಬೇಕು. ಹಾಗಾಗಬೇಕಾದರೆ, ಈಗ ಗುಪ್ತ-ಗುಪ್ತ, ಆಮೀಷಗಳ ಮುಂಖಾಂತರ, ಬಡವರನ್ನು ಟಾರ್ಗೆಟ್ ಮಾಡಿ, ಅವರನ್ನು ಮರಳು ಮಾಡಿ, ದಾನ ಮಾಡಿ, ಸಹಾಯ ಮಾಡಿ, ಒತ್ತಾಯಪೂರ್ವಕವಾಗಿ ಬ್ರೈನ್ ವಾಷ್ ಮಾಡಿ ಅಥವಾ ದಬ್ಬಾಳಿಕೆಯಿಂದ ನಡೆಯುತ್ತಿರುವ ಮತಾಂತರ ವ್ಯವಸ್ಥೆಗೆ ಬ್ರೆಕ್ ಬೀಳಬೇಕು. ಮತಾಂತರ ಹೀಗೇ ಮುಂದುವರೆದರೆ ಈ ದೇಶದಲ್ಲಿ ಬದುಕುತ್ತಿರುವ ಹಿಂದೂಗಳು ನೂರು-ಐನೂರು ವರ್ಷಗಳ ಅವಧಿಯಲ್ಲಿ ಅಲ್ಪಸಂಖ್ಯಾತರಾಗಿ ಬದುಕಬೇಕಾಗುತ್ತದೆ. ಸಾವಿರಾರು ವರ್ಷಗಳ ಹಿಂದೆ ಈಗಿರುವ ಬಾಂಗ್ಲಾ, ಪಾಕಿಸ್ಥಾನ, ಅಪಘಾನಿಸ್ತಾನ, ಮಾಯನ್ಮಾರ್ ಮತ್ತು ಶ್ರೀಲಂಕ ಹಲವು ದೇಶಗಳಲ್ಲಿ ಬಹುದೇವತಾ ಆರಾಧಕರೇ ವಾಸಿಸುತ್ತಿದ್ದರು. ಈ ದೇಶಗಳು ಇಂದು ಏನಾಗಿವೆ? ಅಂದು ಮತಾಂತರ ತೀವ್ರ ಗತಿಯಲ್ಲಿತ್ತು, ಇಂದು ಅಷ್ಟು ತೀವ್ರ ಗತಿಯಲ್ಲಿ ಇಲ್ಲ, ಆದರೂ ಮತಾಂತರ ನಿರಂತರವಾಗಿ ನಡೆಯುತ್ತಲೇ ಇದೆ. ಅದಕ್ಕೆ ಬ್ರೆಕ್ ಹಾಕುವ ಕೆಲಸ ಆಗಬೇಕಿದೆ. ಮತಾಂತರ ನಿಷೇಧ ಕಾನೂನು ಜಾರಿಗೆ ಬಂದರೆ ಇದೆಲ್ಲಾ ಸಾಧ್ಯ.
ಬಹುಸಂಖ್ಯಾತ ಹಿಂದೂಗಳು ಈ ದೇಶದಲ್ಲಿ ಅಲ್ಪಸಂಖ್ಯಾತರಾದರೆ ಹಿಂದೂಗಳು ಪೂಜಿಸುತ್ತಿರುವ ಬಸವಣ್ಣ, ರಾಮ, ಕೃಷ್ಣ, ಲಕ್ಷ್ಮಿ, ದುರ್ಗೆ, ಗಣಪತಿ, ಹನುಮಂತ ಇವರೆಲ್ಲಾ ಇರುತ್ತಾರೆಯೇ? ಈ ದೇವರುಗಳೆಲ್ಲ ತಮ್ಮ ಅಸ್ಥಿತ್ವ ಕಳೆದುಕೊಂಡು ಇತಿಹಾಸ ಪುಟ ಸೇರದೇ ಇತಿಹಾಸದಿಂದ ಮರೆಯಾಗುವ ಸಾಧ್ಯತೆ ಇದೆ. ಭಾರತೀಯರು ಈಗಲೇ ಎಚ್ಚೆತ್ತುಕೊಳ್ಳಬೇಕು. ಸೂಕ್ತ ಕಾನೂನುಗಳಿಗಾಗಿ ಒತ್ತಾಯ ಮಾಡಬೇಕು. ಮತಾಂತರವು ಸಾಮಾಜಿಕ ವ್ಯವಸ್ಥೆಯನ್ನು ಭಂಗಗೊಳಿಸುತ್ತದೆ. ಧರ್ಮ ಪ್ರಸಾರ ಅಥವಾ ಬೋಧನೆ ಮಾಡಬಹುದು ಆದರೆ ಒತ್ತಾಯದ ಮತ್ತು ಆಮೀಷದ ಮತಾಂತರ ಆಗಬಾರದು. ಮಿಷನರಿಗಳ ತಂತ್ರವನ್ನು ಚೆನ್ನಾಗಿ ಅರಿತಿದ್ದ ಮಹಾತ್ಮ ಗಾಂಧೀಜಿ ಹೀಗೆ ಹೇಳುತ್ತಾರೆ, ಈ ದಿನ ಏಸುವು ಸ್ವರ್ಗದಿಂದ ಇಳಿದು ಬಂದರೆ ಮಿಷನರಿಗಳ ತಂತ್ರವನ್ನು ಕಂಡು ಬೆಚ್ಚಿಬೀಳುತ್ತಾನೆ.” ಹಣ, ಅಧಿಕಾರ, ದಯೆ, ರೋಗ ನಿವಾರಕ ಶಕ್ತಿಯೆಂಬ ಮರಳು ಮಾತುಗಳಿಂದ ಮತಾಂತರ ನಿರಂತರವಾಗಿದೆ. ಇಂದು ಭೌತಿಕ ಒತ್ತಾಯ ಅಥವಾ ಬೆದರಿಕೆ ಮೂಲಕ ಅಷ್ಟಾಗಿ ಮತಾಂತರ ಆಗುತ್ತಿಲ್ಲ, ಹಣ ಇನ್ನಿತರ ಆಮಿಷಗಳಿಂದ ಅದು ನಿರಂತರವಾಗಿದೆ. ಮಾನವೀಯತೆಗೆ ಬೆಲೆ ಸಿಗಬೇಕು.
ಕಾಲನಿಗಳು, ಕೊಳೆಗೇರಿಗಳು, ಜನತಾ ಕಾಲನಿಗಳು ಮುಂತಾದವು ಮತಾಂತರಕ್ಕೆ ಆಯಕಟ್ಟಿನ ಸ್ಥಳಗಳಾಗಿವೆ. ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದ ಜನರನ್ನು ಗುರಿಯಾಗಿಸಿಕೊಂಡು ಅವರನ್ನು ಗುರುತಿಸಿ ಗೆಳೆತನ ಮಾಡುವುದು, ಸಹಾಯವನ್ನು ನೀಡಿ ಮತಾಂತರ ಬಲೆಗೆ ಸಿಲುಕಿಸುವ ವ್ಯವಸ್ಥೆ ಇದೆ. ಅವರ ಮನೆಗಳನ್ನೇ ಪ್ರಾರ್ಥನಾ ಸ್ಥಳವನ್ನಾಗಿ ರೂಪಾಂತರಿಸಿ ಏಸುವಿನ ಕೀರ್ತನೆ, ಸಾಹಿತ್ಯ ನೀಡುವುದು ಅಲ್ಲಲ್ಲಿ ನಡೆಯುತ್ತಲೇ ಇದೆ. ಆರ್ಥಿಕ, ಇತರ ನೆರವಿನ ಸುದ್ದಿ ಹಬ್ಬಿಸುವುದು. ದೇವರು ಒಬ್ಬನೇ ಎಂದು ನಂಬಿಸಿ ಮತಾಂತರ ಮಾಡುವುದು ಜೊತೆಗೆ ಪ್ರಾರ್ಥನೆ, ಊಟ, ಬಟ್ಟೆ ಪ್ರಸಾದ ನಿರಂತರವಾಗಿರುತ್ತದೆ. ದೇವರು ಒಬ್ಬನೇ ಎನ್ನುವ ನಂಬಿಕೆ ಗಟ್ಟಿಗೊಳ್ಳುತ್ತಿದ್ದಂತೆ ಬಹು ದೇವರುಗಳ ಫೋಟೋಗಳನ್ನು ತೆಗೆಸುವುದು, ಬಳೆ, ಕುಂಕುಮ ತೆಗೆಸುವುದು, ಹಿಂದೂ ಹಬ್ಬಗಳನ್ನು ಕಡೆಗಣಿಸಿ ತಮ್ಮ ಹಬ್ಬವನ್ನು ವೈಭವದಿಂದ ಆಚರಿಸಲು ಪ್ರೋತ್ಸಾಹಿಸುವುದು ಹೀಗೆ ಮುಂದುವರೆಯುತ್ತದೆ ಮತಾಂಧರ ದಂಧೆ! ಇದನ್ನು ದೇಶಭಕ್ತರು ಮತ್ತು ಆಳುವವರು ಅರ್ಥಮಾಡಿಕೊಳ್ಳಬೇಕಾಗಿದೆ.
ಮತಾಂತರ ಇದು ದೇಶ ನೀಡಿದ ಕೊಡುಗೆ ಎನ್ನುವ ರೀತಿಯಲ್ಲಿ ಕೆಲವರು ಮಾತನಾಡುತ್ತಾರೆ. ಕೆಲವು ಸಾಹಿತಿಗಳಲ್ಲೂ ಇದೇ ಭಾವನೆ ಇದೆ. ಆದರೆ ಕಾನೂನು ಹಾಗೆ ಇಲ್ಲ. ನ್ಯಾ|| ಎಂ.ರಾಮಾಜೋಯಿಸರು ತಮ್ಮ ಲೇಖನವೊಂದರಲ್ಲಿ ಹೀಗೆ ಹೇಳುತ್ತಾರೆ, ಮತಾಂತರದಿಂದ ಸಮಾಜದಲ್ಲಿ ಸಂಘರ್ಷಗಳು ಉಂಟಾಗಿ ಕುಟುಂಬಗಳು ಒಡೆಯುತ್ತವೆ. ಆ ಕಾರಣದಿಂದಾಗಿ ಸುಪ್ರೀಂಕೋರ್ಟ್ ಮತಾಂತರ ಬೇಡ ಎನ್ನುತ್ತದೆ.
ಸಂವಿಧಾನದಲ್ಲಿ ““Freedom of Religion” ಅಂದರೆ “Right to propagate one’s Religion”.ಈ ಮಾತಿನ ಅರ್ಥ ಪ್ರತಿಯೊಬ್ಬ ವ್ಯಕ್ತಿ ತನ್ನ ಧರ್ಮವನ್ನು ಆಚರಿಸುವ, ಬೋಧಿಸುವ ಹಕ್ಕು ಇದೆಯೇ ಹೊರತು ಇನ್ನೊಬ್ಬರನ್ನು ಮತಾಂತರಿಸುವ ಹಕ್ಕು ಇಲ್ಲ. ಈ ಬಗ್ಗೆ 1977 ರ ಸರ್ವೋನ್ನತ ನ್ಯಾಯಾಲಯ ಪೂರ್ಣ ಪೀಠದ ತೀರ್ಪಿನ ಒಂದು ಭಾಗ ಹೀಗಿದೆ AIR 1977 Supreme Court, 998=1977. CRI L.J. 551)-“ACD Constitution of India. Article (1) Freedom of religion- Right to propagate one’s religion-Meaning- There is no fundamental right to convert any person to one’s own religion”. ಸಂವಿಧಾನದಲ್ಲಿ ಧರ್ಮಬೋಧನೆಗೆ ಅವಕಾಶವಿದೆಯೇ ಹೊರತು ಮತಾಂತರಕ್ಕೆ ಅವಕಾಶವಿಲ್ಲ.
“ಈಶ್ವರ, ಅಲ್ಲಾ (ಏಸು) ತೇರೇ ನಾಮ್, ಸಬಕೋ ಸನ್ಮತಿ ದೇ ಭಗವಾನ್” ಹಿಂದೂಗಳ ಬಾಯಿಂದ ಬರುತ್ತದೆ. ಉಳಿದವರ ಬಾಯಿಂದ ಈ ಮಾತುಗಳು ಬರುವುದಿಲ್ಲ. ಇದೇ ಕಾರಣಕ್ಕಾಗಿ ಮತಾಂತರ ನಿಷೇಧ ಜಾರಿಗೆ ಬರಬೇಕು. ಮಧ್ಯಪ್ರದೇಶ, ಒರಿಸ್ಸಾ, ಗುಜರಾತ್ ರಾಜ್ಯಗಳಲ್ಲಿ ಇರುವಂತೆ ಮತಾಂತರ ನಿಷೇಧ ಕಾನೂನನ್ನು ರಾಷ್ಟçಮಟ್ಟದಲ್ಲಿ ಜಾರಿಗೊಳಿಸಬೇಕು. ಗಾಂಧೀಜಿ ಹೇಳುತ್ತಾರೆ -“If I had the power and could legislate, I should stop all proselytization” ಮತಾಂತರಕ್ಕೆ ಇನ್ನೊಂದು ಬಲವಾದ ಕಾರಣವಿದೆ ಅದೇನೆಂದರೆ, “ಹಿಂದೂಗಳ ಒಳಕಚ್ಚಾಟ” ಇದು ಕ್ರಿಶ್ಚಿಯನ್ ಮತ್ತು ಇಸ್ಲಾಂ ಧರ್ಮಗಳ ವಿಸ್ತರಣೆಗೆ ಮೂಲ ಕಾರಣ. ಇದನ್ನು ಈಗಿನ ಬಹುಸಂಖ್ಯಾತ ರಾಜಕಾರಣಿಗಳು ಅರ್ಥ ಮಾಡಿಕೊಳ್ಳಬೇಕಾಗಿದೆ.
ವಾಸ್ಕೋಡ ಗಾಮ 1498 ರಲ್ಲಿ ಕಲ್ಲಿಕೋಟೆ ತಲುಪಿದ, ಮುಂದೆ ಪೋರ್ಚುಗೀಸರಿಂದ ವ್ಯಾಪಾರ ಆರಂಭವಾಗಿ ಗೋವಾ ಅವರ ವಶವಾಯಿತು. ಕ್ರಿ.ಶ. 1600 ರಲ್ಲಿ ಸ್ಥಾಪಿತವಾದ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ರಾಣಿ ಎಲಿಜಬೆತ್‌ರಿಂದ ಅಧಿಕೃತ ಆದೇಶ ಪಡೆದು ಭಾರತದಲ್ಲಿ ಮುಂಬೈ, ಕೋಲ್ಕತ್ತಾ, ಚನ್ನೈ ಬಂದರುಗಳಲ್ಲಿ ವ್ಯಾಪಾರ ಕೇಂದ್ರಗಳನ್ನು ಆರಂಭಿಸಿತು. ಮುಂದೆ ಫ್ರೆಂಚರು ವ್ಯಾಪಾರದ ನಿಮಿತ್ತ ಬಂದು ಪಾಂಡಿಚೇರಿಯನ್ನು ಕೇಂದ್ರವಾಗಿಸಿಕೊಂಡರು. ಔರಂಗಜೇಬನ ಸಾವಿನ ಬಳಿಕ 1700 ರಿಂದ ಈಸ್ಟ್ ಇಂಡಿಯಾ ಕಂಪನಿ ಒಂದು ಪ್ರಬಲ ಶಕ್ತಿಯಾಗಿ ಬೆಳೆಯಿತು.
1757ರಲ್ಲಿ ರಾಬರ್ಟ್ ಕ್ಲೈವ್ ಭಾರತೀಯರನ್ನು ಪ್ಲಾಸಿ ಕದನದಲ್ಲಿ ಬ್ರಿಟೀಷ್ ಸೈನ್ಯದ ಸಹಾಯದಿಂದ ಸೋಲಿಸಿ ಆ ಕಂಪನಿ ಪ್ರಬಲ ಆಡಳಿತ ಶಕ್ತಿಯಾಗಿ ಬೆಳೆಯಲು ಕಾರಣವಾದರು. ಪೋರ್ಚುಗೀಸರು ಗೋವಾದಲ್ಲಿ ಹಿಂದೂಗಳನ್ನು ಬೆದರಿಸಿ ಅವರ ದೇವಾಲಯಗಳನ್ನು ಸುಟ್ಟು, ಅವರ ಚರ್ಮ ಸುಲಿದು, ಬೆಂಕಿಯ ಉರಿ ಮಧ್ಯೆ ನಿಲ್ಲಿಸಿ ಸುಡುವ ಬೆದರಿಕೆ ಹಾಕಿ, ಸಾವಿರಾರು ಜನರನ್ನು ಮತಾಂತರಗೊಳಿಸಿದರು! ಈ ವಿಷಯ ಗೋವಾ ಚರಿತ್ರೆಯಲ್ಲಿ ದಾಖಲಾಗಿದೆ.
ಹಲವು ಹಿಂದೂಗಳನ್ನು ಕಂಬಕ್ಕೆ ಕಟ್ಟಿ ಜೀವಂತ ಸುಟ್ಟು ಹಾಕಿದರು ಎನ್ನುವುದೂ ಇದೆ! 1684 ರ ಪೋರ್ಚುಗೀಸ್ ರಾಜಾಜ್ಞೆ ಪ್ರಕಾರ, ಗೋವಾದಲ್ಲಿ ಸ್ಥಳಿಯ ಭಾಷೆಯನ್ನು ಯಾರೂ ಮಾತನಾಡುವಂತಿರಲಿಲ್ಲ. ಪೋರ್ಚುಗೀಸ್ ದೊರೆ ಮೂರನೇ ಜೋಆಎ ಇಲ್ಲಿಯ ವೈಸರಾಯ್‌ಗೆ ಪತ್ರ ಬರೆದು “ಲೋಹ, ಮರ, ಶಿಲೆ ಯಾವುದೇ ಆಗಿರಲಿ ಎಲ್ಲಾ ವಿಗ್ರಹಗಳನ್ನು ನಾಶ ಪಡಿಸಬೇಕು” ಎಂದು ಆಜ್ಞೆ ಹೊರಡಿಸಿದ! ಹೀಗಾಗಿ ಗೋವಾದಲ್ಲಿ ವಾಸಿಸುವ ಬಹುದೇವತಾ ಆರಾಧಕರು ಏಕದೇವತಾ ಆರಾಧಕರಾಗಿ ಪರಿವರ್ತನೆ ಹೊಂದಿದರು!
ಈಗಾಗಲೇ ದೇಶದ ಹಲವು ರಾಜ್ಯಗಳಲ್ಲಿ ಬಲವಂತದ ಮೂಲಕ ಅಥವಾ ಪ್ರಚೋದನೆ ಮೂಲಕ ಮತಾಂತರ ಮಾಡುವುದನ್ನು ನಿಷೇದಿಸಲಾಗಿದೆ.2003ರಲ್ಲಿ ನರೇಂದ್ರ ಮೋದಿ ಗುಜರಾತ್ ಸಿಎಂ ಆಗಿದ್ದಾಗ ಧಾರ್ಮಿಕ ಸ್ವಾತಂತ್ರ‍್ಯ ಕಾಯಿದೆಯನ್ನು ಜಾರಿಗೊಳಿಸಿದರು. ಬಲವಂತದ ಅಥವಾ ಪ್ರಚೋದನೆಯ ಮತಾಂತರವನ್ನು ಶಿಕ್ಷಾರ್ಹ ಅಪರಾಧವೆಂದು ಈ ಕಾಯಿದೆ ಪರಿಗಣಿಸುತ್ತದೆ. ಅದೇ ನರೇಂದ್ರ ಮೋದಿ ಇಂದು ಕೇಂದ್ರ ಸರಕಾರದ ಚುಕ್ಕಾಣಿ ಹಿಡಿದಿದ್ದಾರೆ. ಹೀಗಾಗಿ ದೇಶಾದ್ಯಂತ ಅನ್ವಯವಾಗುವಂತೆ ಮತಾಂತರ ನಿಷೇಧ ಕಾಯ್ದೆ ಜಾರಿಗೊಳಿಸಬಹುದೆನ್ನುವ ಚರ್ಚೆ ಇದೆ. ಗುಜರಾತ್‌ನಲ್ಲಿ ಜಾರಿಯಲ್ಲಿರುವ ಮತಾಂತರ ನಿಷೇಧ ಕಾಯಿದೆ ಪ್ರಕಾರ ಯಾವುದೇ ವ್ಯಕ್ತಿ ನೇರವಾಗಿ/ಪರೋಕ್ಷವಾಗಿ ಬಲವಂತ ಅಥವಾ ಆಮಿಷದ ಮೂಲಕ ಮತ್ತೊಬ್ಬ ವ್ಯಕ್ತಿಯನ್ನು ಮತಾಂತರ ಮಾಡುವಂತಿಲ್ಲ. ಒಂದು ವೇಳೆ ಮಾಡಿದರೆ, ಅಂತಹ ವ್ಯಕ್ತಿಗೆ ಕನಿಷ್ಠ 3 ವರ್ಷ ಜೈಲು ಶಿಕ್ಷೆ ಮತ್ತು 5೦,೦೦೦ರೂ. ದಂಡ ವಿಧಿಸಲು ಅವಕಾಶವಿದೆ.
ಮಹಿಳೆಯರು, ಮಕ್ಕಳು ಮತ್ತು ಪರಿಶಿಷ್ಠ ಸಮುದಾಯದವರನ್ನು ಈ ರೀತಿಯ ಬಲವಂತದ ಮತಾಂತರಕ್ಕೆ ಒಳಪಡಿಸಿದರೆ ಅಂತಹ ಅಪರಾಧಿಗಳಿಗೆ ಕನಿಷ್ಠ 4 ವರ್ಷ ಜೈಲು ಮತ್ತು 1 ಲಕ್ಷ ರೂ.ದಂಡ ವಿಧಿಸಲು ಅವಕಾಶವಿದೆ. ಈ ಕಾಯಿದೆ ಪ್ರಕಾರ, ಮತಾಂತರಕ್ಕೆ ಮುನ್ನ, ಜಿಲ್ಲಾ ದಂಡಾಧಿಕಾರಿಗಳ ಅನುಮತಿ ಪಡೆಯುವುದು ಕಡ್ಡಾಯ.
ಜೈನ ಮತ್ತು ಬೌದ್ಧ ಧರ್ಮಗಳನ್ನು ಹಿಂದೂ ಧರ್ಮಗಳ ಅಂಗಗಳೆಂದು ಈ ಕಾಯಿದೆ ಪರಿಗಣಿಸುತ್ತದೆ.2011ರ ಜನಗಣತಿ ಪ್ರಕಾರ ಭಾರತದಲ್ಲಿ ಶೇ.79ರಷ್ಟು ಹಿಂದೂಗಳು ಇದ್ದರೆ, ಎರಡನೇ ಸ್ಥಾನದಲ್ಲಿ ಶೇ.14.2ರಷ್ಟು ಮುಸ್ಲಿಮ್ ಸಮುದಾಯ ಇದೆ, ಶೇ.2.3ರಷ್ಟು ಕ್ರೈಸ್ತರು ಇದ್ದಾರೆ. ಅರುಣಾಚಲ ಪ್ರದೇಶ ರಾಜ್ಯದಲ್ಲಿ 1978ರಲ್ಲಿ, ಗುಜರಾತ್ ರಾಜ್ಯದಲ್ಲಿ 2003ರಲ್ಲಿ, ಮಧ್ಯಪ್ರದೇಶ ರಾಜ್ಯದಲ್ಲಿ 2006ರಲ್ಲಿ, ಛತ್ತೀಸ್‌ಗಢ ರಾಜ್ಯದಲ್ಲಿ2006ರಲ್ಲಿ, ಹಿಮಾಚಲ ಪ್ರದೇಶ ರಾಜ್ಯದಲ್ಲಿ2007ರಲ್ಲಿ ಮತಾಂತರ ನಿಷೇಧ ಕಾಯಿದೆ ಜಾರಿಗೆ ಬಂದಿದೆೆ.
ಆಫ್ರಿಕಾದ ಡೆಸ್ಮಂಡ್ ಟುಟು ಮತಾಂತರ ಬಗ್ಗೆ ಹೀಗೆ ಹೇಳುತ್ತಾರೆ, “ಮತಾಂತರವೆಂದರೆ ಅದು ಕೇವಲ ನಮ್ಮ ದೇವರುಗಳ ಬದಲಾವಣೆಯಲ್ಲ ಅದರಾಚೆ ಇರುವ ನಮ್ಮ ಸಂಸ್ಕೃತಿ , ನಮ್ಮ ಬದುಕು, ನಮ್ಮ ಪರಿಸರವನ್ನು ಬದಲಾಯಿಸುತ್ತದೆ. ಮಿಷನರಿಗಳು ಆಫ್ರೀಕಾ ದೇಶಕ್ಕೆ ಬಂದಾಗ ಅವರ ಕೈಯಲ್ಲಿ ‘ಬೈಬಲ್’ ಇತ್ತು, ಆಪ್ರಿಕನ್‌ರ ಕೈಯಲ್ಲಿ ‘ಭೂಮಿ’ಯಿತ್ತು. ಎಲ್ಲರೂ ಸೇರಿ ಜೊತೆ ಜೊತೆಯಲ್ಲಿ ಪ್ರಾರ್ಥನೆ ಮಾಡೋಣವೆಂದರು. ಆಪ್ರಿಕನ್‌ರು ಪ್ರಾರ್ಥನೆಗೆಂದು ಕಣ್ಣುಮುಚ್ಚಿ ತೆರೆದಾಗ, ಮಿಷನರಿಗಳ ಕೈಯಲ್ಲಿ ನಮ್ಮ `ಭೂಮಿ’ಯಿತ್ತು, ನಮ್ಮ ಕೈಯಲ್ಲಿ ಅವರ ಬೈಬಲ್ ಇತ್ತು”. ಈ ಅಭಿಪ್ರಾಯ ಎಷ್ಟೊಂದು ಕುತೂಹಲಕಾರಿಯಾಗಿದೆ ಅಲ್ಲವೇ? ನಮ್ಮ ದೇಶ ನೂರಾರು ವರ್ಷಗಳಿಂದ ಮತಾಂತರ ದಾಳಿಗೆ ಗುರಿಯಾಗಿದೆ ಮತ್ತು ಗುರಿಯಾಗುತ್ತಲೇ ಇದೆ. ಇದು ನಿಲ್ಲಬೇಕಾದರೇ, ಪ್ರಬಲವಾದ “ಮತಾಂತರ ನಿಷೇಧ ಕಾಯ್ದೆ” ಜಾರಿಗೆ ಬರಬೇಕು.
“ಮತಾಂತರ”ವೆನ್ನುವುದು ಏಕ ದೇವತಾ ಆರಾಧಕರ ಪಾಲಿಗೆ ಪುಣ್ಯಕಾರ್ಯ. ಅವರ ಪ್ರಕಾರ, ಅವರ ಧರ್ಮಗಳು ಮಾತ್ರ ಮಾನವಕುಲಕ್ಕೆ ದೇವನ ಇಚ್ಛೆಯನ್ನು ತಿಳಿಸುವ ನಿಜವಾದ ವಾಣಿಗಳು! “ತಮ್ಮದು ಮಾತ್ರ ಸತ್ಯ, ಉಳಿದಿದ್ದೆಲ್ಲಾ ಸುಳ್ಳು” ಎನ್ನುವ ರೀತಿಯಲ್ಲಿ ಏಕದೇವತಾ ಆರಾಧಕರು ತಮ್ಮ ಭಾವನೆ ವ್ಯಕ್ತಪಡಿಸುತ್ತಾರೆ. ಹೀಗಾಗಿ ಬಹುದೇವತಾ ಆರಾಧಕರ ಶಾಶ್ವತ ಅಸ್ತಿತ್ವಕ್ಕಾಗಿ “ಮತಾಂತರ ನಿಷೇಧ ಕಾಯ್ದೆ” ಜಾರಿಗೆ ಬರಲೇಬೇಕು. ಆ ಮೂಲಕ ಮಹಾತ್ಮ ಗಾಂಧೀಜಿಯವರ ಆಶಯವೂ ಈಡೇರಿದಂತಾಗುತ್ತದೆ. ಇದು ಬಾಪೂಜಿ ಅವರಿಗೆ ನಾವು ಕೊಡುವ ನಿಜವಾದ ಗೌರವ. ಗಾಂಧೀಜಿ ನೆರಳಲ್ಲಿ ಬೆಳೆದ ಪಕ್ಷಗಳು ಗಾಂಧೀಜಿಯವರ ಆಸೆಗಳನ್ನು ಪೂರೈಸಲಿಲ್ಲ ಎನ್ನುವ ಸಂಗತಿಯನ್ನು ಮರೆಯಬಾರದು!
The Rev Stanislaus vs Madhya Pradesh ಪ್ರಕರಣದಲ್ಲಿ: ಜಸ್ಟೀಸ್ ಎ.ಎನ್ ರೇ ಅವರಿದ್ದ ಸುಪ್ರೀಂಕೋರ್ಟ್ ಸಂವಿಧಾನ ಪೀಠ ನೀಡಿದ ತೀರ್ಪಿನಲ್ಲಿ ಧಾರ್ಮಿಕ ಸ್ವಾತಂತ್ರ‍್ಯದ ಬಗ್ಗೆ ಸ್ಪಷ್ಟವಾಗಿ ಹೇಳಲಾಗಿದೆ. ಮತಾಂತರದ ಹಕ್ಕು ಸೇರಿದಂತೆ ಮೂಲಭೂತ ಹಕ್ಕುಗಳು, ಸ್ವಾತಂತ್ರ‍್ಯದ ಬಗ್ಗೆ ಧರ್ಮದಲ್ಲಿ ಏನಿದೆ ಎಂಬುದರ ಉಲ್ಲೇಖದೊಂದಿಗೆ ಆದೇಶ ಹೊರಡಿಸಲಾಗಿದೆ. ಭಾರತೀಯ ಸಂವಿಧಾನ ಪರಿಚ್ಛೇದ 25 ರ ಅನ್ವಯ ಧಾರ್ಮಿಕ ಸ್ವಾತಂತ್ರ‍್ಯ ಎಲ್ಲಾ ಧರ್ಮಿಯರಿಗೂ ಒಂದೇ ಆಗಿದೆ. ಅದರೆ, ಧರ್ಮ ಪರಿಪಾಲನೆ, ಜಾತೀಯತೆ ಎತ್ತಿ ಹಿಡಿಯುವ ಪ್ರಚಾರ ಮಾಡುವ ಸ್ವಾತಂತ್ರ‍್ಯವಿದ್ದರೂ ಮತಾಂತರದ ಹಕ್ಕು ನೀಡಲಾಗಿಲ್ಲ. ಪರಿಚ್ಛೇದ 25(1)ರಲ್ಲಿ ಜಾತಿ, ಧರ್ಮ ಪ್ರಚಾರ, ಬೆಳೆಸುವುದರ ಬಗ್ಗೆ ಉಲ್ಲೇಕವಿದ್ದರೂ ಒಂದು ಧರ್ಮದ ವ್ಯಕ್ತಿಯನ್ನು ಮತ್ತೊಂದು ಧರ್ಮಕ್ಕೆ ಮತಾಂತರಿಸುವ ಹಾಗಿಲ್ಲ. ಒಬ್ಬ ವ್ಯಕ್ತಿ ಇನ್ನೊಂದು ಧರ್ಮದ ವಿರುದ್ಧ ಪ್ರಚಾರ ಮಾಡಿ ಮರಳು ಮಾಡುವಂತಿಲ್ಲ. ಧರ್ಮ ಪ್ರಚಾರಕ್ಕೆ ಮಾತ್ರ ಅವಕಾಶ ನೀಡಲಾಗಿದೆ.
ಜನ ಏಕೆ ಮತಾಂತರಗೊಳ್ಳುತ್ತಿದ್ದಾರೆ? ಈ ಪ್ರಶ್ನೆಗೆ ಉತ್ತರ ಧಾರ್ಮಿಕ ಸಂಘರ್ಷ, ಸಂಪ್ರದಾಯವಾದದಲ್ಲಿ ನಂಬಿಕೆ ಕಳೆದುಕೊಂಡಿರುವುದು, ಹಣದ ಆಮಿಷ, ಧಾರ್ಮಿಕ ಸ್ವಾತಂತ್ರ‍್ಯ, ಹಣ, ದಾನ ಮುಂತಾದ ಆಮಿಷಗಳು, ಬಹುಪತ್ನಿತ್ವಕ್ಕೆ ಅವಕಾಶ, ಸರಳ ವಿವಾಹ ವಿಚ್ಛೇದನ, ಮೀಸಲಾತಿ ಇತ್ಯಾದಿ ಇವು ಮತಾಂತರಕ್ಕೆ ಪ್ರಚೋದನೆ ನೀಡುತ್ತಿವೆ. 1954ರಲ್ಲಿ ಸಂಸತ್ತಿನಲ್ಲಿ ಮತಾಂತರದ ಬಗ್ಗೆ ಚರ್ಚೆ ನಡೆಯಿತು. ಭಾರತೀಯ ಮತಾಂತರ (ನಿಯಂತ್ರಣ ಹಾಗೂ ನೋಂದಾವಣಿ ಮಸೂದೆ) ಕಾಯ್ದೆ ಬಗ್ಗೆ ಚರ್ಚೆ ಆಯಿತು. 1960 ರಲ್ಲಿಯೂ ಮತ್ತೊಮ್ಮೆ ಚರ್ಚೆ ಆಯಿತು ಆದರೆ ಅಲ್ಪಸಂಖ್ಯಾತ ಸಮುದಾಯದ ಸಂಸದರಿಂದ ಭಾರಿ ಪ್ರತಿರೋಧ ಬಂದ ಹಿನ್ನೆಲೆಯಲ್ಲಿ ಈ ಬಗ್ಗೆ ಯಾವುದೇ ಮಸೂದೆ ಮಂಡನೆಯಾಗಿ ಕಾನೂನು ರೂಪ ಪಡೆದುಕೊಳ್ಳಲಿಲ್ಲ. ಇಂದು ರಾಜಕೀಯ ವ್ಯವಸ್ಥೆ ಬದಲಾಗಿದೆ. ಎರಡನೇ ಅವಧಿಗೂ ಪೂರ್ಣ ಪ್ರಮಾಣದ ಬಹುಮತದೊಂದಿಗೆ ಮೋದಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ, ಸರಕಾರ ರಚನೆಯಾದ ಕೆಲವೇ ತಿಂಗಳುಗಳಲ್ಲಿ ಕಾನೂನಾತ್ಮಕ ವಿಷಯಗಳಲ್ಲಿ ಹಿಂದೆ ಯಾವ ಸರ್ಕಾರಗಳೂ ಮಾಡಲಾಗದ ಸಾಧನೆಯನ್ನು ಈ ಸರ್ಕಾರ ಮಾಡಿದೆ. ತ್ರಿವಳಿ ತಲಾಖ್ ನಿಷೇಧ ಕಾಯ್ದೆ, ಎನ್‌ಐಎ ಕಾನೂನು ಅಮೆಂಡ್‌ಮೆಂಟ್, ಕಾನೂನು ಬಾಹಿರ ಚಟುವಟಿಕೆ ನಿಷೇಧ ಆಕ್ಟ್ (UAPA) ಅಮೆಂಡ್‌ಮೆಂಟ್, ಆರ್ಟಿಕಲ್ 370 ಹಾಗೂ 350 ಅಡಿಯಲ್ಲಿ ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದು, ಜಮ್ಮು-ಕಾಶ್ಮೀರ ಇಬ್ಭಾಗ, ಜಮ್ಮು-ಕಾಶ್ಮೀರ ಮೀಸಲಾತಿ, ಸುಪ್ರೀಂಕೋರ್ಟ್ನಿAದ ಅಯೋಧ್ಯೆ ವಿವಾದ ಇತ್ಯರ್ಥ ಹೀಗೆ 35ಕ್ಕೂ ಹೆಚ್ಚು ಬಿಲ್‌ಪಾಸ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ. ಬಹುಸಂಖ್ಯಾತರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಿದ್ದಾರೆ.
ರಾಜ್ಯದಲ್ಲಿ ಮಸೂದೆಯ ರೂಪುರೇಷೆ ಹೇಗೆ ಇರಬೇಕು? ಮತಾಂತರದ ಡೆಫಿನೇಷನ್ ಏನಿರಬೇಕು? ಯಾವ ಅಂಶಗಳು ಈ ಮಸೂದೆಯಲ್ಲಿ ಇರಬೇಕು? ಕಾನೂನಾತ್ಮಕ ಅಡಚಣೆಗಳು ಏನಾದರೂ ಬರಬಹುದೇ? ಮತಾಂತರ ಮಾಡಿದರೆ, ಜೈಲು ಶಿಕ್ಷೆ ವಿಧಿಸಬೇಕಾ? ದಂಡ ಹಾಕಬೇಕಾ? ಒಬ್ಬ ವ್ಯಕ್ತಿ ಮನಃಪೂರಕವಾಗಿ ಮತಾಂತರ ಹೊಂದಿದರೆ ಅದನ್ನು ಹೇಗೆ ಪರಿಗಣಿಸಬೇಕು? ಇತ್ಯಾದಿ ವಿಷಯಗಳ ಕುರಿತು ಬಿಜೆಪಿ ವಲಯದಲ್ಲಿ ಬಹುಶಃ ಚರ್ಚೆ ನಡೆದಿದೆ!
ಭಾರತ ಸಂವಿಧಾನ ಆರ್ಟಿಕಲ್ 25 ಪ್ರತಿಯೊಬ್ಬರಿಗೂ ತಮ್ಮ ತಮ್ಮ ನಂಬಿಕೆಗೆ ಅನುಸಾರ ಇಷ್ಟವಾದ ಧರ್ಮವನ್ನು ಆಚರಿಸಲು ಅವಕಾಶ ನೀಡಿದೆ. ಆಸೆ-ಆಮಿಷಗಳನ್ನು ನೀಡಿ ಇಲ್ಲವೇ ಬೆದರಿಸಿ ಅಥವಾ ಹಣ ನೀಡಿ ಮತ್ತಿತರೆ ಒತ್ತಡಗಳನ್ನು ಹೇರಿ ಮತಾಂತರ ಮಾಡಿದರೆ ಅದು ಕಾನೂನು ಬಾಹಿರ. ಜನರು ಒಂದು ವಿಷಯ ನೆನಪಿಡಬೇಕು, ಈಗಿನ ಬಹುತೇಕ ಶಾಸಕರಿಗೆ ಮತ್ತು ಸಂಸದರಿಗೆ ಜನರ ಸಮಸ್ಯೆಗಳ ನೈಜ ಅರಿವಿಲ್ಲ. ಅರಿತುಕೊಳ್ಳುವ ಆಸಕ್ತಿಯೂ ಇಲ್ಲ. ಯಾವುದೇ ಗಂಭೀರ ವಿಚಾರದ ಬಗ್ಗೆ ಪೂರ್ವಾಪರ ತಿಳಿದುಕೊಳ್ಳುವ ಕುತೂಹಲವೂ ಇಲ್ಲ. ವೈಯಕ್ತಿಕ ವ್ಯವಹಾರಗಳನ್ನು ಬಿಟ್ಟು ದೇಶಕ್ಕಾಗಿ ಅವರು ಸಮಯ ನೀಡುತ್ತಿಲ್ಲ. ಶಾಸನಸಭೆಗಳ ಅಧಿವೇಶನಗಳು ವ್ಯರ್ಥ ಆಗುತ್ತಿವೆ.
ಮತಾಂತರ ಮತ್ತು ಅದರ ಪರಿಣಾಮಗಳ ಕುರಿತು ಚರ್ಚೆ ಆಗಬೇಕು. ಆದರೆ, ಜನಪ್ರತಿನಿದಿಗಳು ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ವಿಪಕ್ಷಗಳೂ ಮತಾಂತರದ ಮೂಲವನ್ನು ತಿಳಿಯುವ, ಆ ಕುರಿತು ಆಲೋಚನೆ ಮಾಡುವ ಪ್ರಯತ್ನವನ್ನು ಮಾಡುತ್ತಿಲ್ಲ. ಯಾವುದೇ ತೆರನಾದ ಹಿಂಸೆಯೇ ಇರಲಿ, ಏನೇ ಇರಲಿ ಅದನ್ನು ಪರಿಶುದ್ಧ ಮನಸ್ಸಿನಿಂದ ವಿರೋಧಿಸಬೇಕೆಂಬ ಭಾವನೆ ಬಹುತೇಕರಲ್ಲಿ ಇಲ್ಲ. ಎಲ್ಲವನ್ನು ರಾಜಕೀಯ ಲಾಭದ ದೃಷ್ಟಿಕೋನದಿಂದ ನೋಡುತ್ತಿದ್ದಾರೆ. ಇತಿಹಾಸದ ಬಗ್ಗೆ ಕನಿಷ್ಠ ಜ್ಞಾನ ಇಲ್ಲ. ಕಾನೂನು, ಸಂವಿಧಾನಗಳ ಆಶಯ ಗೊತ್ತಿಲ್ಲ. ಇಲ್ಲಿನ ಮಣ್ಣಿನ ಗುಣದ ಗಂಧ ಗೊತ್ತಿಲ್ಲ. ಕಣ್ಣು, ಕಿವಿಗಳನ್ನು ಸಂಪೂರ್ಣವಾಗಿ ಮುಚ್ಚಿಕೊಂಡಿದ್ದಾರೆ. ಅಗತ್ಯವಾಗಿ ಬೇಕಾದ ವಿಷಯಗಳೆಡೆಗೆ ಗಮನ ಹರಿಸುತ್ತಿಲ್ಲ. ಈ ಕಾರಣಕ್ಕಾಗಿ ಜನರೇ ಮುಂಚೂಣೆಗೆ ಬಂದು ಇವರಲ್ಲಿ ಜಾಗೃತಿ ಮೂಡಿಸಬೇಕಿದೆ.
ಒಂದು ವಿಷಯವನ್ನು ನೆನಪಿಸುತ್ತೇನೆ, 1813ರ ಜೂನ್ 22 ರಂದು ಬ್ರಿಟನ್ ಪಾರ್ಲಿಮೆಂಟಿನಲ್ಲಿ ಸಂಸದ ವಿಲಿಯಂ ವೆಲ್ಬ್ಫೋರ್ಸ್ ಮಾಡಿದ ಭಾಷಣ, ಅವರು ಹೀಗೆ ಹೇಳುತ್ತಾರೆ, “ಭಾರತದ ಆರನೂರು ಮಿಲಿಯನ್ ಆತ್ಮಗಳು ಸನ್ಮಾರ್ಗಕ್ಕಾಗಿ ಕಾಯುತ್ತಿವೆ. ಸುಳ್ಳು ದೇವರುಗಳ, ಅಪವಿತ್ರ ಆಚರಣೆಗಳ ಸಂಕೋಲೆಯಲ್ಲಿ ಸಿಲುಕಿ ಆ ಆತ್ಮಗಳು ವಿಲವಿಲ ಒದ್ದಾಡುತ್ತಿವೆ. ಅವರು ತಮ್ಮ ಮಕ್ಕಳನ್ನೇ ಬಲಿ ಕೊಡುತ್ತಿದ್ದಾರೆ. ತಮ್ಮ ಹೆಂಡಿರನ್ನು ಜೀವಂತ ಸುಡುತ್ತಾರೆ. ಸೈತಾನನ ಪ್ರಭಾವಕ್ಕೊಳಗಾಗಿ ಮಣ್ಣು, ಕಲ್ಲು, ಮರಗಳಿಂದ ಮಾಡಿದ ದೇವರುಗಳನ್ನು ಪೂಜಿಸುತ್ತಾರೆ. ಮುಕ್ತಿ ದೊರಕೀತೆಂದು ಪುರಿ ಜಗನ್ನಾಥನ ರಥದ ಚಕ್ರದಡಿ ಬಿದ್ದು ಸಾಯುತ್ತಾರೆ. ಅದಕ್ಕಾಗಿ ಪುರಿ ಜಗನ್ನಾಥ ರಥಯಾತ್ರೆಯನ್ನು ನಿಷೇಧ ಮಾಡಬೇಕು. ದೇವರ ಹೆಸರಿನಲ್ಲಿ ಅಶ್ಲೀಲ ನೃತ್ಯಗಳನ್ನು ಮಾಡುತ್ತಾರೆ. ಪ್ರಚೋದಕವಾಗಿ ಹಾಡುತ್ತಾರೆ. ಸೈತಾನನ ಪ್ರಭಾವದಿಂದಾಗಿ ಅವರಲ್ಲಿ ಒಂದಿಷ್ಟೂ ನೈತಿಕತೆ ಉಳಿದಿಲ್ಲ. ಕರ್ತವ್ಯ ಮತ್ತು ನೀತಿಗಳ ಬಗ್ಗೆ ಅರಿವೇ ಅವರಲ್ಲಿಲ್ಲ. ಎಲ್ಲರೂ ಕಳ್ಳರು ಮತ್ತು ಸುಳ್ಳರು, ಅಲ್ಲಿನ ಹೆಂಗಸರೆಲ್ಲ ವ್ಯಭಿಚಾರಿಗಳು, ಯಾರಲ್ಲೂ ನಿಯತ್ತಿಲ್ಲ.
ಭಾರತವೆಂದರೆ ಹೃದಯಹೀನರ ಸಾಮ್ರಾಜ್ಯ, ಭಾರತೀಯರೆಲ್ಲ ಹೇಡಿಗಳು, ಅವರೆಲ್ಲ ನಿಜವಾದ ಧರ್ಮಮಾರ್ಗದ ಅಭಾವದಿಂದಾಗಿ ಮಾಟ, ಮಂತ್ರ, ಮೂಢನಂಬಿಕೆಗಳ ವಿಷವರ್ತುಲದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಒಟ್ಟಾರೆ ಹೇಳುವುದಾದರೆ ಭಾರತೀಯರೆಲ್ಲ ಗುಣಹೀನ ಬದುಕು ನಡೆಸುತ್ತಿರುವ ಧೂರ್ತರು. ಇಂತಹ ಅನಾಗರಿಕ ಜನರಿಗೆ ಸತ್ಯದರ್ಶನ ಮಾಡಿಸುವುದು ನಮ್ಮ ಕರ್ತವ್ಯ ಮತ್ತು ಜವಾಬ್ದಾರಿ. ಭಾರತೀಯರೆಲ್ಲರಿಗೆ ಸತ್ಯದ ಮಾರ್ಗ ತೋರುವ ಮೂಲಕ ಆ ಜನರ ಎಲ್ಲಾ ದೋಷಗಳನ್ನು ಬುಡಸಮೇತ ಹೋಗಲಾಡಿಸಬೇಕು. ಜೀವನದಲ್ಲಿ ಉನ್ನತಿ, ಸನ್ಮಾರ್ಗ ಸಿಗಬೇಕೆಂದರೆ ಅವರೆಲ್ಲ ಕ್ರೈಸ್ತರಾಗಿ ಮತಾಂತರಗೊಳ್ಳಬೇಕು. ಅದಕ್ಕಾಗಿ ಅನಾಗರಿಕರಿಂದ ಕೂಡಿದ ಹಿಂದುಸ್ಥಾನಕ್ಕೆ ಧರ್ಮಪ್ರಚಾರಕ ಪಾದ್ರಿಗಳನ್ನು ಕಳಿಸಲು ಅನುಮತಿ ಕೊಡಿ!” ಎಂಬ ನಿರ್ಣಯ ಮಂಡಿಸಿ ವೆಲ್ಬ್ಫೋರ್ಸ್ ತಮ್ಮ ಭಾಷಣ ಮುಗಿಸುತ್ತಾರೆ. ಇದು 1813 ರ ಜೂನ್ 22 ರ ಹೌಸ್ ಆಫ್ ಕಾಮನ್ಸ್ (ಬ್ರಿಟಿಷ್ ಸಂಸತ್ತಿನ ಸಾಮಾನ್ಯ ಸಭೆ)ನ ನಡಾವಳಿಯಲ್ಲಿ ದಾಖಲಾಗಿದೆ.
ಇದು ಹೊರಗಿನವರು ನಮ್ಮನ್ನು ಅಂದು ನೋಡಿದ ರೀತಿ. ನಮ್ಮ ದೇಶ ಅಂದು ಬ್ರಿಟೀಷರ ಕೈಯಲ್ಲಿ ಇತ್ತು, ಇಂದು ನಮ್ಮ ಕೈಯಲ್ಲಿ ಇದೆ!ನಮ್ಮದು ಪುಣ್ಯಾತ್ಮರು ಜನಸಿದ ನಾಡು, ನಮ್ಮದು ಜಗತ್ತಿಗೆ ಶಾಂತಿ ಪಾಠ ಹೇಳಿದ ನಾಡು. ನಮ್ಮದು ಮಾನವರೆಲ್ಲಾ ಒಂದು ಎಂದು ಹೇಳುವ ಸಂಸ್ಕೃತಿ. ಈ ನಾಡು ಪವಿತ್ರ ನಾಡು, ಇಲ್ಲಿನ ಸಂಸ್ಕೃತಿಯನ್ನು ಕಾಪಾಡಿಕೊಂಡು ಹೋಗಬೇಕಾದ ಜವಾಬ್ದಾರಿ ಬಹುಸಂಖ್ಯಾತ ರಾಜಕಾರಣಿಗಳ ಮೇಲಿದೆ. ವೆಲ್ಬ್ಫೋರ್ಸ್ ಬ್ರಿಟಿಷ್ ಸಂಸತ್ತಿಗೆ ಕಟ್ಟಿಕೊಟ್ಟ ಭಾರತದ ಕಲ್ಪನೆ ಸತ್ಯಕ್ಕೆ ದೂರ. ಜಗತ್ತಿನ ಮೂಲೆಮೂಲೆಗಳಿಂದ ಬಂದ ವಿದೇಶಿ ಪ್ರವಾಸಿಗರು ನಮ್ಮ ದೇಶದ ಸಂಸ್ಕçತಿಯನ್ನು ಹಾಡಿ ಹೊಗಳಿದ್ದಾರೆ. ಭಾರತವನ್ನಾಳಿದ ಬ್ರಿಟಿಷ್ ಅಧಿಕಾರಿಗಳಿಂದ ಹಿಡಿದು ಭಾರತದ ಮೇಲೆ ದಾಳಿ ಮಾಡಿದ ಬಹುತೇಕರು ನಮ್ಮ ಸಂಸ್ಕೃತಿಯನ್ನು ಗೌರವಿಸಿ ಇದು ಶ್ರೇಷ್ಠ ಸಂಸ್ಕೃತಿ ಎಂದು ಬಿರುದು ಕೊಟ್ಟಿದ್ದಾರೆ. ಇಂತಹ ಭಾರತೀಯ ಸಂಸ್ಕೃತಿ ಸಾವಿರಾರು ವರ್ಷಗಳವರೆಗೆ ಇರಬೇಕು. ಅದೇ ಕಾರಣಕ್ಕಾಗಿ ಮತಾಂತರ ನಿಷೇಧ ಕಾನೂನು ತಕ್ಷಣವೇ ಜಾರಿಗೆ ಬರಬೇಕು.
ಸಂವಿಧಾನದ ಪ್ರಕಾರ ಮತಾಂತರ ಮಾಡುವುದು ಕಾನೂನಿಗೆ ವಿರುದ್ಧ. ಸಂವಿಧಾನದ ವಿಧಿ 25, ಉಪವಿಧಿ 1ರಲ್ಲಿ ಉಲ್ಲೇಖಿಸಿರುವ “ಪ್ರೋಪಗೇಟ್” ಪದದ ಅರ್ಥ ಪ್ರಸಾರ ಮಾಡು ಎನ್ನುವುದೇ ಹೊರತು ಕನ್ವರ್ಟ್ ಮಾಡು, ಮತಾಂತರಿಸು ಎನ್ನುವುದಲ್ಲ. ಇದನ್ನು ಒರಿಸ್ಸಾ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಸ್ಪಷ್ಟವಾಗಿ ಹೇಳಿವೆ.
ಒಡಿಶಾದಲ್ಲಿ ಸಾಮೂಹಿಕವಾಗಿ ಮತ್ತು ಆಕ್ಷೇಪಾರ್ಹ ರೀತಿಯಲ್ಲಿ ಕ್ರೈಸ್ತ ಮಿಷನರಿಗಳು ಮತಾಂತರ ಚಟುವಟಿಕೆಯಲ್ಲಿ ತೊಡಗಿದ್ದಾಗ ಅಲ್ಲಿನ ಸರ್ಕಾರ ‘ಧಾರ್ಮಿಕ ಸ್ವಾತಂತ್ರ್ಯ ರಕ್ಷಣಾ ಕಾಯಿದೆ’ಯನ್ನು ಜಾರಿಗೊಳಿಸಿತು. ಅದನ್ನು ಪ್ರಶ್ನಿಸಿ ಮಿಷನರಿಗಳು ನ್ಯಾಯಾಲಯದ ಮೆಟ್ಟಿಲು ಹತ್ತಿದವು. ಆಗ ಒರಿಸ್ಸಾ ಹೈಕೋರ್ಟ್ ಮೇಲಿನಂತೆ ವ್ಯಾಖ್ಯಾನ ಮಾಡಿ, ಮಿಷನರಿಗಳ ವಾದ ಹುರುಳಿಲ್ಲದ್ದೆಂದು ತಳ್ಳಿಹಾಕಿತು. ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ಗೆ ಹೋದಾಗ ಜಸ್ಟಿಸ್ ಎ.ಎನ್. ರೇ ಅವರೂ ಹೈಕೋರ್ಟ್ ತೀರ್ಪನ್ನೇ ಎತ್ತಿ ಹಿಡಿದರು. ಒಡಿಶಾ ಸರ್ಕಾರ ತಂದ ಧಾರ್ಮಿಕ ಸ್ವಾತಂತ್ರ್ಯ ರಕ್ಷಣಾ ಕಾಯಿದೆ ಸಂವಿಧಾನಬದ್ಧವಾಗಿದೆ.
ಸಂವಿಧಾನ ದೇಶದ ಪ್ರತಿಯೊಬ್ಬ ಪ್ರಜೆಗೂ ‘ಅಂತಃಸಾಕ್ಷಿಯ ಸ್ವಾತಂತ್ರ್ಯ’ದ ಭರವಸೆ ನೀಡಿದೆ. ಮತಾಂತರ ಮೂಲಭೂತ ಹಕ್ಕು ಎಂದು ಯಾರೂ ಭಾವಿಸುವ ಹಾಗಿಲ್ಲ ಹೀಗೆ ನ್ಯಾಯಾಲಯ ಸ್ಪಷ್ಟವಾಗಿ ಹೇಳಿದೆ. ಒರಿಸ್ಸಾ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ತೀರ್ಪಿನ ಅವಲೋಕನಕ್ಕೂ ಪೂರ್ವದಲ್ಲಿ ಜಸ್ಟಿಸ್ ಡಾ.ಭವಾನಿ ಶಂಕರ ನಿಯೋಗಿ ನೇತೃತ್ವದ ಐವರು ಸದಸ್ಯರ ತನಿಖಾ ಆಯೋಗ 1966 ರಲ್ಲಿ ನೀಡಿದ ವರದಿಯನ್ನೂ ಗಮನಿಸಬೇಕು. ಮಧ್ಯಪ್ರದೇಶದ ಆದಿವಾಸಿಗಳನ್ನು ಕ್ರೈಸ್ತ ಮಿಷನರಿಗಳು ದೊಡ್ಡ ಪ್ರಮಾಣದಲ್ಲಿ ಮತಾಂತರ ಮಾಡುತ್ತಿದ್ದಾರೆಂಬ ಕೂಗು ಕೇಳಿಬಂದಾಗ ಅಲ್ಲಿನ ಸರ್ಕಾರ ನಿಯೋಗಿ ಕಮೀಷನ್ ನೇಮಕ ಮಾಡಿತು. ಆಯೋಗ ಮಧ್ಯಪ್ರದೇಶದ ಹದಿನಾಲ್ಕು ಜಿಲ್ಲೆಗಳ ಎಪ್ಪತ್ತೇಳಕ್ಕೂ ಹೆಚ್ಚು ಸ್ಥಳಗಳಿಗೆ ಭೇಟಿ ನೀಡಿತು. ಮುನ್ನೂರ ಎಪ್ಪತೈದು ಸಂಸ್ಥೆಗಳ ಆಂತರಿಕ ವರದಿಗಳನ್ನು ಪರಿಶೀಲಿಸಿತು. ಏಳುನೂರಾ ಎಪ್ಪತ್ತಕ್ಕೂ ಹೆಚ್ಚು ಹಳ್ಳಿಗಳಿಂದ ಹನ್ನೊಂದು ಸಾವಿರದ ಮುನ್ನೂರಕ್ಕೂ ಹೆಚ್ಚು ಜನರಿಂದ ಸಂಗ್ರಹಿಸಿದ ಮಾಹಿತಿ ಆಧರಿಸಿ ತನ್ನ ವರದಿ ನೀಡಿತು.
ಅದು ಏನೆಂದರೆ… ಶಿಕ್ಷಣ, ವೈದ್ಯಕೀಯ ಸೇವೆ ಮತ್ತು ಉದ್ಯೋಗದ ಆಮಿಷ ಒಡ್ಡಿ ಮುಗ್ಧ ಮತ್ತು ಅಮಾಯಕರನ್ನು ಮತಾಂತರಿಸಲಾಗಿದೆ. ಮತಾಂತರ ಚಟುವಟಿಕೆಗೆ ದೊಡ್ಡ ಪ್ರಮಾಣದಲ್ಲಿ ವಿದೇಶಿ ಹಣಕಾಸು ನೆರವು ಹರಿದು ಬರುತ್ತಿದೆ! ಮಿಷನರಿಗಳು ವಿದೇಶಿ ಸಂಸ್ಥೆಗಳಿಂದ ನಿಯಂತ್ರಿಸಲ್ಪಡುತ್ತಿದ್ದಾರೆ. ಜಾತಿ, ಧರ್ಮ, ಮತ, ಪಂಥದವರನ್ನು ಸಮಾನವಾಗಿ ಕಾಣಬೇಕೆನ್ನುವ ಜಾತ್ಯಾತೀತ ವಾದದಲ್ಲಿ ಮಿಷನರಿಗಳಿಗೆ ನಂಬಿಕೆಯಿಲ್ಲ. ಮತಾಂತರದ ವಿಷಯದಲ್ಲಿ ಸಂವಿಧಾನದ ಆಶಯವನ್ನೂ ಮೀರುವ ಅಧಿಕಾರ, ಹಕ್ಕನ್ನು ಅವರು ಬಯಸುತ್ತಿದ್ದಾರೆ. ಭಾರತದಲ್ಲಿ ಪ್ರತ್ಯೇಕತಾ ಚಳುವಳಿಗಳನ್ನು ಮಿಷನರಿಗಳು ಬೆಂಬಲಿಸುತ್ತಿದ್ದಾರೆ. ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಭಾರತದ ತೇಜೋವಧೆ ಮಾಡಲಾಗುತ್ತಿದೆ. ಬಂಡಾಯ, ಹಿಂಸೆ ಮತ್ತಿತರ ಚಟುವಟಿಕೆಗೆ ಪ್ರೋತ್ಸಾಹಿಸುವುದು ಕಂಡುಬAದಿದೆ. ಇದು ಇಲ್ಲಿನ ಪ್ರಜಾಪ್ರಭುತ್ವ ಮತ್ತು ಶಾಂತಿ ಸಹಬಾಳ್ವೆಗೆ ಅಪಾಯಕಾರಿ. ಆದ್ದರಿಂದ ಮತಾಂತರ ತಡೆಗಟ್ಟುವ ಶಾಸನ ರೂಪಿಸಬೇಕು” ಇದು ವರದಿ. ನೀವೆ ಹೇಳಿ ಈ ವರದಿಯ ವಿಚಾರಗಳನ್ನು ಜನರಿಗೆ ಯಾರು ತಲುಪಿಸಬೇಕು? ಸಹಬಾಳ್ವೆಯನ್ನು ಸ್ಥಾಪಿಸಲು ಮತಾಂತರ ನಿಷೇಧ ಕಾನೂನು ಜಾರಿಗೆ ಬರಬೇಕಲ್ಲವೇ?
ಮಿಷನರಿಗಳು ಯುವಕರನ್ನು ಬ್ರೆನ್ ವಾಷ್ ಮಾಡುವುದಷ್ಟೇ ಅಲ್ಲದೆ ಹಲವರನ್ನು ಕ್ರೈಸ್ತ ಧರ್ಮಕ್ಕೆ ತಂದರೆ ನೀನು ನಿಜವಾದ ಕ್ರೈಸ್ತ ಎಂದು ತಲೆಗೆ ತುಂಬುತ್ತಿದ್ದಾರೆ!. ಹೀಗೆ ಬ್ರೆನ್ ವಾಷ್ ಆದ ಯುವಕರು ಹಳ್ಳಿ ಮತ್ತು ಬುಡಕಟ್ಟು ಪ್ರದೇಶಗಳಿಗೆ ಹೋಗಿ ಕ್ರೈಸ್ತ ಧರ್ಮ ಬೆಳೆಸುತ್ತಿದ್ದಾರೆ. ಅದನ್ನು ಹಿಂದೂ ಸಂಘಟನೆಗಳು ವಿರೋಧಿಸಿದರೆ ಅವರಿಗೆ ಕೋಮುವಾದಿ ಪಟ್ಟ ಕಟ್ಟುತ್ತಾರೆ. ದೊಡ್ಡ ದೊಡ್ಡ ಮಠಗಳನ್ನು ಕಟ್ಟಿರುವ ಸ್ವಾಮೀಜಿಗಳು ಹಿಂದೂಗಳ ಬೆಂಬಲಕ್ಕೆ ನಿಲ್ಲುತ್ತಿಲ್ಲ. ಅವರು ತಮ್ಮ ಜಾತಿಗೆ ಬೆಂಬಲ ನೀಡುತ್ತಿದ್ದಾರೆ.
ಮಿಷನರಿಗಳು ಸೇವೆಯನ್ನು ತಾವೇ ಗುತ್ತಿಗೆ ಪಡೆದವರಂತೆ ವರ್ತಿಸುತ್ತಿವೆ. ಹಿಂದೂಗಳಲ್ಲಿಯೂ ಅನೇಕ ವ್ಯಕ್ತಿಗಳು ತಮ್ಮ ಸಂಪೂರ್ಣ ಜೀವನವನ್ನು ಸೇವೆಗಾಗಿ ಮುಡಪಾಗಿಟ್ಟಿದ್ದಾರೆ. ಅವರನ್ನು ನಾವು ಸ್ಮರಿಸಬೇಕಾಗಿದೆ. ಡಾ|| ಸುದರ್ಶನ್ ಅವರ ಗಿರಿಜನ ಕಲ್ಯಾಣ ಕೇಂದ್ರ, ರಾಮಕೃಷ್ಣ ಮಿಷನ್, ವಿವೇಕಾನಂದ ಸೇವಾ ಕೇಂದ್ರ, ಆರ್ಟ್ ಆಫ್ ಲಿವಿಂಗ್‌ನ ರವಿಶಂಕರ್ ಗುರೂಜಿ, ಸದ್ಗುರು ಜಗ್ಗಿ ವಾಸುದೇವ ಅವರ ಇಶಾ ಪೌಂಡೇಶನ್, ಧರ್ಮಸ್ಥಳ ಮಂಜುನಾಥ ಸಂಸ್ಥೆ, ಸಿದ್ದಗಂಗಾ ಶ್ರೀಗಳು ಮಾಡಿರುವ ಸಾಧನೆ ಸಾಕಷ್ಟಿದೆ. ಇವರು ಸೇವೆ ಮಾಡುವಾಗ ಯಾರನ್ನೂ ಮತಾಂತರ ಮಾಡಿಲ್ಲ. ಸೇವೆ ಮಾಡಲಿ ಮತಾಂತರ ಮಾಡಬಾರದು, ಅಂದಾಗ ಮಾತ್ರ ಈ ದೇಶ ಜಾತ್ಯಾತೀತ ದೇಶವಾಗಿ ಉಳಿಯುತ್ತದೆ. ಇಲ್ಲದೇ ಹೋದರೆ ಈ ದೇಶ ಜಾತ್ಯಾತೀತ ದೇಶವಾಗಿ ಉಳಿಯುವುದಿಲ್ಲ.
ಒಟ್ಟಿನಲ್ಲಿ ಎಲ್ಲಾ ಹಿಂದೂಗಳು ಜಾಗೃತರಾಗಬೇಕಿದೆ, ಪುರಾತನ ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಹೋರಾಟ ಮಾಡಬೇಕಿದೆ. ಭಾರತೀಯತೆಯನ್ನು ಜಾಗೃತಗೊಳಿಸಬೇಕಿದೆ, ಎಲ್ಲರಿಗೂ ಅಗತ್ಯವಾಗಿ ಶ್ರೇಷ್ಟ ಮಟ್ಟದ ಶಿಕ್ಷಣ ಬೇಕು. ಪ್ರತಿ ಊರಿನಲ್ಲೂ ಎಲ್ಲಾ ದೇವಾಲಯಗಳ ಕಮೀಟಿಯವರು ಒಂದೆಡೆ ಸೇರಿ ತಿಂಗಳಿಗೊಮ್ಮೆ ಹಿಂದೂ ಧರ್ಮಕ್ಕೆ ಎದುರಾಗುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಬೇಕು. ಪ್ರತಿ ದೇವಾಲಯಗಳ ಟ್ರಸ್ಟಿಗಳಲ್ಲಿ ಕೆಳಹಂತದವರನ್ನು ನೇಮಕ ಮಾಡಿಕೊಳ್ಳಬೇಕು. ಸಾಮಾಜಿಕವಾಗಿ ಹಿಂದುಳಿದವರಿಗೆ ಮತಾಂತರದ ಬಗ್ಗೆ ತಿಳಿಹೇಳಬೇಕು, ಹಿಂದೂ ಸ್ವಾಮೀಜಿಗಳು ತಮ್ಮ ತಮ್ಮಲ್ಲೆ ಹೊಡೆದಾಡುವುದನ್ನು ಬಿಟ್ಟು ಒಗ್ಗಟ್ಟಾಗಿ ಕೆಳಹಂತದಲ್ಲಿರುವವರನ್ನು ಮುನ್ನೆಲೆಗೆೆ ತರಬೇಕು. ಕೆಲವು ಫೇಕ್ ಸ್ವಾಮೀಜಿಗಳು ಇದ್ದಾರೆ, ಅವರು ಹಿಂದೂ ಧರ್ಮದ ವಿರುದ್ಧವೇ ಮಾತಾಡುತ್ತಾರೆ. ಅಂತಹವರ ವಿರುದ್ಧ ಹಿಂದೂಗಳೆಲ್ಲರೂ ಸೇರಿ ಹೋರಾಡಬೇಕು. ಮೀಡಿಯಾಗಳನ್ನು ಎದುರಿಸಲು, ಧರ್ಮ ವಿಚಾರಗಳನ್ನು ಸೂಕ್ತವಾಗಿ ಮಂಡಿಸಲು ಸೂಕ್ತವ್ಯಕ್ತಿಗಳಿಗೆ ತರಬೇತಿ ನೀಡಬೇಕು ಜೊತೆಗೆ ಪ್ರೋತ್ಸಾಹ ನೀಡಬೇಕು.
ಎಲ್ಲಾ ಸಮಸ್ಯೆಗಳಿಗೆ ಹಿಂದುತ್ವದಲ್ಲಿ ಉತ್ತರವಿದೆ, ಹೀಗಾಗಿ ಬೇರೆ ಧರ್ಮಗಳು ನಮ್ಮ ಸಂಸ್ಕೃತಿಯ ಮೇಲೆ ಪ್ರಹಾರ ಮಾಡುತ್ತಿವೆ. ನಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಎಲ್ಲಿಯವರೆಗೆ ನಾವು ಪ್ರಯತ್ನಿಸುತ್ತೇವೆ ಅಲ್ಲಿಯವರೆಗೆ ಮಾತ್ರ ಭಾರತ ಭಾರತವಾಗಿ ಉಳಿಯುತ್ತದೆ ಮತ್ತು ಜಾತ್ಯಾತೀತ ರಾಷ್ಟ್ರವಾಗಿ ಮುಂದುವರೆಯುತ್ತದೆ.
ಮತಾಂತರ ನಿಷೇಧ ಕಾನೂನು ಜಾರಿಗೆ ಬರಲಿಲ್ಲವೆಂದರೆ, ಮುಂದೊಂದು ದಿನ ಬಹುಸಂಖ್ಯಾತರು ತಮ್ಮ ಅಸ್ಥಿತ್ವ ಕಳೆದುಕೊಳ್ಳುವ ಅಪಾಯ ಇದೆ. ಎಲ್ಲವೂ ಸಂವಿಧಾನ ಆಧಾರಿತವಾಗಿ ಚರ್ಚೆ ಮಾಡಿದರೂ ನಮ್ಮ ಸಂವಿಧಾನದಲ್ಲಿ ಕಲ್ಪಿಸಿದ ಕೆಲವೊಂದು ಅವಕಾಶಗಳಿಂದ ಈ ದೇಶ ಮುಂದೊಂದು ದಿನ ಏಕದೇವತಾ ಆರಾಧಕರ ಕೈಯಲ್ಲಿ ಹೋಗಬಹುದು. ಈ ಚಿಂತೆ ನನ್ನನ್ನು ಸದಾ ಕಾಡುತ್ತಿದೆ.
ಏಕದೇವತಾ ಆರಾಧಕರು ಈ ದೇಶದಲ್ಲಿ ಬಹುಸಂಖ್ಯಾತರಾದರೆ ಇಂದು ಅಧಿಕ ಸಂಖ್ಯೆಯಲ್ಲಿರುವ ಹಿಂದೂಗಳು ಅಲ್ಪಸಂಖ್ಯಾತರಾಗುತ್ತಾರೆ. ಅಲ್ಪಸಂಖ್ಯಾತರು ಮುಂದೊಂದು ದಿನ ಬಹುಸಂಖ್ಯಾತರಾದರೆ ಈ ದೇಶ ಜಾತ್ಯಾತೀತ ದೇಶವಾಗಿ ಉಳಿಯುವುದಿಲ್ಲ. ಜಗತ್ತಿನಲ್ಲಿ ಎಲ್ಲೆಲ್ಲಿ ಮುಸ್ಲಿಂ ಸಮುದಾಯ ಬಹುಸಂಖ್ಯಾತರಾಗಿದ್ದಾರೆ. ಆ ದೇಶಗಳು ಬಹುತೇಕ “ಇಸ್ಲಾಮಿಕ್ ದೇಶ”ಗಳಾಗಿ ಪರಿವರ್ತನೆ ಹೊಂದಿವೆ. ಕ್ರಿಶ್ಚಿಯನ್ನರು ಅಧಿಕವಾಗಿರುವ ದೇಶಗಳಲ್ಲಿಯೂ ಹಿಂದೂಗಳಿಗೆ ಅಪಾಯವಿದೆ.
ಹಿಂದೂಗಳಿಗೆ ಉಳಿದಿರುವುದು ಒಂದೇ ದೇಶ, ಅದು ನನ್ನ ಭಾರತ. ಈ ನನ್ನ ಭಾರತ ಸಾವಿರಾರು ವರ್ಷಗಳವರೆಗೆ ಜಾತ್ಯಾತೀತ ರಾಷ್ಟ್ರವಾಗಿ ಉಳಿಯಬೇಕು, ಅದಕ್ಕಾಗಿ ಮತಾಂತರ ನಿಷೇಧ ಕಾನೂನು ಜಾರಿಗೆ ಬರಬೇಕು!