ಸುದ್ದಿ ಸದ್ದು ನ್ಯೂಸ್
ಬೆಳಗಾವಿ: ರಾಜ್ಯದ ಎರಡನೇ ರಾಜಧಾನಿ ಎಂದು ಕರೆಸಿಕೊಳ್ಳುವ ಬೆಳಗಾವಿ ಸುವರ್ಣ ಸೌಧದಲ್ಲಿ ಡಿಸೆಂಬರ್13 ರಿಂದ 23 ರಂದು ವರೆಗೆ ಸತತ 10 ದಿನಗಳ ಕಾಲ ನಡೆಯಲಿರುವ ವಿಧಾನ ಮಂಡಲದ ಚಳಿಗಾಲದ ಅಧಿವೇಶನಕ್ಕೆ ಪ್ರತಿ ಅಧಿವೇಶನದಂತೆ ಈ ಬಾರಿಯೂ ಪ್ರತಿಭಟನೆಯ ಬಿಸಿ ತಟ್ಟಲಿದೆ. ವಿವಿಧ ಸಂಘ ಸಂಸ್ಥೆಗಳು, ನಾನಾ ಸಮಾಜ ಸಂಘಟನೆಗಳು, ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸಾವಿರಾರು ಕಾರ್ಯಕರ್ತರ ತಂಡವೇ ಬೆಳಗಾವಿ ನಗರದತ್ತ ಸಾಗಿ ಬರುತ್ತಿದೆ.
ಇಲ್ಲಿಯವರೆಗೆ ಪ್ರತಿಭಟನೆಗೆ ಅವಕಾಶ ಕೋರಿ ಸುಮಾರು 75 ಅರ್ಜಿಗಳು ಸಲ್ಲಿಕೆಯಾಗಿವೆ. ಪ್ರತಿಭಟನೆ ನಡೆಸುವವರಿಗಾಗಿ ಸುವರ್ಣ ಗಾರ್ಡನ್ ಮತ್ತು ಕೆ.ಕೆ. ಕೊಪ್ಪದ ಬಳಿ 6 ಬೃಹದಾಕಾರದ ಪೆಂಡಾಲ್ ಹಾಕಿ ಸಂಪೂರ್ಣ ವ್ಯವಸ್ಥೆ ಮಾಡಲಾಗಿದೆ. ಆದರೆ, ಕೋವಿಡ್ -19 ಭೀತಿ ಹಿನ್ನೆಲೆಯಲ್ಲಿ ಸರ್ಕಾರ ಹೊರಡಿಸಿರುವ ನಿಯಮದಂತೆ 500 ಜನರಿಗೆ ಮಾತ್ರ ಪ್ರತಿಭಟಿಸಲು ಅವಕಾಶ ಕಲ್ಪಿಸಲಾಗಿದೆ. ಲಿಂಗಾಯತ ಪಂಚಮಸಾಲಿ ಸಮಾಜ, ಹಡಪದ ಸಮಾಜ, ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರು, ಕ್ರೈಸ್ತ ಸಮುದಾಯ, ರೈತ ಸಂಘಟನೆಗಳು, ಕಾರ್ಮಿಕರು, ದಲಿತ ಸಂಘಟನೆಗಳು, ಸಾರಿಗೆ ನೌಕರರ ಸಂಘ ಸೇರಿದಂತೆ ಇನ್ನೂ ಅನೇಕ ಸಂಘಟನೆಗಳು ರಾಜ್ಯದ ಮೂಲೆ ಮೂಲೆಗಳಿಂದ ಪ್ರತಿಭಟನೆ ನಡೆಸಲಿವೆ.
ಪ್ರತಿಭಟನೆಗೆ ಅನುಮತಿ ಕೋರಿ ಬೆಳಗಾವಿ ನಗರ ಪೊಲೀಸ್ ಆಯುಕ್ತರ ಕಚೇರಿಗೆ ಸುಮಾರು 75 ಅರ್ಜಿಗಳು ಸಲ್ಲಿಕೆಯಾಗಿದ್ದು 55 ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ.
ಪ್ರತಿಭಟನೆಯಲ್ಲಿ 500 ಕ್ಕೂ ಹೆಚ್ಚು ಜನರು ಸೇರಿಸುವಂತಿಲ್ಲ. ಪ್ರತಿಭಟನೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬರು ಎರಡು ಡೋಸ್ ಕೋರೋನಾ ಲಸಿಕೆ ಪಡೆದಿರಬೇಕು.12 ಗಂಟೆಯೊಳಗಿನ ಆರ್‌ಟಿಪಿಸಿಆರ್ ನಗೆಟಿವ್ ವರದಿ ಕಡ್ಡಾಯ. ಪ್ರತಿಯೊಬ್ಬರು ಮಾಸ್ಕ್ ಧರಿಸಿಕೊಂಡು ಕಟ್ಟುನಿಟ್ಟಾಗಿ ಕೋವಿಡ್-19 ನಿಯಮಗಳನ್ನ ಪಾಲಿಸಬೇಕೆಂದು ಎಂದು ಬೆಳಗಾವಿ ನಗರ ಪೊಲೀಸ್ ಆಯುಕ್ತ ತ್ಯಾಗರಾಜನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.