ಕಾರೊಂದು ಬೆನ್ನಟ್ಟಿದ ಪೊಲೀಸರಿಗೆ ಸಿಕ್ತು 85 ಲಕ್ಷ ಅಕ್ರಮ ನಗದು

ಉಮೇಶ ಗೌರಿ (ಯರಡಾಲ)

ಹಾವೇರಿ: ಪೊಲೀಸರಿಗೆ ಆ ಕಾರಿನ ಮೇಲೆ ಯಾಕೋ ಸಂಶಯ ಬಂದಿತ್ತು. ನಿಲ್ಲಿಸಿದರೂ ನಿಲ್ಲದೆ ಓಡಿದ ಕಾರನ್ನು ಅವರು ಚೇಸ್ ಮಾಡಿದ್ರು. ಜೀವದ ಹಂಗು ತೊರೆದು ಕಾರ್  ಚೇಸ್ ಮಾಡಿದ ಪೊಲೀಸರಿಗೆ,  ಅಲ್ಲಿ ಕಂಡದ್ದು ನಾಲ್ಕು ಜನ ಮತ್ತು ಕಂತೆ ಕಂತೆ ನೋಟು. ನಿನ್ನೆ ಸಂಜೆ ಹಾವೇರಿ ಜಿಲ್ಲೆಯ ಹಾನಗಲ್‌ನಲ್ಲಿ ನಡೆದ ಘಟನೆ ಇದು.

ಎಸ್ ಹುಬ್ಬಳ್ಳಿಯಿಂದ ಸಾಗರಕ್ಕೆ ಹೋಗುತ್ತಿದ್ದ ಕಾರೊಂದು  ಸಂಶಯಾಸ್ಪದ ನಡೆಯಿಂದ ಹಾನಗಲ್ ಪೊಲೀಸರಿಗೆ ಅನುಮಾನಕ್ಕೆ ಎಡೆ ಮಾಡಿಕೊಟ್ಟಿತ್ತು. ತಕ್ಷಣವೆ ಎಚ್ಚೆತ್ತ ಪೊಲೀಸರು ಕಾರನ್ನು ನಿಲ್ಲಿಸಲು ನೋಡಿದ್ದಾರೆ. ಆದರೆ ಪೊಲೀಸರನ್ನು ನೋಡುತ್ತಿದ್ದಂತೆ ಕಾರು ಮತ್ತಷ್ಟು ವೇಗ ಪಡೆದುಕೊಂಡು ಎಲ್ಲೂ ನಿಲ್ಲಿಸದೇ ಮುಂದೆ ಸಾಗಿದೆ. ಹೀಗಾಗಿ ಪೊಲೀಸರ ಅನುಮಾನಕ್ಕೆ ಮತ್ತಷ್ಟು ಪುಷ್ಠಿ ಸಿಕ್ಕಿದ್ದು, ಈ ಟೋಯೋಟಾ ಕಾರನ್ನು ಪೊಲೀಸರು ಬೆನ್ನಟ್ಟಲು ಶುರು ಮಾಡಿದ್ದಾರೆ.

ಬೆನ್ನಟ್ಟಿದ ಪೊಲೀಸರಿಗೆ ಕೆಲ ಕಾಲ ಆಟ ಆಡಿಸಿದ ಖದೀಮರು ಕೊನೆಗೂ ಸಿಕ್ಕಿಬಿದ್ದಿದ್ದಾರೆ. ಛಲ ಬಿಡದೇ ಬೆನ್ನಟ್ಟಿದ ಪೊಲೀಸರಿಗೆ ಕಾರಿನಲ್ಲಿ ಬರೋಬರಿ 85 ಲಕ್ಷ ಅಕ್ರಮ ಹಣ ಇರುವುದು ಪತ್ತೆಯಾಗಿದೆ. ಹಣದ ಜೊತೆ ಕಾರಿನಲ್ಲಿದ್ದ ನಾಲ್ಕು ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದು ದಾಖಲೆ ಇಲ್ಲದೆ ಅಕ್ರಮವಾಗಿ ಸಾಗಿಸುತ್ತಿದ್ದ ಹಣ ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ

ಕಾರಿನಲ್ಲಿ ಅಕ್ರಮವಾಗಿ ಹಣ ಸಾಗಿಸುತ್ತಿದ್ದ ಫಯಾಜ್ ಖಾನ್ (31), ಇಮ್ರಾನ್ ಖಾನ್ (27), ಸದ್ದಾಂ ಖಾನ್ (23), ಸಯ್ಯದ್ ಅಮೀನ್ (29) ಅವರನ್ನು ಬಂಧಿಸಲಾಗಿದೆ. ಇವರಲ್ಲಿ ಇಬ್ಬರು ಉತ್ತರ ಕನ್ನಡ ಜಿಲ್ಲೆಯವರು ಮತ್ತು ಇನ್ನಿಬ್ಬರು ಶಿವಮೊಗ್ಗ ಜಿಲ್ಲೆಯ ಸಾಗರದವರು ಎಂದು ತಿಳಿದು ಬಂದಿದೆ. ಇವರೆಲ್ಲರೂ ಅಡಕೆ ವ್ಯಾಪಾರಿಗಳಾಗಿದ್ದು, ಹುಬ್ಬಳ್ಳಿಯಿಂದ ಈ ಹಣವನ್ನು ಸಾಗರಕ್ಕೆ ಕೊಂಡೊಯ್ಯುತ್ತಿದ್ದರು ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ.

ಹಾನಗಲ್ ಪೊಲೀಸರ ಮಿಂಚಿನ ಕಾರ್ಯಾಚರಣೆಯಿಂದ ಅಕ್ರಮ ಹಣ  ಸಾಗಿಸುತ್ತಿದ್ದವರು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಪೊಲೀಸರು ಪ್ರಕರಣದ ಜಾಡು ಹಿಡಿದು ಅಕ್ರಮ ಹಣದ ಮೂಲವೇನು ಎಂಬುದನ್ನು ಪತ್ತೆ ಹಚ್ಚಬೇಕಿದೆ.

 

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";