ಬೆಳಗಾವಿ: ನಿನ್ನೆ ಲೋಕಾರ್ಪಣೆಗೊಂಡ ಬೆಳಗಾವಿಯ ಟಿಳಕವಾಡಿಯ 3ನೇ ರೈಲ್ವೇ ಗೇಟ್‍ನ ಮೇಲ್ಸೇತುವೆಯಲ್ಲಿ ತಗ್ಗು ಬಿದ್ದಿರುವ ಘಟನೆ ನಡೆದಿದೆ.
ಹೌದು ನಿನ್ನೆಯಷ್ಟೇ ಸಂಸದೆ ಮಂಗಲಾ ಅಂಗಡಿ ಅವರು 3ನೇ ರೈಲ್ವೇ ಗೇಟ್‍ನಲ್ಲಿ ಮೇಲ್ಸೇತುವೆಯನ್ನು ಶಾಸಕರಾದ ಅಭಯ್ ಪಾಟೀಲ್, ಅನಿಲ್ ಬೆನಕೆ, ಎಂಎಲ್‍ಸಿ ಪ್ರಕಾಶ ಹುಕ್ಕೇರಿ ಸೇರಿದಂತೆ ಇನ್ನಿತರ ಜನಪ್ರತಿನಿಧಿಗಳು, ರೈಲ್ವೇ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಉದ್ಘಾಟನೆ ಮಾಡಿದ್ದರು. ಆದರೆ ಇಂದು ನೋಡಿದ್ರೆ ಈ ಮೇಲ್ಸೇತುವೆಯಲ್ಲಿ ಒಂದು ತೆಗ್ಗು ಕಾಣಿಸಿಕೊಂಡಿದೆ. ಸಧ್ಯ ಗುಂಡಿ ಬಿದ್ದಿರುವ ಫೋಟೋ ಸೊಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದ್ದು. ಸಾಕಷ್ಟು ಟೀಕೆಗೆ ಗ್ರಾಸವಾಗಿದೆ. ಗುತ್ತಿಗೆದಾರರು ಅದೇಷ್ಟು ಗುಣಮಟ್ಟತೆ ಕಾಯ್ದುಕೊಂಡಿದ್ದಾರೆ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಹಳೆ ಪಿಬಿ ರಸ್ತೆಯ ಮೇಲ್ಸೇತುವೆಯಲ್ಲಿಯೂ ಕೂಡ ರಸ್ತೆ ಬಿರುಕು ಬಿಟ್ಟಿತ್ತು.
ಇದೀಗ ಲೋಕಾರ್ಪಣೆಗೊಂಡ ಈ ಮೇಲ್ಸೇತುವೆಯಲ್ಲಿಯೂ ತೆಗ್ಗು ಬಿದ್ದಿದ್ದು ಕಳಪೆ ಕಾಮಗಾರಿ ಎದ್ದು ಕಾಣುತ್ತಿದೆ. ಸಧ್ಯ ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಮೊದಲೇ 40 ಪರ್ಸೆಂಟ್ ಕಮಿಷನ್ ಆರೋಪ ರಾಜ್ಯದಲ್ಲಿ ಕೇಳಿ ಬರುತ್ತಿದೆ. ಇಂತಹ ಸಮಯದಲ್ಲಿಯೇ ಈ ರೀತಿ ಕಳಪೆ ಕಾಮಗಾರಿ ಕಂಡು ಬಂದಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ. ನಿಜಕ್ಕೂ ಕಮಿಷನ್ ದಂಧೆ ರಾಜ್ಯದಲ್ಲಿಯೇ ನಡೆಯುತ್ತಿದೆ ಎಂಬುದಕ್ಕೆ ಇದು ಪುಷ್ಠಿ ನೀಡುವಂತಿದೆ. ಈ ಕಳಪೆ ಕಾಮಗಾರಿ ಬಗ್ಗೆ ಹಿರಿಯ ಅಧಿಕಾರಿಗಳು ಸ್ಪಷ್ಟನೆ ನೀಡಬೇಕಿದೆ.ಅಲ್ಲದೇ ಈ ರೀತಿ ಕಳಪೆ ಕಾಮಗಾರಿ ಮಾಡಿರುವ ಗುತ್ತಿಗೆದಾರನ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ.