ಸುದ್ದಿ ಸದ್ದು ನ್ಯೂಸ್
ಚನ್ನಮ್ಮನ ಕಿತ್ತೂರು:
ಪ್ರತಿಷ್ಠಿತ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ 12 ಜನ ವಿದ್ಯಾರ್ಥಿನಿಯರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು ಸಂಪೂರ್ಣ ಶಾಲೆ ಸೀಲ್ ಡೌನ್ ಮಾಡಲಾಗಿದೆ ಎಂದು ತಾಲೂಕಾ ದಂಡಾಧಿಕಾರಿ ಸೋಮಲಿಂಗಪ್ಪ ಹಾಲಗಿ ತಿಳಿಸಿದ್ದಾರೆ. ಈ ಶಾಲೆಯಲ್ಲಿ ಒಟ್ಟು 760 ವಿದ್ಯಾರ್ಥಿನಿಯರು ಓದುತ್ತಿದ್ದು 600
ವಿದ್ಯಾರ್ಥಿನಿಯರು ಹೊರಗಡೆಯಿಂದ ಈಗಾಗಲೇ ಇಲ್ಲಿಗೆ ಬಂದಿದ್ದಾರೆ. ಬೇರೆ ಬೇರೆ ಕಡೆಗಳಿಂದ ಬಂದವರಿಂದ ಸೋಂಕು ಹರಡಿರುವ ಸಾಧ್ಯತೆ ಇರಬಹುದು ಎಂದು ಅವರು ಹೇಳಿದರು. ಸುಮಾರು 104 ವಿದ್ಯಾರ್ಥಿನಿಯರಲ್ಲಿ ಸೋಂಕಿನ ಲಕ್ಷಣಗಳು ಕಂಡು ಬಂದ ಕಾರಣ ಅವರನ್ನು ರಾಪಿಡ್ ಟೆಸ್ಟ್‌ಗೆ ಒಳಪಡಿಸಲಾಗಿತ್ತು. ಅವರಲ್ಲಿ 12 ವಿದ್ಯಾರ್ಥಿನಿಯರಲ್ಲಿ ಸೋಂಕು ಇರುವುದು ಕಂಡು ಬಂದಿದೆ ಎಂದು ಅವರು ಮಾಹಿತಿ ನೀಡಿದರು.
104 ವಿದ್ಯಾರ್ಥಿನಿಯರನ್ನು ಐಸೋಲೇಶನ್ ಮಾಡಲಾಗಿದೆ. ಶಾಲೆಯನ್ನು ಸಂಪೂರ್ಣ ಸೀಲ್‌ಡೌನ್ ಮಾಡಿದ್ದರಿಂದ ಒಳ ಮತ್ತು ಹೊರಗಿನ ಪ್ರವೇಶ
ನಿರ್ಬಂಧಿಸಲಾಗಿದೆ. ಲಕ್ಷಣಗಳಿರುವ ವಿದ್ಯಾರ್ಥಿನಿಯರ ಗಂಟಲು ದ್ರವವನ್ನು ಬೆಳಗಾವಿಗೆ ಆರ್‌ಟಿಪಿಸಿಆರ್ ತಪಾಸಣೆಗಾಗಿ ಕಳುಹಿಸಿಕೊಡಲಾಗಿದೆ ಎಂದು ಅವರು ಹೇಳಿದರು.
ಆರನೇ ತರಗತಿಯಿಂದ ದ್ವಿತೀಯ ಪಿಯುಸಿ ವರ್ಷದ ವರೆಗೆ ವಿದ್ಯಾರ್ಥಿನಿಯರು ಇಲ್ಲಿ ಓದುತ್ತಿದ್ದಾರೆ. ಆದರೆ, ಆರು ಮತ್ತು ಹತ್ತನೇ ವರ್ಗದ ವಿದ್ಯಾರ್ಥಿನಿಯರು ಬಂದಿಲ್ಲ. ಶಾಲೆಯನ್ನು ಸಂಪೂರ್ಣ ಸೀಲ್ ಡೌನ್ ಮಾಡಿದ್ದರಿಂದ ಅವರಿಗೂ ಬರದಂತೆ ಶಾಲಾ ಸಿಬ್ಬಂದಿಯವರು ಕೋರಿದ್ದಾರೆ ಎಂದರು.
ಈ ವೇಳೆ ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ, ಜಿಲ್ಲಾ ಆರೋಗ್ಯಾಧಿಕಾರಿ ಎಸ್. ವಿ.
ಮುನ್ಯಾಳ, ತಾಲ್ಲೂಕು ವೈದ್ಯಾಧಿಕಾರಿ ಎಸ್.ಎಸ್. ಸಿದ್ದಣ್ಣವರ,
ಸ್ಥಳಿಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಆಗಮಿಸಿದ್ದರು.