ಶಿಕ್ಷಣ ಇಲಾಖೆಯಲ್ಲಿ ಅಕ್ರಮ ನೇಮಕಾತಿ: 11 ಮಂದಿ ಶಿಕ್ಷಕರ ಬಂಧನ!

ಉಮೇಶ ಗೌರಿ (ಯರಡಾಲ)

ಬೆಂಗಳೂರು: ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ನಡೆದ ಅಕ್ರಮ ಹಗರಣವನ್ನೇ ಇನ್ನೂ ರಾಜ್ಯದ ಜನತೆಗೆ ಅರಗಿಸಿಕೊಳ್ಳಲಾಗಿಲ್ಲ. ಅದರ ಮಧ್ಯೆ ಇದೀಗ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯಲ್ಲೂ ಹಗರಣ ನಡೆದಿರೋದು ಬೆಳಕಿಗೆ ಬಂದಿದೆ.

2012-13 ಮತ್ತು 2014-15ನೇ ಸಾಲಿನ ಸರಕಾರಿ ಪ್ರೌಢ ಶಾಲಾ ಸಹ ಶಿಕ್ಷಕರ (ಗ್ರೇಡ್‌-2) ಹಾಗೂ ದೈಹಿಕ ಶಿಕ್ಷಕರ (ಗ್ರೇಡ್‌-1) ನೇಮಕದಲ್ಲಿ ಅಕ್ರಮ ನಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ 11 ಮಂದಿ ಸಹ ಶಿಕ್ಷಕರನ್ನು ಸಿಐಡಿ ಅಧಿಕಾರಿಗಳು ಮಂಗಳವಾರ ಬಂಧಿಸಿದ್ದಾರೆ. ವಿಪರ್ಯಾಸ ಅಂದ್ರೆ ಬಂಧಿತರಾಗಿರೋ 11 ಮಂದಿ ಶಿಕ್ಷಕರಲ್ಲಿ 10 ಮಂದಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್‌ ತವರು ಜಿಲ್ಲೆಯವರೇ ಆಗಿದ್ದಾರೆ.

ಮಹೇಶ ಶ್ರೀಮಂತ ಸೂಸಲಾಡಿ ಎಂಬುವರು 2012-13ನೇ ಸಾಲಿನಲ್ಲಿ ಅಕ್ರಮವಾಗಿ ನೇಮಕವಾಗಿದ್ದ ಸಂಬಂಧ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅಧೀನ ಕಾರ್ಯದರ್ಶಿಯು ಆ.12ರಂದು ವಿಧಾನಸೌಧ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅಲ್ಲದೆ, 2014-15ನೇ ಸಾಲಿನಲ್ಲಿ ಸರಕಾರಿ ಪ್ರೌಢ ಶಾಲಾ ಸಹ ಶಿಕ್ಷಕರ ಹಾಗೂ ದೈಹಿಕ ಶಿಕ್ಷಕರ ನೇಮಕಾತಿಯಲ್ಲಿನ ಅಕ್ರಮದ ಸಂಬಂಧ ಪ್ರತ್ಯೇಕ ಪ್ರಕರಣ ದಾಖಲಿಸಿದ್ದರು. ಇತ್ತೀಚೆಗೆ ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ಕೂಡ ಅಕ್ರಮ ನಡೆದಿರುವ ಬಗ್ಗೆ ಆರೋಪಿಸಿತ್ತು

ಶಿಕ್ಷಣ ಇಲಾಖೆಯ ನೇಮಕಾತಿಯಲ್ಲಿನ ಅಕ್ರಮದ ಬಗ್ಗೆ ಪ್ರಕರಣ ದಾಖಲಾದ ಬಳಿಕ ಈ ಪ್ರಕರಣಗಳನ್ನು ಹೆಚ್ಚಿನ ತನಿಖೆಗಾಗಿ ಸಿಐಡಿಗೆ ವಹಿಸಲಾಗಿತ್ತು. ಸಿಐಡಿ ಅಧಿಕಾರಿಗಳು ಸಮಗ್ರ ತನಿಖೆ ನಡೆಸಿದಾಗ, ಹುದ್ದೆಗೆ ಅರ್ಹರಲ್ಲದ 11 ಮಂದಿಯನ್ನು ಅಕ್ರಮವಾಗಿ ನೇಮಕ ಮಾಡಿರುವ ಸಂಗತಿ ಬಯಲಾಗಿದೆ. ಹೀಗಾಗಿ, ಅಧಿಕಾರಿಗಳು ಅಕ್ರಮಕ್ಕೆ ಸಂಬಂಧಿಸಿದ ಮಹತ್ವದ ದಾಖಲೆ ಪತ್ರಗಳನ್ನು ಜಪ್ತಿ ಮಾಡಿ ಕರ್ತವ್ಯ ನಿರತ 11 ಮಂದಿ ತಪ್ಪಿತಸ್ಥ ಸಹ ಶಿಕ್ಷಕರನ್ನು ಬಂಧಿಸಿದ್ದಾರೆ. ಆರೋಪಿಗಳ ಪೈಕಿ 10 ಸಹ ಶಿಕ್ಷಕರು ತುಮಕೂರು ಜಿಲ್ಲೆಯವರು ಮತ್ತು ಒಬ್ಬರು ಮಾತ್ರ ವಿಜಯಪುರ ಜಿಲ್ಲೆಯವರು ಎಂದು ತಿಳಿದುಬಂದಿದೆ.

ಬಂಧಿತರು:

  • ಶಮೀನಾಜ್‌ಭಾನು: ಚಿಕ್ಕನಾಯಕನಹಳ್ಳಿ ತಾಲೂಕಿನ ಬೋರನ ಕಣಿವೆ ಸರಕಾರಿ ಪ್ರೌಢ ಶಾಲೆ
  • ರಾಜೇಶ್ವರಿ: ಕುಣಿಗಲ್‌ ತಾಲೂಕಿನ ಕೊಡವತ್ತಿ ಸರಕಾರಿ ಪ್ರೌಢ ಶಾಲೆ
  • ಕಮಲಾ: ತಿಪಟೂರು ತಾಲೂಕಿನ ಆಲ್ಬೂರ್‌ ಸರಕಾರಿ ಪ್ರೌಢ ಶಾಲೆ
  • ನಾಗರತ್ನ: ಕುಣಿಗಲ್‌ ತಾಲೂಕಿನ ನಾಗಸಂದ್ರ ಸರಕಾರಿ ಪ್ರೌಢ ಶಾಲೆ
  • ಎಚ್‌.ದಿನೇಶ್‌: ತುರುವೇಕೆರೆ ತಾಲೂಕಿನ ಹುಲಿಕಲ್‌ ಸರಕಾರಿ ಪ್ರೌಢ ಶಾಲೆ
  • ನವೀನ್‌ ಹನುಮನಗೌಡ: ಚಿಕ್ಕನಾಯಕನಹಳ್ಳಿ ತಾಲೂಕಿನ ಕಮ್ಲಾಪುರ ಸರಕಾರಿ ಪ್ರೌಢ ಶಾಲೆ
  • ಬಿ.ಎನ್‌.ನವೀನ್‌ಕುಮಾರ್‌: ಕುಣಿಗಲ್‌ ತಾಲೂಕಿನ ಅಮೃತೂರು ಗ್ರಾಮದ ಕರ್ನಾಟಕ ಪಬ್ಲಿಕ್‌ ಶಾಲೆ
  • ಎಸ್‌.ದೇವೇಂದ್ರನಾಯ್ಕ: ಗುಬ್ಬಿ ತಾಲೂಕಿನ ಕೆ.ಮತ್ತಿಘಟ್ಟ ಗ್ರಾಮದ ಸರಕಾರಿ ಸಂಯುಕ್ತ ಪ್ರೌಢ ಶಾಲೆ
  • ಆರ್‌.ಹರೀಶ್‌: ಕುಣಿಗಲ್‌ ತಾಲೂಕಿನ ಹೊಳಗೇರಿ ಪುರ ಸರಕಾರಿ ಪ್ರೌಢ ಶಾಲೆ
  • ಬಿ.ಎಂ.ಪ್ರಸನ್ನ: ತುರುವೇಕೆರೆ ತಾಲೂಕಿನ ಹುಲಿಕೆರೆ ಸರಕಾರಿ ಪ್ರೌಢ ಶಾಲೆ
  • ಮಹೇಶ ಶ್ರೀಮಂತ ಸೂಸಲಾಡಿ: ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಹತ್ತಳ್ಳಿ ಸರಕಾರಿ ಪ್ರೌಢ ಶಾಲೆ

 

 

(VK)

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";